ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯೂರು: ನಿಯಂತ್ರಣ ಸಿಗದ ರಸ್ತೆ ಅಪಘಾತ- ಮೂರು ತಿಂಗಳಲ್ಲಿ 13 ಮಂದಿ ಬಲಿ:

Last Updated 4 ಫೆಬ್ರುವರಿ 2022, 4:39 IST
ಅಕ್ಷರ ಗಾತ್ರ

ಹಿರಿಯೂರು: ಎರಡು ರಾಷ್ಟ್ರೀಯ ಹೆದ್ದಾರಿ ಹಾದುಹೋಗಿರುವ ಹಿರಿಯೂರು ತಾಲ್ಲೂಕಿನಲ್ಲಿ ಕಳೆದ ಮೂರು ತಿಂಗಳಲ್ಲಿ 13 ಜನರು ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ದ್ವಿಚಕ್ರ ವಾಹನ ಅಪಘಾತದಲ್ಲಿ ಐವರು, ಬಸ್‌ ಡಿಕ್ಕಿಯಾಗಿ ಒಬ್ಬರು ಪ್ರಾಣ ಕಳೆದುಕೊಂಡಿದ್ದರು. ಕೆಲವು ದಿನಗಳ ಹಿಂದೆ ಈರುಳ್ಳಿ ತುಂಬಿಕೊಂಡು ಬೆಂಗಳೂರಿಗೆ ತೆರಳುತ್ತಿದ್ದ ನಾಲ್ವರು ರೈತರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ದಾರುಣ ಘಟನೆಯ ನೆನಪು ಮಾಸುವ ಮುನ್ನವೇ ಗುರುವಾರ ತಾಲ್ಲೂಕಿನ ಗುಯಿಲಾಳುಟೋಲ್‌ ಬಳಿ ಭೀಕರ ಅಪಘಾತ ನಡೆದಿದೆ. ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಟೋಲ್‌ನಲ್ಲಿ ನಿಂತಿದ್ದ ಟ್ಯಾಂಕರ್‌ಗೆ ಕಾರು ಡಿಕ್ಕಿಯಾಗಿ ಬೆಳಗಾವಿಯ ಸುಭಾಷ್ ನಗರದ ವಿಶ್ವನಾಥ ಶಾನುಭೋಗ (72), ಸಹೋದರರಮೇಶ್ ಶಾನುಭೋಗ (65) ಹಾಗೂ ರಮೇಶ್‌ ಅವರ ಪತ್ನಿ ಸೀಮಾ ಶಾನುಭೋಗ (55) ಮೃತಪಟ್ಟಿದ್ದಾರೆ.

ಬೆಂಗಳೂರಿನ ಸಂಬಂಧಿಕರ ಮನೆಗೆ ಸಹೋದರರು ಸಾಗುತ್ತಿದ್ದರು. ನಸುಕಿನಲ್ಲಿ ಬೆಳಗಾವಿಯಿಂದ ಹೊರಟಿದ್ದ ಅವರು ಸುಮಾರು 350 ಕಿ.ಮೀ. ಸಾಗಿ ಹಿರಿಯೂರು ಸಮೀಪಕ್ಕೆ ಬಂದಿದ್ದರು. ಈ ವೇಳೆ ಕಾರು ಚಾಲನೆ ಮಾಡುತ್ತಿದ್ದ ರಮೇಶ್ ಅವರಿಗೆ ನಿದ್ದೆಯ ಮಂಪರು ಆವರಿಸಿದ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ರಸ್ತೆ ಉಬ್ಬು ತೆರವು: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗಳ ಬಳಿ ವೇಗ ನಿಯಂತ್ರಣಕ್ಕೆ ರಸ್ತೆ ಉಬ್ಬುಗಳನ್ನು ನಿರ್ಮಿಸಲಾಗಿತ್ತು. ಟೋಲ್‌ ಸಮೀಪಕ್ಕೆ ಬರುತ್ತಿದ್ದಂತೆ ವಾಹನಗಳ ವೇಗ ಕಡಿಮೆ ಆಗುತ್ತಿತ್ತು. ಟೋಲ್‌ಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೆಲ ಸುಧಾರಣೆಗಳನ್ನು ತರಲಾಯಿತು. ಫಾಸ್ಟ್‌ಟ್ಯಾಗ್‌ ಕಡ್ಡಾಯಗೊಳಿಸಿದ ಬಳಿಕ ಟೋಲ್‌ ಪ್ಲಾಜಾಗಳ ಬಳಿ ಅಳವಡಿಸಿದ್ದ ರಸ್ತೆ ಉಬ್ಬುಗಳನ್ನು ತೆರವುಗೊಳಿಸಲಾಯಿತು. ರಸ್ತೆ ಉಬ್ಬು ಇದ್ದಿದ್ದರೆ ಅಪಘಾತ ಇಷ್ಟು ಭೀಕರವಾಗಿ ಇರುತ್ತಿರಲಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT