ಶನಿವಾರ, ಮೇ 21, 2022
23 °C

ಎಲೆಕ್ಟ್ರಿಕ್‌ ಬೈಕ್‌ ಸಬ್ಸಿಡಿ ಹೆಸರಿನಲ್ಲಿ ₹ 1.33 ಲಕ್ಷ ವಂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಓಲಾ ಎಲೆಕ್ಟ್ರಿಕ್‌ ಕಂಪನಿಯ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಬೈಕ್‌ಗೆ ಸಬ್ಸಿಡಿ ಕೊಡಿಸುವುದಾಗಿ ನಗರದ ಯುವಕನನ್ನು ನಂಬಿಸಿ ಆನ್‌ಲೈನ್‌ ಮೂಲಕ ₹ 1.33 ಲಕ್ಷವನ್ನು ತನ್ನ ಬ್ಯಾಂಕ್‌ ಖಾತೆಗೆ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ. 

ನಿಟುವಳ್ಳಿಯ ಬಸವೇಶ್ವರ ಬಡಾವಣೆಯ ಸ್ಟಾಫ್‌ ನರ್ಸ್‌ ನವೀನ್‌ ಕುಮಾರ್‌ ಎಲ್‌. ವಂಚನೆಗೆ ಒಳಗಾದ ಯುವಕ.

ಮೇ 7ರಂದು ನವೀನ್‌ಕುಮಾರ್‌ ಅವರ ಮೊಬೈಲ್‌ಗೆ ಓಲಾ ಎಲೆಕ್ಟ್ರಿಕ್‌ ಬೈಕ್‌ಗೆ ಸಬ್ಸಿಡಿ ಕೊಡಿಸುವುದಾಗಿ ಸಂದೇಶ ಬಂದಿದೆ. ಅದನ್ನು ಕ್ಲಿಕ್‌ ಮಾಡಿದ ಸ್ವಲ್ಪ ಹೊತ್ತಿನ ಬಳಿಕ ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿ ಮ್ಯಾನೇಜರ್‌ ಎಂದು ಪರಿಚಯಿಸಿಕೊಂಡಿದ್ದಾನೆ. ನೋಂದಣಿ ಶುಲ್ಕ, ವಿಮಾ ಶುಲ್ಕ, ಸಬ್ಸಿಡಿ ವಾಪಸ್‌ ಬರಲಿದೆ, ಡಿಲವರಿ ಚಾರ್ಚ್‌ ಹೆಸರಿನಲ್ಲಿ ಮೇ 8ರವರೆಗೆ ಒಟ್ಟು ₹ 1,33,098 ಅನ್ನು
ಆನ್‌ಲೈನ್‌
ಮೂಲಕ ಹಾಕಿಸಿಕೊಂಡಿದ್ದಾನೆ. ಇಷ್ಟೊಂದು ಹಣ ನೀಡಿದ ಬಳಿಕವೂ ಮತ್ತೆ ಹಣ ಹಾಕುವಂತೆ ಕೋರಿದ್ದರಿಂದ ಸಂಶಯ ಬಂದು, ನಗರದ ಸಿಇಎನ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ಮನೆಯಲ್ಲಿಟ್ಟಿದ್ದ ₹ 5.75 ಲಕ್ಷ ಮೌಲ್ಯದ ಒಡವೆ ಕಳವು

ದಾವಣಗೆರೆ: ಹೊನ್ನಾಳಿ ಪಟ್ಟಣದ ದೇವನಾಯಕನಹಳ್ಳಿಯ ಗಾಯಿತ್ರಿ ಕೆ.ಎಂ. ಅವರು ಮನೆಯಲ್ಲಿಟ್ಟಿದ್ದ ₹ 5.75 ಲಕ್ಷ ಮೌಲ್ಯದ 140 ಗ್ರಾಂ. ತೂಕದ ಬಂಗಾರದ ಆಭರಣಗಳು ಕಳವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಗಾಯಿತ್ರಿ ಅವರು ಮಾರ್ಚ್‌ 10ರಂದು ಸಂಬಂಧಿಕರ ಮನೆಯ ಜವಳ ಕಾರ್ಯಕ್ರಮಕ್ಕೆ ಹೋಗಿ ಬಂದು ಒಡವೆಗಳನ್ನು ಮನೆಯ ಕಪಾಟಿನಲ್ಲಿ ಇಟ್ಟಿದ್ದರು. ಮಂಗಳವಾರ ಸಂಬಂಧಿಕರ ಮನೆಗೆ ಹೋಗಲೆಂದು ಕಪಾಟಿನ ಬೀಗ ತೆಗೆದಾಗ ಒಡವೆಗಳು ಇಲ್ಲದಿರುವುದು ಬೆಳಕಿಗೆ
ಬಂದಿದೆ. ಕೊರಳ ಚೈನ್‌, ಬ್ರಾಸ್‌ಲೈಟ್‌, ಉಂಗುರ, ಗಟ್ಟಿ ಬಂಗಾರ, ಮಾಂಗಲ್ಯ ಸರ, ಬಳೆ ಸೇರಿ ಒಟ್ಟು ₹ 5.75 ಲಕ್ಷ ಮೌಲ್ಯದ ಆಭರಣಗಳು ಕಳವಾಗಿದೆ ಎಂದು ಗಾಯಿತ್ರಿ ಅವರು ಹೊನ್ನಾಳಿ ಪೊಲೀಸ್‌ ಠಾಣೆಗೆ ಮಂಗಳವಾರ ದೂರು ನೀಡಿದ್ದಾರೆ.

ಮನೆಯಲ್ಲಿ ₹ 58 ಸಾವಿರ ಕಳವು

ದಾವಣಗೆರೆ: ನಗರದ ಬೇತೂರು ರಸ್ತೆಯ ಫೋಟೊಗ್ರಾಫರ್‌ ರಮೇಶ ಬಾಬು ಅವರ ಮನೆಯ ಬೀಗವನ್ನು ಮುರಿದ ಕಳ್ಳರು ಒಡವೆ ಹಾಗೂ ನಗದು ಸೇರಿ ಒಟ್ಟು ₹ 58 ಸಾವಿರ ಮೌಲ್ಯದ ಸ್ವತ್ತನ್ನು ಕಳವು ಮಾಡಿದ್ದಾರೆ.

ರಮೇಶ್‌ ಬಾಬು ಅವರು ಸೋಮವಾರ ಮಧ್ಯಾಹ್ನ ಕುಟುಂಬ ಸಮೇತ ತಮ್ಮನ ಮದುವೆಗೆ ಹೋಗಿದ್ದರು. ಮಂಗಳವಾರ ಬೆಳಿಗ್ಗೆ ಮನೆಗೆ ಬಂದು ನೋಡಿದಾಗ ಕಳವಾಗಿರುವುದು ಬೆಳಕಿಗೆ
ಬಂದಿದೆ. ಬಂಗಾರದ ಉಂಗುರ, ಬಂಗಾರದ ಗುಂಡು, ಮಕ್ಕಳ ಉಂಗುರ, ಕಿವಿ ಓಲೆ, ಬೆಳ್ಳಿ ಕಾಲು ಚೈನ್‌ ಸೇರಿ ₹ 50 ಸಾವಿರ ಮೌಲ್ಯದ
ಚಿನ್ನಾಭರಣ ಹಾಗೂ ₹ 8,000 ನಗದು ಕಳವು ಮಾಡಲಾಗಿದೆ.

ಆಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯ ಶೀಟ್‌ ಒಡೆದು ಕಳವು

ದಾವಣಗೆರೆ: ಹಳೇ ಬೇತೂರು ರಸ್ತೆಯ ಇಮಾಂ ಹುಸೇನ್‌ ಅವರ ಮನೆಯ ಚಾವಣಿಯ ಶೀಟ್‌ ಒಡೆದು ಒಳಗೆ ಬಂದ ಕಳ್ಳರು ₹ 18 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ₹ 73 ಸಾವಿರ ನಗದು ಕಳವು ಮಾಡಿದ್ದಾರೆ.

ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ಇಮಾಂ ಹುಸೇನ್‌ ಅವರು ಗೋವಾದಲ್ಲಿರುವ ತಾಯಿಯನ್ನು ನೋಡಿಕೊಂಡು ಬರಲು ಮೇ 5ರಂದು ಗೋವಾಕ್ಕೆ ತೆರಳಿದ್ದರು. ಹಿರಿಯ ಮಗ ಇರ್ಫಾನ್‌ ಮಾವ ಚಾಂದ್‌ ಅಲಿ ಅವರ ಮನೆಯಲ್ಲಿದ್ದನು. ಮೇ 8ರಂದು ರಾತ್ರಿ ಚಾವಣಿ ಶೀಟ್‌ ಒಡೆದು ಒಳಕ್ಕೆ ಬಂದ ಕಳ್ಳರು, ಒಡವೆ ಹಾಗೂ ಇಮಾಂ ಹುಸೇನ್‌ ಅವರ ಪತ್ನಿ ಸುಲ್ತಾನ್‌ ಸಂಘದಿಂದ ಪಡೆದಿದ್ದ ₹ 73 ಸಾವಿರ ಸಾಲದ ಹಣವನ್ನೂ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಬಸವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.