ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳಲ್ಲಿ 16 ಅತಿಥಿ ಉಪನ್ಯಾಸಕರು ಸಾವು

ಕೆಲಸವೂ ಇಲ್ಲ, ವೇತನವೂ ಇಲ್ಲ; ಆರೋಗ್ಯ ಕಾಪಾಡಿಕೊಳ್ಳುವುದೇ ಸಮಸ್ಯೆ
Last Updated 31 ಆಗಸ್ಟ್ 2020, 8:32 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ತಂದ ಸಂಕಷ್ಟದಿಂದ ಉದ್ಯೋಗ ಇಲ್ಲದೆ, ವೇತನವೂ ಇಲ್ಲದ ಪರಿಣಾಮ ಮಾರ್ಚ್‌ನಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 16 ಉಪನ್ಯಾಸಕರು ಸಾವಿಗೀಡಾಗಿದ್ದಾರೆ. ನೂರಾರು ಮಂದಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಆರ್ಥಿಕ ಸಂಕಷ್ಟವನ್ನು ತಡೆದುಕೊಳ್ಳಲಾರದೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಉಳಿದವರು ವಿವಿಧ ಕಾಯಿಲೆಗಳಿಗೆ ತುತ್ತಾಗಿ ಚಿಕಿತ್ಸೆ ಪಡೆಯಲು ದುಡ್ಡಿಲ್ಲದೇ ಜೀವ ಕಳೆದುಕೊಂಡಿದ್ದಾರೆ.

‘ಅತಿಥಿ ಉಪನ್ಯಾಸಕರ ಸಂಕಷ್ಟಗಳ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಸರ್ಕಾರದಿಂದ ಯಾವುದೇ ಸ್ಪಂದನ ದೊರಕಿಲ್ಲ. ಕನಿಷ್ಠ ಆರೋಗ್ಯ ವಿಮೆ ಕೂಡ ಒದಗಿಸಿಲ್ಲ’ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಶಿವಮೊಗ್ಗ ಬೇಸರ ವ್ಯಕ್ತಪಡಿಸಿದ್ದಾರೆ.

‘ಪಶ್ಚಿಮ ಬಂಗಾಳದ ಮಾದರಿ ಸೇವಾ ಭದ್ರತೆ ನೀಡಬೇಕು. ಇಲ್ಲದೇ ಇದ್ದರೆ ನಿರ್ಲಕ್ಷಿತ ಪ್ರಾಣಿ ಸಮುದಾಯ ಎಂದು ಘೋಷಣೆ ಮಾಡಿ ನಮ್ಮ ಭಾರತೀಯ ಪೌರತ್ವ ರದ್ದು ಮಾಡಲಿ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರಾಜ್ಯದಲ್ಲಿ 14,400 ಅತಿಥಿ ಉಪನ್ಯಾಸಕರಿದ್ದಾರೆ. ಅದರಲ್ಲಿ ಸುಮಾರು 6,000 ಮಂದಿ 15ರಿಂದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದವರು ಇದ್ದಾರೆ. ವರ್ಷಕ್ಕೆ ಎಂಟು ತಿಂಗಳಷ್ಟೇ ಕೆಲಸ ಇರುತ್ತಿತ್ತು. ಈಗ ಕೊರೊನಾದಿಂದ ಅದೂ ಇಲ್ಲ. ಉನ್ನತ ಶಿಕ್ಷಣ ಪಡೆಯದೇ ಇದ್ದಿದ್ದರೆ ಬೇರೆ ಏನೋ ಕೆಲಸ ಮಾಡಿ ಬದುಕುತ್ತಿದ್ದೆವು. ಭವಿಷ್ಯದ ಕನಸು ಕಟ್ಟಿಕೊಂಡು ಉಪನ್ಯಾಸಕರಾಗಲು ಹೋಗಿ ಸಂಕಷ್ಟಕ್ಕೆ ಸಿಲುಕಿದ್ದೇವೆ’ ಎಂದು ಸಂಘದ ಚನ್ನಗಿರಿ ತಾಲ್ಲೂಕು ಅಧ್ಯಕ್ಷ ಶಿವಕುಮಾರ್‌ ಯರಗಟ್ಟಿಹಳ್ಳಿ ‘ಪ್ರಜಾವಾಣಿ’ಗೆ ವಿವರಿಸಿದರು.

‘ಕಾಯಂ ಉಪನ್ಯಾಸಕರಿಗೆ ಒಂದು ಲಕ್ಷ ರೂಪಾಯಿ ಹತ್ತಿರ ವೇತನವಿದೆ. ನಮಗೆ ಹೆಚ್ಚೆಂದರೆ ₹ 12 ಸಾವಿರ ಕೊಡುತ್ತಾರೆ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ಉಳಿಸುವ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ, ಆರೋಗ್ಯ ಭದ್ರತೆಯನ್ನು ಒದಗಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆಲಸ ಮತ್ತು ಆದಾಯ ಇಲ್ಲದ ಒತ್ತಡದಿಂದ ಖಿನ್ನತೆಗೆ ಒಳಗಾಗಿ ಆರೋಗ್ಯ ಹಾಳಾಗುತ್ತಿದೆ. ಕೆಲಸ ಇರುವಾಗಲೂ ಪ್ರತಿ ತಿಂಗಳು ವೇತನ ಪಾವತಿಸುವ ಬದಲು ಯಾವಾಗಲೋ ಪಾವತಿಯಾಗುತ್ತಿತ್ತು. ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲೂ ಆಗದೇ ಹಲವು ಜೀವಗಳು ಹೋಗಿವೆ’ ಎಂದು ಸಂಘದ ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ರೇಶ್‌ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT