ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ| ಜಿಲ್ಲೆಯಲ್ಲಿ ಶೇ 19ರಷ್ಟು ಬಾಲ್ಯ ವಿವಾಹ: ರಾಜೇಶ್ವರಿ ಎನ್‌. ಹೆಗಡೆ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ
Last Updated 9 ಮಾರ್ಚ್ 2023, 5:48 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಆಗುತ್ತಿರುವ ಮದುವೆಗಳಲ್ಲಿ ಶೇ 19ರಷ್ಟು ಬಾಲ್ಯವಿವಾಹ ಎಂಬುದು ದುಃಖದ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ರಾಜೇಶ್ವರಿ ಎನ್‌. ಹೆಗಡೆ ಹೇಳಿದರು.

ವನಿತಾ ಸಮಾಜದ ವತಿಯಿಂದ ಬುಧವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ವನಿತಾ ಸಮಾಜದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಾಲ್ಯ ವಿವಾಹದಲ್ಲಿ ರಾಜ್ಯದಲ್ಲಿ ದಾವಣಗೆರೆ ಜಿಲ್ಲೆಯೂ ಮೂರನೇ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಬಾಲ್ಯವಿವಾಹಗಳಾಗುತ್ತಿವೆ. ಇದಲ್ಲದೇ ಲೈಂಗಿಕ ದೌರ್ಜನ್ಯ ಪ್ರಕರಣಗಳು ಕೂಡ ಜಾಸ್ತಿ ಇವೆ. ಇವೆಲ್ಲವನ್ನು ತಡೆಯಲು ಶ್ರಮಿಸಬೇಕು. ಸುತ್ತಮುತ್ತ ಎಲ್ಲೇ ಇಂಥ ಪ್ರಕರಣಗಳು ನಡೆದರೂ ಕಾನೂನು ಸೇವಾ ಪ್ರಾಧಿಕಾರದ ಗಮನಕ್ಕೆ ತನ್ನಿ ಎಂದು ಸಲಹೆ ನೀಡಿದರು.

ಇಂದಿನ ಮಗು ನಾಳೆ ಸಮಾಜವನ್ನು ನಿರ್ಮಿಸುತ್ತದೆ ಎಂಬ ಮಾತಿದೆ. ಆ ಮಗು ಸಮಾಜ ನಿರ್ಮಾಣ ಮಾಡಬೇಕಿದ್ದರೆ ಆರೋಗ್ಯಪೂರ್ಣವಾಗಿ ಬೆಳೆಯಬೇಕು. ಅಪೌಷ್ಟಿಕತೆ ಇರಬಾರದು. ಆ ರೀತಿ ಬೆಳೆಸುವ ಜವಾಬ್ದಾರಿ ಎಲ್ಲರದ್ದು ಎಂದು ಹೇಳಿದರು.

‘ಪುರಾಣ ಕಾಲದಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿತ್ತು. ಅದು ಹೊರಗೆ ಬರುತ್ತಿರಲಿಲ್ಲ. ಮಹಿಳೆ ಹೊಂದಿಕೊಂಡು ಹೋಗುತ್ತಿದ್ದರು. ಮಹಿಳೆ ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಎಂದು ಮನು ಹೇಳಿದ್ದ. ಮಹಿಳೆಯರನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಊಟ ಮೊದಲು ಗಂಡು ಮಕ್ಕಳಿಗೆ ನೀಡಿ ಉಳಿದರಷ್ಟೇ ಹೆಣ್ಣು ಮಕ್ಕಳಿಗೆ ನೀಡಲಾಗುತ್ತಿತ್ತು. ಈಗ ಮಹಿಳೆಯರು ವಿದ್ಯೆ ಕಲಿತು, ಎಲ್ಲ ಕಷ್ಟಗಳನ್ನು ದಾಟಿ ಮುಂದೆ ಬಂದಿದ್ದೇವೆ’ ಎಂದರು.

‘ರಾಧಮ್ಮ ಚನ್ನಗಿರಿ ರಂಗಪ್ಪ ವನಿತಾ ಸೇವಾ ಪ್ರಶಸ್ತಿ’ ಸ್ವೀಕರಿಸಿದ ಡಾ. ಶಾಂತಾಭಟ್‌ ಮಾತನಾಡಿ, ‘ಕಸ–ರಸ ಕಾರ್ಯಕ್ರಮ ಇನ್ನೂ ಪೂರ್ಣವಾಗಿಲ್ಲ. ಜನರ ಸಹಕಾರದೊಂದಿಗೆ ನಿರಂತರವಾಗಿ ನಡೆಯಬೇಕಿರುವ ಪ್ರಕ್ರಿಯೆ ಇದು. ಸ್ವಚ್ಛ ಸುಂದರ ಸಮೃದ್ಧ ಭಾರತದತ್ತ ಸಾಗಲು ಜನರು ಜಾಗೃತರಾಗಬೇಕು. ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸಮಾಜವನ್ನೂ ಸ್ವಚ್ಛವಾಗಿ ಇಟ್ಟುಕೊಂಡಾಗ ಇದು ಸಾಧ್ಯ’ ಎಂದು ಹೇಳಿದರು.

‘ಜನರ ಮನಸ್ಸಿನಲ್ಲಿ ಅರಿವಿನ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದೇವೆ. ಉಳಿದಿದ್ದನ್ನು ಸಮಾಜಕ್ಕೆ ಬಿಟ್ಟಿದ್ದೇವೆ’ ಎಂದು ಅವರು, ‘ಇಂದು ನೀಡಲಾದ ಸನ್ಮಾನ ಈ ಅಭಿಯಾನದಲ್ಲಿ ಕೈಜೋಡಿಸಿರುವ ಎಲ್ಲರಿಗೂ ಸಂದ ಗೌರವ’ ಎಂದು ತಿಳಿಸಿದರು.

ವನಿತಾ ಸಮಾಜದ ಅಧ್ಯಕ್ಷೆ ಪದ್ಮ ಪ್ರಕಾಶ್‌ ಅಧ್ಯಕ್ಷತೆ ವಹಿಸಿದ್ದರು. ರೇಖಾ ಗಣೇಶ್ ಉಪಸ್ಥಿತರಿದ್ದರು. ಉಷಾ ರಂಗನಾಥ್‌ ಸ್ವಾಗತಿಸಿದರು. ನಾಗರತ್ನ ಜಗದೀಶ್‌ ವರದಿ ವಾಚಿಸಿದರು. ಸುನೀತಾ ಇಂದೂಧರ್‌ ಅತಿಥಿಗಳನ್ನು ಪರಿಚಯಿಸಿದರು. ಸುಷ್ಮಾ ಮೋಹನ್‌ ವಂದಿಸಿದರು. ಗೀತಾ ಬದರಿನಾಥ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT