ಭಾನುವಾರ, ಡಿಸೆಂಬರ್ 8, 2019
21 °C
ಪ್ರಜಾವಾಣಿ ಫೋನ್‌ ಇನ್ ಕಾರ್ಯಕ್ರಮದಲ್ಲಿ ಡಿಡಿಪಿಐ

ಎಸ್‌ಎಸ್‌ಎಲ್‌ಸಿ: ಹೆಚ್ಚು ಅಂಕ ಪಡೆಯಲು 24X7 ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಿದ್ಯಾರ್ಥಿಗಳು ಈ ಬಾರಿ ಉತ್ತಮ ಫಲಿತಾಂಶ ಪಡೆಯಲು ಹಲವು ಯೋಜನೆಗಳನ್ನು ರೂಪಿಸಿದ್ದೇವೆ. ಅವರಿಗೆ ಯಾವ ಹೊತ್ತಿಗೆ ಏನು ಮಾಡಬೇಕು ಎಂಬುದನ್ನು ತಿಳಿಸುವ 24X7 ವೇಳಾಪಟ್ಟಿಯನ್ನು ನೀಡಲಾಗಿದೆ. ಮನೆಯಲ್ಲಿ ಪ್ರತಿ ವಿಷಯಕ್ಕೆ ಸಂಬಂಧಿಸಿದಂತೆ ದಿನಕ್ಕೆ ಕನಿಷ್ಠ 1 ಗಂಟೆ ಮೀಸಲಿಡಲು ಅದರಲ್ಲಿ ಸೂಚಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಆರ್‌. ಪರಮೇಶ್ವರಪ್ಪ ತಿಳಿಸಿದರು.

‘ಪ್ರಜಾವಾಣಿ ಫೋನ್‌ ಇನ್‌’ ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯು ಫಲಿತಾಂಶ ವೃದ್ಧಿಗಾಗಿ ಹಾಕಿಕೊಂಡಿರುವ ಯೋಜನೆಗಳ ವಿವರಗಳನ್ನು ಅವರು ನೀಡಿದರು.

ವಿಶೇಷ ತರಗತಿಗಳನ್ನು ಜುಲೈಯಿಂದಲೇ ಪ್ರಾಂಭಿಸಲಾಗಿದೆ. ಹಾಗೆನೇ ವಿಷಯವಾರು ಗುಂಪು ಚರ್ಚೆಗಳನ್ನು ಸಂಜೆ 5ರವರೆಗೆ ಮಾಡುತ್ತಿದ್ದಾರೆ. ಬೆಳಿಗ್ಗೆ 9ರಿಂದ 10 ವಿಶೇಷ ತರಗತಿಗಳು ನಡೆಯುತ್ತಾ ಇದೆ. ವಿದ್ಯಾರ್ಥಿಗಳು ಮನೆಯಲ್ಲಿ ಸಂಜೆ 6ರಿಂದ 7, 7ರಿಂದ 8 ಗಂಟೆಯವರೆಗೆ ಎರಡು ವಿಷಯಗಳನ್ನು ಓದಬೇಕು. ಬಳಿಕ ಊಟ ಮಾಡಿ 8.30ರಿಂದ 9.30 ಹಾಗೂ 9.30ರಿಂದ 10.30ರವರೆಗೆ ಮತ್ತೆರಡು ವಿಷಯಗಳಿಗೆ ಮೀಸಲಿಡಬೇಕು. ಬೆಳಿಗ್ಗೆ 5 ಗಂಟೆಯಿಂದ 6 ಹಾಗೂ 6ರಿಂದ 7 ಗಂಟೆಯವರೆಗೆ ಉಳಿದ ಎರಡು ವಿಷಯಗಳನ್ನು ನಿತ್ಯ ಓದಬೇಕು. ಕಷ್ಟ ಅನ್ನಿಸುವ ವಿಚಾರಗಳಿಗೆ ಹೆಚ್ಚುವರಿ ಸಮಯವನ್ನು ಮೀಸಲಿಡಬೇಕು ಎಂದು ವಿವರಿಸಿದರು.

ಫಲಿತಾಂಶ ಸುಧಾರಣೆಗಾಗಿ ವಿದ್ಯಾರ್ಥಿಗಳನ್ನು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಸರಾಸರಿಗಿಂತ ಮೇಲಿನವರು, ಸರಾಸರಿ ಅಂಕ ಗಳಿಸುವವರು ಹಾಗೂ ಸರಾಸರಿಗಿಂತ ಕಡಿಮೆ ಅಂಕ ಗಳಿಸುವವರು ಎಂಬುದೇ ಆ ವಿಭಾಗಗಳಾಗಿವೆ. ಮೂರನೇ ವಿಭಾಗದಲ್ಲಿ ಇರುವವರನ್ನು ಮೇಲೆ ತರಲು ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದರು.

ಫಲಿತಾಂಶ ಸುಧಾರಣಾ ಮಾರ್ಗದರ್ಶಿಕೆಯನ್ನು ಸಂಪನ್ಮೂಲ ಶಿಕ್ಷಕರಿಂದ ತಯಾರಿಸಲಾಗಿದೆ. ಅದನ್ನು ಅಚ್ಚಿಗೆ ಕೊಡಲಾಗಿದೆ. ಡಿಸೆಂಬರ್‌ 10ರ ಒಳಗೆ ಈ ಕೈಪಿಡಿ ಎಲ್ಲ ಶಾಲೆಗಳಿಗೆ ತಲುಪಲಿದೆ ಎಂದು ತಿಳಿಸಿದರು.

ಹಾಗೆಯೇ ತಾಲ್ಲೂಕುವಾರು ಸ್ಟೂಡೆಂಟ್‌ ಟೀಚರ್‌ ಫೋರಂ (ಎಸ್‌ಟಿಎಫ್‌) ಮಾಡಲಾಗಿದೆ. ಈ ಶಿಕ್ಷಕರು ಪ್ರತಿ ವಿಷಯಗಳಿಗೆ ಸಂಬಂಧಿಸಿದಂತೆ ತಲಾ ನಾಲ್ಕು ಪ್ರಶ್ನೆಪತ್ರಿಕೆಗಳ ಸೆಟ್‌ ತಯಾರಿಸಲಿದ್ದಾರೆ. 6 ವಲಯಗಳಿಂದ ಒಟ್ಟು 24 ಸೆಟ್‌ ಸಿದ್ಧಪಡಿಸಿ ಜನವರಿ ಮೊದಲ ವಾರದಲ್ಲಿ ಎಲ್ಲ ಶಾಲೆಗಳಿಗೆ ತಲುಪಿಸಲಾಗುವುದು ಎಂದು ವಿವರ ನೀಡಿದರು.

ಸರಾಸರಿಗಿಂತ ಕಡಿಮೆ ಅಂಕ ಪಡೆಯುವ ಮಕ್ಕಳಿಗೆ ಮೊದಲು ತೆರೆದ ಪುಸ್ತಕ ಪರೀಕ್ಷೆ ನಡೆಸಲಾಗುವುದು. ಅಂದರೆ ಅವರಿಗೆ ಪ್ರಶ್ನೆಪತ್ರಿಕೆಯನ್ನು ತರಗತಿಯಲ್ಲಿ ನೀಡಿ ಅಲ್ಲೇ ಪುಸ್ತಕ ನೋಡಿ ನಿಗದಿತ ಸಮಯದೊಳಗೆ ಉತ್ತರ ಬರೆಸಲಾಗುವುದು. ಅದರಲ್ಲಿ ಎಷ್ಟು ಅಂಕ ಪಡೆಯುತ್ತಾರೆ ಎಂಬುದನ್ನು ಗಮನಿಸುವುದು ಎಂದರು.

ಆನಂತರ ಪ್ರಶ್ನೆ ಪತ್ರಿಕೆಯನ್ನು ಮನೆಗೆ ಕೊಡಲಾಗುವುದು. ಆ ಪ್ರಶ್ನೆಗಳಿಗೆ ಉತ್ತರ ಓದಿಕೊಂಡು ಬರಬೇಕು. ಮರುದಿನ ಪುಸ್ತಕ ನೋಡದೇ ಉತ್ತರ ಬರೆಯಬೇಕು. ಆದಾದ ಮೇಲೆ ಮೂರನೇ ಹಂತದ ಅಂದರೆ ತರಗತಿಯಲ್ಲೇ ಪ್ರಶ್ನೆ ಪತ್ರಿಕೆ ನೀಡಲಾಗುವುದು. ಎಲ್ಲ ಪರೀಕ್ಷೆಗಳಂತೆ ಉತ್ತರ ಬರೆಯಬೇಕು ಎಂದು ಹೇಳಿದರು.

ಇದಲ್ಲದೇ ರಾಜ್ಯಮಟ್ಟದ ಪ್ರಿಪೆಟರಿ ಪರೀಕ್ಷೆಯಲ್ಲಿ ಒಂದು ವಿಷಯವನ್ನು ಅವರು ಅಂತಿಮ ಪರೀಕ್ಷೆ ಬರೆಯುವ ಕೇಂದ್ರದಲ್ಲಿಯೇ ಬರೆಯಲು ಅವಕಾಶ ಮಾಡಿಕೊಡುತ್ತೇವೆ. ಕಳೆದ ವರ್ಷವೂ ಈ ಪ್ರಯೋಗ ಮಾಡಲಾಗಿತ್ತು. ಪರೀಕ್ಷಾ ಕೇಂದ್ರ ಯಾವುದು? ಕೂರುವುದು ಎಲ್ಲಿ? ಎಂಬ ಭಯವನ್ನು ಹೋಗಲಾಡಿಸಲು ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಜನವರಿಯಿಂದ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳ ಬಗ್ಗೆ ವಿಶೇಷ ಉಪನ್ಯಾಸ ಕೊಡಿಸಲು ನಾವು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷೆಯನ್ನು ಎದುರಿಸುವುದು ಹೇಗೆ? ಸಮಯ ನಿರ್ವಹಣೆ ಮಾಡುವುದು ಹೇಗೆ? ಎಂಬುದುನ್ನು ತಿಳಿಸಿಕೊಡಲಾಗುವುದು ಎಂದರು.

ಮಕ್ಕಳಿಂದ ಮನೆ ಕೆಲಸ, ಕೃಷಿ ಕೆಲಸಗಳನ್ನು ಹೆತ್ತವರು ಮಾಡಿಸುತ್ತಿದ್ದಾರೆ. ಇದರಿಂದ ನಾವು ಹಾಕಿಕೊಟ್ಟಿರುವ ವೇಳಾಪಟ್ಟಿಯನ್ನು ಅನುಸರಿಸಲು ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಇನ್ನು ಉಳಿದಿರುವ 115 ದಿನಗಳಲ್ಲಿ ಹೆಚ್ಚು ಓದಲು ಅವಕಾಶ ಕೊಡಬೇಕು ಎಂದು ಅವರು ಹೆತ್ತವರಲ್ಲಿ ಮನವಿ ಮಾಡಿಕೊಂಡರು.

ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ತುಂಬಿಸುವ ಕೆಲಸಗಳನ್ನು ಮಾಡಲಾಗುತ್ತಿದೆ. ಮರೆತು ಹೋಗುತ್ತಿದೆ. ಭಯ ಆಗುತ್ತಿದೆ ಎಂಬ ದೂರುಗಳನ್ನು ದೂರ ಮಾಡಲು ಯೋಗ, ಧ್ಯಾನಗಳನ್ನು ಮಾಡಿ ಮಕ್ಕಳಿಗೆ ಪ್ರೇರಣೆ ತುಂಬಬೇಕು ಎಂದು ಶಿಕ್ಷಕರಿಗೆ ಸೂಚಿಸಿದರು.

ಸರಿಯಾಗಿ ಓದಿದರೆ ಇಂಗ್ಲಿಷ್‌ ಕಷ್ಟವಲ್ಲ

ಸುಮಾರು ಮಕ್ಕಳಿಗೆಯಾವ ರೀತಿ ಪರೀಕ್ಷೆ ಎದುರಿಸುವುದು ಹೊಸ ಪ್ಯಾಟರನ್‌ ಬಗ್ಗೆ ಎಂಬ ಗೊಂದಲ ಇದೆ.  ಪ್ಯಾಟರ್ನ್‌ ಏನಿದೆ ಅದನ್ನು ಸರಿಯಾಗಿ ಶಿಕ್ಷಕರು ತಿಳಿಸಬೇಕು. ಅವರಿಗೆ ಮರ್ಗದರ್ಶನ ಮಾಡಬೇಕು. ಯಾವ ರೀತಿ ಓದಬೇಕು ಎಂಬುದನ್ನು ತಿಳಿಸಿಕೊಡಬೇಕು ಎಂದು ಇಂಗ್ಲಿಷ್‌ ವಿಷಯ ‍ಪರಿವೀಕ್ಷಕ ಜಾಕೀರ್‌ ಹುಸೇನ್‌ ಮಾಹಿತಿ ನೀಡಿದರು.

ಇಂಗ್ಲಿಷ್‌ ಪ್ರಶ್ನೆ ಪತ್ರಿಕೆಯಲ್ಲಿ ಶೇ 50 ಭಾಗ ಗ್ರಾಮರ್‌ ಆಗಿರುತ್ತದೆ. ಪ್ರಾಕ್ಟೀಸ್‌ ಮಾಡಬೇಕು. ಹೊಸ ವರ್ಕ್‌ಶೀಟ್‌ ಕೊಟ್ಟು ಕಲಿಸಬೇಕು.ಹೊಸ ಪ್ಯಾಟರ್ನ್‌ ಏನಂದರೆ ಈ ಸಲ ಎರಡಯ ಪ್ರಶ್ನೆ ಕಡಿಮೆ ಮಾಡಿದ್ದಾರೆ. ಒಂದು ಮಾರ್ಕ್ಸ್‌ ಜಾಸ್ತಿ ಮಾಡಿ 4 ಅಂಕದ ಪ್ರಶ್ನೆಯನ್ನು ಐದು ಅಂಕವಾಗಿ ಮಾಡಿದ್ದಾರೆ. ಪಿಕ್ಚರ್‌ ರೀಡಿಂಗ್‌ ಎಂಬ ಹೊಸತನ್ನು ಸೇರಿಸಿದ್ದಾರೆ. ಈ ಬಗ್ಗೆಯೇ ಮಕ್ಕಳಲ್ಲಿ ಹೆಚ್ಚು ಗೊಂದಲ ಇದೆ ಎಂದರು.

ಚಿತ್ರದಲ್ಲಿ ಇರುವ ನೌನ್‌, ಅಬ್ಜೆಕ್ಟಿವ್ಸ್‌, ಆ್ಯಕ್ಷನ್ಸ್‌ ಇವೆಲ್ಲವನ್ನು ಗುರುತಿಸಿ ಅದನ್ನು ಪ್ಯಾರಗ್ರಾಫ್‌ ಆಗಿ ಬರೆಯಬೇಕು. ಆಗ ಸಮಸ್ಯೆ ಉಂಟಾಗುವುದಿಲ್ಲ ಎಂದು ಸಲಹೆ ನೀಡಿದರು.

ಲೆಟರ್‌ ರೈಟಿಂಗ್‌, ಪ್ರೊಫೈಲ್‌, ಎಸ್ಸೆ ರೈಟಿಂಗ್‌ ಇವೆಲ್ಲ ಹೆಚ್ಚು ಅಂಕ ಪಡೆಯುವ ವಿಚಾರಗಳು. ಅದಕ್ಕೆ ಹೆಚ್ಚು ಒತ್ತುಕೊಟ್ಟರೆ ಹೆಚ್ಚು ಅಂಕ ಗಳಿಸಬಹುದು. ಹೇಳಿಕೊಡುವುದೂ ಶಿಕ್ಷಕರಿಗೆ ಸುಲಭವಾಗುತ್ತದೆ ಎಂದು ಹೇಳಿದರು.

ಸಮಾಜ ವಿಜ್ಞಾನ ನೆನಪಿಟ್ಟುಕೊಳ್ಳುವ ಮಾರ್ಗ ನೋಡಿ

ಸಮಾಜ ವಿಜ್ಞಾನದಲ್ಲಿ ವಿಷಯ ಬಹಳ ಇದೆ. ಅಧ್ಯಾಯಗಳು ಬಹಳ ಇದೆ. ನೆನಪಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಮಕ್ಕಳು ಹೇಳುತ್ತಿದ್ದಾರೆ. ಮುಖ್ಯಾಂಶಗಳನ್ನು ಬರೆದಿಟ್ಟುಕಲಿಯುವ ಮೂಲಕ ನೆನಪಿಟ್ಟುಕೊಳ್ಳುವ ಸುಲಭ, ಸರಳ ದಾರಿ ಕಂಡುಕೊಳ್ಳಿ ಎಂದು ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ ರಮೇಶ್‌ ಎಂ. ಸಲಹೆ ನೀಡಿದರು.

ಉದಾಹರಣೆಗೆ ಪ್ಲಾಸಿ ಕದನ ಎಂದು ಬಂದಾಗ ಅದರ ಪ್ರಮುಖ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು. ಎಲ್ಲಿ, ಯಾವಾಗ, ಕಾರಣ ಇವೆಲ್ಲ ನೆನಪಾದರೆ ವಿಸ್ತರಿಸಿ ಬರೆಯುವುದು ಸುಲಭ. ಕರ್ನಾಟಕ ಯುದ್ಧಗಳು, ಆಂಗ್ಲ–ಮರಾಠ, ಆಂಗ್ಲೊ ಇಂಡಿಯನ್‌ ಯುದ್ಧಗಳು ಇನ್ನಿತರ ವಿಚಾರಗಳಲ್ಲಿಯೂ ಈ ಸೂತ್ರವನ್ನು ಅಳವಡಿಸಿಕೊಳ್ಳಬೇಕು. ಬಿಡಿಬಿಡಿಯಾಗಿ ಬರೆದಿಟ್ಟುಕೊಂಡು ಕಲಿತರೆ ಪ್ರಶ್ನೆ ಯಾವ ರೀತಿ ಬಂದರೂ ಉತ್ತರಿಸಲು ಕಷ್ಟವಿಲ್ಲ ಎಂದರು.

ಮ್ಯಾಪ್‌ ಹೇಗೆ ಮಾಡಬಹುದು ಎಂಬುದಕ್ಕೆ ಪಿಪಿಟಿಯನ್ನು ರಚಿಸಿದ್ದೇವೆ.ಸೋಶಿಯಲ್‌ ಸೈನ್ಸ್‌ ಡಿಜಿಟಲ್‌ ಗ್ರೂಪ್‌ ಬ್ಲಾಗ್‌ಸ್ಪಾಟ್‌ ಡಾಟ್‌ ಇನ್‌ ಅದು. ನೀವು ಗೂಗಲ್‌ಗೆ ಹೋಗಿ ವಿಸಿಟ್‌ ಕೊಟ್ಟು ಇದನ್ನು ಉಪಯೋಗಿಸಿಕೊಂಡರೆ ಹೆಚ್ಚಿನ ಅಂಕ ಗಳಿಸಲು ಅವಕಾಶವಾಗುತ್ತದೆ. ಇಂಡಿಯನ್‌ ಮ್ಯಾಪ್‌ ಹೇಗೆ ಮಾಡುವುದು? ಅದರಲ್ಲಿ ಸ್ಥಳಗಳು ಯಾವುದು ಎಲ್ಲ ಮಾಹಿತಿ ಇದೆ ಎಂದು ತಿಳಿಸಿದರು.

ಬರೆದು ಬರೆದು ಪ್ರಾಕ್ಟೀಸ್‌ ಮಾಡಿದಾಗ ನೆನಪು ಉಳಿಯುತ್ತದೆ. ಪರೀಕ್ಷೆ ಸುಲಭವಾಗುತ್ತದೆ ಎಂದರು.

ಗಣಿತ ಕಬ್ಬಿಣದ ಕಡಲೆಯಲ್ಲ

ಗಣಿತ ಕಬ್ಬಿಣದ ಕಡಲೆ ಎಂಬುದು ಸುಳ್ಳು. ಸರಿಯಾಗಿ ತಿಳಿದುಕೊಂಡರೆ 80ಕ್ಕೆ 80 ಅಂಕವೂ ಪಡೆಯಲು ಸಾಧ್ಯವಿರುವ ವಿಷಯ ಇದು ಎಂದು ಗಣಿತ ವಿಷಯ ಪರಿವೀಕ್ಷಕ ಪಂಚಾಕ್ಷರಪ್ಪ ಜಿ. ವಿವರಿಸಿದರು.

ಈ ಸಾರಿ ಪ್ರಶ್ನೆ ಪತ್ರಿಕೆ ವಿನ್ಯಾಸವನ್ನು ಬದಲಾಯಿಸಿರುವುದರಿಂದ ಅಂಕಗಳನ್ನು ಹೆಚ್ಚು ಗಳಿಸುವ ಅವಕಾಶ ಇದೆ. 15 ಘಟಕಗಳನ್ನು ಒಂದು ಕಡೆಯಿಂದ ಎಲ್ಲವನ್ನು ಇಡಿಯಾಗಿ ಚೆನ್ನಾಗಿ ಅಭ್ಯಾಸ ಮಾಡಬೇಕು. ಎಲ್ಲ ಸಮಸ್ಯೆಗಳನ್ನು ಬಿಡಿಸಿದರೆ 80ಕ್ಕೆ 80 ಅಂಕ ಗಳಿಸಬಹುದು. ಮಕ್ಕಳು ಉತ್ತೀರ್ಣರಾಗಲು ಸಮಸ್ಯೆ ಇಲ್ಲ. ಇಲ್ಲಿರುವ ಕೋಸ್ಟಕಗಳನ್ನು ಬಳಕೆ ಮಾಡಿಕೊಂಡು ತಿಳಿಯುವುದನ್ನು ಸರಳಗೊಳಿಸಿಕೊಳ್ಳಬೇಕು ಎಂದರು.

ಕೌಶಲದಲ್ಲಿ ಬಳಕೆಯಾಗುವ ರಚನೆಗಳನ್ನು ತಿಳಿದುಕೊಳ್ಳಬೇಕು. ಅದರಲ್ಲಿ ಉದಾಹರಣೆಗೆ ನಕ್ಷೆ ಕಲಿತುಬಿಟ್ಟರೆ 4 ಅಂಕ ಸಿಗುತ್ತದೆ. ಸಮವೃತ್ತ ತ್ರಿಭುಜಗಳನ್ನು ರಚನೆ ಮಾಡಿದರೆ 3 ಅಂಕ ಸಿಗುತ್ತದೆ. ವೋಜೊವಾ ರಚನೆಗೆ 3 ಅಂಕ, ಇನ್ನೊಂದು 2 ಅಂಕ ಹೀಗೆ 12 ಅಂಕಗಳು ಸುಲಭವಾಗಿ ಪಡೆಯಬಹುದು. 5 ಅಂಕಕ್ಕೆ ಈ ಬಾರಿ ತ್ರಿಭುಜಗಳ ಘಟಕಗಳ ಮೇಲೆ ಇಲ್ಲವೇ ಮೇಲ್ಮೈ ವಿಸ್ತೀರ್ಣಗಳ ಬಗ್ಗೆ ಕೇಳಬಹುದು. ಪೈಥಾಗರಸ್‌ ಪ್ರಮೇಯ, ವಿಲೋಮ ಪ್ರಮೇಯ ಹೀಗೆ 5 ಪ್ರಮೇಯಗಳನ್ನು ಕಲಿತರೆ ಸಾಕು. ವೃತ್ತದಲ್ಲಿ 3 ಅಂಕ ಪಡೆಯಬಹುದು. ಒಂದು ಪ್ರಮೇಯ ಸರಿಯಾಗಿ ಓದಿಕೊಳ್ಳಬೇಕು. ವಾಸ್ತವ ಸಂಖ್ಯೆಗಳಿಗೆ 2 ಅಂಕೆ ಪಡೆಯಬಹುದು ಎಂದು ತಿಳಿಸಿದರು.

ನಿತ್ಯ ಸಮಸ್ಯೆಗಳನ್ನು ಹೆಚ್ಚು ಹೆಚ್ಚು ಬಿಡಿಸುತ್ತಾ ಹೋದರೆ ಹೆಚ್ಚೆ ಹೆಚ್ಚು ಅಂಕ ಪಡೆಯಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬದುಕಿನ ಭಾಗವೇ ವಿಜ್ಞಾನ

ವಿಜ್ಞಾನ ವಿಷಯವು ನಮ್ಮ ದೈನಂದಿನ ಚಟುವಟಿಕೆಗೆ ಹಾಗೂ ಪರಿಸರಕ್ಕೆ ಸಂಬಂಧಿಸಿದ ಅಂಶವಾಗಿದೆ. ಇದರಲ್ಲಿ ಸಮಸ್ಯೆಗಳನ್ನು ಗುರುತಿಸುವುದು, ಕಾರಣಗಳನ್ನು ಪತ್ತೆ ಹಚ್ಚುವುದು, ಅರಿವು ಮೂಡಿಸುವುದು ಇಷ್ಟನ್ನು ತಿಳಿದುಕೊಂಡರೆ ವಿಜ್ಞಾನ ಕಷ್ಟವಲ್ಲ ಎಂದು ವಿಜ್ಞಾನ ವಿಷಯ ಪರಿವೀಕ್ಷಕ ಅರುಣ್‌ ಕುಮಾರ್‌ ಎಚ್‌.ಎನ್‌. ತಿಳಿಸಿದರು.

ವಿಜ್ಞಾನದ ಪ್ರತಿಯೊಂದು ಘಟಕವನ್ನು ಓದುವಾಗ ಪ್ರಮುಖ ಪದಗಳನ್ನು, ವ್ಯಾಖ್ಯಾನಗಳನ್ನು ಓದುವ ಸಮಯದಲ್ಲಿ ಅಂಡರ್‌ಲೈನ್‌ ಮಾಡುತ್ತಾ ಹೋಗಬೇಕು. ಯಾವುದೇ ಘಟಕವನ್ನು ಇಡಿಯಾಗಿ ಓದಬಾರದು.  ಭಾಗಗಳನ್ನಾಗಿ ಮಾಡಿ ಓದುವುದರಿಂದ ಹೆಚ್ಚು ಹೆಚ್ಚು ಪರಿಕಲ್ಪನೆಗಳನ್ನು ಅರ್ಥೈಸಿಕೊಳ್ಳಬಹುದು. ಜೊತೆಗೆ ಚಿತ್ರ ಬರೆಯುವುದಾಗ ಸಮಗ್ರವಾಗಿ ನೋಡಬಾರದು. ಬಿಡಿಬಿಡಿಯಾಗಿ ನೋಡಿ ಅದರಲ್ಲಿ ಬರುವ ಪ್ರತಿಯೊಂದು ಅಂಶವನ್ನು ಪಟ್ಟಿ ಮಾಡುತ್ತಾ ಬರೆದುಕೊಳ್ಳಬೇಕು. ಉದಾಹರಣೆಗೆ ಹೈಡ್ರೋಜನ್‌ ಅನಿಲ ಬಿಡುಗಡೆಯ ಯಂತ್ರವನ್ನು ಬರೆಯುವುದಿದ್ದರೆ. ಏನೇನು ಉಪಕರಗಣಗಳನ್ನು ಬಳಸುತ್ತೇವೆ? ಅದನ್ನು ಜೋಡಿಸುವುದು ಹೇಗೆ? ಅದರಲ್ಲಿ ಸತುವಿನ ಚೂರು ಅಥವಾ ಆಮ್ಲ ತೆಗೆದುಕೊಂಡಾಗ ಪ್ರಣಾಳದಲ್ಲಿ ಎಲ್ಲಿ ಸಂಗ್ರಹವಾಗುತ್ತದೆ? ಎಂಬುದನ್ನೆಲ್ಲ ಗಮನಿಸಿಕೊಳ್ಳಬೇಕು. ಆಗ ವಿವರಿಸುವುದು ಸುಲಭ. ಯಾವಾಗ ಕೇಳಿದರೂ ನಿಖರವಾಗಿ, ನಿರ್ದಿಷ್ಟವಾಗಿ ಬರೆಯಲು ಸಾಧ್ಯ ಎಂದು ವಿವರ ನೀಡಿದರು.

ಅನ್ವಯದ ಪ್ರಶ್ನೆಗಳನ್ನು ಸಮಗ್ರವಾಗಿ ಅರ್ಥೈಸಿಕೊಂಡು ಓದಿದಾಗ 80ಕ್ಕೆ 80 ಅಂಕ ಗಳಿಸಲು ಸಾಧ್ಯ. ಆಂತರಿಕ ಅಂಕಗಳನ್ನು ಸೇರಿಸಿ 100 ಅಂಕ ಪಡೆಯಬಹುದು.

ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳು ಪಾಠದಲ್ಲಿ ಬರುತ್ತಿರುವ ಪ್ರಮುಖ ಅಂಶಗಳನ್ನು ಶಿಕ್ಷಕರ ನೆರವಿನಿಂದ ಪಟ್ಟಿ ಮಾಡುತ್ತಾ ಹೋಗಬೇಕು. ಆ ಪಟ್ಟಿಯಲ್ಲಿರುವುದನ್ನು ಕಲಿಯಬೇಕು. ಇದರಿಂದ ಸುಲಭವಾಗಿ ಉತ್ತೀರ್ಣರಾಗಬಹುದು ಎಂದರು.

ರಾಜ್ಯದಲ್ಲಿ ಕಳೆದ ಬಾರಿ ಶೇ 100 ಅಂಕ ಗಳಿಸಿದವರು 28 ಮಾತ್ರ ಇದ್ದರು. ಅನ್ವಯದ ಪ್ರಶ್ನೆಗಳ ಮಾದರಿಯನ್ನು ಮೊದಲೇ ಅಭ್ಯಾಸ ಮಾಡಿದರೆ ಎಲ್ಲರೂ ಶೇ 100 ಅಂಕ ಗಳಿಸಬಹುದು ಎಂದು ಸಲಗೆ ನೀಡಿದರು.

ಪ್ರಶ್ನೋತ್ತರ

* ಇಂಗ್ಲಿಷ್ ಪಾಠ ಸರಿಯಾಗಿ ಅರ್ಥವಾಗುತ್ತಿಲ್ಲ. ಪರಿಹಾರ ತಿಳಿಸಿ?

ಆಲಿಷಾ, ಜಗಳೂರು ತಾಲ್ಲೂಕು

ಜಾಕೀರ್‌ ಹುಸೇನ್‌: ಇಂಗ್ಲಿಷ್ ಸುಲಭ ಇದೆ. ನಿರಂತರ ಅಭ್ಯಾಸದಿಂದ ಸುಲಭವಾಗಿ ಅಂಕಗಳನ್ನು ಪಡೆಯಬಹುದು. ಇಂಗ್ಲಿಷ್ ಪತ್ರಿಕೆಯಲ್ಲಿ ಕಥೆಯಲ್ಲಿ ಕೆಲವು ಹಿಂಟ್ಸ್ ಕೊಟ್ಟಿರುತ್ತಾರೆ. ಆ ವಾಕ್ಯವನ್ನು ನಿಮ್ಮ ಸ್ವಂತ ವಾಕ್ಯದಲ್ಲಿ ಕಾಲಾನುಕ್ರಮದಲ್ಲಿ ಬರೆಯಬೇಕು. ಆಗ ಸುಲಭವಾಗುತ್ತದೆ.

* ಪ್ರಶ್ನೆಪತ್ರಿಕೆಗಳಲ್ಲಿ ಬದಲಾವಣೆ ಆಗಿದೆಯೇ? ಮಾಹಿತಿ ನೀಡಿ.

ಸುಕನ್ಯಾ, ಬಾಗಲಕೋಟೆ

ಅರುಣ್‌ ಕುಮಾರ್‌ ಎಚ್‌.ಎನ್‌: ಈ ಬಾರಿ ಉತ್ತರ ಬರೆಯಲು ಕಾಲಾವಕಾಶವನ್ನು ಹೆಚ್ಚಿಸಲಾಗಿದೆ. ಆರಂಭದಲ್ಲಿ ಪ್ರಶ್ನೆಗಳನ್ನು ಚೆನ್ನಾಗಿ ಓದಿಕೊಳ್ಳಬೇಕು. ಈ ಹಿಂದೆ 3 ಗಂಟೆ ಕಾಲಾವಕಾಶ ಇತ್ತು. ಅದರಲ್ಲಿ ಉತ್ತರ ಬರೆಯಲು 2 ಗಂಟೆ 45 ನಿಮಿಷ ಸಿಗುತ್ತಿತ್ತು. ಈಗ ಮೂರು ಗಂಟೆಗಳ ಕಾಲಾವಕಾಶವಿದೆ. ಒಂದು ಪತ್ರಿಕೆಗೆ ಈಗ 15 ನಿಮಿಷ ಹೆಚ್ಚುವರಿ ಕಾಲಾವಕಾಶ ಇರುತ್ತದೆ. ವಿವರಣಾತ್ಮಕ ಉತ್ತರಗಳನ್ನು ನಿರೀಕ್ಷೆ ಮಾಡುವುದರಿಂದ ಅವಧಿಯನ್ನು ಹೆಚ್ಚು ಮಾಡಲಾಗಿದೆ.

* ವಿಜ್ಞಾನ ಪಾಠ ಸರಿಯಾಗಿ ಅರ್ಥವಾಗುತ್ತಿಲ್ಲ? ಹೇಗೆ ಕಲಿಯಬೇಕು?

ಹಂಸ, ಹೊನ್ನೂರು, ಲಕ್ಷ್ಮೀ ಎ.ಎಂ. ಎನ್‌ಎಂ.ಕೆ ಶಾಲೆ, ಜಗಳೂರು

ಅರುಣ್‌ ಕುಮಾರ್‌ ಎಚ್‌.ಎನ್‌: ಪಠ್ಯವಾರು ಕಲಿಕಾಂಶಗಳನ್ನು ಪಟ್ಟಿ ಮಾಡಿಕೊಳ್ಳುತ್ತಾ ಹೋಗಬೇಕು. ಈ ಬಾರಿ ಪ್ರಶ್ನೆಗಳನ್ನು ಹೆಚ್ಚಾಗಿ ಪಠ್ಯ ಪುಸ್ತಕದಲ್ಲೇ ಕೇಳಲಾಗುತ್ತದೆ. ಪ್ರತಿ ಪಾಠವನ್ನು ಪಟ್ಟಿ ಮಾಡಿಕೊಳ್ಳುತ್ತಾ ಹೋಗಬೇಕು. ಬರವಣಿಗೆ ಜಾಸ್ತಿ ಇರುತ್ತದೆ. ಮಂಡಳಿ ನಿಮ್ಮಿಂದ ದೀರ್ಘವಾದ ಉತ್ತರಗಳನ್ನು ನಿರೀಕ್ಷೆ ಮಾಡುತ್ತದೆ. ಪ್ರಶ್ನೆಯನ್ನು ಚೆನ್ನಾಗಿ ಓದಿಕೊಂಡು ಮುಖ್ಯಾಂಶಗಳನ್ನು ಪಟ್ಟಿ ಮಾಡಿಕೊಂಡು ಉತ್ತರ ಬರೆದರೆ ಒಳ್ಳೆಯದು.

* ಇಂಗ್ಲಿಷ್ ವ್ಯಾಕರಣವನ್ನು ಸುಲಭವಾಗಿ ಕಲಿಯಲು ಏನು ಮಾಡಬೇಕು?

ಭುಜಂಗರಾವ್, ಟಿ.ಜಿ.ಹಳ್ಳಿ, ದರ್ಶನ್, ಜಗಳೂರು ತಾಲ್ಲೂಕು

ಜಾಕೀರ್‌ ಹುಸೇನ್‌: ಇಂಗ್ಲಿಷ್ ವ್ಯಾಕರಣ ನಿಮಗೆ ಸಮಸ್ಯೆಯಾಗುವುದಿಲ್ಲ. ಇಂಗ್ಲಿಷ್ ಶಬ್ದಕೋಶ ಇಟ್ಟುಕೊಂಡು ಅಭ್ಯಾಸ ಮಾಡಿದರೆ ಸುಲಭವಾಗುತ್ತದೆ. ಚಿತ್ರವನ್ನು ನೋಡಿ, ನಿಮ್ಮ ಆ ಚಿತ್ರದ ವಿವರಣೆ ಬರೆಯಬೇಕು. ಪತ್ರ ರಚನೆ, ಪ್ರಬಂಧ ರಚನೆ, ಸ್ವವಿವರ ರಚನೆ ಮುಂತಾದ ವಿಷಯಗಳನ್ನು ಒಳಗೊಂಡಿರುತ್ತದೆ. ಇಂಗ್ಲಿಷ್‌ನಲ್ಲಿ ಎಡಿಟಿಂಗ್ ಮಾಡುವಾಗ ಮಾರ್ಕ್‌ ಆಫ್‌ ಪಂಕ್ಚುಯೇಷನ್ ಅನ್ನು ತಿಳಿದುಕೊಳ್ಳಬೇಕು. ಆರಂಭದಲ್ಲಿ ದೊಡ್ಡ ಅಕ್ಷರ, ನಾಮಪದಗಳನ್ನು ಸರಿಯಾಗಿ ಗುರುತಿಸಬೇಕು. ಯಾವ ಅಕ್ಷರಗಳು ತಪ್ಪಿ ಹೋಗಿವೆ ಎಂಬುದನ್ನು ಬರೆಯಬೇಕು. ಪೂರ್ತಿ ಪ್ರಾರಾಗ್ರಫ್ ಅನ್ನು ಓದಿಕೊಂಡು ಉತ್ತರ ಪತ್ರಿಕೆಯಲ್ಲಿ ಬಿಟ್ಟು ಹೋಗಿರುವ ಪದಗಳನ್ನು ಬರೆಯಬೇಕು.

* ಟಿ.ಜಿ.ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ವ್ಯಾಕರಣ ಮಾಡಲು ಶಿಕ್ಷಕರು ಇಲ್ಲದೇ ಬೇರೆ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇದಕ್ಕೆ ಪರಿಹಾರ ತಿಳಿಸಿ?

ಭುಜಂಗರಾವ್, ಟಿ.ಜಿ. ಹಳ್ಳಿ ಶಾಲೆ

ಡಿಡಿಪಿಐ: ಎರಡು ದಿವಸದಲ್ಲೇ ಇಂಗ್ಲಿಷ್ ಶಿಕ್ಷಕರನ್ನು ನಿಯೋಜಿಸಲು ಕ್ರಮ ಕೈಗೊಳ್ಳುತ್ತಿದ್ದೇನೆ.

* ಇಂಗ್ಲಿಷ್ ಕಷ್ಟ ಎನಿಸುತ್ತಿದೆ ಏನು ಮಾಡುವುದು?

ಸುಭಾಷ್, ದಾವಣಗೆರೆ

ಜಾಕೀರ್‌ ಹುಸೇನ್‌: ಮೊದಲು ಸುಲಭವಾಗಿ ಇರುವ ಪ್ರಶ್ನೆಗಳಿಗೆ ಉತ್ತರಿಸಿ. ಆಗ ನಿಮಗೆ ಆತ್ಮವಿಶ್ವಾಸ ವೃದ್ಧಿಸುತ್ತದೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರ ಬರೆಯಲು ಪ್ರಯತ್ನಿಸಿ. ಆಗ ನಿಮಗೆ ಹೆಚ್ಚು ಅಂಕಗಳು ಸಿಗುತ್ತವೆ.

* ಗಣಿತದಲ್ಲಿ ಯಾವ ಪ್ರಶ್ನೆಗಳು ಬರುತ್ತವೆ? ಗಣಿತ ಅರ್ಥವಾಗುವುದಿಲ್ಲ, ಹೇಗೆ ಕಲಿಯಬೇಕು? ಗಣಿತ ಕಷ್ಟ ಎನಿಸುತ್ತದೆ ಏನು ಮಾಡುವುದು? ಯಾವ ಅಭ್ಯಾಸಗಳನ್ನು ಹೆಚ್ಚು ಓದಬೇಕು. ಬ್ಲೂಪ್ರಿಂಟ್ ಇದೆಯಾ?

ಮಹಮ್ಮದ್ ಆದಿಲ್‌, ದಾವಣಗೆರೆ, ಸುಕನ್ಯಾ ಬಾಗಲಕೋಟೆ, ಸೀಮಾ ಹೊಸಕೆರೆ, ಜಗಳೂರು, ತರುಣ್‌ ದಾವಣಗೆರೆ, ಅಮೃತಾ ಹಳೆ ಕುಂದವಾಡ, ದಿನೇಶ್‌ ಅರಸಾಪುರ, ದಾವಣಗೆರೆ, ಮನೋಹರಿ ದೇವಿ, ಜಗಳೂರು, ನೇತ್ರ ದಾವಣಗೆರೆ, ಮೇಘನಾ ಹಿರೆತೊಗಲೂರು, ಸಂಗೀತಾ, ರಖಿಬಾ ದಾವಣಗೆರೆ, ರೂಪಾ ಕೆ.ಎಂ. ಕ್ಯಾಸಿನಕೆರೆ, ಹೊನ್ನಾಳಿ, ನಿಶಾ ಬಿಳಿಚೋಡು, ಹಂಸಾ, ನಿತೀಶ್‌ ದಾವಣಗೆರೆ

ಪರಮೇಶ್ವರಪ್ಪ ಜಿ. (ಗಣಿತ ವಿಷಯ ಪರಿವೀಕ್ಷಕ):

ಗಣಿತ ಅತ್ಯಂತ ಸರಳ ವಿಷಯ. ಯಾವುದೇ ಕಾರಣಕ್ಕೂಆತಂಕ, ಪರೀಕ್ಷೆ ಬಗ್ಗೆ ಭಯ ಬೇಡ. ಗಣಿತದಲ್ಲಿನ ಎಲ್ಲಾ ಸಮಸ್ಯೆಗಳನ್ನು ಬಿಡಿಸಿರಿ. ಗೊಂದಲ ಮಾಡಿಕೊಳ್ಳಬೇಡಿ. ಅರ್ಥವಾಗುವ ಸಮೀಕರಣಗಳನ್ನು ಮೊದಲು ಬಿಡಿಸಿ. ಬಳಿಕ ಕಠಿಣ ಸಮಸ್ಯೆ, ಅರ್ಥವಾಗದ ಅಭ್ಯಾಸವನ್ನು ಕಲಿಯಲು ಪ್ರಯತ್ನಿಸಿ. ನಿಮಗೆ ಏನು ಅರ್ಥವಾಗುತ್ತದೆಯೋ ಅದನ್ನು ಮೊದಲು ಓದಿ.

ಬಹುಪದೋಕ್ತಿಗಳು, ವಿಸ್ತೀರ್ಣ, ಸಂಖ್ಯಾಶಾಸ್ತ್ರ, ಸಮತಲ ಶ್ರೇಣಿಗಳು, ವೃತ್ತಗಳು, ವೃತ್ತದ ಮೇಲಿನ ಘನಫಲಗಳು, ಪ್ರಮೇಯಗಳು, ಓಜೋವಾ ಚೆನ್ನಾಗಿ ಓದಿಕೊಂಡರೆ 40 ಅಂಕ ಖಚಿತವಾಗಿ ಬರುತ್ತದೆ. ಪಠ್ಯದಲ್ಲಿನ ಅಭ್ಯಾಸದ ಎಲ್ಲಾ ಘಟಕಗಳನ್ನು ಚೆನ್ನಾಗಿ ನೋಡಿಕೊಳ್ಳಿ. 

ಪ್ರಮೇಯಗಳಲ್ಲಿ ಪೈಥಾಗೊರಸ್‌ನ ಪ್ರಮೇಯ (ಪಿಟಿ) ಮತ್ತು ಪೈಥಾಗೊರಸ್‌ ಪ್ರಮೇಯದ ವಿಲೋಮದ (ಸಿಪಿಟಿ) ಮೇಲೆ 5 ಅಂಕಗಳಿಗೆ ಪ್ರಶ್ನೆಗಳು ಬರುತ್ತವೆ. ಇದನ್ನು ಚೆನ್ನಾಗಿ ಕಲಿಯಿರಿ. ಪ್ರಮೇಯದಲ್ಲಿ 2.1, 2.3. 2.5, 2.7 ಮತ್ತು 2.8 ಅಭ್ಯಸಿಸಿ. ಯಾವುದಾದರೂ ಒಂದನ್ನು ಕೇಳುತ್ತಾರೆ.

* ಗಣಿತದಲ್ಲಿ 80 ಅಂಕ ಪಡೆಯಬಹುದೇ–ನಂದಿನಿ ಎಂ. 

1 ಅಂಕದ ಬಹು ಆಯ್ಕೆ 8 ಪ್ರಶ್ನೆ, ಅತಿ ಚಿಕ್ಕ ಪ್ರಶ್ನೆ 8, 2 ಅಂಕಗಳ–8 ಪ್ರಶ್ನೆ 3 ಅಂಕದ 9, 4 ಅಂಕದ 4 ಪ್ರಶ್ನೆ, 5 ಅಂಕದ 1 ಪ್ರಶ್ನೆ ( ಅಂದರೆ 888941) ಬರುತ್ತದೆ. ಇದನ್ನು ನೆನಪಿನಲ್ಲಿಟ್ಟುಕೊಂಡು ಯಾವ ಪ್ರಶ್ನೆ ಬರಬಹುದು ಎಂಬುದನ್ನು ತಿಳಿದು ಓದಿದರೆ ಗಣಿತದಲ್ಲಿ ಹೆಚ್ಚು ಅಂಕ ಪಡೆಯಲು ಸಾಧ್ಯ ಎಂದರು.

* ಸಮಾಜ ವಿಜ್ಞಾನದಲ್ಲಿ ಹೆಚ್ಚು ಪಾಠಗಳಿವೆ. ಹೇಗೆ ಓದುವುದು? ಪರೀಕ್ಷೆ ಎದುರಿಸುವುದು ಹೇಗೆ?

–ರೂಪಾ ಕೆ.ಎಂ., ಕಾವ್ಯಾ ಗೊಲ್ಲರಹಳ್ಳಿ, ಮಂದಾರ ಹರಿಹರ, ಲಕ್ಷ್ಮಿ

ರಮೇಶ್‌ ಎಂ. ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕ:

ಸಮಾಜ ವಿಜ್ಞಾನದ 5, 6, 7, 8 ಅಧ್ಯಾಯಗಳನ್ನು ಚೆನ್ನಾಗಿ ಓದಿಕೊಳ್ಳಿ. ಭೂಪಟ, ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರದ ಪ್ರಶ್ನೆಗಳನ್ನು ನೋಡಿಕೊಳ್ಳಿ. ಆಯ‌್ಕೆ ಪ್ರಶ್ನೆಗಳಿರುತ್ತವೆ. ದೀರ್ಘ ಉತ್ತರ ಬರೆಯಿರಿ. 

* ಪರೀಕ್ಷೆಯ ವೇಳಾಪಟ್ಟಿ ಹೇಗಿರಬೇಕು–ವರ್ಷಾ, ಜಗಳೂರು

ಡಿಡಿಪಿಐ: ದಿನಕ್ಕೆ ಶಾಲಾ ಅವಧಿ ಹೊರತುಪಡಿಸಿ 6 ಗಂಟೆ ಓದಬೇಕು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು