ಗುರುವಾರ , ಆಗಸ್ಟ್ 18, 2022
26 °C
ಜಗಳೂರು: ಮರೀಚಿಕೆಯಾದ ಮೂಲಸೌಕರ್ಯ

ಜಗಳೂರು ತಾಲ್ಲೂಕಿನ 30 ಗ್ರಾಮಗಳಿಗಿಲ್ಲ ಮಸಣದ ಸೌಲಭ್ಯ

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ತಾಲ್ಲೂಕಿನ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸ್ಮಶಾನ ಸೌಲಭ್ಯವಿಲ್ಲದೆ ಗ್ರಾಮಸ್ಥರು ಖಾಸಗಿ ಜಮೀನಿನಲ್ಲಿ ಶವಸಂಸ್ಕಾರ ಮಾಡುವ ದುಃಸ್ಥಿತಿ ಇದೆ.

ತಾಲ್ಲೂಕಿನ 127 ಗ್ರಾಮಗಳಲ್ಲಿ ಸರ್ಕಾರಿ ಭೂಮಿಯಲ್ಲಿ ಸ್ಮಶಾನಗಳು ಇದ್ದರೂ, ಅವುಗಳಿಗೆ ಕನಿಷ್ಠ ಮೂಲಸೌಕರ್ಯ ಇಲ್ಲದೆ ಅವ್ಯವಸ್ಥೆಯ ತಾಣಗಳಾಗಿ ಮಾರ್ಪಟ್ಟಿವೆ.

ತಾಲ್ಲೂಕಿನ ಹೊನ್ನಮರಡಿ, ಬ್ಯಾಟಗಾರನಹಳ್ಳಿ, ಹುಚ್ಚವ್ವನಹಳ್ಳಿ ಕೊರಚರಹಟ್ಟಿ, ಜಗಳೂರು ಗೊಲ್ಲರಹಟ್ಟಿ ಸೇರಿದಂತೆ 30ಕ್ಕೂ ಅಧಿಕ ಗ್ರಾಮಗಳಲ್ಲಿ ಸ್ಮಶಾನಕ್ಕಾಗಿ ಸಾರ್ವಜನಿಕ ಜಮೀನು ಇಲ್ಲ. ಖಾಸಗಿ ವ್ಯಕ್ತಿಗಳ ಹೆಸರಿನಲ್ಲಿರುವ ಜಮೀನುಗಳಲ್ಲಿ ದಶಕಗಳಿಂದ ಸ್ಮಶಾನ ಇದ್ದು, ಜಮೀನಿನ ಮಾಲೀಕರು ಹಾಗೂ ಗ್ರಾಮಸ್ಥರ ನಡುವೆ ಆಗಾಗ್ಗೆ ಸಂಘರ್ಷ ನಡೆಯುವುದು ಸಾಮಾನ್ಯವಾಗಿದೆ.

ಕಂದಾಯ ಇಲಾಖೆಯ ದಾಖಲೆಯ ಪ್ರಕಾರ ತಾಲ್ಲೂಕಿನಲ್ಲಿ 130 ವಸತಿಯುತ ಗ್ರಾಮಗಳು ಮಾತ್ರ ಇವೆ. ಎರಡು ದಶಕಗಳಲ್ಲಿ ಹೊಸದಾಗಿ ನಿರ್ಮಾಣವಾಗಿರುವ ಹಲವು ಹೊಸ ಹಟ್ಟಿಗಳು ಸೇರಿ 157 ಜನವಸತಿ ಪ್ರದೇಶಗಳು ಇವೆ ಎಂದು ಪೊಲೀಸ್ ದಾಖಲೆಗಳು ಸ್ಪಷ್ಟಪಡಿಸುತ್ತವೆ.

ನಮ್ಮ ಗ್ರಾಮದಲ್ಲಿ 3,000ಕ್ಕೂ ಅಧಿಕ ಜನಸಂಖ್ಯೆ ಇದ್ದು, ಪರಿಶಿಷ್ಟ ಜಾತಿ, ಪಂಗಡ ಹಾಗೂ ಇತರೆ ಜಾತಿಗಳಿಗೆ ಸ್ಮಶಾನದ ಸೌಲಭ್ಯವಿಲ್ಲ. ಇಷ್ಟು ವರ್ಷಗಳಿಂದ ಯಾವುದೇ ಸಮಸ್ಯೆ ಇಲ್ಲದೇ ಶವಸಂಸ್ಕಾರ ನಡೆಯುತ್ತಿದೆ. ಆದರೆ, ಕೆಲವು ದಿನಗಳ ಹಿಂದೆ ಸ್ಮಶಾನದ ಜಾಗದಲ್ಲಿ ವ್ಯಕ್ತಿಯೊಬ್ಬರು, ‘ಈ ಜಾಗ ನನಗೆ ಸೇರಿದೆ’ ಎಂದು ಉಳುಮೆ ಮಾಡುತ್ತಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ ಎಂದು ಜಗಳೂರು ಗೊಲ್ಲರಹಟ್ಟಿ ಗ್ರಾಮದ ವಿ. ವೆಂಕಟೇಶ್, ಲೋಕೇಶ್, ಹರೀಶ್ ರೆಡ್ಡಿ, ಶ್ರೀಧರ ಅಳಲು ತೋಡಿಕೊಂಡರು.

‘ತಾಲ್ಲೂಕಿನಲ್ಲಿ 130 ವಸತಿಯುತ ಗ್ರಾಮಗಳಿದ್ದು, ಅವುಗಳಲ್ಲಿ 127 ಗ್ರಾಮಗಳಲ್ಲಿ ಸಾರ್ವಜನಿಕ ಜಾಗದಲ್ಲೇ ಸ್ಮಶಾನ ವ್ಯವಸ್ಥೆ ಇದೆ. 3 ಗ್ರಾಮಗಳಿಗೆ ಸ್ಮಶಾನ ಸೌಲಭ್ಯ ಕಲ್ಪಿಸಲಾಗುತ್ತಿದೆ. 11 ಗ್ರಾಮಗಳಲ್ಲಿ ಸ್ಮಶಾನ ಒತ್ತುವರಿಯಾಗಿದ್ದು, ಆ ಪೈಕಿ 5 ಸ್ಮಶಾನಗಳ ಒತ್ತುವರಿ ತೆರವುಗೊಳಿಸಲಾಗಿದೆ. 10 ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರಿಗೆ ಪ್ರತ್ಯೇಕ ಖಬರಸ್ಥಾನ ನಿರ್ಮಿಸಲಾಗಿದೆ. ಪಟ್ಟಣದಲ್ಲಿ ಕ್ರಿಶ್ಚಿಯನ್ ಸಮುದಾಯವರಿಗೆ ಸ್ಮಶಾನ ಸೌಲಭ್ಯ ಕಲ್ಪಿಸಲಾಗಿದೆ. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಭೂಮಾಪನ ಇಲಾಖೆಯಿಂದ ಹಂತಹಂತವಾಗಿ ಹದ್ದುಬಸ್ತು ಮಾಡಿಕೊಡಲಾಗುವುದು’ ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ತಾಲ್ಲೂಕಿನ ಅರಿಶಿನಗುಂಡಿ, ಬಿಸ್ತುವಳ್ಳಿ, ತುಪ್ಪದಹಳ್ಳಿ, ಅಸಗೋಡು, ಭರಮಸಮುದ್ರ, ಅಣಬೂರು, ಚದರಗೊಳ್ಳ ಗ್ರಾಮ ಸೇರಿದಂತೆ 12 ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯವರ ಸ್ಮಶಾನವನ್ನು ತಲಾ ₹37 ಲಕ್ಷ ವೆಚ್ಚದಲ್ಲಿ ಹಾಗೂ ಕಸ್ತೂರಿಪುರ, ಐನಹಳ್ಳಿ, ಗೋಪಾಲಪುರ ಹಾಗೂ ಮಾಗಡಿ ಗ್ರಾಮಗಳಲ್ಲಿ ಪರಿಶಿಷ್ಟ ಪಂಗಡದವರ 4 ಸ್ಮಶಾನಗಳನ್ನು ತಲಾ ₹ 20 ಲಕ್ಷ ವೆಚ್ಚದಲ್ಲಿ ಇಲಾಖೆಯಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಎಲ್ಲಾ ಸ್ಮಶಾನಗಳಿಗೂ ಕಾಂಪೌಂಡ್ ನಿರ್ಮಿಸಿ, ಕೊಳವೆಬಾವಿ ಕೊರೆಯಿಸಿ ನೀರಿನ ಸೌಲಭ್ಯ ಕಲ್ಪಿಸಿ, ಸುಸಜ್ಜಿತ ಮಂಟಪವನ್ನೂ ನಿರ್ಮಿಸಲಾಗುವುದು’ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ ತಿಳಿಸಿದರು.

....

- ಜಗಳೂರು ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ನಮ್ಮ ಗ್ರಾಮದಲ್ಲಿ ಸ್ಮಶಾನಕ್ಕೆ ಸರ್ಕಾರದಿಂದ ಭೂಮಿ ಒದಗಿಸಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಖಾಸಗಿ ಜಮೀನು ಖರೀದಿಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳ ಬೇಕಿದೆ.

-ವೆಂಕಟೇಶ, ಗೊಲ್ಲರಹಟ್ಟಿ

.....

ಇದುವರೆಗೆ ಇಲ್ಲದ ಸಮಸ್ಯೆ ಇದೀಗ ಎದುರಾಗಿದೆ. ಖಾಸಗಿ ವ್ಯಕ್ತಿಯೊಬ್ಬರು ಸ್ಮಶಾನದ‌ ಜಾಗ ನಮಗೆ ಸೇರಿದ್ದು ಎಂದು ಈ ವರ್ಷ ಉಳುಮೆ ಮಾಡಲು ಸಿದ್ಧತೆ ನಡೆಸಿದ್ದಾರೆ. ದೊಡ್ಡ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇಲ್ಲದೆ ಪರದಾಡುವ ಸ್ಥಿತಿ ಇದೆ.

-ಅರುಣ್ ಕುಮಾರ್, ಗೊಲ್ಲರಹಟ್ಟಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು