ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಶೇ 42ರಷ್ಟು ಬಿತ್ತನೆ ಪೂರ್ಣ

ವಾಡಿಕೆಗಿಂತ ಶೇ 105ರಷ್ಟು ಅಧಿಕ ಮಳೆ
Last Updated 6 ಜುಲೈ 2022, 4:29 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆ ಚುರುಕುಗೊಂಡಿದೆ. ಶೇ 42ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ ಮೆಕ್ಕೆಜೋಳ, ಶೇಂಗಾ, ಜೋಳ, ತೊಗರಿ ಮತ್ತಿತರ ಬೆಳೆಗಳನ್ನು ಬಿತ್ತನೆ ಮಾಡಲಾಗಿದ್ದು, ಹಲವು ದಿನಗಳಿಂದ ಮಳೆಯಾಗದೇ ಆತಂಕಕ್ಕೆ ಒಳಗಾಗಿದ್ದ ರೈತರಿಗೆ ಎರಡು ದಿನಗಳಿಂದ ಬೀಳುತ್ತಿರುವ ವರ್ಷಧಾರೆ ಮಂದಹಾಸ ಮೂಡಿಸಿದೆ.

ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳವನ್ನು ಬಿತ್ತನೆ ಮಾಡಿದ್ದ ರೈತರು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು. ಒಣಗಿ ಹೋಗುವ ಭೀತಿಯಲ್ಲಿದ್ದ ಹತ್ತಿ, ಅಲಸಂದೆ, ಶೇಂಗಾ ಬೆಳೆಗಳು ಹದ ಮಳೆಯಿಂದಾಗಿ ಚೇತರಿಸಿಕೊಳ್ಳಲು ಆರಂಭಿಸಿವೆ.

ಜಿಲ್ಲೆಯಲ್ಲಿ ಮುಂಗಾರುಪೂರ್ವ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದಿತ್ತು. ನಂತರ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಸುರಿದಿರಲಿಲ್ಲ. ಅಲ್ಪಸ್ವಲ್ಪ ಮಳೆ ಸುರಿದಾಗಲೇ, ಉತ್ತಮ ಮುಂಗಾರಿನ ನಿರೀಕ್ಷೆಯಲ್ಲಿ ರೈತರು ಮೆಕ್ಕೆಜೋಳ ಬಿತ್ತಿದ್ದರು. ಹಲವು ದಿನಗಳಿಂದ ಮಳೆಯಾಗದೇ ಇದ್ದುದರಿಂದ ಸಹಜವಾಗಿಯೇ ಆತಂಕಕ್ಕೆ ಒಳಗಾಗಿದ್ದ ರೈತರು ಇದೀಗ ವರುಣನ ಕೃಪೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಉತ್ತಮ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಇದರಿಂದಲೂ ಸಂಉಷ್ಟರಾದಂತೆ ಕಂಡಿರುವ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಸಸಿಮಡಿಗಳ ತಯಾರಿಯಲ್ಲಿ ತೊಡಗಿದ್ದಾರೆ.

4 ದಿನಗಳಲ್ಲಿ 127ರಷ್ಟು ಅಧಿಕ ಮಳೆ: ಜಿಲ್ಲೆಯಲ್ಲಿ ಮುಂಗಾರು ಚುರುಕು ಕಂಡಿದೆ. ಜೂನ್‌ 1ರಿಂದ ಜುಲೈ 4ರವರೆಗೆ ಮಾನ್ಸೂನ್ ಮಾರುತ ಮಳೆ ವಾಡಿಕೆ 90 ಮಿ.ಮೀಗಿಂತ 113.2 ಮಿ.ಮೀ ಮಳೆಯಾಗಿದ್ದು, ಶೇ 25ರಷ್ಟು ಅಧಿಕ ಮಳೆ ಬಿದ್ದಿದೆ. ಚನ್ನಗಿರಿ ಹಾಗೂ ನ್ಯಾಮತಿ ತಾ‌ಲ್ಲೂಕಿನಲ್ಲಿ ಮಳೆಯ ಕೊರತೆಯಾಗಿತ್ತು. ಜುಲೈ 1ರಿಂದ 4ರವರೆಗೆ ವಾಡಿಕೆ ಮಳೆ 11.3 ಮಿ.ಮೀ ಇದ್ದು, 25.7 ಮಿ.ಮೀ ಮಳೆಯಾಗಿದೆ. ಶೇ 127ರಷ್ಟು ಅಧಿಕ ಮಳೆಯಾಗಿದ್ದು, ರೈತರ ಇನ್ನಷ್ಟು ಖುಷಿಯಲ್ಲಿದ್ದಾರೆ.

ಜಿಲ್ಲೆಯಲ್ಲಿ ಶೇ 42ರಷ್ಟು ಬಿತ್ತನೆ ಕಾರ್ಯ ಪೂರ್ಣ: ‘ಜಿಲ್ಲೆಯಲ್ಲಿ 2,45,303 ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಜುಲೈ 4ರವರೆಗೆ 1,03,134 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. 1,26,108 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿ ಇದ್ದು, 89,197 ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.ಶೇ 70.73ರಷ್ಟು ಪ್ರಗತಿಯಾಗಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾಹಿತಿ ನೀಡಿದರು.

‘2400 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬಿತ್ತನೆಯ ಗುರಿ ಇದ್ದು, 176 ಹೆಕ್ಟೇರ್
ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ರಾಗಿಯನ್ನು 7,295 ಹೆಕ್ಟೇರ್‌ ಗುರಿ ಇದ್ದು, 160 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ’ ಎಂದು ಹೇಳಿದರು.

4003 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ: ‘15,426 ಹೆಕ್ಟೇರ್‌ನಲ್ಲಿ ದ್ವಿದಳ ಧಾನ್ಯ ಬಿತ್ತನೆ ಗುರಿ ಇದ್ದು, 4003 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಅವುಗಳಲ್ಲಿ 3,577ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆಯಾಗಿದೆ. 2,832 ಹೆಕ್ಟೇರ್‌ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದ್ದು, 13,770 ಹಕ್ಟೇರ್‌ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ’ ಎಂದು ಮಾಹಿತಿ ನೀಡಿದರು.

ಜಗಳೂರಿನಲ್ಲಿ ಹೆಚ್ಚು ಬಿತ್ತನೆ:
ಬರದ ತಾಲ್ಲೂಕು ಎಂದು ಕರೆಸಿಕೊಂಡಿದ್ದ ಜಗಳೂರಿನಲ್ಲಿ ಈ ವರ್ಷ ಹೆಚ್ಚು ಬಿತ್ತನೆಯಾಗಿದೆ. ದಾವಣಗೆರೆ ತಾಲ್ಲೂಕು ನಂತರದ ಸ್ಥಾನದಲ್ಲಿದೆ. ಹರಿಹರದಲ್ಲಿ ಕಡಿಮೆ ಬಿತ್ತನೆಯಾಗಿದೆ.

ಕೋಟ್

ಅಡಿಕೆಯ ನಡುವೆ ಮೆಕ್ಕೆಜೋಳ ಬಿತ್ತನೆ ಮಾಡಿದ್ದೇನೆ. ಒಣಗುವ ಹಂತ ತಲುಪಿದ್ದ ಬಿದ್ದ ಮಳೆಯಿಂದಾಗಿ ಅನುಕೂಲವಾಗಿದೆ. ಮೆಕ್ಕೆಜೋಳಕ್ಕೆ ಲದ್ದಿಹುಳು ಬಾಧೆ ಕಾಣಿಸಿಕೊಂಡಿದೆ. ಕೃಷಿ ಇಲಾಖೆ ಅಧಿಕಾರಿಗಳು ಇತ್ತ ಗಮನಹರಿಸಬೇಕು.

ಕುಬೇರ ಕೆ.ಸಿ, ರೈತ, ಕುಣಿಬೆಳಕೆರೆ

ಜಿಲ್ಲೆಯಲ್ಲಿ ಬಿತ್ತನೆ ಬೀಜವನ್ನುಸಮರ್ಪಕವಾಗಿ ಪೂರೈಕೆ ಮಾಡಲಾಗಿದೆ. ರಸಗೊಬ್ಬರದ ಕೊರತೆ ಇಲ್ಲ. ಜುಲೈ ತಿಂಗಳಿಗೆ 38,600 ಟನ್‌ ರಸಗೊಬ್ಬರ ಅಗತ್ಯವಿದ್ದು, ಈಗಾಗಲೇ 42 ಸಾವಿರ ಟನ್ ದಾಸ್ತಾನು ಇದೆ.

ಶ್ರೀನಿವಾಸ ಚಿಂತಾಲ್, ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT