ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೇ 7.5 ಮೀಸಲಾತಿ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ವಾಲ್ಮೀಕಿ ನಾಯಕ ಸಮಾಜದ ಮುಖಂಡರ ಹೇಳಿಕೆ
Last Updated 10 ಸೆಪ್ಟೆಂಬರ್ 2020, 16:27 IST
ಅಕ್ಷರ ಗಾತ್ರ

ದಾವಣಗೆರೆ: ‘ಸೆ. 21ರಂದು ನಡೆಯಲಿರುವ ಅಧಿವೇಶನಕ್ಕೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ವಾಲ್ಮೀಕಿ ನಾಯಕ ಸಮಾಜಕ್ಕೆ ಶೇ 7.5 ಮೀಸಲಾತಿ ನೀಡುವ ಸಂಬಂಧ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ’ ಎಂದು ಸಮಾಜದ ಮುಖಂಡ ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಚ್. ಓಬಳಪ್ಪ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಳದಿದ್ದರೂ ಕೆಲ ಸಮುದಾಯಗಳಿಗೆ ಹೆಚ್ಚಿನ ಮೀಸಲಾತಿ ನೀಡಲಾಗಿದೆ. ಆದರೆ ಹಲವು ವರ್ಷಗಳಿಂದ ಮೀಸಲಾತಿ ಬಗ್ಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರಗಳು ಸಮಾಜದ ಬೇಡಿಕೆಯನ್ನು ಕಡೆಗಣಿಸಿವೆ. 21 ರಂದು ಸರ್ಕಾರ ತೀರ್ಮಾನ ಕೈಗೊಳ್ಳದಿದ್ದರೆ ಪ್ರಸನ್ನಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ಉಗ್ರ ಹೋರಾಟ ಕೈಗೊಳ್ಳುತ್ತೇವೆ’ ಎಂದು ಎಚ್ಚರಿಸಿದರು.

‘ಮೀಸಲಾತಿ ಸಿಗದಿದ್ದರೆ ಸಮುದಾಯದ 17 ಜನ ಶಾಸಕರಿಂದ ರಾಜೀನಾಮೆ ಕೊಡಿಸುತ್ತೇವೆ. ರಾಜೀನಾಮೆಗೆ ಮುಂದಾಗದಿದ್ದರೆ ಶಾಸಕರ ಮನೆ ಎದುರು ಧರಣಿ ನಡೆಸುತ್ತೇವೆ. ಮೀಸಲಾತಿಗಾಗಿ ಯಾವ ತ್ಯಾಗಕ್ಕೂ ಸಿದ್ಧ’ ಎಂದರು.

ಮುಖಂಡ ಹದಡಿ ಹಾಲಪ್ಪ, ‘ಮುಖ್ಯಮಂತ್ರಿ ಯಡಿಯೂರಪ್ಪ ಮಾತಿಗೆ ತಪ್ಪದವರು ಎಂದು ಹೆಸರು ಮಾಡಿದ್ದಾರೆ. ಆದರೂ ಸಮಾಜದ ವಿಷಯದಲ್ಲಿ ಮಾತು ತಪ್ಪಿದ್ದಾರೆ. ಈಗಲಾದರೂ ಮೀಸಲಾತಿ ನೀಡಬೇಕು’ ಎಂದು ಒತ್ತಾಯಿಸಿದರು.

ಮುಖಂಡ ಹೊದಿಗೆರೆ ರಮೇಶ್, ‘ಜಾತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂದು ಸಂವಿಧಾನದಲ್ಲಿ ಹೇಳಿದೆ. ಆದರೂ ಕಡೆಗಣಿಸಲಾಗಿದೆ. ಅಧಿವೇಶನಕ್ಕೂ ಮುನ್ನ ಸರ್ಕಾರ ನಿರ್ಧಾರ ಕೈಗೊಳ್ಳಬೇಕು. ಸಮಾಜದ ಶಾಸಕರು, ಸಂಸದರ ರಾಜೀನಾಮೆ ನಮಗೆ ಬೇಕಿಲ್ಲ. ಈ ಬಗ್ಗೆ ಬದ್ಧತೆ ಪ್ರದರ್ಶಿಸಬೇಕು’ ಎಂದು ಆಗ್ರಹಿಸಿದರು.

ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಬಿ. ವೀರಣ್ಣ, ಆಂಜನೇಯ ಗುರೂಜಿ, ಕೆ.ಆರ್‌. ರಂಗಪ್ಪ, ರಘು ದೊಡ್ಡಮನಿ, ಚಂದಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT