ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೆಳೆಯುವ ಏಡಿಗಳಾಗದೇ ಕೆಲಸಗಾರರಾದರೆ ಮಾನ್ಯತೆ

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿದ ಕಸಾಪ ಅಧ್ಯಕ್ಷ ಮನು ಬಳಿಗಾರ್‌
Last Updated 2 ಮಾರ್ಚ್ 2021, 3:43 IST
ಅಕ್ಷರ ಗಾತ್ರ

ದಾವಣಗೆರೆ: ಕನ್ನಡಿಗರು ಅಂದರೆ ಒಂದರ ಕಾಲು ಇನ್ನೊಂದು ಎಳೆಯುವ ಏಡಿಗಳಂತೆ ಎಂಬ ಮಾತಿದೆ. ಕನ್ನಡ ಸಾಹಿತ್ಯ ಪರಿಷತ್ತಿನಲ್ಲೂ ಇಂಥವುಗಳಿವೆ. ಕಾಲು ಎಳೆಯುವುದನ್ನು ಬಿಟ್ಟು ಕೆಲಸ ಮಾಡುವವರಿಗೆ ಮಾನ್ಯತೆ ಸಿಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್‌ ತಿಳಿಸಿದರು.

ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಜಿ.ಎಸ್‌. ಶಿವರುದ್ರಪ್ಪ ವೇದಿಕೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 10ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡಕ್ಕೆ, ಸಾಹಿತ್ಯಕ್ಕೆ, ಸಂಸ್ಕೃತಿಗೆ, ಉದ್ಯಮಕ್ಕೆ ಬಹಳ ಕೊಡುಗೆ ನೀಡಿದ ಜಿಲ್ಲೆ ಇದು. ಇಲ್ಲಿಯ ಪರಿಷತ್ ಕೂಡ ನಿಷ್ಕಳಂಕವಾಗಿ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡಿದೆ. ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದರೂ ಅಲ್ಲಿಯೂ ನಿಷ್ಕಳಂಕ ಎಂಬ ತೀರ್ಪು ಬಂದಿದೆ ಎಂದು ಹೇಳಿದರು.

‘ದಾವಣಗೆರೆ ಜಿಲ್ಲೆಯಾಗಿ 24 ವರ್ಷಗಳಾಗಿವೆ. ಆ ಪ್ರಕಾರ 24ನೇ ಜಿಲ್ಲಾ ಸಾಹಿತ್ಯ ಸಮ್ಮೇಳನವಾಗಬೇಕಿತ್ತು. ಆದರೆ ಇದು 10ನೇ ಸಮ್ಮೇಳನ. ಅದಕ್ಕೆ ಕಾರಣವೇನಂದರೆ ಹಿಂದೆ ಜಿಲ್ಲಾ ಸಮ್ಮೇಳನ, ತಾಲ್ಲೂಕು ಸಮ್ಮೇಳನಕ್ಕೆ ಅನುದಾನ ಬರುತ್ತಿರಲಿಲ್ಲ. 12 ವರ್ಷಗಳ ಹಿಂದೆ ನಾನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯುಕ್ತನಾಗಿದ್ದಾಗ ಆಗಿನ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಸದಾನಂದ ಗೌಡ, ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದೆ. ಆಗ ಜಿಲ್ಲಾ ಸಮ್ಮೇಳನಕ್ಕೆ ₹ 5 ಲಕ್ಷ, ತಾಲ್ಲೂಕು ಸಮ್ಮೇಳನಕ್ಕೆ ₹ 1 ಲಕ್ಷ ನಿಗದಿಪಡಿಸಲಾಯಿತು. ಅಲ್ಲಿಂದ ಎಲ್ಲ ಜಿಲ್ಲೆಗಳಲ್ಲಿ ಸಮ್ಮೇಳನ ನಡೆಯಲು ಆರಂಭಗೊಂಡಿತು’ ಎಂದು ನೆನಪಿಸಿಕೊಂಡರು.

‘ನಾನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಆದ ಬಳಿಕ ಮೊದಲ ಬಾರಿಗೆ ದಲಿತ ಸಾಹಿತ್ಯ ಸಂಪುಟಗಳನ್ನು ತರಲಾಯಿತು. ಮಹಿಳಾ ಸಾಹಿತ್ಯ ಸಂಪುಟ ಬಂತು. ಮಹಿಳಾ ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಂಡೆವು. ಪ್ರಥಮ ಬಾರಿ ಪರಿಶಿಷ್ಟ ಪಂಗಡಕ್ಕೆ ಎಲ್ಲ ಕಾರ್ಯಕಾರಿ ಸಮಿತಿಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಮತ್ತು ಮಹಿಳೆಯರಿಗೆ ಒಂದು ಸ್ಥಾನ ಇದ್ದಿದ್ದನ್ನು ಎರಡಕ್ಕೇ ಏರಿಸಲಾಗಿದೆ. ಇದರಿಂದ ಸುಮಾರು 850 ಪ್ರಾತಿನಿಧ್ಯ ಹೆಚ್ಚಾಗಿದೆ. ಮತಗಟ್ಟೆಗಳನ್ನು ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲಿ ಮಾಡಿರುವುದೂ ಸೇರಿ ಅನೇಕ ಸುಧಾರಣೆಗಳನ್ನು ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

‘ಸಾಹಿತ್ಯ ಪರಿಷತ್‌ಗೆ ಉದ್ಯೋಗ ಕೊಡಿಸಲು ಆಗುತ್ತಿಲ್ಲ. ಆದರೂ ಬಹುರಾಷ್ಟ್ರೀಯ ಕಂಪನಿಗಳಲ್ಲಿ 125 ಮಂದಿಗೆ ಉದ್ಯೋಗ ಕೊಡಿಸಿದ್ದೇವೆ. ಪುಸ್ತಕಗಳನ್ನು ಸಾಫ್ಟ್‌ವೇರ್‌ಗೆ ಅಳವಡಿಸಿದ್ದೇವೆ’ ಎಂದರು.

ಕೃತಿಗಳನ್ನು ಬಿಡುಗಡೆ ಮಾಡಿದ ವಿಶೇಷ ನಿವೃತ್ತ ಜಿಲ್ಲಾಧಿಕಾರಿ ಎನ್‌.ಕೆ. ನಾರಾಯಣ್‌, ‘ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿ ಮಾಡಿದಾಗ ಅದರ ವಿರುದ್ಧ ಐದು ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿತ್ತು. ಎಲ್ಲ ಕೋರ್ಟ್‌ಗಳಲ್ಲಿಯೂ ನಾವು ಮಾಡಿದ ತಿದ್ದುಪಡಿ ಸರಿ ಇದೆ ಎಂದು ತೀರ್ಪು ಬಂದಿದೆ’ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕು ಪ್ರಾಸ್ತಾವಿಕವಾಗಿ ಮಾತನಾಡಿ, ‘ಹರಪನಹಳ್ಳಿ ತಾಲ್ಲೂಕು ಬಳ್ಳಾರಿಗೆ ಸೇರಿದ ಬಳಿಕ ಜಗಳೂರು ತಾಲ್ಲೂಕು ಚಿತ್ರದುರ್ಗಕ್ಕೆ ಸೇರಬೇಕು ಎಂಬ ಕೂಗು ಎದ್ದಿತ್ತು. ಕಳೆದ ಸಮ್ಮೇಳನದಲ್ಲಿ ಆ ಬಗ್ಗೆಯೇ ಗೋಷ್ಠಿ ಇಟ್ಟು ಸಾಧಕ ಭಾದಕಗಳನ್ನು ಚರ್ಚೆ ನಡೆಸಲಾಯಿತು. ಆ ಚರ್ಚೆಯ ಬಳಿಕ ಜಗಳೂರು ದಾವಣಗೆರೆ ಜಿಲ್ಲೆಯಲ್ಲಿಯೇ ಉಳಿಯಬೇಕು ಎಂಬ ನಿರ್ಧಾರವಾಯಿತು. ಬೇರ್ಪಡುವ ಕೂಗು ನಿಂತು ಹೋಯಿತು’ ಎಂದು ನೆನಪಿಸಿಕೊಂಡರು.

ಸಿದ್ಧಾಂತ ಸಾಹಿತಿ ಎಸ್‌.ಓಂಕಾರಯ್ಯ ತವನಿಧಿ ಅವರ ‘ಸಕಲ ಸೃಷ್ಟಿ ಸಿದ್ಧಾಂತ ಹಾಗೂ ಗಂಡು, ಹೆಣ್ಣುಗಳ ನಡುವಿನ 350ಕ್ಕಿಂತ ಹೆಚ್ಚು ವ್ಯತ್ಯಾಸಗಳು’, ಜೆ.ಸಿ. ಮಂಜುನಾಥ ಹುಲ್ಲೇಹಾಳ್‌ ಅವರ ‘ಭಾವ ಸಂಕಲನ’ ಬಿಡುಗಡೆಗೊಂಡಿತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಅಭಿವೃದ್ಧಿ) ಎಚ್‌.ಕೆ. ಲಿಂಗರಾಜ್‌, ಪ್ರೌಢಶಾಲೆಗಳ ಮುಖ್ಯೋಪಾಧ್ಯಯರ ಸಂಘದ ಅಧ್ಯಕ್ಷ ಡಿ.ಡಿ. ಹಾಲಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಿ. ರಾಮಪ್ಪ ಮಾತನಾಡಿದರು.

ಬಿ.ದಿಳ್ಯಪ್ಪ ಸ್ವಾಗತಿಸಿದರು. ಬರುಡೇಕಟ್ಟೆ ಮಂಜಪ್ಪ ವಂದಿಸಿದರು. ಡಾ. ಪ್ರಕಾಶ್‌ ಹಲಗೇರಿ ಸರ್ವಾಧ್ಯಕ್ಷರ ಪರಿಚಯ ಮಾಡಿದರು. ಎನ್‌.ಎಸ್‌. ರಾಜು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಕಸಾಪ ನಿಕಟಪೂರ್ವಾಧ್ಯಕ್ಷ ಎ.ಆರ್‌. ಉಜ್ಜಿನಪ್ಪ, ವಿವಿಧ ತಾಲ್ಲೂಕುಗಳ ಕಸಾಪ ಅಧ್ಯಕ್ಷರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT