ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿಗೆ ಸೌಲಭ್ಯ ಕಲ್ಪಿಸಲು ಕ್ರಮ

ಹಣ್ಣಿನ ಮಾರುಕಟ್ಟೆ ಉದ್ಘಾಟನಾ ಸಮಾರಂಭದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ
Last Updated 5 ಜನವರಿ 2021, 8:02 IST
ಅಕ್ಷರ ಗಾತ್ರ

ದಾವಣಗೆರೆ: ‘ರೈತರು, ವರ್ತಕರು ಸರ್ಕಾರದ ಸೌಲಭ್ಯ ಬಳಸಿಕೊಳ್ಳಲು ಮುಂದಾಗಬೇಕು. ದಾವಣಗೆರೆಯ ಎಪಿಎಂಸಿಯಲ್ಲಿನ ಸೌಲಭ್ಯಗಳು, ಮಾರುಕಟ್ಟೆ ಪ್ರಾಂಗಣಗಳು ರಾಜ್ಯದಲ್ಲಿಯೇ ಉತ್ತಮವಾಗಿವೆ. ಇಲ್ಲಿನ ಎಪಿಎಂಸಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸಲು ಪ್ರಯತ್ನಿಸುತ್ತೇನೆ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಸಗಟು ಹಣ್ಣಿನ ವರ್ತಕರ ಸಂಘದಿಂದ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಹಣ್ಣಿನ ಮಾರುಕಟ್ಟೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಹಣ್ಣಿನ ಮಾರುಕಟ್ಟೆಯಲ್ಲಿ ಕೋಲ್ಡ್‌ ಸ್ಟೋರೇಜ್‌ ಘಟಕಕ್ಕೆ ವ್ಯಾಪಾರಿಗಳು ಬೇಡಿಕೆ ಇಟ್ಟಿದ್ದು, ದೊಡ್ಡ ಘಟಕ ನಿರ್ಮಿಸಲು ಹೆಚ್ಚು ವಿದ್ಯುತ್‌ ಅಗತ್ಯ ಇದೆ. ಚಿಕ್ಕ ಘಟಕ ನಿರ್ಮಿಸುವುದು ಉತ್ತಮ. ಇದಕ್ಕೆ ಅನುದಾನತರಲು ಪ್ರಯತ್ನಿಸುತ್ತೇನೆ’ ಎಂದರು.

‘262 ಜನ ಎಪಿಎಂಸಿ ಹಮಾಲರು ಮನೆ ನಿರ್ಮಿಸಿಕೊಡುವ ಸಂಬಂಧ ಮನವಿ ಸಲ್ಲಿಸಿದ್ದಾರೆ. ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಲು ಎಪಿಎಂಸಿ ಕ್ರಮ ಕೈಗೊಳ್ಳಬೇಕು. ಪ್ರಾಂಗಣದಲ್ಲಿ ವಿಶ್ರಾಂತಿ ಕೊಠಡಿ ಸ್ಥಾಪಿಸುವಂತೆಯೂ ಬೇಡಿಕೆ ಇದ್ದು, ಈ ಬಗ್ಗೆ ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

‘ಹಿಂದಿನಿಂದಲೂ ದಾವಣಗೆರೆ ಎಪಿಎಂಸಿ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದ್ದೇನೆ. ಎಚ್‌.ಸಿ. ಮಹಾದೇವಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಅವರಿಂದ ₹ 750 ಕೋಟಿ ಅನುದಾನ ತಂದಿದ್ದೆ. ಅದರಲ್ಲಿ ₹ 300 ಕೋಟಿ ಎಪಿಎಂಸಿ ಅಭಿವೃದ್ಧಿಗೆ ವಿನಿಯೋಗಿಸಲಾಗಿತ್ತು. ಎಪಿಎಂಸಿ ನೌಕರರಿಗೆ ಬಡ್ತಿ ಇರದ ಸಮಯದಲ್ಲಿ ಹಲವು ನೌಕರರಿಗೆ ಬಡ್ತಿ ನೀಡಿದ್ದೆ’ ಎಂದು ಹೇಳಿದರು.

ವಿಧಾನಪರಿಷತ್‌‌ ಮಾಜಿ ಸದಸ್ಯ ಅಬ್ದುಲ್‌ ಜಬ್ಬಾರ್‌, ‘ಹಣ್ಣಿನ ವ್ಯಾಪಾರಿಗಳ ದಶಕಗಳ ಕನಸು ನನಸಾಗಿದೆ. ಬೆಂಗಳೂರು, ಹುಬ್ಬಳ್ಳಿ ಹೊರತುಪಡಿಸಿದರೆ ಇಲ್ಲಿನ ಹಣ್ಣಿನ ಮಾರುಕಟ್ಟೆಯೇ ಉತ್ತಮವಾಗಿದೆ. ಶಾಮನೂರು ಶಿವಶಂಕರಪ್ಪ, ಎಸ್‌.ಎಸ್‌. ಮಲ್ಲಿಕಾರ್ಜುನ ಅವರು ಎಪಿಎಂಸಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಪಡಿಸಿದ್ದಾರೆ. ಅವರ ಪಾತ್ರ ಸ್ಮರಣೀಯ’ ಎಂದರು.

ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ‘ನೂತನ ಹಣ್ಣಿನ ಮಾರುಕಟ್ಟೆ ಬಳಿ ಜೈವಿಕ ಕೇಂದ್ರದ ಪ್ರಯೋಗಾಲಯ ಇರುವುದರಿಂದ ಹೂವಿನ ಮಾರುಕಟ್ಟೆಯಿಂದ ಜನರು ಇಡೀ ಪ್ರಾಂಗಣ ಸುತ್ತುಹಾಕಿ ಹಣ್ಣಿನ ಮಾರುಕಟ್ಟೆಗೆ ಬರಬೇಕು. ವ್ಯಾಪಾರಿಗಳು, ರೈತರ ಅನುಕೂಲಕ್ಕಾಗಿಜೈವಿಕ ಕೇಂದ್ರದ ಬಳಿ 10 ಅಡಿ ಜಾಗ ಕೊಟ್ಟರೆ ಈ ಸಮಸ್ಯೆ ತಪ್ಪುತ್ತದೆ’ ಎಂದು ಹೇಳಿದರು.

ಎಪಿಎಂಸಿ ಅಧ್ಯಕ್ಷ ಅಣಜಿ ಚಂದ್ರಶೇಖರಪ್ಪ, ‘ಈಗಾಗಲೇ ಹಮಾಲರಿಗೆ 300 ಮನೆ ನಿರ್ಮಿಸಿಕೊಡಲಾಗಿದೆ’ ಎಂದರು.

ಸಗಟು ಹಣ್ಣಿನ ವರ್ತಕರ ಸಂಘದ ಅಧ್ಯಕ್ಷ ಅಬ್ದುಲ್ ರಹಮಾನ್‌ ಎಚ್‌.ಕೆ., ‘ಬೆಂಗಳೂರು ಬಿಟ್ಟರೆ ಇದೇ ಉತ್ತಮ ಹಣ್ಣಿನ ಮಾರುಕಟ್ಟೆ ಎಂಬ ಪ್ರಶಂಸೆ ಸಿಕ್ಕಿದೆ. ಮಾರುಕಟ್ಟೆ ನಿರ್ಮಿಸಲು ಬಾಪೂಜಿ ಬ್ಯಾಂಕ್‌ನಿಂದ ₹ 4 ಕೋಟಿ ಸಾಲ ನೀಡಿ ಶಾಮನೂರು ಶಿವಶಂಕರಪ್ಪ ಹೆಚ್ಚನ ಸಹಕಾರ ನೀಡಿದ್ದಾರೆ’ ಎಂದು ಕೃತಜ್ಞತೆ ಸಲ್ಲಿಸಿದರು.

ಜೆಡಿಎಸ್ ಮುಖಂಡ ಜೆ. ಅಮಾನುಲ್ಲಾ ಖಾನ್‌, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಿ. ಆನಂದ್‌ ಮಾತನಾಡಿದರು. ಎಪಿಎಂಸಿ ಕಾರ್ಯದರ್ಶಿ ಕೆ.ಸಿ. ದೊರೆಸ್ವಾಮಿ, ಮುಖಂಡರಾದ ದೊಗ್ಗಳ್ಳಿ ಬಸವರಾಜ್‌, ಜಾವೀದ್‌ ಸಾಬ್‌, ಬಿ. ಈರಣ್ಣ, ಬಾಷಾ ಸೇರಿ ಎಪಿಎಂಸಿ ಸದಸ್ಯರು ಇದ್ದರು.

ಶಾಂತಲಾ ಪಿ.ಎಚ್‌. ನಿರೂಪಿಸಿದರು. ಸಂಘದ ಕಾರ್ಯದರ್ಶಿ ಕೆ. ಹನೀಫ್‌ ಸಾಬ್‌ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT