ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಯ ನಿರ್ಮೂಲನೆಗೆ ಮುಂದಡಿ: ಕಂಚಿನ ಪದಕದ ಮೆರುಗು

ರಾಷ್ಟ್ರದ 100 ಸಾಧಕ ಜಿಲ್ಲೆಗಳಲ್ಲಿ ದಾವಣಗೆರೆಯೂ ಒಂದು
Last Updated 8 ಫೆಬ್ರುವರಿ 2023, 6:18 IST
ಅಕ್ಷರ ಗಾತ್ರ

ದಾವಣಗೆರೆ: ಇನ್ನು ಎರಡು ವರ್ಷ ಅಂದರೆ 2025ರೊಳಗೆ ಕ್ಷಯರೋಗ ನಿರ್ಮೂಲನೆ ಮಾಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಇಟ್ಟುಕೊಂಡಿದೆ. ಈ ನಿಟ್ಟಿನಲ್ಲಿ ಪ್ರತಿ ಜಿಲ್ಲಾವಾರು ಸಮೀಕ್ಷೆ ನಡೆಸಿ, ಸಾಧಕ ಜಿಲ್ಲೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿದ್ದು, ದಾವಣಗೆರೆ ಜಿಲ್ಲೆ ಇತ್ತೀಚೆಗಷ್ಟೇ ಕಂಚಿನ ಪದಕಕ್ಕೆ ಭಾಜನವಾಗಿದೆ.

2015ರಲ್ಲಿ ಇದ್ದ ಕ್ಷಯದ ಪ್ರಮಾಣವು 2025ಕ್ಕೆ ಶೇ 80ರಷ್ಟು ಇಳಿಕೆಯಾಗಬೇಕು. ಸಾವಿನ ಪ್ರಮಾಣ ಶೇ 90ರಷ್ಟು ಕಡಿಮೆಯಾಗಬೇಕು. ಆದಾಯದ ಶೇ 20ರಷ್ಟು ವೆಚ್ಚವನ್ನು ಕ್ಷಯರೋಗಕ್ಕಾಗಿ ರೋಗಿಗಳು ವಿನಿಯೋಗಿಸುತ್ತಿದ್ದಾರೆ. ಅದು ಶೂನ್ಯಕ್ಕೆ ಬರಬೇಕು ಎಂಬುದು ಗುರಿಯಾಗಿದೆ.

ಈ ಗುರಿ ಸಾಧಿಸಲು ಜಿಲ್ಲಾವಾರು ಕೈಗೊಂಡಿರುವ ಕ್ರಮಗಳು, ಇಳಿಕೆಯಾದ ಪ್ರಮಾಣದ ಆಧಾರದಲ್ಲಿ ಪದಕಗಳನ್ನು ನೀಡಲಾಗುತ್ತದೆ. 2015ರಲ್ಲಿ ಇದ್ದ ಪ್ರಕರಣಗಳಿಗಿಂತ ಶೇ 20ರಷ್ಟು ಕಡಿತಗೊಳಿಸಿದ್ದರೆ, ಆ ಜಿಲ್ಲೆಗೆ ಕಂಚಿನ ಪದಕ, ಶೇ 40ರಷ್ಟು ಕಡಿಮೆ ಮಾಡಿದ್ದರೆ ಬೆಳ್ಳಿ ಪದಕ, ಶೇ 60ರಷ್ಟು ಕಡಿಮೆ ಮಾಡಿದ್ದರೆ ಚಿನ್ನದ ಪದಕ, ಶೇ 80ರಷ್ಟು ಸಾಧನೆ ಮಾಡಿದ್ದರೆ ಆ ಜಿಲ್ಲೆಯನ್ನು ‘ಕ್ಷಯಮುಕ್ತ’ ಎಂದು ಘೋಷಿಸಲಾಗುತ್ತದೆ.

ಸರ್ಕಾರವು ಕೆಲವು ಗ್ರಾಮ, ಪ್ರದೇಶಗಳನ್ನು ಆಯ್ಕೆ ಮಾಡಿ, ಮನೆಮನೆ ಸಮೀಕ್ಷೆ ನಡೆಸುತ್ತದೆ. ಖಾಸಗಿ ಕ್ಲಿನಿಕ್‌, ಆಸ್ಪತ್ರೆಗಳಲ್ಲಿ ಎಷ್ಟು ಮಂದಿ ಕ್ಷಯರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ ಎಂಬ ವಿವರ ಪಡೆಯಲಾಗುತ್ತದೆ. ಇದಲ್ಲದೆ, ಖಾಸಗಿ ಔಷಧಾಲಯಗಳಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದ ಔಷಧಗಳನ್ನು ಎಷ್ಟು ಮಂದಿ ಪಡೆದಿದ್ದಾರೆ ಎಂಬ ಮಾಹಿತಿಯನ್ನೂ ಪಡೆಯಲಾಗುತ್ತದೆ. ಈ ಸಮೀಕ್ಷೆಯ ಅಂಕಿ ಅಂಶ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿಯಿಂದ ನೀಡಿರುವ ಅಂಕಿ ಅಂಶವನ್ನು ತಾಳೆ ಮಾಡಿ ನೋಡಲಾಗುತ್ತದೆ. ಕ್ಷಯರೋಗ ನಿಯಂತ್ರಣದಲ್ಲಿ ಯಾವ ಜಿಲ್ಲೆ ಉತ್ತಮ ಕಾರ್ಯ ನಿರ್ವಹಿಸಿದೆ ಎಂಬುದನ್ನು ನೋಡಿ ಪ್ರಶಸ್ತಿ ನೀಡಲಾಗುತ್ತದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಕೆ.ಎಚ್‌. ಗಂಗಾಧರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಒಂದು ವರ್ಷದಲ್ಲಿ ಲಕ್ಷ ಜನರಲ್ಲಿ ಎಷ್ಟು ಮಂದಿಗೆ ಕ್ಷಯ ಬಂದಿದೆ ಎಂಬುದನ್ನು ಅವಲೋಕಿಸಲಾಗುತ್ತದೆ. 2015ರಲ್ಲಿ ದಾವಣಗೆರೆಯಲ್ಲಿ ಲಕ್ಷದಲ್ಲಿ 165 ಜನರಲ್ಲಿ ಕ್ಷಯರೋಗ ಕಾಣಿಸಿಕೊಳ್ಳುತ್ತಿತ್ತು. 2022ರಲ್ಲಿ ಲಕ್ಷಕ್ಕೆ 132 ಮಂದಿಯಲ್ಲಿ ಕ್ಷಯ ಪತ್ತೆಯಾಗಿತ್ತು. ಇದೆಲ್ಲವನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.

ಸದ್ಯ ಬೇರೆ ಬೇರೆ ಜಿಲ್ಲೆಗಳಿಂದ ಬಂದವರು ಮತ್ತು ದಾವಣಗೆರೆ ಜಿಲ್ಲೆಯವರು ಇಲ್ಲೇ ಚಿಕಿತ್ಸೆ ಪಡೆಯಲು ‘ನಿಕ್ಷಯ’ ಪೋರ್ಟಲ್‌ನಲ್ಲಿ ಹೆಸರು ದಾಖಲಿಸಿಕೊಂಡಿದ್ದು, ಅಂಥವರ ಸಂಖ್ಯೆ 2,400. ಇದೇ ಜಿಲ್ಲೆಯವರಾಗಿ ಬೇರೆ ಜಿಲ್ಲೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಬಂದವರು 2,300 ಜನ ಇದ್ದಾರೆ. ಕನಿಷ್ಠ 6 ತಿಂಗಳು, ಗರಿಷ್ಠ ಒಂದೂವರೆ ವರ್ಷಗಳ ಕಾಲ ಚಿಕಿತ್ಸೆ ಪಡೆಯಬೇಕಾಗುತ್ತದೆ. ಮುಂದಿನ ವರ್ಷದ ಸಮೀಕ್ಷೆಗೆ ಕ್ಷಯರೋಗಿಗಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT