ಶುಕ್ರವಾರ, ಜನವರಿ 24, 2020
17 °C
ಸಮಸ್ಯೆ ಸರಿಪರಿಸಲು ಪಾಲಿಕೆಗೆ ಸೂಚಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಜನಸ್ಪಂದನದಲ್ಲಿ ಮಾರ್ದನಿಸಿದ ಕೋತಿ ಕಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬೇತೂರು ರಸ್ತೆ ದೇವರಾಜ ನಗರದಲ್ಲಿ 15 ದಿನಗಳಿಂದ ಉಂಟಾಗಿರುವ ಕೋತಿಗಳ ಉಪಟಳ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಮಾರ್ದನಿಸಿತು. ಕೋತಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಸ್ಥಳೀಯರಾದ ಕೆ. ಮಂಜುನಾಥ ಮತ್ತು ಇತರರು ಮನವಿ ಮಾಡಿದರು.

ಬೀಡಾಡಿ ದನಗಳು, ಹಂದಿಗಳು, ನಾಯಿಗಳ ತೊಂದರೆಯ ಬಗ್ಗೆ ಆಗಾಗ ದೂರುಗಳು ಬರುತ್ತವೆ. ಈಗ ಕೋತಿಗಳು ಸೇರಿಕೊಂಡಿವೆ ಎಂದು ತಿಳಿಸಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಪರಿಶೀಲಿಸಿ ಕ್ರಮ ಕೈಗೊಳ್ಳಿ’ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಾದರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ 350 ಶೌಚಾಲಯಗಳನ್ನು ಕಟ್ಟಿಸಿಕೊಡಲಾಗಿದೆ. ಹಣ ಪಾವತಿಯಾಗಿಲ್ಲ ಎಂದು ಸಂಸ್ಥೆಯ ಸದಸ್ಯರು ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

ಚನ್ನಗಿರಿ ತಾಲ್ಲೂಕಿನ ಕೆಲ ಗ್ರಾಮಗಳಿಗೆ ಖಾಸಗಿ ಬಸ್‌ಗಳಿಗೆ ಪರ್ಮಿಟ್ ನೀಡಲಾಗಿದ್ದರೂ ಬಸ್ ಬರುತ್ತಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗೆ ಪರ್ಮಿಟ್‌ ಸಿಕ್ಕಿಲ್ಲ ಎಂದು ಸ್ಥಳೀಯರು ಮನವಿ ಸಲ್ಲಿಸಿದರು. ಪರ್ಮಿಟ್‌ ಪಡೆದ ಮಾರ್ಗದಲ್ಲಿ ಬಸ್‌ ಓಡಿಸದವರಿಗೆ ನೋಟಿಸ್‌ ನೀಡಿ. ಕೆಎಸ್‌ಆರ್‌ಟಿಸಿ ಬಸ್‌ ಓಡಿಸಲು ಪ್ರಸ್ತಾವ ಸಲ್ಲಿಸಿ ಎಂದು ಆರ್‌ಟಿಒ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇದ್ದೂ ಇಲ್ಲದಂತಾಗಿದೆ. ಅಲ್ಲಿರುವ ಸುಲಭ ಶೌಚಾಲಯವೂ ಸ್ಥಗಿತವಾಗಿದೆ. ವಾಹನ ನಿಲುಗಡೆ ವ್ಯವಸ್ಥೆಯೂ ಸಮರ್ಪಕವಾಗಿಲ್ಲ ಎಂದು ಮಲ್ಲಿಕಾರ್ಜುನ ಇಂಗಳೇಶ್ವರ ದೂರಿದರು.

ಮನವಿ ಸಲ್ಲಿಸಲು ತೆವಲಿಕೊಂಡು ಬರುತ್ತಿದ್ದ ಅಂಗವಿಕಲ ಶೇಷಗಿರಿ ಬಳಿಗೆ ತೆರಳಿದ ಜಿಲ್ಲಾಧಿಕಾರಿ ಅಲ್ಲೇ ಮನವಿ ಸ್ವೀಕರಿಸಿ, ಅಹವಾಲು ಆಲಿಸಿ ಮಾನವೀಯತೆ ಮೆರೆದರು. ಕೆ.ಆರ್‌. ಮಾರ್ಕೆಟ್‌ನಲ್ಲಿರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಟೀ ಸ್ಟಾಲ್‌ ನಡೆಸಲು ಅನುಮತಿ ಕೇಳಿದರು. ಈಗಾಗಲೇ ನಾಲ್ಕು ಮಂದಿ ಕೇಳಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಬಳಿಕ ಅಂಗವಿಕಲ ಸದ್ದಾಂಹುಸೇನ್‌ ಕೂಡ ಮನವಿ ಸಲ್ಲಿಸಿದರು. ಎಲ್ಲವನ್ನು ಪರಿಶೀಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಬಿಪಿಎಲ್‌ ಕಾರ್ಡ್‌ ಇದ್ದರೂ ಶಸ್ತ್ರಚಿಕಿತ್ಸೆಗೆ ಎಸ್‌.ಎಸ್‌. ಹೈಟೆಕ್‌ ಆಸ್ಪತ್ರೆಯಲ್ಲಿ ₹ 35 ಸಾವಿರ ಕಟ್ಟಿಸಿಕೊಂಡಿದ್ದಾರೆ ಎಂದು ಬಿಪಿಎಲ್‌ ಕಾರ್ಡ್‌ದಾರರು ದೂರಿದಾಗ, ಈ ಹಣ ಭರಿಸುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಅಗ್ನಿ ಅವಘಡದಲ್ಲಿ ಮನೆಯಲ್ಲಿದ್ದ ಧವಸ ಧಾನ್ಯ, ಬಟ್ಟೆ ಬರೆ ಸೇರಿದಂತೆ ಎಲ್ಲ ಸುಟ್ಟು ಹೋಗಿದೆ ಎಂದು ಶೇರ್ ಅಲಿ ಖಾನ್‌ ಅರ್ಜಿ ಸಲ್ಲಿಸಿದಾಗ ತಹಶೀಲ್ದಾರ್‌ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ತಮ್ಮ ಜಮೀನಲ್ಲಿ ರಾಜಕಾಲುವೆ ಹಾದುಹೋಗಿದೆ ಎಂದು ನಿಟ್ಟುವಳ್ಳಿಯ ಸಿದ್ದರಾಮೇಶ್ವರ ಬಡಾವಣೆಯ ನಿವಾಸಿಗಳು ದೂರಿದರು. ಕೆಎಸ್‌ಆರ್‌ಟಿಸಿ ಬಸ್‌ಗಳು ಹೈಸ್ಕೂಲ್‌ ಮೈದಾನದ ಬಳಿ ನಿಲುಗಡೆ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲ ಎಂದು ಸಾರ್ವಜನಿಕರು ಕೋರಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮಾ ಬಸವಂತಪ್ಪ, ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ನಜ್ಮಾ, ಸ್ಮಾರ್ಟ್‌ಸಿಟಿ ಯೋಜನೆಯ ಎಂ.ಡಿ. ರವೀಂದ್ರ ಮಲ್ಲಾಪುರ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು