ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಿವಳಿಕೆಯೂ ಇಂದು ಆದ್ಯತಾ ವಲಯ

ರಾಜ್ಯ ಮಟ್ಟದ ಅರಿವಳಿಕೆ ತಜ್ಞರ ಸಮಾವೇಶದಲ್ಲಿ ಡಾ. ವೆಂಕಟಗಿರಿ
Last Updated 11 ಆಗಸ್ಟ್ 2018, 16:07 IST
ಅಕ್ಷರ ಗಾತ್ರ

ದಾವಣಗೆರೆ: ‘ಈ ಹಿಂದೆ ವೈದ್ಯಕೀಯ ಶಿಕ್ಷಣದಲ್ಲಿ ಅರಿವಳಿಕೆ ಕೊನೆಯ ಆಯ್ಕೆಯಾಗಿರುತ್ತಿತ್ತು. ಆದರೆ, ಇಂದು ಅರವಳಿಕೆ ಕ್ಷೇತ್ರದ ಬೇಡಿಕೆ ಹೆಚ್ಚಿದ್ದು, ವಿದ್ಯಾರ್ಥಿಗಳು ಸ್ವಇಚ್ಛೆಯಿಂದಲೇ ಈ ವಿಷಯ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಭಾರತೀಯ ಅರಿವಳಿಕೆ ತಜ್ಞರ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ವೆಂಕಟಗಿರಿ ಕೆ.ಎಂ. ಹೇಳಿದರು.

ಭಾರತೀಯ ಅರಿವಳಿಕೆ ತಜ್ಞರ ಸೊಸೈಟಿಯ ದಾವಣಗೆರೆ ಶಾಖೆ, ಜೆಜೆಎಂಎಂನ ಅರಿವಳಿಕೆ ವಿಭಾಗ ಹಾಗೂ ಎಸ್‌.ಎಸ್‌. ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಎರಡು ದಿನಗಳ ‘ಐಸಾಕಾನ್‌ ಕರ್ನಾಟಕ’ ಅರಿವಳಿಕೆ ತಜ್ಞರ 34ನೇ ರಾಜ್ಯಮಟ್ಟದ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನಾಲ್ಕು ವರ್ಷಗಳ ಹಿಂದೆ ನಮ್ಮ ಸೊಸೈಟಿಯಲ್ಲಿ ಕೇವಲ 19 ಸಾವಿರ ಸದಸ್ಯರಿದ್ದರು. ಈಗ 27,500 ಸದಸ್ಯರಿದ್ದಾರೆ. ₹ 6 ಕೋಟಿ ಆದಾಯ ಇತ್ತು. ಈಗ ₹ 12 ಕೋಟಿಯಾಗಿದೆ. ಪ್ರತಿ ವರ್ಷ ಸುಮಾರು 2,000 ಹೊಸ ಅರಿವಳಿಕೆ ತಜ್ಞರು ಸೊಸೈಟಿಯಲ್ಲಿ ಹೆಸರು ನೋಂದಣಿ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ’ ಎಂದರು.

ಈ ವರ್ಷ 23 ಪಿ.ಜಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುತ್ತಿದ್ದೇವೆ. 15 ದಿನಗಳ ಕಾಲ ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಬರಲು ಶಿಷ್ಯವೇತನ ಕೊಡಲಾಗುತ್ತಿದೆ. ಈ ಸೌಲಭ್ಯಗಳನ್ನು ಉತ್ತರ ಭಾರತದವರೇ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ. ದಕ್ಷಿಣ ಭಾರತದ ವಿದ್ಯಾರ್ಥಿಗಳೂ ಸೊಸೈಟಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

‘ಅರಿವಳಿಕೆ ತಜ್ಞರ ಮೇಲೆ ಕೆಲಸದ ತೀವ್ರ ಒತ್ತಡ ಬೀಳುತ್ತಿದೆ. ಉಳಿದವರಿಗೆ ಹೋಲಿಸಿದರೆ ಅರಿವಳಿಕೆ ತಜ್ಞರು 10 ವರ್ಷ ಮೊದಲೇ ಸಾವನ್ನಪ್ಪುತ್ತಿದ್ದಾರೆ. ಜೊತೆಗೆ ಶಸ್ತ್ರಚಿಕಿತ್ಸೆ ವೇಳೆ ಏನಾದರೂ ಸಮಸ್ಯೆ ಉದ್ಭವವಾದರೆ ಮೊದಲು ನಮ್ಮನ್ನೇ ದೂಷಿಸಲಾಗುತ್ತಿದೆ. ಹೀಗಾಗಿ ಸಮಸ್ಯೆಗಳನ್ನು ಎದುರಿಸಲು ನಾವು ಹೆಚ್ಚು ಸಂಘಟಿತರಾಗಬೇಕು’ ಎಂದ ಅವರು, ಜಮ್ಮು–ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ಅರವಳಿಕೆ ತಜ್ಞರನ್ನೂ ಬಂಧಿಸಿದ ಉದಾಹರಣೆ ನೀಡಿದರು.

ಸಮಾವೇಶ ಉದ್ಘಾಟಿಸಿದ ಶಾಸಕ ಶಾಮನೂರು ಶಿವಶಂಕರಪ್ಪ, ‘ಸರ್ಜನ್‌ ಎಷ್ಟೇ ಬುದ್ಧಿವಂತರಾಗಿದ್ದರೂ ಅರಿವಳಿಕೆ ತಜ್ಞರಿಲ್ಲದೇ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ರೋಗಿಗಳಿಗೆ ತೊಂದರೆ ಆಗದಂತೆ ಅರಿವಳಿಕೆ ಕೊಟ್ಟು ಶಸ್ತ್ರಚಿಕಿತ್ಸೆ ಯಶಸ್ವಿಯಾಗುವಂತೆ ನೋಡಿಕೊಳ್ಳುವಲ್ಲಿ ನಿಮ್ಮದೂ ಜವಾಬ್ದಾರಿ ಇದೆ’ ಎಂದರು.

‘ದಾವಣಗೆರೆಯ ಹಲವು ನರ್ಸಿಂಗ್‌ ಹೋಮ್‌ಗಳು ನಮ್ಮ ಕಾಲೇಜಿನ ಅರಿವಳಿಕೆ ತಜ್ಞರನ್ನೇ ಅವಲಂಬಿಸಿವೆ. ಇವರು ನಿಗದಿಪಡಿಸಿದ ದಿನದಂದೇ ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತಿದೆ. ಈಗ ಅರಿವಳಿಕೆ ಕ್ಷೇತ್ರದಲ್ಲೂ ಹೊಸತನ ಬಂದಿದೆ’ ಎಂದು ಶಾಮನೂರು ಹೇಳಿದರು.

ಐಎಸ್‌ಎ ಕರ್ನಾಟಕ ಶಾಖೆಯ ಗೌರವ ಅಧ್ಯಕ್ಷ ಡಾ. ಶ್ರೀನಿವಾಸಲು ಡಿ. ಅಧ್ಯಕ್ಷತೆ ವಹಿಸಿದ್ದರು. ಸಮಾವೇಶದ ಸಂಘಟನಾ ಕಾರ್ಯದರ್ಶಿ ಡಾ. ರವಿ ಆರ್‌. ಸ್ವಾಗತಿಸಿದರು. ಜೆ.ಜೆ.ಎಂ.ಎಂ.ಸಿ ಪ್ರಾಚಾರ್ಯ ಡಾ. ಮುರುಗೇಶ ಎಸ್‌.ಬಿ, ಎಸ್‌.ಎಸ್‌.ಐ.ಎಂ.ಎಸ್‌ ಆರ್‌.ಸಿ ಪ್ರಾಚಾರ್ಯ ಡಾ. ಪ್ರಸಾದ ಬಿ.ಎಸ್‌., ಡಾ. ಎಸ್‌.ಬಿ. ಬಾಲಶಂಕರ, ಡಾ. ಶ್ರೀಗಣೇಶ, ಡಾ. ಪ್ರಭು ಬಿ.ಜಿ., ಡಾ. ರವಿಶಂಕರ್‌ ಅವರೂ ಹಾಜರಿದ್ದರು. ಡಾ. ಅರುಣಕುಮಾರ್‌ ಎ. ವಂದಿಸಿದರು.

ಅರಿವಳಿಕೆಗೆ ಸಾಷ್ಟಾಂಗ ನಮಸ್ಕಾರ

ಜೀವಮಾನದ ಸಾಧನೆ ಪ್ರಶಸ್ತಿ ಸ್ವೀಕರಿಸಿದ ದಾವಣಗೆರೆಯ ಜೆ.ಜೆ.ಎಂ.ಎಂ.ಸಿಯ ಡಾ. ಡಿ. ಮಲ್ಲಿಕಾರ್ಜುನ, ‘ಪ್ರಸೂತಿ ತಜ್ಞನಾಗಬೇಕೆಂದಿದ್ದೆ. ಆದರೆ, ಆಕಸ್ಮಿಕವಾಗಿ ಅರಿವಳಿಕೆ ಕ್ಷೇತ್ರಕ್ಕೆ ಬಂದೆ. ಇದು ನನಗೆ ಆರ್ಥಿಕ, ವೈಜ್ಞಾನಿಕವಾಗಿ ಅನುಕೂಲಮಾಡಿಕೊಟ್ಟಿದೆ’ ಎಂದು ಹೇಳುತ್ತ, ವೇದಿಕೆಯ ಮೇಲೆಯೇ ಅರಿವಳಿಕೆ ವಿಷಯಕ್ಕೆ ಸಾಷ್ಟಾಂಗ ನಮಸ್ಕಾರ ಹಾಕಿದರು.

ಗದಗ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ನ ಅರಿವಳಿಕೆ ವಿಭಾಗದ ಮುಖ್ಯಸ್ಥ ಡಾ. ಎಸ್‌.ಎಸ್‌. ಹರಸೂರು ಅವರಿಗೆ ಅತ್ಯುತ್ತಮ ಅರಿವಳಿಕೆ ಶಿಕ್ಷಕ ಪ್ರಶಸ್ತಿ ನೀಡಲಾಯಿತು. ಹುಬ್ಬಳ್ಳಿಯ ಶಾಖೆಗೆ ಅತ್ಯುತ್ತಮ ನಗರ ಶಾಖೆ ಪ್ರಶಸ್ತಿಯನ್ನು ಕೊಡಲಾಯಿತು. ಫ್ರಿಲಾನ್ಸ್‌ ಅನಸ್ತೇಶಿಯಾಲಾಜಿಸ್ಟ್‌ ಅವಾರ್ಡ್‌ ಅನ್ನು ಡಾ. ಶಿವಕುಮಾರ್‌ ಕಂಬಾರ ಹಾಗೂ ಡಾ. ಆರ್‌.ಪಿ. ಹಿರೇಮಠ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT