ಶುಕ್ರವಾರ, ಅಕ್ಟೋಬರ್ 2, 2020
21 °C

ಅರಸೀಕೆರೆ ಬ್ಲಾಕ್ ಅಭಿವೃದ್ಧಿ ಕುಂಠಿತ: ಶಾಸಕ ಎಸ್‌.ವಿ. ರಾಮಚಂದ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ: ಬಳ್ಳಾರಿ ಜಿಲ್ಲಾ ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರಸೀಕೆರೆ ಬ್ಲಾಕ್ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ ದೂರಿದರು.
ಇಲ್ಲಿನ ಹಾಲಮ್ಮ ತೋಪಿನಲ್ಲಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮಕ್ಕೆ ಆಯ್ಕೆಯಾಗಿರುವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕ್ಷೇತ್ರದಿಂದ ಬಳ್ಳಾರಿ ಜಿಲ್ಲೆ 250 ಕಿ.ಮೀ ದೂರ ಇದೆ. ಅಲ್ಲಿಯ ಅಧಿಕಾರಿಗಳಿಗೆ ಅರಸೀಕೆರೆ ಬ್ಲಾಕ್‌ಗೆ ಶಾಸಕ ಯಾರು ಎಂಬುದು ತಿಳಿದಿಲ್ಲ. ಬಳ್ಳಾರಿ ಜಿಲ್ಲೆಗೆ ಆದಾಯದ ಮೂಲವಾಗಿರುವ ಇಲ್ಲಿಯ ಗ್ರಾಮಗಳ ಕುರಿತ ಮಾಹಿತಿ ಕೂಡ ಅವರಿಗಿಲ್ಲ. ಹಾಗಾಗಿ ಸ್ಥಳೀಯ ಸಮಸ್ಯೆಗಳ ಕಿಂಚಿತ್ತೂ ಮಾಹಿತಿ ಅವರಿಗೆ ಇಲ್ಲ. ಇದರಿಂದ ಈ ಭಾಗದಲ್ಲಿ ನಡೆಯಬೇಕಿದ್ದ ಕಾಮಗಾರಿ ನನೆಗುದಿಗೆ ಬಿದ್ದಿದೆ ಎಂದು ಅರೋಪಿಸಿದರು.

ಈ ಕೂಡಲೇ ಅಧಿಕಾರಿಗಳು ಸ್ಪಂದಿಸದಿದ್ದರೆ ತಜ್ಞರ ಜೊತೆ ಚರ್ಚಿಸಿ ದಾವಣಗೆರೆ ಜಿಲ್ಲೆಗೆ ಮರುಸೇರ್ಪಡೆ ಮಾಡಲು ಯತ್ನಿಸುತ್ತೇನೆ’ ಎಂದರು.
‘ಅರಸೀಕೆರೆ ಹಾಗೂ ಉಚ್ಚಂಗಿದುರ್ಗ ಗ್ರಾಮ ಪಂಚಾಯಿತಿಗಳನ್ನು ಉನ್ನತೀಕರಿಸಿ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೆ ಏರಿಸಲಾಗುವುದು. ಕೆಲವೇ ದಿನಗಳಲ್ಲಿ ಕಂಚಿಕೆರೆ-ಅರಸೀಕೆರೆ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದು ಭರವಸೆ ನೀಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಡಿ.ಸಿದ್ದಪ್ಪ, ಪಂಚಾಯಿತಿ ಸದಸ್ಯ ಪಾಟೀಲ್ ಕೆಂಚನ ಗೌಡ್ರು, ಸೊಕ್ಕೆ ನಾಗರಾಜ್, ಗಿರಿಯಪ್ಪ, ಕೆಂಚಪ್ಪ, ಎಸ್.ಕೆ, ವಿಶ್ವನಾಥಯ್ಯ, ಬಸವರಾಜ್, ನಂದೆಮ್ಮ, ಜಯಮ್ಮ, ನಿರ್ಮಲಾ ಬಸಮ್ಮ, ಪರಿಶಿಷ್ಟ ಪಂಗಡದ ತಾಲೂಕು ಅಧ್ಯಕ್ಷ ಉಚ್ಚಂಗೆಪ್ಪ, ಹೊಸಕೋಟೆ ಶರಣಪ್ಪ, ಉಮೇಶ್, ಫಣಿಯಪುರ ಲಿಂಗರಾಜ, ಬಾಲೆನಹಳ್ಳಿ ಕೆಂಚನಗೌಡ, ಯುವರಾಜ
ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.