ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಡಿಕೆ ಕಳವು ತಡೆಗೆ ಸಿ.ಸಿ.ಟಿ.ವಿ ಕ್ಯಾಮೆರಾ

ಕಳ್ಳರ ಕಾಟ ತಪ್ಪಿಸಲು ಮುನ್ನೆಚ್ಚರಿಕೆ ಕ್ರಮ
Last Updated 5 ಡಿಸೆಂಬರ್ 2022, 21:56 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಾದ್ಯಂತ ಅಡಿಕೆ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಬೆಳೆಗಾರರು ತೋಟಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಮೊರೆ ಹೋಗುತ್ತಿದ್ದಾರೆ.

ಕ್ವಿಂಟಲ್‌ ಅಡಿಕೆಗೆ ಸದ್ಯ₹ 50,000ದವರೆಗೆ ಬೆಲೆ ಇದೆ. ಕಳ್ಳರ ಕಾಟ ಹೆಚ್ಚಾಗಿದ್ದು, ರೈತರಿಗೆ ತೋಟ ಕಾಯುವುದೇ ಸವಾಲಾಗಿದೆ. ಈ ಬಾರಿ ಅಧಿಕ ಮಳೆಯಿಂದ ಕೊಳೆರೋಗ ಕಾಣಿಸಿಕೊಂಡಿದ್ದು, ಅಡಿಕೆ ಉದುರಿ ಇಳುವರಿ ಕಡಿತಗೊಂಡಿದೆ. ಇನ್ನೊಂದೆಡೆ, ಕಳ್ಳರ ಕಾಟ ಹೆಚ್ಚಿರುವುದು ರೈತರನ್ನು ಕಂಗಾಲಾಗಿಸಿದೆ.

ತಾಲ್ಲೂಕಿನ ಎಲೇಬೇತೂರು ಗ್ರಾಮದ ಜಿ.ಎಂ.ಬಸವರಾಜ್ ಅವರ ಪುತ್ರ ನಂದೀಶ್ ಮೂರೂವರೆ ಎಕರೆ ಅಡಿಕೆ ತೋಟಕ್ಕೆ ₹ 30,000 ವೆಚ್ಚದಲ್ಲಿ ನಾಲ್ಕು ಅಲ್ಟ್ರಾ ಎಚ್‌.ಡಿ. ಸಾಮರ್ಥ್ಯದ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದಾರೆ. ಕಳವು ಪ್ರಯತ್ನಗಳಿಂದ ಎಚ್ಚೆತ್ತುಕೊಂಡಿದ್ದು, ಕ್ಯಾಮೆರಾ ಮೊರೆ ಹೋಗಿದ್ದಾರೆ.

‘ನಾವು ಅಳವಡಿಸಿರುವ ಕ್ಯಾಮೆರಾಗಳು ಫೋಕಸ್ ಲೈಟ್ ವ್ಯವಸ್ಥೆಯನ್ನೂ ಒಳ
ಗೊಂಡಿವೆ. ರಾತ್ರಿ ವೇಳೆ ಪ್ರಖರತೆ ಇರುವುದರಿಂದ ಕಳ್ಳರು ಹೆದರುತ್ತಾರೆ. ಇತ್ತೀಚೆಗೆ ಪಕ್ಕದ ತೋಟಕ್ಕೆ ಬಂದಿದ್ದ ಕಳ್ಳರು ಲೈಟ್ ನೋಡಿ ನಮ್ಮ ತೋಟಕ್ಕೆ ಬರುವ ಧೈರ್ಯ ಮಾಡಲಿಲ್ಲ ಎಂದು ನಂದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಮೆರಾ ಲಿಂಕ್‌ ಅನ್ನು ವೈಫೈ ಮೂಲಕ ಮೊಬೈಲ್‌ ಫೋನ್‌ಗೆ ಸಂಪರ್ಕಿಸಿ, ಮನೆಯಲ್ಲೇ ತೋಟದಲ್ಲಿನ ಆಗುಹೋಗು ವೀಕ್ಷಿಸುತ್ತೇವೆ. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳನ್ನು 30 ದಿನ ಸಂಗ್ರಹಿಸಿಡಬಹುದು. ಮೊಬೈಲ್‌ನಲ್ಲಿ ಒಂದು ದಿನದ ರೆಕಾರ್ಡಿಂಗ್ ವೀಕ್ಷಿಸಬಹುದು’ ಎಂದೂ ಮಾಹಿತಿ ನೀಡಿದರು.

‘ಕಳ್ಳರು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಕಳವಿಗೆ ಯತ್ನಿಸಿದ್ದರು. ಅದನ್ನು ತಪ್ಪಿಸಲೆಂದೇ ಯುಪಿಎಸ್‌ ಅಳವಡಿಸಿದ್ದೇವೆ. ನಮ್ಮಂತೆಯೇ ಜಿಲ್ಲೆಯ ವಿವಿಧೆಡೆ ಅನೇಕ ರೈತರು ಫಸಲು ಉಳಿಸಿಕೊಳ್ಳಲು ತೋಟಕ್ಕೆ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಿದ್ದು, ಕಳ್ಳರ ಪತ್ತೆಗೆ ನೆರವಾಗುತ್ತಿವೆ’ ಎಂದೂ ಅವರು ಹೇಳಿದರು.

ಚಿಲ್ಲರೆ ಖರೀದಿದಾರರ ಮೇಲೆ ನಿಗಾ:‘ಅಡಿಕೆ ಕದ್ದವರು ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಿರುವ ಮೂರು ಪ್ರಕರಣಗಳು ಪತ್ತೆಯಾಗಿವೆ. ಈ ಬಗ್ಗೆ ನಿಗಾ ಇರಿಸಿದ್ದೇವೆ’ ಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT