ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ | ಯುವಕನ ಮೇಲೆ ಹಲ್ಲೆ: ಪೊಲೀಸರ ಸಕಾಲಿಕ ಕ್ರಮ ತಪ್ಪಿದ ಹಾನಿ

Last Updated 10 ಫೆಬ್ರುವರಿ 2022, 2:13 IST
ಅಕ್ಷರ ಗಾತ್ರ

ಮಲೇಬೆನ್ನೂರು: ಪಟ್ಟಣದ ಜಿಗಳಿ ವೃತ್ತದಲ್ಲಿ ಬುಧವಾರ ಅಂಗಡಿ ನಡೆಸುತ್ತಿದ್ದ ಯುವಕನೊಬ್ಬನನ್ನು ಹೊರಕ್ಕೆ ಎಳೆದು ತಂದ 300ಕ್ಕೂ ಹೆಚ್ಚು ಯುವಕರ ಗುಂಪು ಹಲ್ಲೆ ಮಾಡಿ ಹರಿತವಾದ ಆಯುಧದಿಂದ ಚುಚ್ಚಿ ಗಾಯಗೊಳಿಸಿದೆ.

ಹಲ್ಲೆಗೊಳಗಾದ ಯುವಕನಿಗೆಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆಗೆ ಕಳುಹಿಸಿಕೊಡಲಾಗಿದೆ.

ಜನರು ಜಮಾವಣೆ ಆಗುತ್ತಿರುವುದನ್ನು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ನೋಡಿದ ಪೊಲೀಸರು ತಕ್ಷಣ ಕಾರ್ಯ ಪ್ರವೃತ್ತರಾಗಿ ಘಟನಾ ಸ್ಥಳಕ್ಕೆ ಬಂದು ಗುಂಪುಗೂಡಿದ ಉಭಯ ಕೋಮಿನವರನ್ನು ಚದುರಿಸಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. ಯುವಕರ ಗುಂಪು ಪೊಲೀಸರ ಕರ್ತವ್ಯಕ್ಕೂ ಅಡ್ಡಿಪಡಿಸಿತು.

ಹಿಜಾಬ್ ಧರಿಸುವ ಕುರಿತು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಒಂದು ಕೋಮಿನ ಭಾವನೆಗೆ ಧಕ್ಕೆ ಬರುವಂತಹ ವಿಷಯ ಹಾಕಿರುವುದು ಘಟನೆಗೆ ಕಾರಣ ಎನ್ನಲಾಗಿದೆ.

ಒಂದು ಕೋಮಿನವರು ವಾಟ್ಸ್ಆ್ಯಪ್‌ ಸ್ಟೇಟಸ್ ಹಾಕಿದ ಯುವಕನ ವಿರುದ್ಧ ದೂರು ನೀಡಿದ್ದಾರೆ, ಇನ್ನೊಂದು ಕೋಮಿನವರು ಗುಂಪು ಹಲ್ಲೆ ನಡೆಸಿದ ಯುವಕರ ಗುಂಪಿನ ವಿರುದ್ಧ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಸಿಪಿಐ ಸತೀಶ್ ಕುಮಾರ್, ಎಸ್ಐ ರವಿಕುಮಾರ್, ವೀರಬಸಪ್ಪ ಕುಸಲಾಪುರ ಬಂದು ಪರಿಸ್ಥಿತಿ ನಿಯಂತ್ರಿಸಿದರು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಜಿಗಳಿ, ನಂದಿಗುಡಿ ರಸ್ತೆಯ ಅಂಗಡಿ, ಹೋಟೆಲ್ ಬಾಗಿಲು ಹಾಕಿಸಿದರು.

ತಹಶೀಲ್ದಾರ್ ರಾಮಚಂದ್ರಪ್ಪ, ಉಪತಹಶೀಲ್ದಾರ್ ಆರ್. ರವಿ, ಪುರಸಭೆ ಮುಖ್ಯಾಧಿಕಾರಿ ರುಕ್ಮಿಣಿ ದೊಡ್ಮನಿ ಬಂದು ಪರಿಸ್ಥಿತಿ ಅವಲೋಕಿಸಿದರು. ಅಹಿತಕರ ಘಟನೆ ತಪ್ಪಿಸಲು ಹಾಗೂ ಜನ ಜಮಾವಣೆ ಆಗುವುದನ್ನು ತಡೆಯುವುದಕ್ಕಾಗಿ ಗುರುವಾರ ನಡೆಯಬೇಕಿದ್ದ ಸಂತೆ ರದ್ದು ಮಾಡಿ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ. ಹೋಬಳಿಯಾದ್ಯಂತ ಡಿಸಿ ಆದೇಶದಂತೆ 144ನೇ ವಿಧಿ ಜಾರಿಗೊಳಿಸಲಾಗಿದೆ.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಚಂದ್ರಶೇಖರ್ ಪೂಜಾರ್, ಭಾನುವಳ್ಳಿ ಸುರೇಶ್, ಮುಸ್ಲಿಂ ಸಮುದಾಯದ ಮುಖಂಡರರಾದ ಸೈಯದ್ ಜಾಕೀರ್, ವಕೀಲ ನಿಸಾರ್ ಆಹ್ಮದ್, ನಯಾಜ್, ಯೂಸೂಫ್, ಪುರಸಭಾ ಸದಸ್ಯರು ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ತಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲು ಪೊಲೀಸರಿಗೆ ಆಗ್ರಹಿಸಿದರು.

ಹಲ್ಲೆಗೊಳಗಾದ ದಿಲೀಪ್‌ ತನ್ನ ಮೇಲೆ ಹಲ್ಲೆ ನಡೆಸಿದವರನ್ನು ಗುರುತಿಸಿದ್ದು, 7 ಮಂದಿಯ ವಿರುದ್ಧ ದೂರು ನೀಡಿದ್ದಾನೆ. ಘಟನೆಗೆ ಸಂಬಂಧಿಸಿ ಇಲ್ಲಿಯ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ ದಾಖಲಾಗಿದೆ. ಪಟ್ಟಣಕ್ಕೂ ಹಿಜಾಬ್ ವಿಚಾರ ಪ್ರವೇಶಿಸಿದ್ದು ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಗಸ್ತು ಹೆಚ್ಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT