ಆಟೊ ಚಾಲಕರಿಂದ ಪ್ರತಿಭಟನೆ

6
ಮೋಟಾರು ವಾಹನ ತಿದ್ದುಪಡಿ ಮಸೂದೆ–2017 ಹಿಂಪಡೆಯಲು ಒತ್ತಾಯ

ಆಟೊ ಚಾಲಕರಿಂದ ಪ್ರತಿಭಟನೆ

Published:
Updated:
Deccan Herald

ದಾವಣಗೆರೆ: ಮೋಟಾರು ವಾಹನ ತಿದ್ದುಪಡಿ ಮಸೂದೆ–2017 ಅನ್ನು ಹಿಂದಕ್ಕೆ ಪಡೆಯಬೇಕು ಎಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾ ಆಟೊರಿಕ್ಷಾ ಚಾಲಕರ ಯೂನಿಯನ್‌ ಆಶ್ರಯದಲ್ಲಿ ಆಟೊ ಚಾಲಕರು ನಗರದಲ್ಲಿ ಮಂಗಳವಾರ ಪ್ರತಿಭಟಿಸಿದರು.

ಫೆಡರೇಷನ್‌ ಆಫ್‌ ಕರ್ನಾಟಕ ಆಟೊರಿಕ್ಷಾ ಡ್ರೈವರ್ಸ್‌ ಯೂನಿಯನ್‌ (ಸಿ.ಐ.ಟಿ.ಯು) ಸಾರಿಗೆ ಕಾರ್ಮಿಕರ ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಕಚೇರಿ ಎದುರು ಆಟೊ ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿ, ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ನಿರುದ್ಯೋಗಿ ಯುವಕರು ಆಟೊ ಹಾಗೂ ಟ್ಯಾಕ್ಸಿ ಚಾಲಕರಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ, ಉದಾರವಾದಿ ನೀತಿಯಿಂದಾಗಿ ನಿರುದ್ಯೋಗ ಹೆಚ್ಚುತ್ತಿದೆ. ಸಾಮಾಜಿಕ ಭದ್ರತೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮೋಟಾರು ವಾಹನ ತಿದ್ದುಪಡಿ ಮಸೂದೆ ಪ್ರಕಾರ ಭಾರಿ ಪ್ರಮಾಣದ ದಂಡ ಹಾಗೂ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೀಗಾಗಿ ಇದನ್ನು ಹಿಂದಕ್ಕೆ ಪಡೆಬೇಕು. ನಗರದಲ್ಲಿ ಆಟೊಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹೊಸದಾಗಿ ಪರವಾನಗಿ ನೀಡುವುದನ್ನು ನಿಲ್ಲಿಸಬೇಕು. ಚಾಲಕರಿಗೆ ಇಎಸ್‌ಐ, ಪಿ.ಎಫ್‌ ಹಾಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ನಗರದ ಎಲ್ಲಾ ಕಡೆ ಆಟೊನಿಲ್ದಾಣ ನಿರ್ಮಿಸಬೇಕು’ ಎಂದು ಒತ್ತಾಯಿಸಿದರು.

ವಾಹನಗಳ ವಿಮಾ ಮೊತ್ತ ಹೆಚ್ಚಾಗಿದ್ದು, ಕಡಿಮೆಗೊಳಿಸಬೇಕು. ರಾಮನಗರ, ಎಸ್‌.ಒ.ಜಿ ಕಾಲೊನಿಗೆ ಸರ್ಕಾರಿ ನಗರಸಾರಿಗೆ ಬಸ್‌ ಬಿಡಬೇಕು. ಕಾರ್ಮಿಕರ ಅಪಘಾತ ವಿಮೆಯನ್ನು ಜಾರಿಗೊಳಿಸಬೇಕು. ಪೆಟ್ರೋಲ್‌ ಹಾಗೂ ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಬೆಲೆಯನ್ನು ಕೂಡಲೇ ಕಡಿಮೆಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಯೂನಿಯನ್‌ನ ಜಿಲ್ಲಾ ಕಾರ್ಯದರ್ಶಿ ಶ್ರೀನಿವಾಸ್ ಮೂರ್ತಿ ಕೆ., ಆನಂದರಾಜು, ಅಪ್ಪಣ್ಣ ಸ್ವಾಮಿ ಎಚ್‌., ಅನ್ವರ್‌ಸಾಬ್‌, ಕರಿಬಸಪ್ಪ, ರುದ್ರಸ್ವಾಮಿ, ಸಂತೋಷ್‌, ರಂಗಪ್ಪ, ಮಹ್ಮದ್‌ಸಾಬ್‌, ತಿಮ್ಮಣ್ಣ, ಎ. ಗುಡ್ಡಪ್ಪ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !