ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯುಧ ಪೂಜೆ: ಬೆಲೆ ಏರಿಕೆ ನಡುವೆಯೂ ಖರೀದಿ ಭರಾಟೆ

ಹೂವು, ಹಣ್ಣು, ಬೂದುಕುಂಬಳಕ್ಕೆ ಹೆಚ್ಚಿದ ಬೇಡಿಕೆ
Last Updated 4 ಅಕ್ಟೋಬರ್ 2022, 5:55 IST
ಅಕ್ಷರ ಗಾತ್ರ

ದಾವಣಗೆರೆ: ದಸರಾ ಪ್ರಯುಕ್ತ ನಡೆಯುವ ಆಯುಧ ಪೂಜೆ ಮುನ್ನಾ ದಿನವಾದ ಸೋಮವಾರ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡುಬಂತು. ಬೆಲೆ ಏರಿಕೆಯ ನಡುವೆಯೂ ಜನರು ಉತ್ಸಾಹದಿಂದ ಹೂವು–ಹಣ್ಣು ಹಾಗೂ ಹಬ್ಬದ ಸಾಮಗ್ರಿಗಳನ್ನು ಖರೀದಿಸಿದರು.

ಕೆಎಸ್‌ಆರ್‌ಟಿಸಿ ಎದುರಿನ ಮಾರುಕಟ್ಟೆ, ಕೆ.ಆರ್‌. ಮಾರುಕಟ್ಟೆ, ಹೈಸ್ಕೂಲ್‌ ಮೈದಾನ, ಎಪಿಎಂಸಿ ಮಾರುಕಟ್ಟೆ, ಪ್ರವಾಸಿ ಮಂದಿರ ರಸ್ತೆ, ನಿಜಲಿಂಗಪ್ಪ ವೃತ್ತ, ಪಿ.ಬಿ.ರಸ್ತೆ, ಶಾಮನೂರು ರಸ್ತೆ, ಚಿಗಟೇರಿ ಆಸ್ಪತ್ರೆ ಸೇರಿ ಹಲವೆಡೆ ಬಾಳೆ ಕಂದು, ಬೂದು ಕುಂಬಳಕಾಯಿಗಳ ಖರೀದಿ ಭರಾಟೆ ಕಂಡು ಬಂತು. ಪ್ರಮುಖ ರಸ್ತೆಗಳಲ್ಲಿ ಆಲಂಕಾರಿಕ ವಸ್ತುಗಳು, ಪೂಜೆ ಸಾಮಗ್ರಿಗಳಿಗೆ ಪ್ರತ್ಯೇಕವಾಗಿ ಅಂಗಡಿಗಳನ್ನು ತೆರೆಯಲಾಗಿತ್ತು.

ಭಾರಿ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿರುವುದು ರೈತರಿಗೆ ಒಂದು ಕಡೆ ಸಂಭ್ರಮವಾದರೆ, ಮತ್ತೊಂದೆಡೆ ಬೆಳೆ ನಷ್ಟವಾಗಿರುವುದು ರೈತರಿಗೆ ಆತಂಕ ತಂದಿತ್ತು. ಬೆಲೆ ಏರಿಕೆಯಾದರೂ ಖರೀದಿ ಮಾತ್ರ ಕಡಿಮೆಯಾಗಲಿಲ್ಲ. ಮಧ್ಯಾಹ್ನ ವಿರಳ ಸಂಖ್ಯೆಯಲ್ಲಿದ್ದ ಜನರು ಸಂಜೆಯಾಗುತ್ತಿದ್ದಂತೆ ಹೆಚ್ಚಾಗಿ ಖರೀದಿಸಿದರು. ನಗರವಲ್ಲದೇ ಗ್ರಾಮೀಣ ಪ್ರದೇಶದ ಜನರೂ ಬಗೆ ಬಗೆಯ ವಸ್ತು ಖರೀದಿಸಲು ನಗರಕ್ಕೆ ಬಂದರು. ಹಬ್ಬದ ಹಿನ್ನೆಲೆಯಲ್ಲಿ ಕೆಲ ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿತು.

ಬಾಳೆದಿಂಡು ಒಂದು ಜೋಡಿಗೆ ₹40 ರಿಂದ ₹60, ತುಳಸಿ ಒಂದು ಕಟ್ಟಿಗೆ ₹ 50, ಬಿಲ್ವಪತ್ರೆ ₹60, ಮಾವಿನ ಎಲೆ ಒಂದು ಕಟ್ಟಿಗೆ ₹10ರಿಂದ ₹20ಕ್ಕೆ ಮಾರಾಟವಾದವು. ಬೂದುಕುಂಬಳ ಸಣ್ಣ ಗಾತ್ರದ್ದು, ₹70ರಿಂದ ದೊಡ್ಡಗಾತ್ರದವುಗಳಿಗೆ ₹ 250ರವರೆಗೂ ಬೆಲೆ ಇತ್ತು.

ವಾಹನಗಳಿಗೆ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ಹೂವಿನ ಹಾರಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಿತ್ತು. ಸಣ್ಣ ಹಾರಗಳು ₹ 150ರಿಂದ ಆರಂಭವಾಗಿ ದೊಡ್ಡ ಹಾರಗಳು 500ರವರೆಗೂ ಮಾರಾಟವಾದವು. ಕೆಲವರು ಹಣ್ಣುಗಳನ್ನು ಮಿಶ್ರಣ ಮಾಡಿ ಕೊಂಡುಕೊಳ್ಳುತ್ತಿದ್ದರು. ಒಂದು ಕೆ.ಜಿಗೆ ₹100ರಿಂದ ₹120 ಬೆಲೆ ಇತ್ತು. ನಗರದ ಒಳಗೆ ಬೆಲೆ ತುಸು ಹೆಚ್ಚಾದರೆ, ನಗರದ ಹೊರಗಡೆ ಸ್ವಲ್ಪಮಟ್ಟಿಗೆ ಕಡಿಮೆ ಇರುವುದು ಕಂಡುಬಂತು.

ಹಬ್ಬದ ನಿಮಿತ್ತ ಖರೀದಿಗೆ ಜನರು ಒಮ್ಮೆಲೆ ಧಾವಿಸಿದ್ದರಿಂದ ಪ್ರವಾಸಿ ಮಂದಿರ ರಸ್ತೆ, ಕೆ.ಆರ್.ಮಾರುಕಟ್ಟೆ, ಗಡಿಯಾರ ಕಂಬ ಮುಂತಾದ ಸ್ಥಳಗಳಲ್ಲಿ ಸಂಚಾರ ಸಮಸ್ಯೆಯಾಯಿತು.

ಹಬ್ಬದ ನಿಮಿತ್ತ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳು ಹಾಗೂ ಕೆಲವು ಅಂಗಡಿಗಳಲ್ಲಿ ಸೋಮವಾರವೇ ಆಯುಧಪೂಜೆ ನಡೆಯಿತು.

ಯಾವುದಕ್ಕೆ ಎಷ್ಟು ಬೆಲೆ

ಚಂಡು ಹೂವು; 70–100 (ಒಂದು ಮಾರಿಗೆ)

ಸೇವಂತಿಗೆ;100

ಮಲ್ಲಿಗೆ;100

ಸೇಬು;120–140

ಬಾಳೆಹಣ್ಣು;60–80 (ಒಂದು ಡಜನ್‌ಗೆ)

ದ್ರಾಕ್ಷಿ;150–160

ಮೋಸಂಬಿ;150–170

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT