ಕೆ.ಗಾಣದಕಟ್ಟೆ (ಚನ್ನಗಿರಿ): ‘ಏಳು ಗ್ರಾಮಗಳ ಕೆರೆಗಳನ್ನು ತುಂಬಿಸುವ ಉದ್ದೇಶದಿಂದ 2010 ನೇ ಸಾಲಿನಲ್ಲಿ ಗಾಣದಕಟ್ಟೆ ಗ್ರಾಮದ ಬಳಿ ₹ 8 ಕೋಟಿ ವೆಚ್ಚದಲ್ಲಿ ಬೃಹತ್ ಪ್ರಮಾಣದ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು. ರೈತರು ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಿಕೊಳ್ಳಬೇಕು’ ಎಂದು ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ತಿಳಿಸಿದರು.
ತಾಲ್ಲೂಕಿನ ಕೆ. ಗಾಣದಕಟ್ಟೆ ಗ್ರಾಮದ ಬಳಿಯ ಮತ್ತಿಹಳ್ಳ ಚೆಕ್ ಡ್ಯಾಂಗೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದರು.
‘ಈ ಚೆಕ್ ಡ್ಯಾಂನಲ್ಲಿ 0.8 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಡ್ಯಾಂ ತುಂಬಿದ ನಂತರ ಚನ್ನೇಶಪುರ, ನಲ್ಲೂರು ಮುಂತಾದ ಏಳು ಗ್ರಾಮಗಳ ಕೆರೆಗಳಿಗೆ ನೀರನ್ನು ಹರಿಸುವುದರಿಂದ ರೈತರ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಳವಾಗುತ್ತದೆ. ಅದೇ ರೀತಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಮೊದಲು ₹ 462 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಅನುದಾನ ಸಾಕಾಗುವುದಿಲ್ಲ ಎಂದು ಮನಗಂಡು 2020ನೇ ಸಾಲಿನಲ್ಲಿ ಹೆಚ್ಚುವರಿಯಾಗಿ ₹ 167 ಕೋಟಿ ಅನುದಾನವನ್ನು ಬಿಡುಗಡೆ ಮಾಡಿಸಲಾಗಿತ್ತು’ ಎಂದರು.