ಮಂಗಳವಾರ, ಅಕ್ಟೋಬರ್ 20, 2020
22 °C

ಬಸವಣ್ಣ ಅಭಿವೃದ್ಧಿಯ ಹರಿಕಾರ: ಹಿರಿಯ ರಂಗಕರ್ಮಿ ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹರಪನಹಳ್ಳಿ: ಬಸವಣ್ಣ ಧರ್ಮದ ಹರಿಕಾರರಷ್ಟೇ ಅಲ್ಲ ಅಭಿವೃದ್ಧಿಯ ಹರಿಕಾರರೂ ಹೌದು ಎಂದು ಹೆಗ್ಗೋಡಿನ ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪ‍ಟ್ಟರು.

ಪಟ್ಟಣದ ಎಚ್.ಪಿ.ಎಸ್ ಕಾಲೇಜು ಆವರಣದಲ್ಲಿ ಭಾನುವಾರ ತರಳಬಾಳು ಜಗದ್ಗುರು ಶಾಖಾಮಠ ಸಾಣಿಹಳ್ಳಿ, ಶಿವಾನುಭವ ಸಮಿತಿ ನೇತೃತ್ವದಲ್ಲಿ ಶರಣ ಶರಣೆಯರ ತಾತ್ವಿಕ ಚಿಂತನಾಗೋಷ್ಠಿಯ ಶ್ರಾವಣ ಸಂಜೆ ಸಮಾರೋಪ ಸಮಾರಂಭದಲ್ಲಿ ಅವರು ‘ವಚನಕಾರರ ನಂಬಿಕೆ, ಮೂಢನಂಬಿಕೆ’ ವಿಷಯ ಕುರಿತು ಉಪನ್ಯಾಸ ನೀಡಿದರು.

ವಚನ ಚಳವಳಿಗಳ ಬಗ್ಗೆ ಮಾತನಾಡುವುದು ಸುಲಭವಲ್ಲ. ವಚನಗಳು ಕಾಯಕ ನಿಷ್ಠೆಯ ಪ್ರತೀಕ. ಬಸವಣ್ಣನವರು ಅಧ್ಯಾತ್ಮ, ಆರ್ಥಿಕ, ಅಭಿವೃದ್ಧಿ ಹರಿಕಾರರಾಗಿದ್ದಾರೆ. ಕಾಯಕ ಚಳವಳಿ ನೈತಿಕೆ ಬಲದ ಜತೆ ಸಮೃದ್ಧಿಯನ್ನೂ ತಂದಿದೆ. ಬದ್ಧತೆಯಿಂದ ಕೆಲಸ ಮಾಡುವುದೇ ಧರ್ಮ ಚಳವಳಿ ಎಂದು ಘೋಷಿಸಿದ್ದರು ಎಂದು ತಿಳಿಸಿದರು.

‘ಇಂದು ಕೇವಲ ಕಾರ್ಖಾನೆಗಳು, ರಸ್ತೆಗಳನ್ನು ಮಾಡುವುದು ಅಭಿವೃದ್ಧಿ ಎಂದು ತಿಳಿದ್ದಿದ್ದೇವೆ. ದೇಶದ ಸಂಪತ್ತು ಎಲ್ಲರಿಗೂ ಸಮಪಾಲು ಆಗದೇ ಒಬ್ಬರ ಬಳಿ ಸೇರುತ್ತಿದೆ’ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಸಾಣಿಹಳ್ಳಿ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಹೇಡಿಗೆ ಜವಾಬ್ದಾರಿ ಕೊಟ್ಟರೆ ಮನೆ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಮನೆ, ಮಠಕ್ಕಿಂತ ಸಮಾಜ ದೊಡ್ಡದು. ಇದರ ಚುಕ್ಕಾಣಿ ಹಿಡಿಯುವ ವ್ಯಕ್ತಿ ನೀಚನಾದರೆ ಪರಿಸ್ಥಿತಿ ಹೇಗೆ ಎಂದು ಆಲೋಚಿಸಬೇಕು. ನೀಚರ ಕೈಯಲ್ಲಿ ಅಧಿಕಾರ ಕೊಟ್ಟ ನಾವು ಪರಿತಪಿಸುತ್ತಿದ್ದೇವೆ. ನಮ್ಮ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳದೇ ಹೋದಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ’ ಎಂದರು.

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ ಆರ್ಶಿವಚನ ನೀಡಿ, ಸ್ವಚ್ಛತೆ, ಸ್ವಾಸ್ಥ್ಯತೆ ಇರುವಲ್ಲಿ ಭಗವಂತ ನೆಲೆಸಿರುತ್ತಾನೆ. ಈ ನಿಟ್ಟಿನಲ್ಲಿ ಶರಣರು ನಾಡಿಗೆ ಹೊಸ ಬೆಳಕು ನೀಡಿದರು. ಯಾರು ಮಿತ ಆಹಾರ ಸೇವನೆ, ಉತ್ತಮ ನಿದ್ರೆ, ವಾಯು ವಿಹಾರ ಮಾಡುತ್ತಾರೋ ಅವರು ಆರೋಗ್ಯವಾಗಿರುತ್ತಾರೆ ಎಂದರು.

ಸಾಧುಲಿಂಗಾಯತ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಬಂದೋಳ್ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಶ್ರಾವಣ ಸಂಜೆ ಕಾರ್ಯಕ್ರಮದಿಂದ ಒಟ್ಟು ₹ 2.50 ಲಕ್ಷ ಸಂಗ್ರಹಗೊಂಡಿದ್ದು, ತರಳಬಾಳು ಶ್ರೀ ಮಠದಿಂದ ₹ 2.50 ಲಕ್ಷ ಸೇರಿ ಒಟ್ಟು ₹ಲಕ್ಷವನ್ನು ಕೊಡಗು ನೆರೆ ಸಂತ್ರಸ್ತರಿಗೆ ನೀಡಲಾಯಿತು.

ಕೊಟ್ಟೂರು ಸಾಧು ಲಿಂಗಾಯತ ಸಮಾಜದ ಅಧ್ಯಕ್ಷ ಡಾ. ಮೂಗಣ್ಣ, ಜಿಲ್ಲಾ ಪಂಚಾಯಿತಿ ಸದಸ್ಯೆ ರಶ್ಮಿ ರಾಜಪ್ಪ, ಜಿ.ವೀರಣ್ಣ, ಎ.ಸಿದ್ದೇಶ್, ಮುಖಂಡರಾದ ಜಿ. ನಂಜನಗೌಡ್ರು, ಪಿ. ಮಹಾಬಲೇಶ್ವರಗೌಡ್ರು, ಪಾಟೀಲ ಬೆಟ್ಟನಗೌಡ್ರು, ಎಂ. ರಾಜಶೇಖರ, ರಾಜೇಂದ್ರ ಪ್ರಸಾದ್, ಕೆ.ರಮೇಶ್, ಬಿ.ಕೆ. ಪ್ರಕಾಶ್, ಜಾತಪ್ಪ, ಎಚ್.ಎಸ್. ದ್ಯಾಮೇಶ್, ಸಾಸ್ವಿಹಳ್ಳಿ ಪ್ರಕಾಶ್, ಶೇಖರಗೌಡ ಪಾಟೀಲ್, ಬಸವಂತಪ್ಪ, ಎಚ್. ಮಲ್ಲಿಕಾರ್ಜುನ್ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು