ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಾಪಟ್ಟಣ: 25 ವರ್ಷಗಳ ನಂತರ ಹತ್ತಿ ಬೆಳೆಯತ್ತ ರೈತರ ಚಿತ್ತ

Published 13 ಜೂನ್ 2024, 12:35 IST
Last Updated 13 ಜೂನ್ 2024, 12:35 IST
ಅಕ್ಷರ ಗಾತ್ರ

ಬಸವಾಪಟ್ಟಣ: ಅಂದಾಜು 25 ವರ್ಷಗಳಿಂದ ಹತ್ತಿ ಬೆಳೆಯುವುದನ್ನೇ ನಿಲ್ಲಿಸಿದ್ದ ಈ ಭಾಗದ ರೈತರು, ಹತ್ತಿಗೆ ಉತ್ತಮ ದರ ಸಿಗುತ್ತಿರುವುದರಿಂದ ಈಗ ಮತ್ತೆ ಈ ಬೆಳೆಯತ್ತ ಮುಖಮಾಡಿದ್ದಾರೆ. 

ಹತ್ತಿ ಬೆಳೆಗೆ ಕಪ್ಪು ಮಣ್ಣು ಸೂಕ್ತವಾದುದು. ಬಸವಾಪಟ್ಟಣ ಹೋಬಳಿಯಲ್ಲಿ ಕಪ್ಪು ಮಿಶ್ರಿತ ಕೆಂಪು ಮಣ್ಣಿನ ಭೂಮಿ ಅಧಿಕವಾಗಿದೆ. ಈ ಮಣ್ಣು ಕೂಡ ಹತ್ತಿ ಬೆಳೆಗೆ ಪೂರಕವಾಗಿದೆ. ಆದ್ದರಿಂದ ಈ ಭಾಗದ ಕೃಷಿಕರು ಈ ಬೆಳೆಯತ್ತ ಈಗ ಚಿತ್ತ ಹರಿಸಿದ್ದಾರೆ.

ಸಾಲಿನಿಂದ ಸಾಲಿಗೆ 3 ಅಡಿ, ಗಿಡದಿಂದ ಗಿಡಕ್ಕೆ ಎರಡು ಅಡಿ ಅಂತರದಲ್ಲಿ ಬೀಜಗಳನ್ನು ಬಿತ್ತನೆ ಮಾಡಬೇಕು. ಎಕರೆಗೆ ಅಂದಾಜು 7,300 ಬೀಜಗಳನ್ನು ಬಿತ್ತನೆ ಮಾಡಬಹುದಾಗಿದೆ. ಪ್ರತಿ ಗಿಡಕ್ಕೆ ಸರಾಸರಿ 35 ಕಾಯಿಗಳು ಬಿಡುತ್ತವೆ. ಇದರಿಂದ ಪ್ರತಿ ಎಕರೆಗೆ 10 ಕ್ವಿಂಟಲ್‌ ವರೆಗೆ ಇಳುವರಿ ನಿರೀಕ್ಷಿಸಬಹುದು.

ಈ ಭಾಗದ ಮಣ್ಣಿನಲ್ಲಿ ಜಿಂಕ್‌ ಅಂಶ ತುಂಬಾ ಕಡಿಮೆ ಇದೆ. ಆದ್ದರಿಂದ ರೈತರು ಬಿತ್ತನೆಗೆ ಮುನ್ನ ಮಣ್ಣಿಗೆ  ಕಡ್ಡಾಯವಾಗಿ ಜಿಂಕ್‌ ಸೇರಿಸಬೇಕು. ಕೃಷಿ ಇಲಾಖೆಯಲ್ಲಿ ಕಿಲೋಗೆ 35 ರೂನಂತೆ ಜಿಂಕ್‌ ಮಾರಾಟ ಮಾಡಲಾಗುತ್ತದೆ. ಎಕರೆಗೆ 8 ಕೆ.ಜಿ. ಜಿಂಕ್‌ ಬೆರೆಸಿದರೆ ಮುಂದೆ ಹತ್ತಿ ಗಿಡಕ್ಕೆ ಎಲೆಮುರುಟು ರೋಗ ಕಾಡುವುದಿಲ್ಲ.

ಬಿತ್ತನೆಯ ವೇಳೆ ಪ್ರತಿ ಎಕರೆಗೆ ಶೇ 25 ರಷ್ಟು, ಹೂ ಮೂಡುವ ಸಮಯದಲ್ಲಿ ಶೇ 50 ರಷ್ಟು, ಕಾಯಿಗಳು ಮೂಡುವ ಸಮಯದಲ್ಲಿ ಶೇ 25 ರಷ್ಟು ಎನ್‌.ಪಿ.ಕೆ ಸಂಯುಕ್ತ ಗೊಬ್ಬರವನ್ನು (ಯೂರಿಯ ಶೇ 50, ಫಾಸ್ಫರಸ್‌ ಶೇ 30 ಮತ್ತು ಪೊಟ್ಯಾಷ್‌ ಶೇ 35 ರ ಪ್ರಮಾಣದಲ್ಲಿ) ಹಾಕಬೇಕು.

‘45 ರಿಂದ 50 ದಿನಗಳಲ್ಲಿ ಗಿಡದಲ್ಲಿ ಹೂ ಮೂಡುತ್ತವೆ. ನಂತರ ಕಾಯಿಗಳುಂಟಾಗಿ 180 ರಿಂದ 190 ದಿನಗಳಲ್ಲಿ ಅಂದರೆ ಸಾಮಾನ್ಯವಾಗಿ ನವೆಂಬರ್‌ನಲ್ಲಿ ಕಾಯಿಗಳು ಒಡೆದು ಹತ್ತಿ ಹೊರಬರುತ್ತದೆ. ಮುಂದೆ ಅಂದಾಜು ಆರು ತಿಂಗಳವರೆಗೆ ಹತ್ತಿಯನ್ನು ನಿರಂತರವಾಗಿ ಬಿಡಿಸಬಹುದಾಗಿದೆ. ಮುಂದೆ ಗಿಡಗಳಲ್ಲಿನ ಕಾಯಿಗಳ ರಸ ಹೀರುವ ಕೀಟಗಳು ಅಥವಾ ಕಾಯಿಕೊರಕ ಕೀಟಗಳು ಕಂಡು ಬಂದರೆ ಇಲ್ಲಿನ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಸೂಕ್ತ ಕೀಟ ನಾಶಕಗಳನ್ನು ಸಿಂಪರಣೆ ಮಾಡಬೇಕು’ ಎಂದು ಇಲ್ಲಿನ ತಾಂತ್ರಿಕ ಕೃಷಿ ಅಧಿಕಾರಿ ಎಲ್‌.ಅವಿನಾಶ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT