ಮಂಗಳವಾರ, ಆಗಸ್ಟ್ 16, 2022
22 °C
ಗ್ರಾಮ ಸ್ವರಾಜ್ಯ ಸಮಾವೇಶ

ಕಾರ್ಯಕರ್ತರನ್ನು ಗೆಲ್ಲಿಸಿ ಋಣ ತೀರಿಸಿ: ಸಚಿವ ಕೆ.ಎಸ್‌. ಈಶ್ವರಪ್ಪ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಾವೆಲ್ಲ ಅಧಿಕಾರಕ್ಕೆ ಬಂದಿದ್ದು ಹಳ್ಳಿಯ ಕಾರ್ಯಕರ್ತರ ಪ್ರಯತ್ನದಿಂದ. ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ನಮ್ಮದೇ ಚುನಾವಣೆ ಎಂದು ಭಾವಿಸಿ ಕಾರ್ಯಕರ್ತರನ್ನು ಗೆಲ್ಲಿಸುವ ಮೂಲಕ ಋಣ ತೀರಿಸಬೇಕು’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಪಕ್ಷದ ನಾಯಕರಿಗೆ ಸೂಚಿಸಿದರು.

ನಗರದ ಜಿಎಂಐಟಿ ಆವರಣದಲ್ಲಿ ಬಿಜೆಪಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಗ್ರಾಮ ಸ್ವರಾಜ್ಯ’ ಸಮಾವೇಶದಲ್ಲಿ ಮಾತನಾಡಿದ ಅವರು, ‘ಪಕ್ಷದ ನಾಯಕರು ಎಂಎಲ್‌ಎ, ಎಂಪಿ ಚುನಾವಣೆಗಳಿಗೆ ಮಾಡಿದಷ್ಟೇ ಪ್ರಯತ್ನವನ್ನು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲೂ ಮಾಡಬೇಕು. ದಲಿತ, ಹಿಂದುಳಿದ ಕಾರ್ಯಕರ್ತರನ್ನೂ ಗೆಲ್ಲಿಸಬೇಕು’ ಎಂದು ಹೇಳಿದರು.

‘ಶೇ 80ರಷ್ಟು ಗ್ರಾಮ ಪಂಚಾಯಿತಿಗಳನ್ನು ಗೆಲ್ಲುವ ಅವಕಾಶಗಳಿವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳನ್ನೂ ನಾವು ಗೆದ್ದೇ ಗೆಲ್ಲುತ್ತೇವೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಗಲು–ರಾತ್ರಿ ಶ್ರಮ ಹಾಕಿ ದುಡಿದರೆ ಮಾತ್ರ ಇದು ಸಾಧ್ಯವಾಗಲಿದೆ. ರಾಜ್ಯದಲ್ಲಿ ಇಂದು ಕಾಂಗ್ರೆಸ್‌ ಇಲ್ಲ; ಜೆಡಿಎಸ್‌ ಅನ್ನು ಹುಡುಕಬೇಕಾದ ಪರಿಸ್ಥಿತಿ ಇದೆ. ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಕಾರ್ಯಕರ್ತರು ಗೆದ್ದು ಹಳ್ಳಿಗಳಲ್ಲಿ ಮೂಲಸೌಲಭ್ಯ ಒದಗಿಸಿದರೆ ಮುಂದಿನ 20–30 ವರ್ಷಗಳ ಕಾಲ ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ನಡೆಸಲಿದೆ’ ಎಂದು ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ, ಅಟಲ್‌ಬಿಹಾರಿ ವಾಜಪೇಯಿ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಗ್ರಾಮೀಣ ಪ್ರದೇಶಗಳಿಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕೊಡುತ್ತಿದ್ದಾರೆ. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ನನಸು ಮಾಡುವ ಕಾಲ ಬಂದಿದೆ ಎಂದರು.

‘ಲವ್‌ ಜಿಹಾದ್‌’ ನಿಷೇಧ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಈಶ್ವರಪ್ಪ, ‘ಇಂದಿರಾ ಗಾಂಧಿ–ಫಿರೋಜ್‌ ಖಾನ್‌; ರಾಜೀವ ಗಾಂಧಿ–ಸೋನಿಯಾ ಗಾಂಧಿ; ಪ್ರಿಯಾಂಕ ಗಾಂಧಿ–ರಾಬರ್ಟ್‌ ವಾದ್ರಾ ನಡುವಿನ ವಿವಾಹ ಸಂಬಂಧಕ್ಕೆ ಸಿದ್ದರಾಮಯ್ಯ ಏನು ಹೇಳುತ್ತಾರೆ? ಮುಸ್ಲಿಂ ಯುವಕರು ಹಿಂದೂ ಹೆಣ್ಣುಮಕ್ಕಳನ್ನು ಪ್ರೇಮದ ಹೆಸರಿನಲ್ಲಿ ಕರೆದುಕೊಂಡು ಹೋಗಿ ವಿದೇಶದಲ್ಲಿ ಮಾರಾಟ ಮಾಡಿರುವ ಪ್ರಕರಣ ಲೆಕ್ಕವಿಲ್ಲದಷ್ಟು ನಡೆಯುತ್ತಿದೆ. ಲವ್‌ ಜಿಹಾದ್‌ ಕಾಯ್ದೆ ಬಗ್ಗೆ ಸಿದ್ದರಾಮಯ್ಯಗೆ ಏಕೆ ಉರಿಯಾಗುತ್ತಿದೆಯೋ ಗೊತ್ತಿಲ್ಲ. ತಮ್ಮ ಮನೆಯ ಹೆಣ್ಣುಮಕ್ಕಳನ್ನು ಮುಸ್ಲಿಂ ಯುವಕರು ಎತ್ತುಕೊಂಡು ಹೋಗಿದ್ದರೆ ಬಹುಶಃ ಅವರಿಗೂ ನೋವಿನ ಅರಿವಾಗುತ್ತಿತ್ತು’ ಎಂದು ಕಿಡಿಕಾರಿದರು.

‘ಗ್ರಾಮ ಸ್ವರಾಜ್ಯ’ದ ರಾಜ್ಯ ಸಂಚಾಲಕ ತುಳಸಿ ಮುನಿರಾಜಗೌಡ, ‘ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡಲು ಗ್ರಾಮ ಸ್ವರಾಜ್ಯ ಸಮಾವೇಶವನ್ನು ಎಲ್ಲಾ ಜಿಲ್ಲೆಗಳಲ್ಲಿ ನಡೆಸಿದ್ದೇವೆ. ನಾಯಕರು ಕಾರ್ಯಕರ್ತರ ಚುನಾವಣೆಯನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬೇಕು. ಪಕ್ಷದ ವಿಚಾರ, ಸಿದ್ಧಾಂತವನ್ನು ಮೈಗೂಡಿಸಿಕೊಂಡ ಕಾರ್ಯಕರ್ತರನ್ನು ಗೆಲ್ಲಿಸಬೇಕು. ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಶೇ 80ರಷ್ಟು ಸದಸ್ಯರು ನಮ್ಮ ಕಾರ್ಯಕರ್ತರೇ ಆಗಿರಬೇಕು’ ಎಂದು ಹೇಳಿದರು.

ಸಂಸದ ಜಿ.ಎಂ.ಸಿದ್ದೇಶ್ವರ, ‘ಗ್ರಾಮ ಪಂಚಾಯಿತಿ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ. ಶ್ರಮ ಹೆಚ್ಚು ಹಾಕಬೇಕು. ಪಕ್ಷದವರೇ ನಾಲ್ಕೈದು ಆಕಾಂಕ್ಷಿಗಳಿದ್ದರೆ ಉಳಿದವರನ್ನು ಸಮಾಧಾನಪಡಿಸಿ ಒಬ್ಬರು ಆಯ್ಕೆಗೊಳ್ಳುವಂತೆ ನೋಡಿಕೊಳ್ಳಬೇಕು. ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಕಾರ್ಯಕರ್ತರೇ ಹೆಚ್ಚು ಗೆದ್ದರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪೂರ್ಣ ಪ್ರಮಾಣದ ಬಹುಮತ ಬರಲು ಸಾಧ್ಯವಿದೆ. ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ ಪಾಟೀಲ ಸ್ವಾಗತಿಸಿದರು. ಬಿ.ಎಸ್‌.ಜಗದೀಶ್‌ ನಿರೂಪಿಸಿದರು.

ಶಾಸಕರಾದ ಎಸ್‌.ವಿ. ರಾಮಚಂದ್ರ, ಪ್ರೊ. ಎನ್‌. ಲಿಂಗಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್‌, ಉಪಾಧ್ಯಕ್ಷೆ ಸಾಕಮ್ಮ, ಮೇಯರ್‌ ಬಿ.ಜಿ. ಅಜಯಕುಮಾರ್‌, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್‌, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಬಸವರಾಜ ನಾಯ್ಕ, ಡಾ.ಎ.ಎಚ್‌. ಶಿವಯೋಗಿಸ್ವಾಮಿ, ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಣಬೇರು ಜೀವನಮೂರ್ತಿ ಹಾಗೂ ಪಕ್ಷದ ವಿವಿಧ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕಾಂಗ್ರೆಸ್‌ನ ಕೆಲವು ಮುಖಂಡರು ಈಶ್ವರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದರು.

ಕೇಂದ್ರ ನಾಯಕರಿಂದ ಗೊಂದಲ ಪರಿಹಾರ

ದಾವಣಗೆರೆ: ‘ಬಿಜೆಪಿಗೆ ಪೂರ್ಣ ಬಹುಮತ ಬಂದಿದ್ದರೆ ಸಚಿವ ಸಂಪುಟ ವಿಸ್ತರಣೆಗೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಗೊಂದಲ ಇದೆ. ಕೇಂದ್ರದ ನಾಯಕರು ಅದನ್ನು ಪರಿಹರಿಸುತ್ತಾರೆ’ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.

‘ಪ್ರತಿ ಜಿಲ್ಲೆಗೆ, ಪ್ರತಿ ಜನಾಂಗಕ್ಕೂ ಸಚಿವ ಸ್ಥಾನಗಳನ್ನು ನೀಡಬೇಕಾಗಿತ್ತು. ಇವತ್ತು ಅಂತಹ ವಾತಾವರಣ ಇಲ್ಲ. ಬೆಂಗಳೂರು, ಬೆಳಗಾವಿಯಲ್ಲಿ ಅತಿ ಹೆಚ್ಚು ಶಾಸಕರು ಇದ್ದಾರೆ. ಬೇರೆ ಪಕ್ಷದಿಂದ ಬಂದವರಿಗೂ ಅವಕಾಶ ನೀಡಲೇಬೇಕಾಗಿದೆ. ನಮ್ಮದೇ ಪಕ್ಷ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿದ್ದರೆ ಎಲ್ಲಾ ಜಿಲ್ಲೆಗಳಿಗೆ ಹಾಗೂ ಜನಾಂಗಗಳಿಗೂ ಸಚಿವ ಸ್ಥಾನ ಸಿಗುತ್ತಿತ್ತು’ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ದಾವಣಗೆರೆ ಜಿಲ್ಲೆಗೂ ಸಚಿವ ಸ್ಥಾನ ಸಿಗಬೇಕು ಎಂಬ ಕಾಳಜಿ ನನಗೂ ಇದೆ. ಈ ನಿಟ್ಟಿನಲ್ಲಿ ಕೇಂದ್ರದ ನಾಯಕರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿದರು.

ಸಿಎಂ ಬದಲಾವಣೆಗೆ ಬಗ್ಗೆ ಪಕ್ಷದ ಯಾವುದೇ ಶಾಸಕರು, ಸಂಸದರು, ಕಾರ್ಯಕರ್ತರು ಮಾತನಾಡಿಲ್ಲ. ಅದು ಕಾಂಗ್ರೆಸ್‌ನವರು ಸೃಷ್ಟಿಸಿದ ಸುದ್ದಿ ಎಂದು ಪ್ರತಿಕ್ರಿಯಿಸಿದರು.

***

ಕಾಂಗ್ರೆಸ್‌, ಜೆಡಿಎಸ್‌ಗೆ ಗ್ರಾಮ ಪಂಚಾಯಿತಿ ಚುನಾವಣೆ ಮಾಡುವ ನೈತಿಕತೆ ಇಲ್ಲ. ದೇಶ, ರಾಜ್ಯವನ್ನು ಲೂಟಿ ಹೊಡೆದಿರುವುದೇ ಅವರ ಸಾಧನೆ. ಕಾರ್ಯಕರ್ತರನ್ನು ಗೆಲ್ಲಿಸುವ ಹೊಣೆ ನಮ್ಮ ಮೇಲಿದೆ.

– ಎಂ.ಪಿ. ರೇಣುಕಾಚಾರ್ಯ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ

*

ಗಾಂಧೀಜಿ ಆಶಯದಂತೆ ಹಳ್ಳಿಗಳನ್ನು ಸಶಕ್ತಗೊಳಿಸಲು ಬಿಜೆಪಿ ಬದ್ಧವಾಗಿದೆ. ಜಿಲ್ಲೆಯಲ್ಲಿ ನಮ್ಮವರೇ ಹೆಚ್ಚು ಸದಸ್ಯರು ಆಯ್ಕೆಗೊಳ್ಳುವಂತೆ ಪಕ್ಷದ ಮುಖಂಡರು ಕೆಲಸ ಮಾಡಬೇಕು.

– ಬೈರತಿ ಬಸವರಾಜ, ಜಿಲ್ಲಾ ಉಸ್ತುವಾರಿ ಸಚಿವ

*

ನಮ್ಮವರೇ ಪರಸ್ಪರ ಸ್ಪರ್ಧಿಸಿ ಬೇರೆಯವರಿಗೆ ಗೆಲ್ಲಲು ಅವಕಾಶ ಮಾಡಿಕೊಡಬೇಡಿ. ಈಗ ತ್ಯಾಗ ಮಾಡಿದವರಿಗೆ ತಾ.ಪಂ, ಸೊಸೈಟಿಗಳಲ್ಲಿ ಅವಕಾಶ ಮಾಡಿಕೊಡಲಾಗುವದು.

– ಎ.ಎಸ್‌. ರವೀಂದ್ರನಾಥ, ಶಾಸಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು