ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲಾತಿ ತೆಗೆದರೆ ರಕ್ತಕ್ರಾಂತಿ

ಕಾಂಗ್ರೆಸ್ ಪ್ರತಿಭಟನೆ: ಕೇಂದ್ರಕ್ಕೆ ಎಚ್ಚರಿಕೆ
Last Updated 15 ಫೆಬ್ರುವರಿ 2020, 13:53 IST
ಅಕ್ಷರ ಗಾತ್ರ

ದಾವಣಗೆರೆ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ತೆಗೆದರೆ ದೇಶದಾದ್ಯಂತ ರಕ್ತಕ್ರಾಂತಿ ಮಾಡಬೇಕಾಗುತ್ತದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ನಗರದ ಜಯದೇವ ವೃತ್ತದಲ್ಲಿ ಶನಿವಾರ ನಡೆದ ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಎಸ್‌.ಸಿ ಹಾಗೂ ಎಸ್‌ಟಿ ಮೀಸಲಾತಿ ಹಕ್ಕಲ್ಲ ಎಂದು ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಪರಿಶಿಷ್ಟ ವರ್ಗದವರಿಗೆ ಮಾರಕವಾಗಿದ್ದು, ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಬೇಕು. ಮೀಸಲಾತಿ ಇಲ್ಲದಿದ್ದರೆ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಯಾವುದೇ ಒಬ್ಬ ವ್ಯಕ್ತಿ ಮೇಲೆರಲು ಸಾಧ್ಯವಿಲ್ಲ. ಇಂದಿನ ದಿನಗಳಲ್ಲಿ ಹಣ, ಜಾತಿ ಬಲ ಇದ್ದವರು ಮಾತ್ರ ಮುಂದೆ ಬರುತ್ತಿದ್ದಾರೆ. ಆದ್ದರಿಂದ ನಮ್ಮ ಹಕ್ಕನ್ನು ಪಡೆಯಲು ಹೋರಾಟ ಮಾಡಬೇಕಿದೆ’ ಎಂದರು.

‘ಮೀಸಲಾತಿ ನಮ್ಮ ಹಕ್ಕು. ಕೇಂದ್ರ ಸರ್ಕಾರ ಇದನ್ನು ಕಿತ್ತುಕೊಳ್ಳುವ ಹುನ್ನಾರ ನಡೆಸುತ್ತಿದೆ. ನಾವು ಸುಮ್ಮನಿದ್ದರೆ ಬಿಜೆಪಿಯವರು ಮೀಸಲಾತಿ ತೆಗೆದು ಹಾಕುತ್ತಾರೆ. ಎಲ್ಲರೂ ಇದನ್ನು ಅರ್ಥ ಮಾಡಿಕೊಳ್ಳಬೇಕು. ಪಕ್ಷಾತೀತವಾಗಿ ಇದನ್ನು ಖಂಡಿಸಿ ಕೇಂದ್ರಕ್ಕೆ ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಸರ್ಕಾರ ಹಲವು ಆಶ್ವಾಸನೆಗಳನ್ನು ಕೊಟ್ಟರೂ ಯಾವುದನ್ನೂ ಈಡೇರಿಸದೇ ಬರೀ ಭಾಷಣಗಳ ಮೂಲಕ ಜನರ ಹೊಟ್ಟೆ ತುಂಬಿಸುತ್ತಿದೆ. ಸಿಲಿಂಡರ್ ಬೆಲೆ ₹147 ಹೆಚ್ಚು ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹380 ಇದ್ದಿದ್ದು ಬಿಜೆಪಿ ಅವಧಿಯಲ್ಲಿ ₹800 ಆಗಿದೆ ಎಂದರೆ ಜನರ ಸ್ಥಿತಿ ಏನಾಗಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’

‘ಕೇಂದ್ರ ಸರ್ಕಾರ ವಿಳಂಬ ನೀತಿ ಒಳಸಂಚು ಬಿಟ್ಟು ಮೀಸಲಾತಿಯನ್ನು ತರುವುದಕ್ಕೆ ಪ್ರಯತ್ನ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಹರಿಹರ ಶಾಸಕ ಎಸ್. ರಾಮಪ್ಪ ಮಾತನಾಡಿ, ‘ಕೇಂದ್ರ ಸರ್ಕಾರ ಸಂವಿಧಾನವನ್ನು ತಿದ್ದುಪಡಿ ಮಾಡಲು ಹೊರಟಿದ್ದು, ಇದು ಖಂಡನೀಯ. ಮೀಸಲಾತಿಯನ್ನು ತೆಗೆದು ಹಾಕಿದರೆ ಹಲವು ಸೌಲಭ್ಯಗಳಿಂದ ವಂಚಿತರಾಗಿ ‌ಮುಂದೆ ಬರಲು ಸಾಧ್ಯವಾಗುವುದಿಲ್ಲ, ಹಾಗಾಗಿ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಮೀಸಲಾತಿ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಸವರಾಜಪ್ಪ, ಆಯೂಬ್ ಪೈಲ್ವಾನ್, ನಾಗರತ್ನಮ್ಮ, ಅನಿತಾಬಾಯಿ ಮಾಲತೇಶ್, ಮಂಜುನಾಥ್ ಗಡಿಗುಡಾಳ್, ಕೆ.ಜಿ. ಶಿವಕುಮಾರ್, ಬಸವಂತಪ್ಪ, ನಾಗರಾಜ್, ಜಾಕೀರ್, ಸೈಯದ್ ಖಾಲಿದ್, ಮುಜಾಹಿದ್, ಸಾಗರ್, ಶುಭಮಂಗಳ, ಮಂಜಮ್ಮ, ನಂಜಾನಾಯ್ಕ್ ಮಹಿಳಾ ಕಾಂಗ್ರೆಸ್, ಯುವಕಾಂಗ್ರೆಸ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ವಿಭಾಗ, ಓಬಿಸಿ, ಅಲ್ಪಸಂಖ್ಯಾತರು ಕಾರ್ಮಿಕ ಘಟಕಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT