ಬುಧವಾರ, ಜನವರಿ 22, 2020
20 °C
ದಂಡಿ ದುರ್ಗಮ್ಮ ಜಾತ್ರೋತ್ಸವ ನಾಳೆಯಿಂದ

ಪ್ರಾಣಿಬಲಿ ಮೇಲೆ ಕ್ಯಾಮೆರಾ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಚ್ಚಂಗಿದುರ್ಗ: ಅರಸೀಕೆರೆ ಗ್ರಾಮದ ಐತಿಹಾಸಿಕ ದಂಡಿ ದುರ್ಗಮ್ಮ ಕಾರ್ತಿಕೋತ್ಸವದ ಅಂಗವಾಗಿ ನಡೆಯುವ ಜಾತ್ರೋತ್ಸವದಲ್ಲಿ ಪ್ರಾಣಿಬಲಿ ಸೇರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ 8 ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ತಿಳಿಸಿದರು.

ಸಮೀಪದ ಅರಸೀಕೆರೆಯ ದಂಡಿ ದುರ್ಗಮ್ಮ ಜಾತ್ರೆಯ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪ್ರಾಣಿಬಲಿ ನಿಷೇಧ ಕಾಯ್ದೆ ಜಾರಿಗೆ ಬಂದಾಗಿನಿಂದ ಜಾತ್ರೆಯಲ್ಲಿ ಯಾವುದೇ ಪ್ರಕರಣಗಳು ಬೆಳಕಿಗೆ ಬಂದಿಲ್ಲ. ಜಾತ್ರೆಗೆ ಬರುವ ಭಕ್ತರ ಜೇಬುಕಳ್ಳತನ, ಮೊಬೈಲ್ ಕಳ್ಳತನ ನಡೆದಿರುವುದು ಬೆಳೆಕಿಗೆ ಬಂದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಜನಸಂದಣಿ, ಸೂಕ್ಮ ಪ್ರದೇಶಗಳಿಗೆ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಲಾಗುವುದು. ಅಪರಾಧ ಕಂಡುಬಂದಲ್ಲಿ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಡಿ.20ರಿಂದ 23ರವರೆಗೆ ನಡೆಯಲಿರುವ ಜಾತ್ರಾಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಪಾಲ್ಗೊಳ್ಳುವುದರಿಂದ ಕುಡಿಯುವ ನೀರು ಪೂರೈಕೆಗೆ ಹೆಚ್ಚುವರಿ ಟ್ಯಾಂಕರ್ ವ್ಯವಸ್ಥೆ, ಗ್ರಾಮದ ಎಲ್ಲಾ ಬೀದಿಗಳಲ್ಲಿ ವಿದ್ಯುತ್ ಸಂಪರ್ಕ, ಹೆಚ್ಚುವರಿ ಆಂಬ್ಯುಲೆನ್ಸ್, ಔಷಧ ಸಾಮಗ್ರಿಗಳನ್ನು ಶೇಖರಣೆ ಮಾಡಿಟ್ಟುಕೊಳ್ಳುವಂತೆ ಸೂಚನೆ ನೀಡಿದರು.

ಆ.21ರಂದು ಜಾತ್ರೆಯ ಅಂಗವಾಗಿ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಕಿರುತರೆ ವಾಹಿನಿಯ ಕನ್ನಡಕೋಗಿಲೆ, ಕಾಮಿಡಿ ಕಿಲಾಡಿ ಪ್ರಖ್ಯಾತ ಕಲಾವಿದರು, ರಾಜಕೀಯ ಮುಖಂಡರು ಪಾಲ್ಗೊಳ್ಳುವುದರಿಂದ ಅಧಿಕಾರಿಗಳು ಮೂಲ ಸೌಕರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದರು.
ಸಿಪಿಐ ಕೆ.ಕುಮಾರ್, ‘ಜಾತ್ರೆಯ ಅಂಗವಾಗಿ ಸಾವಿರಾರು ಭಕ್ತರು ಬರುವ ಕಾರಣ ವಾಹನ ದಟ್ಟಣೆ ಹೆಚ್ಚದಂತೆ ಗಮನ ಹರಿಸಲಾಗಿದೆ. ಹರಪನಹಳ್ಳಿ ಭಾಗದಿಂದ ಬರುವ ಭಕ್ತರ ವಾಹನವನ್ನು ಪೊಲೀಸ್ ವಸತಿ ಗೃಹದ ಬಳಿ ನಿಲುಗಡೆ ಮಾಡಲಾಗಿದೆ. ದಾವಣಗೆರೆ ಭಾಗದಿಂದ ಬರುವ ಭಕ್ತರಿಗೆ ಪೆಟ್ರೋಲ್ ಬಂಕ್ ಬಳಿ ವ್ಯವಸ್ಥೆ ಮಾಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮದಂದು ಬ್ಯಾರಿಕೇಡ್ ನಿರ್ಮಾಣ ಮಾಡಿ ಮಹಿಳೆಯರಿಗೆ, ಮುಖಂಡರಿಗೆ, ಪುರುಷರಿಗೆ ಪ್ರತ್ಯೇಕ ನಿರ್ಮಾಣ ಮಾಡಲಾಗಿದೆ. ಪ್ರಾಣಿ ಬಲಿ ಸೇರಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ, ತಹಶೀಲ್ದಾರ್ ನಾಗವೇಣಿ, ಪಿಎಸ್ ಐ ವೀರಬಸಪ್ಪ, ಉಪ ತಹಶೀಲ್ದಾರ್ ಫಾತಿಮಾ ಬೀ, ಮುಖಂಡರಾದ ವೈ.ಡಿ. ಅಣ್ಣಪ್ಪ, ಪೂಜಾರಿ ಮರಿಯಪ್ಪ, ಪರಶುರಾಮಪ್ಪ, ವಿಶ್ವನಾಥಯ್ಯ, ಷಣ್ಮುಖಪ್ಪ, ಎಂ. ಮಧು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು