ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಜ್ಞಾನಿಕವಾಗಿ ಕೋಳಿಗಳ ನಾಶ: ಸಚಿವ ಚೌವ್ಹಾಣ್‌

Last Updated 17 ಮಾರ್ಚ್ 2020, 12:16 IST
ಅಕ್ಷರ ಗಾತ್ರ

ದಾವಣಗೆರೆ: ಹರಿಹರ ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ 157 ಕುಟುಂಬಗಳಲ್ಲಿ 1,167 ನಾಟಿ ಕೋಳಿಗಳು ಹಾಗೂ ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ಕುಂಬಾರಕೊಪ್ಪಲು ಗ್ರಾಮದಲ್ಲಿರುವ ಮಾಂಸದ ಕೋಳಿ ಫಾರ್ಮ್‌ನಲ್ಲಿರುವ 455 ಮಾಂಸದ ಕೋಳಿಗಳನ್ನು ಮತ್ತು 4,500 ಹಿತ್ತಲ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ನಾಶ ಮಾಡಲಿದ್ದಾರೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ತಿಳಿಸಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆಗೆ ಪರೀಕ್ಷೆಗಾಗಿ ಸಲ್ಲಿಸಲಾದ ಮಾದರಿಗಳಲ್ಲಿ ಹಕ್ಕಿ ಜ್ವರ ದೃಢಪಟ್ಟಿದೆ. ಹೆಚ್ಚಿನ ತಪಾಸಣೆಗಾಗಿ ನಿಯಮದಂತೆ ಭೂಪಾಲದ ನಿಹ್ಶಾದ್(NIHSAD) ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿಯೂ ಸಹ ಹಕ್ಕಿ ಜ್ವರ ಅಥವಾ ಕೋಳಿ ಶೀತ ಜ್ವರದ ವೈರಾಣು ಎಚ್5ಎನ್1 ಸೋಂಕು ಇರುವುದು ದೃಢಪಟ್ಟಿದೆ. ಅದರ ಪ್ರಯುಕ್ತ ಕೇಂದ್ರ ಸರ್ಕಾರ ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ ಅಧಿಕೃತವಾಗಿ ಆದೇಶ ನೀಡಿದೆ ಎಂದು ಸಚಿವರು ಪ್ರಕಟಣೆ ನೀಡಿದ್ದಾರೆ.

ರೋಗಪೀಡಿತ ವಲಯ ಘೋಷಣೆ: ಹರಿಹರ ತಾಲ್ಲೂಕಿನ ಬನ್ನಿಕೋಡು ಹಾಗೂ ಮೈಸೂರಿನ ಕುಂಬಾರಕೊಪ್ಪಲು ಗ್ರಾಮಗಳ ಒಂದು ಕಿ.ಮೀ ವ್ಯಾಪ್ತಿ ಪ್ರದೇಶವನ್ನು ರೋಗಪೀಡಿತ ವಲಯ ಎಂದು ಹಾಗೂ 1 ರಿಂದ 10 ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ರಾಜ್ಯ ಸರ್ಕಾರ ಘೋಷಿಸಿದೆ ಎಂದು ತಿಳಿಸಿದ್ದಾರೆ.

ವೈಜ್ಞಾನಿಕವಾಗಿ 2 ಮೀಟರ್ ಉದ್ದ, ಅಗಲ ಹಾಗೂ 2 ಮೀ ಆಳದ ಗುಂಡಿ ತೆಗೆದು ಕೋಳಿಗಳನ್ನು ಹೂಳಲಾಗುತ್ತದೆ. ಈ ಸಂದರ್ಭದಲ್ಲಿ ಸುಣ್ಣ ಮತ್ತು ಮಣ್ಣನ್ನು ಪದರುಗಳಲ್ಲಿ ಹಾಕಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುತ್ತದೆ. ನಾಶ ಮಾಡಲಾದ ಸ್ಥಳದಲ್ಲಿ 3 ತಿಂಗಳ ಕಾಲ ನಿರ್ಧಾರಿತ ಸೋಂಕು ಪ್ರದೇಶದಲ್ಲಿ ಯಾವುದೇ ಕುಕ್ಕುಟ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೋಂಕಿತ ಪ್ರದೇಶದಲ್ಲಿ 3 ತಿಂಗಳವರೆಗೆ ಸರ್ವೇಕ್ಷಣಾ ಕಾರ್ಯ ನಡೆಯಲಿದೆ.

ನಾಶಗೊಳಿಸಿದ ಕೋಳಿಗಳಿಗೆ ಪರಿಹಾರ ನೀಡಲಾಗುತ್ತದೆ. 8 ವಾರದ ಒಳಗಿನ ಮೊಟ್ಟೆ ನೀಡುವ ಕೋಳಿಗೆ ₹ 20 ಹಾಗೂ 8 ವಾರ ಮೇಲಿನ ಕೋಳಿಗೆ ₹ 90 ನೀಡಲಾಗುವುದು. 6 ವಾರದೊಳಗಿನ ಮಾಂಸದ ಕೋಳಿಗೆ ₹ 20 ಹಾಗೂ ಅದಕ್ಕಿಂತ ಮೇಲಿನ ಕೋಳಿಗೆ ₹ 70 ಪರಿಹಾರ ದೊರೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT