ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಚ್ಚು ಮದ್ದಿನಿಂದ ಮಗು ಸಾವು: ಪೋಷಕರ ಆರೋಪ

ತನಿಖೆ ನಡೆಸಿ ಕ್ರಮ: ಜಿಲ್ಲಾ ಆರೋಗ್ಯಾಧಿಕಾರಿ ಡಾ. ತ್ರಿಪುಲಾಂಭ
Last Updated 24 ಜೂನ್ 2018, 15:31 IST
ಅಕ್ಷರ ಗಾತ್ರ

ದಾವಣಗೆರೆ: ಚುಚ್ಚು ಮದ್ದು ನೀಡಿದ ನಂತರ ಅಸ್ವಸ್ಥಗೊಂಡ ನಾಲ್ಕು ತಿಂಗಳ ಮಗು ಜೀವನ್‌ ಸಾವು ಕಂಡಿದ್ದು, ಪೋಷಕರು ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಅರುಣಾ ಸರ್ಕಲ್‌ ಬಳಿಯ ಮೈಸೂರು ಕಣ ನಿವಾಸಿಗಳಾದ ಪರಶುರಾಮ್‌–ಗೀತಾ ದಂಪತಿಯ ಮಗುವಿನ ಸಾವಿಗೆ ಆರೋಗ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಸಂಬಂಧಿಕರು ಆರೋಪಿಸಿದರು. ಶನಿವಾರ ಮಧ್ಯಾಹ್ನ ಮಗುವಿಗೆ ಚುಚ್ಚುಮದ್ದು ಹಾಕಿಸಲಾಗಿತ್ತು. ಆದರೆ, ಸಂಜೆ ವೇಳೆಗೆ ಮಗು ಅಸ್ವಸ್ಥಗೊಂಡು ಮೃತಪಟ್ಟಿತು ಎಂದು ಪೋಷಕರು ಹೇಳಿದರು.

ಆದರೆ, ಆರೋಪ ತಳ್ಳಿಹಾಕಿರುವ ಡಿಎಚ್‌ಒ ತ್ರಿಪುಲಾಂಭ, ‘ಆರೋಗ್ಯ ಇಲಾಖೆಯಿಂದ 2, 4, 6 ತಿಂಗಳಿಗೊಮ್ಮೆ ಮಕ್ಕಳಿಗೆ ಪೆಂಟಾವಲೆಂಟ್‌ ಚುಚ್ಚು ಮದ್ದು ಹಾಕಲಾಗುತ್ತದೆ. ಅದರಂತೆ ಮಗುವಿಗೆ ಎರಡನೇ ಹಂತದ ಚುಚ್ಚು ಮದ್ದು ನೀಡಲಾಗಿತ್ತು. ಸಮಸ್ಯೆ ಕಾಣಿಸುವುದಾದರೆ ಮೊದಲನೇ ಹಂತದಲ್ಲೇ ಆರೋಗ್ಯದಲ್ಲಿ ಏರುಪೇರು ಆಗಬೇಕಿತ್ತು. ಇದೇ ಚುಚ್ಚುಮದ್ದನ್ನು ಇತರ ಎರಡು ಮಕ್ಕಳಿಗೂ ನೀಡಲಾಗಿದೆ. ಆ ಮಕ್ಕಳೆಲ್ಲಾ ಆರೋಗ್ಯದಿಂದಿದ್ದಾರೆ. ಮೃತಪಟ್ಟ ಮಗುವಿನ ದೇಹದಲ್ಲಿ ಅಲರ್ಜಿಯ ಲಕ್ಷಣಗಳೂ ಕಾಣಿಸಿಕೊಂಡಿಲ್ಲ. ಮಗು ಜೋರಾಗಿ ಅತ್ತೂ ಇಲ್ಲ. ಹೀಗಾಗಿ, ಚುಚ್ಚು ಮದ್ದಿನ ಕಾರಣದಿಂದ ಮಗು ಸಾವು ಕಂಡಿರಲು ಸಾಧ್ಯವಿಲ್ಲ’ ಎಂದು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.

‘ವ್ಯಾಕ್ಸಿನ್‌ ಹಾಕಿದ ವೇಳೆ ಮಗು ಚೆನ್ನಾಗಿಯೇ ಇತ್ತು. ಆದರೆ, 8.30ರೊಳಗೆ ಅದು ಮೃತಪಟ್ಟಿದೆ. ಮಗುವಿನ ಮರಣೋತ್ತರ ಪರೀಕ್ಷೆ ಮಾಡಿದರೆ ಸಾವಿಗೆ ಕಾರಣ ತಿಳಿಯುತ್ತದೆ. ಆದರೆ, ಪೋಷಕರು ಅದಕ್ಕೆ ಒಪ್ಪಲಿಲ್ಲ. ಹೀಗಾಗಿ, ಇಲಾಖೆ ಮಟ್ಟದಲ್ಲಿ ವಿಚಾರಣೆ ನಡೆಸಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ದೋಷವುಂಟಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT