ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕರು ಸಮಾಜದ ಪಿಡುಗು: ಪ್ರಭು ಎನ್‌. ಬಡಿಗೇರ್

ವಿಶ್ವಬಾಲಕಾರ್ಮಿಕ ವಿರೋಧಿ ದಿನದ ಕಾರ್ಯಕ್ರಮ
Last Updated 12 ಜೂನ್ 2019, 14:28 IST
ಅಕ್ಷರ ಗಾತ್ರ

ದಾವಣಗೆರೆ: ಕಾರ್ಮಿಕರು ದೇಶದ ಬೆನ್ನೆಲುಬು. ಆದರೆ ಬಾಲ ಕಾರ್ಮಿಕರು ಸಮಾಜದ ಪಿಡುಗು. ಸಾರ್ವಜನಿಕರು ಪ್ರಬುದ್ಧರಾದರೆ ಮಾತ್ರ ಎಂದು ಪಿಡುಗನ್ನು ತೊಡೆದು ಹಾಕಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್‌. ಬಡಿಗೇರ್ ತಿಳಿಸಿದರು.

ಜಿಲ್ಲಾಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಸ್ಥೆ, ಜಿಲ್ಲಾ ವಕೀಲರ ಸಂಘ ಹಾಗೂ ಕಟ್ಟಡ ಕಾರ್ಮಿಕರ ಸಂಘದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘6ರಿಂದ 18 ವರ್ಷದ ಮಕ್ಕಳು ಕಾರ್ಖಾನೆಗಳು, ಮಂಡಕ್ಕಿಭಟ್ಟಿ, ಇಟ್ಟಿಗೆಭಟ್ಟಿ, ಹೋಟೆಲ್, ಸಿನಿಮಾ ಥಿಯೇಟರ್ ಮುಂತಾದ ಕಡೆಗಳಲ್ಲಿ ಶಕ್ತಿ ಮೀರಿ ದುಡಿಯುತ್ತಿರುತ್ತಾರೆ. ಇದಕ್ಕೆ ಕಾನೂನಿನಲ್ಲಿ ಆಸ್ಪದವಿಲ್ಲ. ಬಾಲ ಕಾರ್ಮಿಕರು ಕೆಲಸ ಮಾಡು‌ತ್ತಿದ್ದರೆ ಅದನ್ನು ತಿಳಿಸುವುದು ಎಲ್ಲರ ಜವಾಬ್ದಾರಿ. ಆದರೆ ಯಾರೊಬ್ಬರು ಮಾಹಿತಿ ನೀಡದರಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ಕೇವಲ ಅಧಿಕಾರಿ ವರ್ಗದಿಂದ ಬಾಲ ಕಾರ್ಮಿಕ ನಿರ್ಮೂಲನೆ ಸಾಧ್ಯವಿಲ್ಲ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದರಲ್ಲಿ ಭಾಗಿಯಾಗಬೇಕು. ಇದು ಅವರ ಜವಾಬ್ದಾರಿ. ಮಾಹಿತಿ ನೀಡಿದವರಿಗೆ ಬೆದರಿಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಅವರು ಮುಂದೆ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಧೃತಿಗಡಬಾರದು’ ಎಂದು ಸಲಹೆ ನೀಡಿದರು.

ಸಾರ್ವಜನಿಕರು ಪ್ರಬುದ್ಧರಾಗದಿದ್ದರೆ ಬಾಲಕಾರ್ಮಿಕರ ಪದ್ಧತಿ ನಿರ್ಮೂಲನೆ ಅಸಾಧ್ಯ. ಕೆಲಸಕ್ಕೆ ಕಳುಹಿಸುವ ತಂದೆ ತಾಯಿಗಳಿಗೆ ಜಾಗೃತಿ ಮೂಡಿಸಿ ಶಿಕ್ಷಣ ನೀಡುವಂತೆ ತಿಳಿವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಸಂಪನ್ಮೂಲ ವ್ಯಕ್ತಿ ಪ್ರೊ. ಮಲ್ಲಿಕಾರ್ಜುನ ಆರ್.ಹಲಸಂಗಿ ‘ಭಾರತದಂತಹ ದೇಶದಲ್ಲಿ ಕೇವಲ ಆರ್ಥಿಕ ಸಮಸ್ಯೆ ಬಾಲಕಾರ್ಮಿಕ, ಜೀತ ಪದ್ದತಿಯಂತಹ ಪಿಡುಗಿಗೆ ಕಾರಣವಲ್ಲ. ಬದಲಾಗಿ ಇದಕ್ಕೆ ವ್ಯವಸ್ಥಿತ ಬಂಡವಾಳಶಾಹಿ ವ್ಯವಸ್ಥೆಯ ಸಂಚಿದ್ದು, ಇದರಿಂದ ಪರಿಹಾರ ದೊರಕಬೇಕಿದೆ. ಆರ್ಥಿಕ ಮತ್ತು ಬೌದ್ಧಿಕ ಬಡತನ ಕೊನೆಗಾಣಬೇಕಿದೆ. ಆಗ ಮಾತ್ರ ಇಂತಹ ಪಿಡುಗಿನ ನಿರ್ಮೂಲನೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಬಳ್ಳಾರಿ ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಮಹಮ್ಮದ್‌ ಜಹೀರ್ ಪಾಷಾ ಪ್ರಾಸ್ತಾವಿಕವಾಗಿ ಮಾತನಾಡಿ, 2012 ರಿಂದ 2015ರವರೆಗೆ ದಾವಣಗೆರೆ ಜಿಲ್ಲೆಯಲ್ಲಿ 5 ಬಾಲಕಾರ್ಮಿಕರ ಶಾಲೆಗಳನ್ನು ತೆರೆಯಲಾಗಿದ್ದು 989 ಮಕ್ಕಳಿಗೆ ಪುನರ್ವಸತಿ ಕಲ್ಪಿಸಿ, 8 ಪ್ರಕರಣ ದಾಖಲಿಸಲಾಗಿತ್ತು. ಮತ್ತೆ ಈಗ ಈ ತರಹದ ಶಾಲೆ ತೆರೆಯುವ ಉದ್ದೇಶ ಹೊಂದಲಾಗಿದೆ’ ಎಂದರು.

ಬಾಲಕಾರ್ಮಿಕತೆಗೆ ಕಾರಣ ಹಲವಿದ್ದು, ಸಮಾಜದ ಎಲ್ಲಾ ಭಾಗೀದಾರರ ಸಹಭಾಗಿತ್ವವಿದ್ದಲ್ಲಿ ಮಾತ್ರ ಈ ಸಮಸ್ಯೆಗೆ ಪರಿಹಾರ ಸಾಧ್ಯ. ಈ ನಿಟ್ಟಿನಲ್ಲಿ ಅನೇಕ ಅರಿವು ಕಾರ್ಯಕ್ರಮ, ಕಾರ್ಯಕ್ರಮಾಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಅಂಗವಿಕಲ ಇಲಾಖೆಯ ಅಧಿಕಾರಿ ಶಶಿಧರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಭಾರತಿ ಆರ್. ಬಣಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ತ್ರಿಪುಲಾಂಭ, ಮಧು ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT