ಭಾನುವಾರ, ಆಗಸ್ಟ್ 1, 2021
20 °C
ಅವಸರದಲ್ಲಿ ಮದುವೆ ಮುಗಿಸಿ ಜವಾಬ್ದಾರಿಯಿಂದ ಮುಕ್ತರಾಗಲು ಹವಣಿಸುವ ಹೆತ್ತವರುl ಹದಿಹರೆಯದ ಆಕರ್ಷಣೆಯನ್ನೇ ಪ್ರೀತಿ ಅಂದುಕೊಂಡಿರುವ ಬಾಲಕಿಯರು

ದಾವಣಗೆರೆ: ಲಾಕ್‌ಡೌನ್‌ ಬೇಲಿಯೊಳಗೂ ಬಾಲ್ಯವಿವಾಹದ ಮುಳ್ಳು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಕಾಲದಲ್ಲಿ ಬಾಲ್ಯವಿವಾಹಗಳಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಕೊರೊನಾ ಎರಡನೇ ಅಲೆ ಬಂದ ಬಳಿಕ ಏಪ್ರಿಲ್‌ 1ರಿಂದ ಇಲ್ಲಿವರೆಗೆ 21 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ನಾಲ್ಕು ಮದುವೆ ಆಗಿವೆ. 17 ಬಾಲ್ಯವಿವಾಹಗಳನ್ನು ತಡೆಗಟ್ಟಲಾಗಿದೆ. ಇದು ಮಕ್ಕಳ ರಕ್ಷಣಾ ಸಮಿತಿ, ಇಲಾಖೆಗೆ ಬಂದ ಅಧಿಕೃತ ಮಾಹಿತಿಗಳು.

ಹೆಣ್ಣುಮಕ್ಕಳನ್ನು ಆದಷ್ಟು ಬೇಗ ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಬೇಕು ಎಂಬ ಮನಃಸ್ಥಿತಿಯ ಹೆತ್ತವರು ಬಾಲ್ಯ ವಿವಾಹಕ್ಕೆ ಮುಂದಾಗುತ್ತಾರೆ. ಕೊರೊನಾ ಕಾಲದಲ್ಲಿ ಮದುವೆ ಮಾಡಿದರೆ ಯಾರಿಗೂ ಗೊತ್ತಾಗಲ್ಲ ಎಂದು ಅವರು ಅವಸರದಲ್ಲಿ ಮದುವೆ ಮುಗಿಸುತ್ತಿದ್ದಾರೆ. ಅಂಥವುಗಳಲ್ಲಿ ಕೆಲವಷ್ಟೇ ಮಕ್ಕಳ ಸಹಾಯವಾಣಿಗೆ ಇಲ್ಲವೇ ಮಕ್ಕಳ ರಕ್ಷಣಾ ಘಟಕಕ್ಕೆ ಗೊತ್ತಾಗುತ್ತದೆ. ಹಲವು ಗೊತ್ತೇ ಆಗದೇ ನಡೆದಿರುತ್ತದೆ. ಪ್ರೀತಿಸಿ ಓಡಿ ಹೋದ ಇಲ್ಲವೇ ಓಡಿ ಹೋಗಿ ಮದುವೆಯಾದ ಪ್ರಕರಣಗಳು ಮಾತ್ರ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ.

ಹರಪನಹಳ್ಳಿ ತಾಲ್ಲೂಕಿನಲ್ಲಿ ಯಾವಾಗಲೂ ಹೆಚ್ಚು ಬಾಲ್ಯವಿವಾಹಗಳು ನಡೆಯುತ್ತವೆ. ಈ ತಾಲ್ಲೂಕು ಸೇರಿಯೂ 2019ರಲ್ಲಿ 14 ಮದುವೆಗಳನ್ನು ತಡೆಯಲಾಗಿತ್ತು. ಹರಪನಹಳ್ಳಿ ತಾಲ್ಲೂಕು ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟ ಬಳಿಕ ಪ್ರಕರಣಗಳು ಬಹಳ ಕಡಿಮೆಯಾಗಿದ್ದವು. 2020ರಲ್ಲಿ ಲಾಕ್‌ಡೌನ್‌ ಆಗುತ್ತಿದ್ದಂತೆ ಮತ್ತೆ ಬಾಲ್ಯವಿವಾಹಗಳು ಹೆಚ್ಚಳವಾಗಿದ್ದವು. ಈ ವರ್ಷವೂ ಲಾಕ್‌ಡೌನ್‌ ಅವಧಿಯೇ ಬಾಲ್ಯ ವಿವಾಹ ಹೆಚ್ಚಾಗಲು ಕಾರಾಣವಾಗಿದೆ.

‘ಹದಿಯರೆಯದಲ್ಲಿ ವಿರುದ್ಧ ಲಿಂಗದ ಆಕರ್ಷಣೆ ಹೆಚ್ಚು. ಆಕರ್ಷಣೆ ಮತ್ತು ಪ್ರೀತಿಯ ವ್ಯತ್ಯಾಸ ಗೊತ್ತಾಗದ ವಯಸ್ಸದು. ಮಕ್ಕಳು ಭ್ರಮಾಲೋಕದಲ್ಲಿ ಇರುತ್ತಾರೆ. ಆಕರ್ಷಣೆಯನ್ನೇ ಪ್ರೀತಿ ಎಂದು ತಿಳಿದು ಓಡಿ ಹೋಗೋದು, ಮದುವೆಯಾಗೋದು ಜಾಸ್ತಿಯಾಗುತ್ತದೆ’ ಎಂದು ಮಕ್ಕಳ ತಜ್ಞ ಡಾ. ಗಂಗಂ ಸಿದ್ಧಾರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲಾ ಕಾಲೇಜುಗಳು ಇದ್ದಾಗ ಮಕ್ಕಳ ವಯಸ್ಸಿಗೆ ತಕ್ಕಂತೆ ಆಕರ್ಷಣೆ ಇದ್ದರೂ ಜತೆಗೆ ಇತರ ಚಟುವಟಿಕೆ ಇರುತ್ತಿದ್ದವು. ಪಾಠ, ಆಟ, ಓಡಾಟಗಳಿಗೆ ಹೆಚ್ಚು ಹೊತ್ತು ವಿನಿಯೋಗ ಆಗುತ್ತಿತ್ತು. ಕೊರೊನಾ ಬಂದು ಲಾಕ್‌ಡೌನ್‌ ಆಗಿದ್ದರಿಂದ ಮಕ್ಕಳ ಚಲನಶೀಲತೆಯೇ ನಿಂತು ಹೋಯಿತು. ಪ್ರೀತಿ, ಪ್ರೇಮ ಎಂದು ಕನಸು ಕಾಣಲು ಹೆಚ್ಚು ಸಮಯ ಸಿಕ್ಕಿತು. ಜತೆಗೆ ಎಲ್ಲರಲ್ಲಿಯೂ ಮೊಬೈಲ್‌ ಕೂಡ ಇದ್ದಿದ್ದರಿಂದ ಓಡಿ ಹೋಗುವ, ಓಡಿ ಹೋಗಿ ಮದುವೆಯಾಗುವ ಸಂಖ್ಯೆ ಹೆಚ್ಚಾಯಿತು. ಇದಲ್ಲದೇ ಶಾಲಾ ಕಾಲೇಜು ಇಲ್ಲದ ಕಾರಣ, ಮಗಳಿಗೆ ಬೇಗ ಮದುವೆ ಮಾಡಿ ಬಿಡುವ ಎಂದು ಯೋಚಿಸುವ ಹೆತ್ತವರೂ ಹೆಚ್ಚಾದರು’ ಎಂದು ಡಾನ್‌ಬಾಸ್ಕೊ ಮಕ್ಕಳ ಸಹಾಯವಾಣಿಯ ಸಂಯೋಜಕ ಟಿ.ಎಂ. ಕೋಟ್ರೇಶ್‌ ತಿಳಿಸಿದರು.

ಜಿಲ್ಲೆಯಲ್ಲಿ ಹೆತ್ತವರೇ ನಿರ್ಧರಿಸಿ ಮಾಡುವ ಬಾಲ್ಯವಿವಾಹಗಳ ಬಗ್ಗೆ ಮಾಹಿತಿ ಬಂದ ಕೂಡಲೇ ಅಧಿಕಾರಿಗಳು ಹೋಗಿ ತಡೆದಿದ್ದಾರೆ. ಆದರೆ ಓಡಿ ಹೋಗುವ ಪ್ರಕರಣಗಳಲ್ಲಿ ಬಹುತೇಕ ಮದುವೆಯಾದ ಬಳಿಕವೇ ಗೊತ್ತಾಗುತ್ತದೆ. ಓಡಿ ಹೋದ ಪ್ರಕರಣಗಳಲ್ಲಿ ಯುವಕನ ಮೇಲೆ ಪ್ರಕರಣ ದಾಖಲಿಸಲಾಗುತ್ತದೆ. ಬಾಲಕಿಗೆ ಸಖಿ ವನ್‌ಸ್ಟಾಪ್‌ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತೇವೆ. ಹೆತ್ತವರ ಜತೆಗೆ ಹೋಗಲು ತೊಂದರೆ ಇಲ್ಲಾಂದ್ರೆ ಆಕೆಯನ್ನು ಹೆತ್ತವರ ಜತೆ ಕಳುಹಿಸಿಕೊಡುತ್ತೇವೆ. ಇಲ್ಲದೇ ಇದ್ದರೆ ಬಾಲಕಿಯರ ಬಾಲಮಂದಿರಕ್ಕೆ ಕಳುಹಿಸಲಾಗುತ್ತದೆ’ ಎಂದು ಮಕ್ಕಳ ರಕ್ಷಣಾ ಘಟಕದ ಲೆಕ್ಕಾಧಿಕಾರಿ ಎಚ್‌.ಎನ್‌. ಶ್ರುತಿ, ಸಮಾಜ ಕಾರ್ಯಕರ್ತರಾದ ಹಾಲೇಶ್‌ ಕೆ.ಆರ್‌., ಕಿರಣ್, ಕ್ಷೇತ್ರ ಕಾರ್ಯಕರ್ತರಾದ ಮಮತಾ ಎಚ್‌. ವಿವರಿಸಿದರು.

ಮಕ್ಕಳಿಗೆ ಗುಣಮಟ್ಟದ ಸಮಯ ಮೀಸಲಿಡಿ

ಮಕ್ಕಳು ಮನೆಯಲ್ಲಿದ್ದಾರೆ ಎಂದರೆ ಹೆತ್ತವರು ಅವರ ಜತೆಗೆ ದೈಹಿಕವಾಗಿ ಇರುತ್ತಾರೆ. ಮಾನಸಿಕವಾಗಿ ಬೇರೆ ಬೇರೆ ಇರುತ್ತಾರೆ. ಮಕ್ಕಳು ಅವರ ಲೋಕದಲ್ಲಿ, ಹೆತ್ತವರು ತಮ್ಮ ಕೆಲಸದಲ್ಲಿ ಮುಳುಗಿರುತ್ತಾರೆ. ಹಾಗಾಗಿ ಲಾಕ್‌ಡೌನ್‌ನಂಥ ಸಂದರ್ಭಗಳಲ್ಲಿ ಹೆತ್ತವರು ಗುಣಮಟ್ಟದ ಸಮಯವನ್ನು ಮಕ್ಕಳಿಗೆ ಮೀಸಲಿಡಬೇಕು. ಆನ್‌ಲೈನ್‌ ಕ್ಲಾಸ್‌ ನಡೆಯುತ್ತಿದೆ ಅಂದರೆ ಅದು ನಿಜವೇ ಎಂಬುದು ಹೆತ್ತವರಿಗೆ ಗೊತ್ತಿರಬೇಕು. ಇಲ್ಲದೇ ಇದ್ದರೆ ಮಕ್ಕಳು ಹೆತ್ತವರ ಕೈ ತಪ್ಪಿ ಆಕರ್ಷಣೆಗೆ ಒಳಗಾಗುತ್ತಾರೆ. ಇಲ್ಲದೇ ಇದ್ದರೆ ಮಕ್ಕಳು ಖಿನ್ನತೆಗೆ ಒಳಗಾಗುತ್ತಾರೆ. ಅದಕ್ಕಾಗಿ ಮಕ್ಕಳನ್ನು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು. ಜತೆಗೆ ತಾವಿರಬೇಕು. ಮದುವೆ ಮಾಡುವುದೇ ಅಂತಿಮ ಗುರಿ ಎಂದು ಹೆತ್ತವರು ತಿಳಿದುಕೊಳ್ಳಬಾರದು.

ಬಾಲ್ಯವಿವಾಹಗಳು ನಡೆದರೆ ಆ ಮಕ್ಕಳಿಗೆ ಜವಾಬ್ದಾರಿ ಎಂದರೆ ಏನು ಎಂಬುದು ಗೊತ್ತಿರುವುದಿಲ್ಲ. ಬೇರೆಯವರ ಜತೆಗೆ ತಮ್ಮ ಸಾಮಾಜಿಕ ವರ್ತನೆ ಹೇಗಿರಬೇಕು ಎಂಬ ಅರಿವು ಇರುವುದಿಲ್ಲ. ಬದುಕಿನಲ್ಲಿ ಬರುವ ಸವಾಲುಗಳು, ಸಮಸ್ಯೆಗಳನ್ನು ಎದುರಿಸುವುದು ಹೇಗೆ ಎಂಬುದು ತಿಳಿದಿರುವುದಿಲ್ಲ. ಅದಕ್ಕಾಗಿಯೇ ಹೆತ್ತವರು ಬಾಲ್ಯ ವಿವಾಹ ಮಾಡಬಾರದು. ಮಕ್ಕಳನ್ನು ಪ್ರೀತಿಯಿಂದ ನೋಡಿಕೊಂಡು ಸಂರಕ್ಷಿಸಬೇಕು.

ಡಾ. ಗಂಗಂ ಸಿದ್ಧಾರೆಡ್ಡಿ , ಮಾನಸಿಕ ತಜ್ಞರು, ದಾವಣಗೆರೆ

***

098ಕ್ಕೆ ಕರೆಗಳು ಜಾಸ್ತಿ

ಬಾಲ್ಯವಿವಾಹದ ಬಗ್ಗೆ ನೇರವಾಗಿ ಸಿಡಬ್ಲ್ಯುಸಿಗೆ ಕರೆ ಬರುವುದು ಕಡಿಮೆ. ಚೈಲ್ಡ್‌ಲೈನ್‌ಗೆ (1098) ಹೆಚ್ಚು ಕರೆಗಳು ಬರುತ್ತವೆ. ಶಾಲೆಯಲ್ಲಿ ಮಕ್ಕಳ ತಂಡ, ಅಂಗನವಾಡಿಗಳ ಕಾರ್ಯಕರ್ತೆಯರು, ಸಂಘ ಸಂಸ್ಥೆಗಳು ಹೆಚ್ಚಾಗಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡುತ್ತಾರೆ. ಅಧಿಕಾರಿಗಳು ಹೋಗಿ ಬಾಲ್ಯವಿವಾಹ ತಡೆಯುತ್ತಾರೆ. ಬಾಲ್ಯ ವಿವಾಹ ನಡೆದಿದ್ದರೆ ಆಗ ನಮ್ಮ ಮುಂದೆ ಪ್ರಕರಣ ಬರುತ್ತದೆ. ಮಗುವಿಗೆ ಯಾವ ರೀತಿ ರಕ್ಷಣೆ ನೀಡಬೇಕು? ಕಾನೂನು ಕ್ರಮಗಳು ಏನು? ಎಂಬುದು ಸಮಿತಿಯಲ್ಲಿ ಚರ್ಚೆಯಾಗುತ್ತದೆ.

- ರಾಮಾನಾಯ್ಕ, ಅಧ್ಯಕ್ಷರು, ಮಕ್ಕಳ ಕಲ್ಯಾಣ ಸಮಿತಿ

***

ಹಲವು ಪ್ರಕರಣಗಳು

ಮಕ್ಕಳ ಸಹಾಯವಾಣಿಗೆ ಇಲ್ಲವೇ ಮಕ್ಕಳ ರಕ್ಷಣಾ ಘಟಕಕ್ಕೆ ಕರೆ ಬಂದಾಗ ಜಿಲ್ಲೆಯ ಆಯಾ ತಾಲ್ಲೂಕಿನ ಸಿಡಿಪಿಒಗಳು, ಪೊಲೀಸರು, ಪಿಡಿಒಗಳು, ಸಮಾಜ ಕಾರ್ಯಕರ್ತರು, ಕ್ಷೇತ್ರ ಕಾರ್ಯಕರ್ತರು ಭೇಟಿ ನೀಡಿದಾಗ ಕಂಡು ಬಂದ ವಿಚಾರಗಳಲ್ಲಿ ಕೆಲವು ಪ್ರಕರಣಗಳನ್ನು ಇಲ್ಲಿ ನೀಡಲಾಗಿದೆ.

ಪ್ರಕರಣ 1.

ಆತ ಕೆಎಸ್‌ಆರ್‌ಟಿಸಿ ನೌಕರ. ತಂದೆ ಹೊಸ ಮನೆ ಕಟ್ಟಿಸಿದ್ದಾರೆ. ತಾಯಿಗೆ ವಯಸ್ಸಾಗಿದ್ದರಿಂದ ಕೆಲಸ ಮಾಡಲು ಆಗುತ್ತಿಲ್ಲ. ಅದಕ್ಕಾಗಿ ಗೃಹಪ್ರವೇಶ ಮತ್ತು ಮದುವೆ ಒಂದೇ ದಿನ ಆಗಲಿ ಎಂದು ಮದುವೆ ನಿಗದಿಯಾಗುತ್ತದೆ. ಹುಡುಗಿಗೆ 18 ವರ್ಷ ತುಂಬಿಲ್ಲ ಎಂಬ ಮಾಹಿತಿ ಇಲಾಖೆಗೆ ಬರುತ್ತದೆ. ಹೋಗಿ ನೋಡಿದರೆ ಹುಡುಗಿಗೆ 16 ವರ್ಷ. ಅಚ್ಚರಿ ಅಂದರೆ ಆ ಹುಡುಗಿಗೆ ಅಕ್ಕ ಇದ್ದಾಳೆ. ಅವಳಿಗೆ 18 ವರ್ಷ ದಾಟಿದೆ. ಅವಳನ್ನು ಬಿಟ್ಟು ಎರಡನೇಯವಳನ್ನು ಮದುವೆಯಾಗಲು ಮುಂದಾಗಿದ್ದ.

ಪ್ರಕರಣ 2.

ಆಕೆ ಹೈಸ್ಕೂಲ್‌ ಓದುವ ವಿದ್ಯಾರ್ಥಿನಿ. ತನ್ನ ಗೆಳತಿಯ ಅಣ್ಣನ ಆಟೋದಲ್ಲಿ ಹೈಸ್ಕೂಲ್‌ಗೆ ಗೆಳತಿ ಜತೆಗೆ ಹೋಗುತ್ತಿದ್ದಳು. ಕೊರೊನಾ ಬಂದು ಶಾಲಾ ಕಾಲೇಜುಗಳು ಬಂದ್‌ ಆದವು. ಆದರೆ ಅಷ್ಟು ಹೊತ್ತಿಗೆ ಗೆಳತಿಯ ಅಣ್ಣ ಮತ್ತು ಈಕೆಯ ನಡುವೆ ಪ್ರೀತಿ ಚಿಗುರೊಡೆದಿದೆ. ಹಾಗಾಗಿ ಮನೆಯಲ್ಲಿ ಆನ್‌ಲೈನ್‌ ಕ್ಲಾಸ್‌ ಇದೆ ಎಂದು ಹೇಳಿ ಆ ಆಟೊದಲ್ಲಿ ತಿರುಗಾಡುವುದು ತಪ್ಪಿಲ್ಲ. ಪರಿಣಾಮ ಗರ್ಭಿಣಿಯಾಗಿ ಬಿಟ್ಟಿದ್ದಾಳೆ. ಇದು ಗೊತ್ತಾಗಿ ಹುಡುಗ ಮದುವೆಯಾಗಲು ತಯಾರಾಗಿದ್ದಾನೆ. ಆದರೆ ವಯಸ್ಸು 18 ಆಗಿರಲಿಲ್ಲ. ಹುಡುಗಿ ಮನೆಯವರು ದೂರು ನೀಡಿದ್ದಾರೆ. ಈಗ ಹುಡುಗ ಜೈಲು ಪಾಲಾಗಿದ್ದಾನೆ. ಹುಡುಗ–ಹುಡುಗಿ ಗರ್ಭ ತೆಗಿಸಲು ಒಪ್ಪಿಲ್ಲ.

ಪ್ರಕರಣ 3.

ಅಣ್ಣ ತಮ್ಮಂದಿರಿಬ್ಬರು ಒಟ್ಟಿಗೆ ಮದುವೆಯಾಗಲು ತಯಾರಾಗಿದ್ದಾರೆ. ಬೇರೆ ಬೇರೆ ಕಡೆಯ ಹುಡುಗಿಯರನ್ನು ನೋಡಿ ಮದುವೆ ನಿಶ್ಚಯ ಮಾಡಿಕೊಂಡರು. ಮದುವೆ ದಿನವೂ ನಿಗದಿಯಾಗಿ ಆ ದಿನವೂ ಬಂದುಬಿಟ್ಟಿತ್ತು. ಇನ್ನೇನು ಮದುವೆ ಮುಹೂರ್ತ ಬರಬೇಕು ಎನ್ನುವ ಹೊತ್ತಿಗೆ ಅಧಿಕಾರಿಗಳು ಹಾಜರು. ಇಬ್ಬರು ವಧುಗಳ ದಾಖಲೆ ಪರಿಶೀಲಿಸಿದರೆ ಅಣ್ಣನನ್ನು ಮದುವೆಯಾಗಬೇಕಿದ್ದ ಹುಡುಗಿಗೆ 18 ವರ್ಷ ತುಂಬಿಲ್ಲ. ತಮ್ಮನ ಹುಡುಗಿಗೆ 18 ವರ್ಷ ದಾಟಿದೆ. ತಮ್ಮನ ಮದುವೆಯಾಯಿತು. ಅಣ್ಣನ ಮದುವೆ ನಿಂತು ಹೋಯಿತು.

ಪ್ರಕರಣ 4.

ತಂದೆ ಎರಡು ವರ್ಷದ ಹಿಂದೆ, ತಾಯಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದರು. ಅವರಿಗೆ ನಾಲ್ಕು ಹೆಣ್ಣುಮಕ್ಕಳು, ಒಬ್ಬ ಪುತ್ರ. ಹಿರಿಯವಳಿಗೆ 15 ವರ್ಷ. ಅವಳನ್ನು ಪರಿಚಯದ ಯುವಕ 2 ತಿಂಗಳ ಹಿಂದೆ ಮದುವೆಯಾದ. ಎರಡನೇಯವಳಿಗೆ 13 ವರ್ಷ. ಅವಳನ್ನು ಆ ಯುವಕನ ಪಕ್ಕದ ಮನೆಯವನು ಎರಡು ವಾರದ ಹಿಂದೆ ಮದುವೆಯಾದ. ಈಗ ಇಬ್ಬರು ಯುವಕರ ಮೇಲೆ ಬಾಲ್ಯವಿವಾಹ, ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಪ್ರಕರಣ 5.

ದಾವಣಗೆರೆಯ ಯುವಕನು ತನ್ನ ಸಂಬಂಧದ 14 ವರ್ಷದ ಹುಡುಗಿಯನ್ನು ಪ್ರೀತಿಸಿ ಕರೆದುಕೊಂಡು ಬಂದು ಮದುವೆಯಾಗಿದ್ದ. ಇದು ಗೊತ್ತಾಗಿ ಅಧಿಕಾರಿಗಳು ಯುವಕನ ಮನೆಗೆ ಹೋಗಿ ವಿಚಾರಿಸಿದರೆ, ಅಮ್ಮನಿಗೆ ಹುಷಾರಿಲ್ಲ. ಅದಕ್ಕೆ ಕೆಲಸಕ್ಕೆಂದು ಸಂಬಂಧಿ ಬಾಲಕಿಯನ್ನು ಕರೆದುಕೊಂಡು ಬಂದಿದ್ದೇವೆ. ಮದುವೆ ಆಗಿಲ್ಲ ಎಂದು ಉತ್ತರಿಸಿದ್ದ. ಅದೇ ಹೊತ್ತಿಗೆ ಬಾಲಕಿ ಕೂಡ ಒಳಗೆ ತಾಳಿ, ಕಾಲುಂಗುರವನ್ನು ಬಿಚ್ಚಿಟ್ಟು, ಕೆಲಸಕ್ಕೆ ಬಂದಿರುವುದು ಹೌದು ಎಂದು ತೋರಿಸಿದ್ದಾಳೆ. ಆದರೆ ಬಾಲಕಿಯ ಮನೆಯವರನ್ನು ಸಂಪರ್ಕಿಸಿದರೆ ಆಕೆಯ ಹೆತ್ತವರ ನಿರ್ಧಾರಕ್ಕೆ ವಿರುದ್ಧವಾಗಿ ಈಕೆ ಓಡಿ ಬಂದಿರುವುದು ಗೊತ್ತಾಗಿದೆ. ‘ಅವಳು ನಮ್ಮ ಪಾಲಿಗೆ ಸತ್ತಂತೆ’ ಎಂದು ಹೆತ್ತವರು ಹೇಳಿರುವುದು ಯುವಕನ ಮನೆಯ ನಾಟಕಕ್ಕೆ ವಿರುದ್ಧವಾಗಿತ್ತು. ಇದೀಗ ಪ್ರಕರಣ ಮಕ್ಕಳ ರಕ್ಷಣಾ ಘಟಕದ ಮುಂದೆ ವಿಚಾರಣೆ ನಡೆಯುತ್ತಿದೆ.

ಗರ್ಭಿಣಿಯಾದಾಗ ಬಿಟ್ಟು ಹೋದ ಪ್ರಿಯತಮ

ತಂದೆ ಇಲ್ಲದ ತಾಯಿ ಜತೆಗೆ ಇದ್ದ ಬಾಲಕಿ ಮತ್ತು ಸಂಬಂಧಿ ಯುವಕನ ಜತೆಗೆ ಪ್ರೀತಿ ಮೊಳಕೆಯೊಡೆದಿತ್ತು. ಹಾಗಾಗಿ ಒಂದು ದಿನ ಇಬ್ಬರು ಪರಾರಿಯಾದರು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಬಾಡಿಗೆ ಕೊಠಡಿಯಲ್ಲಿದ್ದರು. ಬಳಿಕ ಉತ್ತರ ಕನ್ನಡ ಶಿರಸಿ ತಾಲ್ಲೂಕಿನಲ್ಲಿ ಬಾಡಿಗೆ ಕೊಠಡಿಯಲ್ಲಿದ್ದರು. ಯುವಕ ಕೂಲಿ ಕೆಲಸ ಮಾಡುತ್ತಿದ್ದ. ಮೇ 19ರಂದು ಹುಡುಗಿ ವಾಂತಿ ಮಾಡಿಕೊಂಡಳು. ಇದನ್ನು ಕಂಡ ಯುವಕ ಆಕೆಯನ್ನು ಒಂದು ಬಸ್‌ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಅಲ್ಲಿಂದ ಹೇಗೋ ತಾಯಿ ಮನೆ ಸೇರಿದ್ದಾಳೆ. ನಾಪತ್ತೆಯಾಗಿದ್ದ ಮಗಳ ಬಗ್ಗೆ ತಾಯಿಗೆ ಸಿಟ್ಟು ಇದ್ದಿದ್ದರಿಂದ ಆಕೆಯೂ ಹೊಡೆಯೋದು ಬಡಿಯೋದು ಮಾಡಿದ್ದಾಳೆ. ಹುಡುಗಿ ಬೇರೆಯವರ ಸಹಾಯದಿಂದ ಈ ವಿಚಾರವನ್ನು ಸಹಾಯವಾಣಿ ಮೂಲಕ ತಿಳಿಸಿದ್ದಾಳೆ. ಈಗ ಆಕೆ ಸಖಿ ವನ್‌ಸ್ಟಾಪ್‌ ಸೆಂಟರ್‌ನಲ್ಲಿದ್ದಾಳೆ.

ತಡೆದ ಬಾಲ್ಯವಿವಾಹ

14 - 2019ರ ಏಪ್ರಿಲ್‌ ಮತ್ತು ಮೇನಲ್ಲಿ ತಡೆದ ಬಾಲ್ಯವಿವಾಹಗಳು

20- 2020ರ ಏಪ್ರಿಲ್‌ ಮತ್ತು ಮೇಯಲ್ಲಿ ತಡೆದ ಬಾಲ್ಯವಿವಾಹಗಳು

17- 2021ರ ಏಪ್ರಿಲ್‌ ಮತ್ತು ಮೇಯಲ್ಲಿ ತಡೆದ ಬಾಲ್ಯವಿವಾಹಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು