ಮಂಗಳವಾರ, ಏಪ್ರಿಲ್ 13, 2021
23 °C
ಕಾಯಕ ಶರಣರ ಜಯಂತಿ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಎಚ್‌. ವಿಶ್ವನಾಥ್‌

ವಚನ ಸಾಹಿತ್ಯದಲ್ಲಿ ಅರಿವಿನ ಅನಾವರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವಚನಗಳು ಸಾಹಿತ್ಯ ದರ್ಶನದ ಮೂಲಕ ಕನ್ನಡವನ್ನು ಶ್ರೀಮಂತಗೊಳಿಸಿವೆ. ಅವುಗಳಲ್ಲಿ ಅರಿವಿನ ಅನಾವರಣವಿದೆ. ಸತ್ಯದ ಸಂದೇಶವಿದೆ ಎಂದು ಉಪನ್ಯಾಸಕ ಡಾ.ಎಚ್. ವಿಶ್ವನಾಥ್ ತಿಳಿಸಿದರು.

ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕಾಯಕ ಶರಣರ ಜಯಂತಿಯ ಪ್ರಯುಕ್ತ ದಲಿತ ಶರಣಕಾರರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

‘ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್ ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಸೇರಿ ಅನೇಕ ಶರಣರು ತಳಸಮುದಾಯವನ್ನು ಮೇಲೆತ್ತುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ. ಬಸವಣ್ಣ ತಳಸಮುದಾಯಕ್ಕೆ ನೀಡಿದ ಬಹು ಮುಖ್ಯವಾದ ಕೊಡುಗೆಯೆಂದರೆ ಸಂಸ್ಕಾರ’ ಎಂದು ತಿಳಿಸಿದರು.

ಶರಣರು ಭಕ್ತಿಯ ಅನಾವರಣ ಮಾಡುತ್ತಾ ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಕ್ರಾಂತಿಯನ್ನು ಉಂಟು ಮಾಡಿದರು. ಅನೇಕ ಅಂಕು-ಡೊಂಕುಗಳನ್ನು ತಿದ್ದಿದ್ದರು. ರಾಜಾಶ್ರಯದಲ್ಲಿ ಬಂಧಿಯಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರ ಬಳಿ ತಂದರು ಎಂದು ವಿಶ್ಲೇಷಿಸಿದರು.

‘ಬಸವಣ್ಣ ತನ್ನ ಅಕ್ಕ ನಾಗಮ್ಮರಿಗೆ ಉಪನಯನ ಸಂಸ್ಕಾರ ಇಲ್ಲವೆಂದಾಗ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು ನಿರಾಕರಿಸಿದ ಸನ್ನಿವೇಶ. ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸರ ಕುಟುಂಬ ಅಂತರಜಾತಿ ವಿವಾಹ ಮಾಡಿದ ಘಟನೆ ಇವೆರಡು ಲಿಂಗ, ಜಾತಿ ತಾರತಮ್ಯ ತೊಡೆದು ಹಾಕಲು ಮಾಡಿದ ಕ್ರಾಂತಿ’ ಎಂದು ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ‘12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ನಾವು ವಚನಗಳನ್ನು ಓದಲು ಸೀಮಿತಗೊಳಿಸದೇ ಅನುಸರಣೆ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಕೌಸರ್ ಬಾನು, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಡಿಎಸ್4 ಕರ್ನಾಟಕ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಕಾರ್ಯಾಧ್ಯಕ್ಷ ಸಂತೋಷ್ ಎಂ. ನೋಟದವರ್, ಕರ್ನಾಟಕ ದಲಿತ ಸಂಘಟನೆಯ ಒಕ್ಕೂಟದ ಜಿಲ್ಲಾಧ್ಯಕ್ಷ ಸಿ. ಬಸವರಾಜ್, ದಲಿತ ಮುಖಂಡರಾದ ಚಿದಾನಂದಪ್ಪ, ರವಿಬಾಬು, ಜಿ. ರಾಮಚಂದ್ರಯ್ಯ, ಎಚ್.ಆರ್. ರೇವಣ್ಣ, ಹನುಮಂತಪ್ಪ ಬಿ., ದೀಪೂ ಆರ್. ಹೆಗ್ಗೆರೆ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಆಲೂರು ಲಿಂಗರಾಜ್, ಮಂಜುನಾಥ್, ಮಲ್ಲೇಶ್, ಮಂಗಳವಾದ್ಯ ಕಲಾವಿದ ಸಂಘದ ಜಿಲ್ಲಾಧ್ಯಕ್ಷರಾದ ಹಾಲೇಶ್ ಅವರೂ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.