ಗುರುವಾರ , ಡಿಸೆಂಬರ್ 5, 2019
24 °C
ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸಹಾನುಭೂತಿಯಲ್ಲ, ಸಮಾನಾವಕಾಶ ನೀಡಲು ಬದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮಗೆ ನಿಮ್ಮ ಸಹಾನುಭೂತಿ ಬೇಡ, ಎಲ್ಲರಂತೆ ಸಮಾನಾವಕಾಶ ನೀಡಿ ಎಂದು ಎಲ್ಲ ಅಂಗ ವಿಕಲರು ಕೇಳುವ ಒಂದೇ ಬೇಡಿಕೆ. ನಿಮ್ಮ ಬೇಡಿಕೆ ಈಡೇರಿಸಲು ಬದ್ಧ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಇನ್ನಿತರ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರ ರೇಣುಕ ಮಂದಿರದಲ್ಲಿ ನಡೆದ ವಿಶ್ವ ಅಂಗವಿಕಲರ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಕುತ್ತಿಗೆ ನೆಟ್ಟಗೆ ಮಾಡಲಾಗದೇ ಜೀವನಪೂರ್ತಿ ವೀಲ್‌ಚಯರ್‌ನಲ್ಲಿ ಕಳೆದ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌, ಒಂದೇ ಕಾಲಿದ್ದರೂ ಮೌಂಟ್‌ ಎವರೆಸ್ಟ್‌ ಏರಿದವರೆಲ್ಲ ನಮಗೆ ಸ್ಫೂರ್ತಿಯಾಗಬೇಕು. ಅಂಗವಿಕಲರು ಸ್ವಾಭಿಮಾನದಿಂದ, ಧೈರ್ಯದಿಂದ ಬದುಕಬೇಕು. ನಿಮಗಾಗಿ ಇರುವ ಕಲ್ಯಾಣ ಕಾರ್ಯಕ್ರಮಗಳನ್ನು ಅತ್ಯಂತ ಕಳಕಳಿಯಿಂದ ಅನುಷ್ಠಾನಗೊಳಿಸಲಾಗುವುದು’ ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಯಶೋದಮ್ಮ ಮರುಳಪ್ಪ, ‘ಅಂಗವಿಕಲರು ಆತ್ಮವಿಶ್ವಾಸದಿಂದ ಬದುಕಲು ಪ್ರೋತ್ಸಾಹ ನೀಡಬೇಕು. ಉದ್ಯೋಗದಲ್ಲಿ ಅವರಿಗೆ ಮೀಸಲಾತಿ ಕೊಡಬೇಕು’ ಎಂದು ಆಗ್ರಹಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಭು ಎನ್. ಬಡಿಗೇರ್ ಮಾತನಾಡಿ, ‘ಜಗತ್ತಿನ ಅದ್ಭುತ ಪ್ರತಿಭೆ ಅಂಗವಿಕಲರಲ್ಲಿ ಅಡಗಿದೆ. ಅವರು ಪ್ರತಿಭೆಗಳ ನಿಧಿ. ಯಾವುದೋ ಒಂದು ಅಂಗ ತೊಂದರೆಗೆ ಒಳಗಾಗಿರಬಹುದು. ಅದನ್ನು ಮೀರಿ ಅವರು ಪ್ರತಿಭೆಗಳನ್ನು ಪ್ರದರ್ಶಿಸುತ್ತಿದ್ದಾರೆ. ಕೀಳರಿಮೆಯನ್ನು ಬಿಟ್ಟು, ನಾವು ಯಾರಿಗೂ ಕಡಿಮೆ ಇಲ್ಲ ಎಂದು ಚಿಂತನೆ ಮಾಡತೊಡಗಿದರೆ ಉತ್ತಮ ಸ್ಥಾನಕ್ಕೆ ಏರಲು ಸಾಧ್ಯ’ ಎಂದು ತಿಳಿಸಿದರು.

ಸರಿಗಮಪ ಸೀಸನ್‌ 16ರ ಸ್ಪರ್ಧಿ ಹೆಣ್ಣುಮಕ್ಕಳ ಅಂಧರ ಶಾಲೆಯ ಸಂಗೀತ ಮಾತನಾಡಿ, ‘ಶಾಲೆಯಲ್ಲಿ ಸಂಗೀತವನ್ನು ಕಲಿಸಿದ್ದರಿಂದ  ಸರಿಗಮಪ ಜೂನಿಯರ್ಸ್ ಸೀಸನ್ 14ರ ಆಡಿಷನ್‌ನಲ್ಲಿ ಭಾಗಿಯಾಗಿದ್ದೆ. ಅಲ್ಲಿ ಆಯ್ಕೆ ಆಗಲಿಲ್ಲ. ಆದರೆ ಸೀಸನ್ 16ರಲ್ಲಿ ಆಯ್ಕೆಯಾಗಿ ಅಂತಿಮ ಹಂತದವರೆಗೆ ತಲುಪಿದೆ. ಅಲ್ಲಿನ ಶಿಕ್ಷಕರು ಒಂದು ಹಾಡಿಗೆ ನಾಲ್ಕು ದಿನ ಅಭ್ಯಾಸ ಮಾಡಿಸುತ್ತಿದ್ದರು’ ಎಂದು ವಿವರಿಸಿದರು.

ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಅಧಿಕಾರಿ ಜಿ.ಎಸ್. ಶಶಿಧರ್, ‘ಹಿಂದೆ 7 ತರಹದ ಅಂಗವಿಕಲತೆಯನ್ನು ಗುರುತಿಸಲಾಗಿತ್ತು. 2016ರ ಕಾಯ್ದೆಯಲ್ಲಿ 21 ಅಂಗವೈಕಲ್ಯವನ್ನು ಗುರುತಿಸಲಾಗಿದೆ’ ಎಂದರು.

ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ವಿತರಿಸಲಾಗುತ್ತಿದೆ. ಹಳೇ ಕಾರ್ಡ್‌ ಮುಂದೆ ರದ್ದಾಗಲಿದೆ. ಹಾಗಾಗಿ ಯುಡಿಐಡಿ ಕಾರ್ಡ್‌ ಎಲ್ಲರೂ ಪಡೆಯಬೇಕು. 14 ಸಂಖ್ಯೆಗಳುಲ್ಲ ಈ ಸ್ಮಾರ್ಟ್‌ ಕಾರ್ಡ್‌ನಲ್ಲಿ ಎಲ್ಲ ವಿವರಗಳಿರುತ್ತವೆ ಎಂದು ತಿಳಿಸಿದರು.

ಸಾಧಕರಾದ ಸುನಿಲ್ ಕುಮಾರ್, ಸಂಗೀತ, ಜಿ.ಟಿ.ಕಿರಣ್, ಬಿ.ಎನ್. ಮಂಜುಳಾ ಮುತ್ತೇಶ್ ಮುಂತಾದವರನ್ನು ಸನ್ಮಾನಿಸಲಾಯಿತು. ಅಂಗವಿಕಲರಿಗಾಗಿ ಕೆಲಸ ಮಾಡುತ್ತಿರುವ ಶಿಕ್ಷಕರು ಮತ್ತು ಸಂಘ ಸಂಸ್ಥೆಗಳ ದುರುಗೇಶ್, ಜಯಾಬಾಯಿ, ಬಸವರಾಜ್, ಮಾರುತಿ, ಜಿಲ್ಲಾ ಅಂಗವಿಕಲ ಅಧಿಕಾರಿ ಜಿ.ಎಸ್.ಶಶಿಧರ್ ಅವರನ್ನು ಸನ್ಮಾನಿಸಲಾಯಿತು.

ಚನ್ನಗಿರಿ ಎಂ.ಆರ್.ಡಬ್ಲ್ಯು ಸುಬ್ರಹ್ಮಣ್ಯ ಸ್ವಾಗತಿಸಿದರು. ದಾವಣಗೆರೆ ಎಂ.ಆರ್.ಡಬ್ಲ್ಯು ಚನ್ನಪ್ಪ ವಂದಿಸಿದರು. ತಾಲ್ಲೂಕು ಪಂಚಾಯಿತಿ  ಅಧ್ಯಕ್ಷೆ ಮಮತಾ ಮಲ್ಲೇಶಪ್ಪ, ಜಿಲ್ಲಾ ಅಂಗವಿಕಲರ ಶ್ರೇಯೋಭಿವೃದ್ಧಿ ಸಂಘದ ವೀರಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವಿಜಯಕುಮಾರ್, ಆಶಾಕಿರಣ ಟ್ರಸ್ಟ್‌ನ ಅಧ್ಯಕ್ಷ ರಮಣ ರಾವ್, ಸಿಆರ್‌ಸಿ ನಿರ್ದೇಶಕ ಜ್ಞಾನವೇಲ್, ಪಾಲಿಕೆಯ ಗದಿಗೇಶ್, ಸಿಡಿಪಿಒ ಧರಣೇಂದ್ರ, ಕಾನೂನು ಸಲಹೆಗಾರರಾದ ಪವಿತ್ರ ಇದ್ದರು.

ಅತಿಥಿಗಳಿಲ್ಲದೇ ಜಿಲ್ಲಾಧಿಕಾರಿ ಭಾಷಣ

ಕಾರ್ಯಕ್ರಮ ಬೆಳಿಗ್ಗೆ 10.30ಕ್ಕೆ ನಿಗದಿಯಾಗಿತ್ತು. ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಂದಿದ್ದರು. ಬೇರೆ ಅತಿಥಿಗಳು ಬಂದಿರಲಿಲ್ಲ. ವೇದಿಕೆಯಲ್ಲಿ ಖಾಲಿ ಕುರ್ಚಿಗಳೇ ತುಂಬಿದ್ದರೂ ಸಭಾಂಗಣ ಖಾಲಿ ಇರಲಿಲ್ಲ. ಹಾಗಾಗಿ ಅತಿಥಿಗಳನ್ನು ಕಾಯದೇ ಜಿಲ್ಲಾಧಿಕಾರಿ ಭಾಷಣ ಮಾಡಿ ತೆರಳಿದರು.

ಸಭಾ ಕಾರ್ಯಕ್ರಮ ಮಾತ್ರ ಒಂದೂವರೆ ಗಂಟೆ ತಡವಾಗಿ ಮಧ್ಯಾಹ್ನ 12ಕ್ಕೆ ಆರಂಭವಾಯಿತು. ಆಹ್ವಾನ ಪತ್ರಿಕೆಯಲ್ಲಿ 28 ಹೆಸರುಗಳಲ್ಲಿದ್ದರೂ ನಾಲ್ಕು ಮಂದಿಯಷ್ಟೇ ಬಂದಿದ್ದರು. ಆಹ್ವಾನ ಪತ್ರಿಕೆಯಲ್ಲಿ ಇಲ್ಲದ ಕೆಲವರನ್ನು ವೇದಿಕೆಗೆ ಕರೆದು ಕಾರ್ಯಕ್ರಮ ನಡೆಸಲಾಯಿತು.

ಅಂಕಿ ಅಂಶ

23,900

ಜಿಲ್ಲೆಯಲ್ಲಿರುವ ಅಂಗವಿಕಲರು

12,390

ಆನ್‌ಲೈನ್‌ ಮೂಲಕ ಯುಡಿಐಡಿಗೆ ಅರ್ಜಿ ಸಲ್ಲಿಸಿದವರು.

2,900

ಯುಡಿಐಡಿ ಸ್ಮಾರ್ಟ್‌ಕಾರ್ಡ್‌ ಪಡೆದಿರುವವರು

ಪ್ರತಿಕ್ರಿಯಿಸಿ (+)