ಬುಧವಾರ, ಮೇ 12, 2021
24 °C
ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಹೆಗ್ಗರೆ ರಂಗಪ್ಪ ವಿಶ್ಲೇಷಣೆ

ಮತ ಗಟ್ಟಿ ಮಾಡಲು ಕೋಮುಗಲಭೆ: ಹೆಗ್ಗರೆ ರಂಗಪ್ಪ ವಿಶ್ಲೇಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಚುನಾವಣಾ ರಾಜಕೀಯದಲ್ಲಿ ಮತಗಳನ್ನು ಗಟ್ಟಿಗೊಳಿಸಲು ಹಿಂದೂ ಮುಸ್ಲಿಂ ಗಲಭೆಗಳನ್ನು ನಡೆಸಲಾಗುತ್ತಿದೆ ಎಂದು ಡಿಎಸ್‌4 ಸಂಚಾಲಕ ಹೆಗ್ಗೆರೆ ರಂಗಪ್ಪ ಬೇಸರ ವ್ಯಕ್ತಪಡಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಗುರುವಾರ ಎಸ್‌ಎಸ್‌ಎಂ ನಗರದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದೂ, ಮುಸ್ಲಿಮರು ಸೌಹಾರ್ದದಿಂದ ಇದ್ದರೆ ಮತಗಳಾಗಿ ಪರಿವರ್ತನೆಗೊಳ್ಳುವುದಿಲ್ಲ. ಅದಕ್ಕೆ ಮುಸ್ಲಿಮರನ್ನು ತೋರಿಸಿ ಹಿಂದೂಗಳನ್ನು ಒಂದೇ ಪಕ್ಷಕ್ಕೆ ಮತ ಹಾಕಿಸುವ ಹುನ್ನಾರ ಎಲ್ಲ ಕೋಮುಗಲಭೆಗಳ ಹಿಂದೆ ಇದೆ ಎಂದು ತಿಳಿಸಿದರು.

ಅಂಬೇಡ್ಕರ್‌ ಅಂದರೆ ಅವರ ಎಲ್ಲ ಸಾಧನೆಗಳು ಗೌಣವಾಗಿ ಮೀಸಲಾತಿಯೊಂದರ ಬಗ್ಗೆಯೇ ಮಾತನಾಡುತ್ತಾರೆ. ಎಸ್‌ಸಿ ಸಮುದಾಯದ ನಾಯಕ ಎಂದು ಬಿಂಬಿಸಲಾಗುತ್ತದೆ. ಹಿಂದುಳಿದ ವರ್ಗದ ನೂರಾರು ಜಾತಿಗಳಿಗೆ ಮೀಸಲಾತಿ ಇದೆ. ಅಲ್ಲದೇ ಈಗ ಪಂಚಮಸಾಲಿ ಸಹಿತ ವಿವಿಧ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಹೀಗಿರುವಾಗ ಎಸ್‌ಸಿ–ಎಸ್‌ಟಿಗೆ ಮಾತ್ರ ಮೀಸಲಾತಿ ಎನ್ನುವುದು ಸರಿಯಲ್ಲ ಎಂದು ತಿಳಿಸಿದರು.

ಹಿರಿಯ ವಕೀಲ ಅನೀಸ್‌ ಪಾಷ ಮಾತನಾಡಿ, ‘ಅಂಬೇಡ್ಕರ್‌ ಬರೆದ ಸಂವಿಧಾನಕ್ಕೆ ವಿರುದ್ಧವಾಗಿ ಆಡಳಿತ ನಡೆಸುವವರು ನಡೆದುಕೊಳ್ಳುತ್ತಿದ್ದಾರೆ. ಯಾವುದೇ ಕಾನೂನು ಜಾರಿ ಮಾಡುವ ಮೊದಲು ಸಾರ್ವಜನಿಕವಾಗಿ ಚರ್ಚೆ, ಸಂವಾದ ಮಾಡಿ ಸಾಧಕ, ಬಾಧಕಗಳನ್ನು ತಿಳಿಯಬೇಕು. ಸಂಸತ್ತಿನಲ್ಲಿ ಪಾಸ್ ಮಾಡಬೇಕು. ಆದರೆ ಈಗ ಬಂಡವಾಳಶಾಹಿಗಳ ಪರವಾಗಿ ಕಾನೂನು ತರಲು ಮೊದಲು ನಿರ್ಧರಿಸುತ್ತಾರೆ. ಬಳಿಕ ಯಾವುದೇ ಚರ್ಚೆಗೆ ಆಸ್ಪದ ನೀಡದೇ ಸಂವಿಧಾನ ಬಾಹಿರವಾಗಿ ಕಾನೂನು ತರುತ್ತಿದ್ದಾರೆ. ಈಚೆಗೆ ತಂದ ಕೃಷಿ ಕಾಯ್ದೆಗಳು ಕೂಡ ಅದೇ ರೀತಿಯವು’ ಎಂದು ವಿಶ್ಲೇಷಿಸಿದರು.

ಕೇಂದ್ರ ಸರ್ಕಾರದ ಕಾನೂನು ರೈತರಿಗಷ್ಟೇ ಅಲ್ಲ. ಎಲ್ಲರಿಗೂ ಸಂಕಷ್ಟ ತರಲಿದೆ. ಇಲ್ಲಿವರೆಗೆ ಅಗತ್ಯ ಆಹಾರ ಪದಾರ್ಥಗಳನ್ನು ಗೋದಾಮಿನಲ್ಲಿ ಕೂಡಿಡುವ ಹಾಗಿರಲಿಲ್ಲ. ಇನ್ನು ಮುಂದೆ ಅದಕ್ಕೂ ಅವಕಾಶ ನೀಡಲಾಗಿದೆ. ಹಾಗಾಗಿ ದುಡ್ಡಿದ್ದವರು ಕೂಡಿಟ್ಟು, ಬೇಡಿಕೆ ಸೃಷ್ಟಿಸಿ ದುಬಾರಿ ದರಕ್ಕೆ ಮಾರಾಟ ಮಾಡಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲ ದಾರ್ಶನಿಕರು ಹೇಗೆ ಬದುಕಬೇಕು ಎಂದು ಬದುಕಿ, ಬರೆದು ತೋರಿಸಿದರು. ಆದರೆ ಅಂಬೇಡ್ಕರ್‌ ಅದನ್ನು ಸಂವಿಧಾನದಲ್ಲಿಯೇ ನೀಡಿ ಕಾನೂನನ್ನಾಗಿ ಮಾಡಿ ಮಹಾದಾರ್ಶನಿಕ ಎಂದು ಬಣ್ಣಿಸಿದರು.

ಲಿಂಗತ್ವ ಅಲ್ಪಸಂಖ್ಯಾತರ ಪರ ಹೋರಾಟಗಾರ್ತಿ ಚೈತ್ರ, ‘ಮನೆಯಿಂದ ಹೊರಬಿದ್ದ ಮೇಲೆ ಸಂಘಟನೆ ಕಟ್ಟಿಕೊಂಡು ಹೋರಾಟ ರೂಪಿಸತೊಡಗಿದಾಗ ಅಂಬೇಡ್ಕರ್‌ ಮಹತ್ವ ಅರ್ಥವಾಯಿತು. ಎಲ್ಲರಿಗೂ ಬದುಕುವ ಹಕ್ಕನ್ನು ನೀಡಿದವರು ಅಂಬೇಡ್ಕರ್‌’ ಎಂದು ತಿಳಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಅಧ್ಯಕ್ಷೆ ಜಬೀನಾ ಖಾನಂ ಅಧ್ಯಕ್ಷತೆ ವಹಿಸಿ, ‘ದೇವರಲ್ಲ ಕಣ್ಣಲ್ಲಿ ಅಲ್ಲ ಮನುಷ್ಯರ ಕಣ್ಣಲ್ಲಿ ಎಲ್ಲರೂ ಸಮಾನರಾಗಬೇಕು. ಎಲ್ಲರಿಗೂ ಸಮಾನ ಗೌರವ ಸಿಗಬೇಕು ಎಂದು ಹೇಳಿದವರು ಅಂಬೇಡ್ಕರ್‌. ಹೆಣ್ಣಿಗೂ ಸ್ವಾತಂತ್ರ್ಯ ಮತ್ತು ಸಮಾನತೆ ಸಿಗಬೇಕು ಎಂದು ಸಂವಿಧಾನದಲ್ಲಿಯೇ ತಿಳಿಸಿದವರು ಅವರು’ ಎಂದು ಹೇಳಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಕಾರ್ಯಕ್ರಮ ನಿರೂಪಿಸಿದರು. ಬಾಲಕೃಷ್ಣ, ದಿಲ್‌ಶಾದ್‌ ಅವರೂ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು