ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಗಾರಿ ಪ್ರಾರಂಭವಾಗಿ 12 ವರ್ಷವಾದರೂ ಅಪೂರ್ಣಗೊಂಡಿರುವ ದಾಗಿನಕಟ್ಟೆ ಭವನ

12 ವರ್ಷಗಳಿಂದ ಕುಂಟುತ್ತಲೇ ಸಾಗುತ್ತಿದೆ ಶ್ರೀ ರಂಗನಾಥಸ್ವಾಮಿ ಸಮುದಾಯ ಭವನದ ಕಾಮಗಾರಿ
Last Updated 16 ಡಿಸೆಂಬರ್ 2022, 6:27 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಇತಿಹಾಸ ಪ್ರಸಿದ್ಧ ದಾಗಿನಕಟ್ಟೆ ರಂಗನಾಥ ಸ್ವಾಮಿ ದೇಗುಲದ ಆವರಣದಲ್ಲಿ ನಿರ್ಮಿಸಲಾಗಿರುವ ಸಮುದಾಯ ಭವನ ಈವರೆಗೆ ಪೂರ್ಣಗೊಳ್ಳದೇ ಸರ್ಕಾರ ಹಾಗೂ ಸಾರ್ವಜನಿಕರ ಸಹಾಯಧನಕ್ಕಾಗಿ ಎದುರು ನೋಡುತ್ತಿದೆ.

ಸಾರ್ವಜನಿಕರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿ ಎಂಬ ಉದ್ದೇಶದಿಂದ 12 ವರ್ಷಗಳ ಹಿಂದೆ ಒಂದೂವರೆ ಕೋಟಿ ರೂಪಾಯಿ ವೆಚ್ಚದ ಬೃಹತ್‌ ಸಮುದಾಯ ಭವನದ ನಿರ್ಮಾಣಕ್ಕೆ ತೊಡಗಿದ್ದರು. ಆಗಿನ ಮಾಯಕೊಂಡ ಶಾಸಕರಾಗಿದ್ದ ಎಂ.ಬಸವರಾಜ ನಾಯ್ಕ ಅವರು ಸಮುದಾಯ ಭವನಕ್ಕೆ ₹ 40 ಲಕ್ಷ ಅನುದಾನ ನೀಡಿದ್ದರು. ಸಂಸದ ಜಿ.ಎಂ.ಸಿದ್ದೇಶ್ವರ ಅವರು ₹ 5 ಲಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ತೇಜಸ್ವಿ ಪಟೇಲ್‌ ಅವರು ₹ 12 ಲಕ್ಷ ಅನುದಾನ ನೀಡಿದ್ದರು.

‘ಉಳಿದ ಹಣವನ್ನು ಗ್ರಾಮಸ್ಥರಿಂದ ಸಂಗ್ರಹಿಸಿ ಈವರೆಗೆ ₹ 1 ಕೋಟಿ ವೆಚ್ಚದಲ್ಲಿ ಸಮುದಾಯ ಭವನದ ಕೆಳ ಅಂತಸ್ತನ್ನು ನಿರ್ಮಿಸಲಾಗಿದೆ. ಊಟದ ಕೊಠಡಿ, 12 ಕೋಣೆಗಳು, ಸ್ನಾನ ಗೃಹ ಮತ್ತು ಶೌಚಾಲಯ, ವಿದ್ಯುತ್‌ ಸಂಪರ್ಕ, ನೀರು ಸರಬರಾಜು, ಕಾಂಪೌಂಡ್‌ ಸೇರಿದಂತೆ ಸುಮಾರು ₹ 60 ಲಕ್ಷ ವೆಚ್ಚದ ಕಾಮಗಾರಿ ಬಾಕಿ ಇದೆ’ ಎಂದು ಸಮುದಾಯ ಭವನದ ಅಧ್ಯಕ್ಷ ಬಿ.ಮಹೇಶ್ವರಪ್ಪ ಹೇಳಿದರು.

ಬಸವಾಪಟ್ಟಣದ ಹಾಲಸ್ವಾಮಿ ಗವಿಮಠದ ವತಿಯಿಂದ 20 ವರ್ಷಗಳ ಹಿಂದೆ ನಿರ್ಮಿಸಿರುವ ಹಾಲಶಂಕರ ಸಮುದಾಯ ಭವನದಿಂದ ಬಸವಾಪಟ್ಟಣ ಮತ್ತು ಸುತ್ತಲಿನ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲವಾಗಿದೆ. ಕೈಗೆಟುಕುವ ದರದಲ್ಲಿ ಮದುವೆಯ ಮಂಟಪ, ಊಟ ಮತ್ತು ವಸತಿಗೆ ವ್ಯವಸ್ಥೆ ಮಾಡಲಾಗಿದ್ದು, ನಿಸರ್ಗದ ಮಡಿಲಲ್ಲಿರುವ ಈ ಭವನ ಜನರಿಗೆ ಅನುಕೂಲ ಒದಗಿಸಿದೆ.

‘ಇದೇ ಆವರಣದಲ್ಲಿ ಐದು ವರ್ಷಗಳ ಹಿಂದೆ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ಆರಂಭಗೊಂಡಿದ್ದ ₹ 10 ಕೋಟಿ ವೆಚ್ಚದ ಹೈಟೆಕ್‌ ಕಲ್ಯಾಣ ಮಂದಿರದ ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದ್ದು, ವರ್ಷದೊಳಗೆ ಸಾರ್ವಜನಿಕರ ಸೇವೆಗೆ ಸಿದ್ಧವಾಗಲಿದೆ. ನಗರ ಪ್ರದೇಶಗಳ ಕಲ್ಯಾಣ ಮಂಟಪಗಳಲ್ಲಿರುವ ಎಲ್ಲ ಆಧುನಿಕ ಸೌಲಭ್ಯಗಳನ್ನು ಇಲ್ಲಿ ಒದಗಿಸಲು ಸಿದ್ಧತೆ ನಡೆಸಿದ್ದೇವೆ’ ಎನ್ನುತ್ತಾರೆ ಮಠದ ಧರ್ಮದರ್ಶಿ ಕೆ.ಎಂ.ವೀರಯ್ಯ.

‘ಹಿಂದೆ ಮನೆಗಳ ಮುಂದೆ ಅಥವಾ ದೇಗುಲಗಳ ಮುಂದೆ ಮದುವೆ ಮತ್ತು ಇತರ ಶುಭ ಕಾರ್ಯಗಳನ್ನು ನಡೆಸಲಾಗುತ್ತಿತ್ತು. ಈಗ ಬಹುತೇಕರು ಆಧುನಿಕ ಸೌಲಭ್ಯ ಒಳಗೊಂಡ ಸಮುದಾಯ ಭನಗಳನ್ನು ಬಯಸುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸುಸಜ್ಜಿತ ಸಮುದಾಯ ಭವನಗಳ ಕೊರತೆ ಇದೆ. ಈ ಕೊರತೆ ನೀಗಿಸಿದರೆ ಶುಭ ಕಾರ್ಯ ನಡೆಸುವವರಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಸಾಹಿತಿ ನಿಲೋಗಲ್‌ನ ಜಿ.ರಂಗನಗೌಡ.

***

ದಾಗಿನಕಟ್ಟೆ ಸಮುದಾಯ ಭವನ ಪೂರ್ಣಗೊಳಿಸಲು ಜನಪ್ರತಿನಿಧಿಗಳು ಇನ್ನಷ್ಟು ಅನುದಾನವನ್ನು ಮಂಜೂರು ಮಾಡಿಸಬೇಕು. ಪೂರ್ಣ ಪ್ರಮಾಣದಲ್ಲಿ ಸಮುದಾಯ ಭವನದ ನಿರ್ಮಾಣಕ್ಕೆ ಸಹಾಯ ಮಾಡಬೇಕು.

– ಜಿ.ಬಿ.ಜಗನ್ನಾಥ್‌, ಎಪಿಎಂಸಿ ಮಾಜಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT