ಶನಿವಾರ, ಏಪ್ರಿಲ್ 1, 2023
28 °C
ಎಐಸಿಸಿ ಜಿಲ್ಲಾ ವೀಕ್ಷಕಿ ಪ್ರಣಿತಿ ಶಿಂಧೆ ಎಚ್ಚರಿಕೆ

ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ದೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಪಕ್ಷದಿಂದ ಯಾರಿಗೆ ಟಿಕೆಟ್‌ ಕೊಟ್ಟರೂ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಎಐಸಿಸಿ ಜಿಲ್ಲಾ ವೀಕ್ಷಕಿ ಪ್ರಣಿತಿ ಶಿಂಧೆ ಹೇಳಿದರು.

ನಗರದಲ್ಲಿ ಸೋಮವಾರ ನಡೆದ ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಡುವ ಮೂಲಕ ಪಕ್ಷ ಅಧಿಕಾರಕ್ಕೆ ಬರಲು ಕೈಜೋಡಿಸಿ’ ಎಂದು ಕರೆ ನೀಡಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ವಾತಾವರಣವಿದ್ದು, ಕಾರ್ಯಕರ್ತರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ, ಅಂತವರ ವಿರುದ್ಧ ಎಐಸಿಸಿಗೆ ದೂರು ನೀಡಲಾಗುವುದು’ ಎಂದು ಪ್ರಣಿತಿ ಶಿಂಧೆ ಎಚ್ಚರಿಸಿದರು.

‘ಕರ್ನಾಟಕ ಮತ್ತು ಮಹಾರಾಷ್ಟ್ರ ಕಾಂಗ್ರೆಸ್‌ಗೆ ಭದ್ರ ನೆಲೆ ಇರುವ ರಾಜ್ಯಗಳಾಗಿದ್ದು, ಈಗಾಗಲೇ ರಾಹುಲ್‌ಗಾಂಧಿ ಅವರು ನಡೆಸಿರುವ ‘ಜೋಡೋ’ ಯಾತ್ರೆ ಮತ್ತು ರಾಜ್ಯ ನಾಯಕರು ಕೈಗೊಂಡಿರುವ ‘ಪ್ರಜಾಧ್ವನಿ’ ಯಾತ್ರೆ ಯಶಸ್ವಿಯಾಗಿ, ಜನರ ಮನಸ್ಸನ್ನು ಕಾಂಗ್ರೆಸ್ ಕಡೆಗೆ ಬರುವಂತೆ ಪರಿವರ್ತನೆ ಮಾಡಿವೆ. ಇಂಥ ವೇಳೆ ಕಾರ್ಯಕರ್ತರು ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಯೋಜನೆಗಳ ಮತ್ತು ಚುನಾವಣಾ ಪ್ರಣಾಳಿಕೆ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಪ್ರತಿ ಹತ್ತು ದಿನಗಳಿಗೊಮ್ಮೆ ಜಿಲ್ಲೆಗೆ ಭೇಟಿ ನೀಡುತ್ತೇನೆ. ಪಕ್ಷದ ಕಾರ್ಯಕರ್ತರು ಆಂತರಿಕ ವಿಚಾರ, ಭಿನ್ನಾಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಂಡು ಸರಿಪಡಿಸಿಕೊಳ್ಳಬೇಕು. ಯಾರೂ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಬಾರದು’ ಎಚ್ಚರಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ‘ಚುನಾವಣೆಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಸರ್ವೇ ಸಾಮಾನ್ಯ. ಪಕ್ಷ ಯಾರಿಗೆ ‘ಬಿ’ ಫಾರ್ಮ್ ಕೊಡುತ್ತದೆಯೊ ಆ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಲು ಕಾರ್ಯಪ್ರವೃತರಾಗಬೇಕು’ ಎಂದು ಹೇಳಿದರು.

‘ಕಳೆದ ಚುನಾವಣೆಯಲ್ಲಿ ಎಸ್.ಎಸ್. ಮಲ್ಲಿಕಾರ್ಜುನ್ ಅವರನ್ನು ಸೋಲಿಸಿರುವುದಕ್ಕೆ ಪಶ್ಚಾತಾಪ ಪಡುತ್ತಿದ್ದಾರೆ. ಈ ಬಾರಿ ನಮ್ಮ ಪಕ್ಷದ ಜಿಲ್ಲಾ ನಾಯಕರು ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು. ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಮಹಿಳಾ ಜಿಲ್ಲಾ ಘಟಕದ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಹಿರಿಯ ಮುಖಂಡ ಸಯ್ಯದ್ ಸೈಫುಲ್ಲಾ, ಮಹಾನಗರಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್, ಉತ್ತರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕೆ.ಜಿ. ಶಿವಕುಮಾರ, ದಕ್ಷಿಣ ಕ್ಷೇತ್ರದ ಅಧ್ಯಕ್ಷ ಅಯೂಬ್ ಪೈಲ್ವಾನ್, ಮುಖಂಡರಾದ ಎ. ನಾಗರಾಜ್, ನಂಜಾ ನಾಯ್ಕ, ಡೋಲಿ ಚಂದ್ರು ಇದ್ದರು. ದಿನೇಶ್ ಶೆಟ್ಟಿ ಸ್ವಾಗತಿಸಿದರು. ಎಸ್. ಮಲ್ಲಿಕಾರ್ಜುನ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.