ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕಾರ್ಮಿಕ, ರೈತ ವಿರೋಧಿ ನೀತಿಗೆ ಖಂಡನೆ

ಜಯದೇವ ವೃತ್ತದಲ್ಲಿ ವಿವಿಧ ಸಂಘಟನೆಗಳ ಪ್ರತಿಭಟನೆ
Last Updated 26 ನವೆಂಬರ್ 2020, 13:01 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧಕಾರ್ಮಿಕ, ರೈತ ವಿರೋಧಿ ಕಾಯ್ದೆಗಳ ತಿದ್ದುಪಡಿ ಹಾಗೂ ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿದ್ದ ಮುಷ್ಕರ ಬೆಂಬಲಿಸಿ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದವು.

ಇಲ್ಲಿನ ಜಯದೇವ ವೃತ್ತದಲ್ಲಿ ಜಮಾಯಿಸಿದ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

44 ಕಾರ್ಮಿಕ ಕಾನೂನುಗಳನ್ನು ತೆಗೆದುಹಾಕಿ ಕೇವಲ 4 ಸಂಹಿತೆ ಜಾರಿ ಮಾಡಲು ಮುಂದಾಗುವ ಮೂಲಕ ಸರ್ಕಾರ ಕಾರ್ಮಿಕರನ್ನು ಬೀದಿಗೆ ತಳ್ಳುತ್ತಿದೆ ಎಂದು ದೂರಿದರು. ರೈತ ವಿರೋಧಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು. ಆದಾಯ ತೆರಿಗೆ ರಹಿತ ಕುಟುಂಬಗಳಿಗೆ ₹ 7,500 ಪಾವತಿಸಬೇಕು. ಇಂತಹ ಕುಟುಂಬಗಳಿಗೆ ತಿಂಗಳಿಗೆ 10 ಕೆ.ಜಿ. ಉಚಿತ ಪಡಿತರ ನೀಡಬೇಕು. ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಜೆಸಿಟಿಯು ಜಿಲ್ಲಾಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ‘ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಕಾರ್ಮಿಕರು ಹಾಗೂ ರೈತರ ಬೆನ್ನೆಲುಬು ಮುರಿಯುತ್ತಿದೆ. ಸಂವಿಧಾನದತ್ತವಾಗಿ ನೀಡಲಾದ ಹಕ್ಕುಗಳನ್ನು ಕಿತ್ತುಕೊಳ್ಳಲಾಗುತ್ತಿದೆ. ಎಲ್.ಐ.ಸಿ., ರೈಲ್ವೆ, ಬ್ಯಾಂಕ್ ಮುಂತಾದವುಗಳ ಖಾಸಗೀಕರಣದಿಂದ ಜನರು ಶ್ರಮದಿಂದ ದುಡಿಯಲೂ ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ’ ಎಂದು ದೂರಿದರು.

ಬಿಜೆಪಿ ಹಿಂದಿನಿಂದಲೂ ಸುಳ್ಳು ಹೇಳುತ್ತಲೇ ಬರುತ್ತಿದೆ. ಆರ್.ಎಸ್.ಎಸ್. ಸಂಘಟನೆನಾಗಪುರದಲ್ಲಿ ತ್ರಿವರ್ಣ ಧ್ವಜವನ್ನೇ ಹಾರಿಸುವುದಿಲ್ಲ. ಇಂತಹ ಕೋಮುವಾದಿ, ಜಾತಿವಾದಿಗಳಿಗೆ ಜನರ ಕಷ್ಟ ಗೊತ್ತಾಗುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬ್ಯಾಂಕಿಂಗ್ ವಲಯವನ್ನು ಕಾರ್ಪೊರೇಟ್‌ ಕಂಪನಿಗೆ ಕೊಡಲು ಹೊರಟಿದ್ದಾರೆ. ಹೀಗಾದರೆ ಇಡೀ ಬ್ಯಾಂಕಿಂಗ್ ವಲಯ 70 ವರ್ಷಗಳ ಹಿಂದೆ ಹೋಗುವ ಪರಿಸ್ಥಿತಿ ಎದುರಾಗುತ್ತದೆ.ರೈತರು ಹಾಗೂ ಕಾರ್ಮಿಕರು ಒಂದಾದರೆ ಮಾತ್ರ ಸಾರ್ವಜನಿಕ ವಲಯದ ಕಂಪನಿಗಳನ್ನು ಉಳಿಸಲು ಸಾಧ್ಯವಾಗಲಿದೆ. ಇಲ್ಲದಿದ್ದರೆ ಬಿಜೆಪಿ ಸರ್ಕಾರ ಎಲ್ಲವನ್ನೂ ಕಾರ್ಪೊರೇಟ್‌ಗಳ ಪಾದಗಳಿಗೆ ಅರ್ಪಿಸಲಿದೆ ಎಂದು ದೂರಿದರು.

ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ‘ಕೇಂದ್ರ ಸರ್ಕಾರ ಬಂಡವಾಳಶಾಹಿಗಳ ಪರ ಕಾನೂನು ರೂಪಿಸಿ ಕಾರ್ಮಿಕ ಕಾನೂನುಗಳನ್ನು ಗಾಳಿಗೆ ತೂರುತ್ತಿದೆ. ಬ್ಯಾಂಕ್‌ಗಳಲ್ಲಿ ಸಾಲ ಮಾಡಿ ವಂಚನೆ ಮಾಡಿರುವ ಉದ್ಯಮಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಬೇಕು’ ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಆವರಗೆರೆ ವಾಸು, ಆವರಗೆರೆ ಚಂದ್ರು, ದ್ರಾಕ್ಷಾಯಣಮ್ಮ, ಐರಣಿ ಚಂದ್ರು, ಆನಂದರಾಜ್‌, ಜಬೀನಾ ಖಾನಂ, ಕರಿಬಸಪ್ಪ, ಕೊಂಡಜ್ಜಿ ಮಲ್ಲಿಕಾರ್ಜುನಪ್ಪ, ರಾಜೇಂದ್ರ ಬಂಗೇರ, ಸತೀಶ್‌ ಅರವಿಂದ್, ಆದಿಲ್‌ ಖಾನ್‌, ಪವಿತ್ರ, ಭಾರತಿ ಇದ್ದರು.

ಐಎನ್‌ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್‌, ಎಲ್‌ಐಸಿ ಎಂಪ್ಲಾಯೀಸ್‌ ಹಾಗೂ ಏಜೆಂಟ್‌ ಯೂನಿಯನ್‌, ಬ್ಯಾಂಕ್‌ ನೌಕರರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಹಾಸ್ಟೆಲ್‌ ಹೊರಗುತ್ತಿಗೆ ನೌಕರರ ಸಂಘ, ಕರ್ನಾಟಕ ಶ್ರಮಿಕ ಶಕ್ತಿ, ಎಐಎಂಎಸ್‌ ಸೇರಿ ವಿವಿಧ ಸಂಘಟನೆಗಳು ಭಾಗವಹಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT