ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗೊಂದಲ

ದಾವಣಗೆರೆಗೆ ಬಿ.ಎಸ್‌. ಯಡಿಯೂರಪ್ಪ ಭೇಟಿ ಸಾಧ್ಯತೆ
Published 25 ಮಾರ್ಚ್ 2024, 8:31 IST
Last Updated 25 ಮಾರ್ಚ್ 2024, 8:31 IST
ಅಕ್ಷರ ಗಾತ್ರ

ದಾವಣಗೆರೆ: ‘ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಭಾನುವಾರ ಮತ್ತೊಂದು ಸುತ್ತಿನ ಸಭೆ ನಡೆದಿದ್ದು, ಕಾರ್ಯಕರ್ತರ ಗೊಂದಲದಲ್ಲೇ ಮುಕ್ತಾಯವಾಯಿತು.

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಲು ಮುಖಂಡರೇ ಕಾರಣ ಹೊರತು ಕಾರ್ಯಕರ್ತರಲ್ಲ. ಕಾರ್ಯಕರ್ತರು ಸಾಚಾ ಇದ್ದೇವೆ. ನಿಮ್ಮ ನಿರ್ಧಾರ ಏನು ಎಂದು ಮೊದಲು ಹೇಳಿ. ಕಾರ್ಯಕರ್ತರು ಗೊಂದಲದಲ್ಲಿ ಇದ್ದೇವೆ. ನಮಗೂ ಮಾತನಾಡಲು ಅವಕಾಶ ಕೊಡಿ’ ಎಂದು ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

‘ಮುಖಂಡರು ಮಾತನಾಡಿದ ಬಳಿಕ ನಿಮಗೆ ಅವಕಾಶ ಕೊಡುತ್ತೇವೆ’ ಎಂದು ಹೇಳಿದರೂ ಕಾರ್ಯಕರ್ತರು ಕೇಳಲಿಲ್ಲ.

‘ಈಗಾಗಲೇ ಬಿಜೆಪಿ ಎರಡು ಹೋಳಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹಲವರು ಟಿಕೆಟ್‌ಗಾಗಿ ಪ್ರಯತ್ನ ಪಟ್ಟಿದ್ದಾರೆ. ಆದರೆ ಅವರಿಗೆ ಸಿಕ್ಕಿಲ್ಲ. ಈಗಾಗಲೇ ಟಿಕೆಟ್‌ ಕೊಟ್ಟಿದ್ದಾರೆ. ನೀವು ವಿರೋಧ ಮಾಡುವುದು ಸರಿಯಲ್ಲ. ಈಗ ಬಿಜೆಪಿ ಸಂಸದರು ಕೈಗೆ ಸಿಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸಂಸದರು ಕೈಗೆ ಸಿಗುವುದಿಲ್ಲ’ ಎಂದು ಕಾರ್ಯಕರ್ತರೊಬ್ಬರು ತಿಳಿಸಿದರು.

‘ಇದು ಅವರೊಬ್ಬರ ಅಭಿಪ್ರಾಯ. ಎಲ್ಲರ ಅಭಿಪ್ರಾಯವಲ್ಲ. ಎಲ್ಲಾ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಬಾರದು’ ಎಂದು ಕೆಲವು ಕಾರ್ಯಕರ್ತರು ಹೇಳಿದರು.

ಇಂದು ಯಡಿಯೂರಪ್ಪ ಆಗಮನ ಸಾಧ್ಯತೆ:

‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮಾರ್ಚ್ 25 ಇಲ್ಲವೇ 26ರಂದು ದಾವಣಗೆರೆಗೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಸುದ್ದಿವಾಹಿನಿಯೊಂದರಿಂದ ಸಿಕ್ಕಿದೆ. ಅವರ ಬಳಿ ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳುತ್ತೇವೆ. ನಾಮಪತ್ರ ಸಲ್ಲಿಸಲು ಏಪ್ರಿಲ್ 19ರವರೆಗೂ ಅವಕಾಶವಿದ್ದು, ಅಲ್ಲಿಯವರೆಗೂ ಕಾಯೋಣ’ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಸಭೆಯಲ್ಲಿ ತಿಳಿಸಿದರು.

‘ಸಭೆಯಲ್ಲಿ ಗಲಾಟೆಯಾಗುವುದು ಸಹಜ. ನಾವು ಬಿಜೆಪಿ ವರಿಷ್ಠರನ್ನು ನೋಡಲು ನವದೆಹಲಿ, ಬೆಂಗಳೂರಿನವರೆಗೂ ಹೋಗಿದ್ದೇವೆ. ಈಗ ಅವರೇ ಇಲ್ಲಿಯವರೆಗೆ ಬರುವಂತೆ ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದೀರಿ. ನಮ್ಮ ನಮ್ಮ ಮನೆಯವರೆಗೂ ಬಂದು ಜಗಳವಾಡಿದ್ದಕ್ಕೆ ಸಂತೋಷ. ಸುಮ್ಮನೆ ಕುಳಿತುಕೊಂಡು ಹೋಗುವುದಲ್ಲ. ಜಗಳವಾಡುವವವರನ್ನು ಕಂಡರೆ ಇಷ್ಟ’ ಎಂದು ನಗೆಚಟಾಕಿ ಹಾರಿಸಿದರು.

‘ದೂರದೃಷ್ಟಿ, ಮುಂದಾಲೋಚನೆ ಇರುವ ನಾಯಕರಿಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಬೇಡಿಕೆಯೇ ಹೊರತು ಸಂಸದ ಜಿ.ಎಂ. ಸಿದ್ದೇಶ್ವರ ಅವರ ಕುಟುಂಬದ ಮೇಲೆ ನಮ್ಮ ದ್ವೇಷವಿಲ್ಲ. ನಮ್ಮ ಜೊತೆ ಚರ್ಚಿಸಿ ಟಿಕೆಟ್ ನೀಡಿದ್ದರೆ ಸರಿ ಇರುತ್ತಿತ್ತು’ ಎಂದು ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ತಿಳಿಸಿದರು.

‘ನಾವು ಸೋಲನ್ನು ಕಂಡಿದ್ದೇವೆ. ಆದರೆ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ನೋವು ಅನುಭವಿಸಬಾರದು ಎಂಬುದಷ್ಟೇ ನಮ್ಮ ಉದ್ದೇಶ. ನಾನು ಸೇರಿದಂತೆ ಹಲವರನ್ನು 10 ಬಾರಿ ಚುನಾವಣೆಗೆ ನಿಂತರೂ ಸೋಲಿಸುವುದೇ ನಮ್ಮ ಕೆಲಸ ಎಂದು ಹೇಳಿರುವವರ‌ನ್ನು ಬೆಂಬಲಿಸಬೇಕಾ? ನನ್ನ ಮೇಲೆ ತಪ್ಪುಗಳನ್ನು ಹುಡುಕುತ್ತಿದ್ದಾರೆ. ಒಂದು ಸಣ್ಣ ತಪ್ಪನ್ನು ಹುಡುಕಲು ಅವರಿಂದ ಸಾಧ್ಯವಿಲ್ಲ’ ಎಂದು ಮಾಜಿ ಮೇಯರ್ ಬಿ.ಜಿ.ಅಜಯ್‌ಕುಮಾರ್ ಹೇಳಿದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕ ಗುರುಸಿದ್ದನಗೌಡ, ಮಾಜಿ ಶಾಸಕ ಬಸವರಾಜ್ ನಾಯ್ಕ, ಬಿಜಿಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಹಾವೇರಿ ಪ್ರಭಾರಿ ಕಲ್ಲೇಶ್,  ಮುಖಂಡರಾದ ವಿಠ್ಠಲ್, ವಸಂತ್ ಕುಮಾರ್, ಟಿ.ಜಿ. ರವಿಕುಮಾರ್,  ಕೆ.ಎಂ. ಸುರೇಶ್, ಶಿವಶಂಕರ್, ಶಿವರಾಜ್ ಪಾಟೀಲ್, ಚುಕ್ಕಿ ಮಂಜು ಇತರರು ಇದ್ದರು.

ಎಲ್ಲರೂ ಕೆಲಸ ಮಾಡಿದರೆ ಸ್ಪರ್ಧೆ : ಎಸ್.ಎ.ರವೀಂದ್ರನಾಥ್ ‘ನನಗೆ ಆರೋಗ್ಯ ಸರಿ ಇಲ್ಲ. ಎಲ್ಲರೂ ಸೇರಿ ಕೆಲಸ ಮಾಡಿದರೆ ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿದ್ದೇನೆ’ ಎಂದು ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಹೇಳಿದರು. ‘ನಾವು 11 ಜನ ಇದ್ದೇವೆ. ಅವರಲ್ಲಿ ಯಾರಾದರೊಬ್ಬರು ಅಭ್ಯರ್ಥಿಗಳಾಗಬಹುದು. ಯಾರೇ ಅಭ್ಯರ್ಥಿಗಳಾದರೂ ಎಲ್ಲರೂ ಸೇರಿ ಅವರ ಪರ ಕೆಲಸ ಮಾಡುತ್ತೇವೆ. ದೇಶದಲ್ಲಿ ಇಂತಹ ಅನೇಕ ಬದಲಾವಣೆಗಳಾಗಿವೆ’ ಎಂದು ಕಾರ್ಯಕರ್ತರ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು. ‘ದಾವಣಗೆರೆಯಲ್ಲಿ ನಾವು ಹೇಳಿದ್ದಕ್ಕೆ ವಿರೋಧ ಮಾಡಿರುವುದು ಇದೇ ಮೊದಲು. ಈ ಹಿಂದೆ ಹೈಕಮಾಂಡ್ ಹೇಳಿದ್ದಕ್ಕೆಲ್ಲ ತಲೆಯಾಡಿಸಿಕೊಂಡು ಬಂದಿದ್ದೇವೆ. ಈಗ ಬಿ.ಎಸ್. ಯಡಿಯೂರಪ್ಪ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ’ ಎಂದರು. ‘ಹೋರಾಟ ಮಾಡಲೇಬೇಕು ಎಂಬುದು ಕೆ.ಎಸ್‌. ಈಶ್ವರಪ್ಪ ಅವರ ತೀರ್ಮಾನ. ಆದರೆ ನಮ್ಮಲ್ಲಿ ಹೋರಾಟ ಕಡಿಮೆ ಇದೆ. ಆದರೆ ಧ್ವನಿ ಜಾಸ್ತಿಯಾಗಿದೆ’ ಎಂದು ತಿಳಿಸಿದರು. ‘ಸಂಸದ ಜಿ.ಎಂ. ಸಿದ್ದೇಶ್ವರ ಅವರು ನಮ್ಮ ಸಂಪರ್ಕಕ್ಕೆ ಬರುತ್ತಾರೆ ಹೋಗುತ್ತಾರೆ. ಯಾರೂ ಇಲ್ಲದೇ ಇದ್ದರೂ ವೋಟ್ ತೆಗೆದುಕೊಳ್ಳುತ್ತೇವೆ ಎಂಬ ಕಲ್ಪನೆ ಅವರಲ್ಲಿದೆ. ನಾವು ಮತದಾರರ ಬಳಿ ವೋಟ್ ಕೇಳುವವರು. ಕೊನೆಯ ಹಂತದವರೆಗೂ ಹೋರಾಟ ಮಾಡುತ್ತೇವೆ. ಹಾಗೆಂದು ಹೋರಾಟವೇ ನಮ್ಮ ಬದುಕಲ್ಲ’ ಎಂದು ಹೇಳಿದರು. ಇನ್‌ಸೈಟ್ ಐಎಎಸ್ ಸಂಸ್ಥಾಪಕ ಜಿ.ಬಿ. ವಿನಯ್‌ಕುಮಾರ್ ಅವರನ್ನು ಸಂಪರ್ಕಿಸಲಾಗಿದೆ ಎಂಬ ಪ್ರಶ್ನೆಗೆ ‘ಸಂಪರ್ಕಕ್ಕೆ ಬಂದವರನ್ನು ಸೇರಿಸಿಕೊಳ್ಳುತ್ತೇವೆ. ಆದರೆ ಬಂದವರೆಲ್ಲರನ್ನೂ ಅಭ್ಯರ್ಥಿ ಮಾಡಲು ಆಗುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT