ಭಾನುವಾರ, ಸೆಪ್ಟೆಂಬರ್ 26, 2021
23 °C
ಪಾಲಿಕೆ ಕಾಂಗ್ರೆಸ್‌ ಸದಸ್ಯರಿಂದ ನಗರಾಭಿವೃದ್ಧಿ ಸಚಿವರಿಗೆ ಮನವಿ

ದಾವಣಗೆರೆ | ಕಂದಾಯ ಪರಿಷ್ಕರಣೆ ಕೈಬಿಡಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಂದಾಯ ಪರಿಷ್ಕರಣೆ ಕೈಬಿಡಬೇಕು ಹಾಗೂ ಎಫ್‌.ಎ.ಆರ್‌ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷವಾದ ಕಾಂಗ್ರೆಸ್‌ನ ಸದಸ್ಯರ ನಿಯೋಗವು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರನ್ನು ಮಂಗಳವಾರ ಭೇಟಿ ಮಾಡಿ ಒತ್ತಾಯಿಸಿತು.

ಪಾಲಿಕೆ ಕಚೇರಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸಚಿವರು ಬಂದಾಗ, ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ನೇತೃತ್ವದಲ್ಲಿ ಸದಸ್ಯರು ಮನವಿ ಸಲ್ಲಿಸಿದರು.

ಪಾಲಿಕೆಯ ಚುನಾಯಿತ ಸದಸ್ಯರನ್ನು ಕಡೆಗಣಿಸಿ ಜಿಲ್ಲಾಧಿಕಾರಿ ಅವೈಜ್ಞಾನಿಕವಾಗಿ ಕಂದಾಯ ಪರಿಷ್ಕರಿಸಿ ಸರ್ಕಾರಕ್ಕೆ ಕಳುಹಿಸಿದ್ದಾರೆ. ಮನೆಗೆ ಶೇ 18ರಷ್ಟು ಹಾಗೂ ವಾಣಿಜ್ಯ ಮಳಿಗೆಗಳಿಗೆ ಶೇ 24ರಷ್ಟು ಕಂದಾಯವನ್ನು ಹೆಚ್ಚಿಸಲಾಗಿದೆ. ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ಸಂಕಷ್ಟಕ್ಕೆ ಒಳಗಾಗಿರುವ ನಾಗರಿಕರಿಗೆ ಇದರಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಹಕಾರ ಸಂಘದ ಸಾಲದ ಕಂತನ್ನು ಕಟ್ಟಲು ಆರು ತಿಂಗಳ ವಿನಾಯಿತಿ ನೀಡಲಾಗಿದೆ. ಹೀಗಾಗಿ ಕಂದಾಯ ಪರಿಷ್ಕರಣೆಯನ್ನು ಕೈಬಿಡಬೇಕು. ಮೇ 30ರೊಳಗೆ ಕಂದಾಯ ಪಾವತಿಸುವವರಿಗೆ ನೀಡುವ ಶೇ 5 ರಿಯಾಯಿತಿಯನ್ನು ಜೂನ್‌ ಅಂತ್ಯದವರೆಗೂ ವಿಸ್ತರಿಸಬೇಕು. ಆರು ತಿಂಗಳು ತಡವಾಗಿ ಕಂದಾಯ ಪಾವತಿಸಿದರೂ ಬಡ್ಡಿ ವಿಧಿಸಬಾರದು ಎಂದು ಸಚಿವರನ್ನು ಒತ್ತಾಯಿಸಿದರು.

ನಗರದಲ್ಲಿ ಎಷ್ಟೋ ಜನಸಾಮಾನ್ಯರಿಗೆ ವಸತಿ ಹಾಗೂ ನಿವೇಶನಗಳಿಲ್ಲ. ಹೀಗಾಗಿ ಎಫ್‌.ಎ.ಆರ್‌ ನಿಯಮವನ್ನು ಸಡಿಲಗೊಳಿಸಿ ವಸತಿಗಳಿಗೆ ಎರಡರಿಂದ ಐದು ಮಹಡಿ ಹಾಗೂ ವಾಣಿಜ್ಯ ಸಂಕೀರ್ಣಗಳಿಗೆ ಮೂರರಿಂದ ಐದಕ್ಕೆ ಏರಿಕೆ ಮಾಡಬೇಕು. ಇದರಿಂದ ಪಾಲಿಕೆಗೂ ಆದಾಯ ಹೆಚ್ಚಾಗಲಿದೆ ಎಂದು ಸಚಿವರ ಗಮನಕ್ಕೆ ತಂದರು.

ಶಾಸಕ ಶಾಮನೂರು ಶಿವಶಂಕರಪ್ಪ, ವಿಧಾನ ಪರಿಷತ್‌ ಸದಸ್ಯ ಅಬ್ದುಲ್‌ ಜಬ್ಬಾರ್‌, ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್‌, ಜಿ.ಎಸ್‌. ಮಂಜುನಾಥ್‌, ವಿನಾಯಕ ಪೈಲ್ವಾನ್‌, ಸೈಯದ್‌ ಚಾರ್ಲಿ, ಅಬ್ದುಲ್‌ ಲತೀಫ್‌, ಚಮನ್‌ ಸಾಬ್‌, ಜೆ.ಎನ್‌. ಶ್ರೀನಿವಾಸ್‌, ಉದಯ್‌ ಕುಮಾರ್‌, ಆಶಾ ಉಮೇಶ್‌, ಸುಧಾ ಇಟ್ಟಿಗುಡಿ, ಸವಿತಾ ಗಣೇಶ್‌ ಹುಲ್ಮನಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು