ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಪಿಎಂಸಿ ಕಾಯ್ದೆ ತಿದ್ದುಪಡಿ: ಕಾಂಗ್ರೆಸ್‌ನಿಂದ ಅಪಪ್ರಚಾರ: ವೀರೇಶ ಹನಗವಾಡಿ ಆರೋಪ

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ ಆರೋಪ
Last Updated 22 ಸೆಪ್ಟೆಂಬರ್ 2020, 8:42 IST
ಅಕ್ಷರ ಗಾತ್ರ

ದಾವಣಗೆರೆ: ‘ತಾವು ಬೆಳೆದ ಉತ್ಪನ್ನವನ್ನು ಮನೆ ಬಾಗಿಲಿನಲ್ಲೇ ಮಾರಾಟ ಮಾಡಲು ರೈತರಿಗೆ ಹಕ್ಕು ನೀಡುವ ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್‌ ರಾಜಕೀಯ ಕಾರಣಕ್ಕೆ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದ್ದು, ರೈತರು ಇದಕ್ಕೆ ಕಿವಿಗೊಡಬಾರದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಮನವಿ ಮಾಡಿದರು.

‘ವ್ಯಾಪಾರಿಗಳಿಂದ ರೈತರು ಶೋಷಣೆಗೆ ಒಳಗಾಗಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಒಪ್ಪಿಗೆ ಪಡೆದಿರುವುದನ್ನು ನಾವು ಸ್ವಾಗತಿಸುತ್ತೇವೆ. 2019ರ ಲೋಕಸಭಾ ಚುನಾವಣೆ ವೇಳೆ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತರುವುದು ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲೂ ಇತ್ತು. ಆದರೆ, ಈಗ ರಾಜಕೀಯ ಉದ್ದೇಶಕ್ಕೆ ವಿರೋಧಿಸುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಂದ ರೈತರಿಗೆ ತೊಂದರೆಯಾಗದಂತೆ ಕಾಯ್ದೆಗೆ ತಿದ್ದುಪಡಿ ತರಲಾಗಿದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಇನ್ನು ಮುಂದೆ ರೈತರು ತಮಗೆ ಯಾವ ವ್ಯಾಪಾರಿ ಹೆಚ್ಚು ಬೆಲೆ ಕೊಡುತ್ತಾನೋ ಅವರಿಗೆ ಉತ್ಪನ್ನವನ್ನು ಮಾರಾಟ ಮಾಡಬಹುದು. ಆನ್‌ಲೈನ್‌ ಮೂಲಕ, ಇಲ್ಲವೇ ಹೊರ ರಾಜ್ಯಗಳಿಗೂ ತೆರಳಿ ಉತ್ಪನ್ನ ಮಾರಲು ಇದರಿಂದ ಅನುಕೂಲವಾಗಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ರೈತರ ಆದಾಯ ದುಪ್ಪಟ್ಟು ಮಾಡುವುದಕ್ಕೆ ಈ ಕಾಯ್ದೆ ಪೂರಕವಾಗಲಿದೆ’ ಎಂದು ಅಭಿಪ್ರಾಯಪಟ್ಟರು.

‘ಇಂದು ದೇಶಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಬೆಳೆಯಲಾಗುತ್ತಿದೆ. ಹೀಗಾಗಿ ರಫ್ತು ಮಾಡಲು ಹೆಚ್ಚು ಒತ್ತು ನೀಡಬೇಕು. ರೈತರ ಮೇಲಿನ ಶೋಷಣೆಗೆ ಕಡಿವಾಣ ಹಾಕಲು ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಸರ್ಕಾರ ಹೆಚ್ಚಿಸಿದೆ. ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಕೊಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳುತ್ತಿದೆ’ ಎಂದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್‌ ಲೋಕಿಕೆರೆ, ‘ನಿಜವಾದ ರೈತರು ಕಾಯ್ದೆ ತಿದ್ದುಪಡಿಯನ್ನು ಸ್ವಾಗತಿಸುತ್ತಿದ್ದಾರೆ. ಯಾರು ವರ್ತಕರ ಪರವಾಗಿ ಇದ್ದಾರೆಯೋ ಅವರು ಮಾತ್ರ ವಿರೋಧಿಸುತ್ತಿದ್ದಾರೆ’ ಎಂದು ದೂರಿದರು.

ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ಮಂಜಾ ನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT