ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಹಕರ ಹಕ್ಕಿನ ಉಲ್ಲಂಘನೆಗೆ ದೂರು ದಾಖಲಿಸಿ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್‌ ಈರಪ್ಪ ಶಿಗ್ಗಿ
Last Updated 18 ಮಾರ್ಚ್ 2023, 5:40 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ಖರೀದಿಸಿದ ಯಾವುದೇ ವಸ್ತು ನಮಗೆ ಸುರಕ್ಷತೆ ನೀಡುವಂತಿರಬೇಕು. ಆ ವಸ್ತುವಿನಿಂದ ಅಪಾಯ ಸಂಭವಿಸಿದರೆ ಅದು ಹಕ್ಕಿನ ಉಲ್ಲಂಘನೆ. ಆ ಸಂಬಂಧ ಪ್ರಕರಣ ದಾಖಲಿಸುವ ಅವಕಾಶ ಇದೆ’ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ್‌ ಈರಪ್ಪ ಶಿಗ್ಗಿ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶುಕ್ರವಾರ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಕಾನೂನು ಮಾಪನ ಶಾಸ್ತ್ರ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮನುಷ್ಯ ಗರ್ಭದಲ್ಲಿ ಇರುವಾಗಿನಿಂದ ಸಾಯುವವರೆಗೂ ಗ್ರಾಹಕನಾಗಿರುತ್ತಾನೆ. ಸುರಕ್ಷತೆಯ ಹಕ್ಕು, ಮಾಹಿತಿ ನೀಡುವುದು, ಆಯ್ಕೆಯ ಹಕ್ಕು, ಪರಿಹಾರ ಕೇಳುವುದು ಗ್ರಾಹಕರ ಹಕ್ಕು. ಈ ಬಗ್ಗೆ ಗ್ರಾಹಕರು ತಿಳಿದಿರಬೇಕು. ಒಂದು ವಸ್ತು ಖರೀದಿಸಿದಾಗ ಈ ನಾಲ್ಕರಲ್ಲಿ ಒಂದಂಶವೂ ಇಲ್ಲದಿದ್ದರೆ ಉತ್ಪಾದಕ ಕಂಪನಿ ವಿರುದ್ಧ ಪ್ರಕರಣ ದಾಖಲಿಸುವ ಅವಕಾಶ ಇದೆ. ಇದು ಸರಳ ವಿಧಾನದಲ್ಲಿದೆ. ವಂಚನೆಗೆ ಒಳಗಾದವರು ನೇರವಾಗಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಬಂದು ದೂರು ನೀಡಬಹುದು. ಯಾವುದೇ ವಕೀಲರನ್ನು ನೇಮಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಮಾಹಿತಿ ನೀಡಿದರು.

₹ 1ರಿಂದ ₹ 50 ಲಕ್ಷದೊಳಗಿನ ವ್ಯಾಜ್ಯ ಪರಿಹಾರಕ್ಕೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ₹ 50 ಲಕ್ಷದಿಂದ ₹ 2 ಕೋಟಿಯವರೆಗೆ ರಾಜ್ಯ ಆಯೋಗ ಹಾಗೂ ₹ 2 ಕೋಟಿ ಮೇಲ್ಪಟ್ಟ ಪ್ರಕರಣ ಸಂಬಂಧ ರಾಷ್ಟ್ರೀಯ ಆಯೋಗಕ್ಕೆ ದೂರು ನೀಡಬಹುದು ಎಂದರು.

ಯಾವುದೇ ಸೇವೆ ಉಚಿತವಾಗಿದ್ದು, ಅಲ್ಲಿ ಮೋಸವಾದರೆ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಲು ಅವಕಾಶ ಇಲ್ಲ. ಸೇವೆಗೆ ಹಣ ನೀಡಿದ್ದಾಗ ದೂರು ದಾಖಲಿಸಬಹುದು. ಯಾವುದೇ ವಸ್ತುವಿನ ಹಾನಿಯ ಪರಿಣಾಮಕ್ಕೆ ಒಳಗಾದ ದಿನದಿಂದ 2 ವರ್ಷದೊಳಗೆ ದೂರು ದಾಖಲಿಸಬಹುದು. ಅನಾರೋಗ್ಯ ಸಂದರ್ಭದಲ್ಲಿ 2 ವರ್ಷಗಳ ನಂತರವೂ ದೂರು ಸಲ್ಲಿಸಬಹುದು ಎಂದು ವಿವರಿಸಿದರು.

‘ವಿಶ್ವದಾದ್ಯಂತ ಮಾರ್ಚ್‌ 15ರಂದು ಗ್ರಾಹಕರ ದಿನಾಚರಣೆ ಹಾಗೂ ನಮ್ಮ ದೇಶದಲ್ಲಿ 1986 ಡಿಸೆಂಬರ್‌ 24ರಂದು ಗ್ರಾಹಕರ ಸಂರಕ್ಷಣಾ ಕಾಯ್ದೆ ಜಾರಿಯಾದ ದಿನ. ಹಾಗಾಗಿ ಭಾರತದಲ್ಲಿ ಡಿಸೆಂಬರ್‌ 24ರಂದು ಗ್ರಾಹಕರ ದಿನ ಆಚರಿಸಲಾಗುತ್ತದೆ‘ ಎಂದು ಪ್ರಾಸ್ತಾವಿಕವಾಗಿ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕ ಶಿವಾಜಿ ಹೇಳಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯರಾದ ಸಿ.ಎಸ್. ತ್ಯಾಗರಾಜನ್‌, ಬಿ.ವಿ. ಗೀತಾ, ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಅಧ್ಯಕ್ಷೆ ಎಚ್‌. ಅನಿತಾ, ಕಾಲೇಜಿನ ಪ್ರಾಂಶುಪಾಲರಾದ ಶೈಲಜಾ, ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಟಿ. ಪ್ರಕಾಶ, ವಿಶ್ವನಾಥ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT