ಗುರುವಾರ , ಜನವರಿ 21, 2021
18 °C
ಅಸಮರ್ಪಕ ಕಾಮಗಾರಿಗೆ ಅಸಮಾಧಾನ ವ್ಯಕ್ತಪಡಿಸಿದ ಬೈರತಿ ಬಸವರಾಜ

ದಾವಣಗೆರೆ: ಸಚಿವರಿಂದ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸ್ಮಾರ್ಟ್ ‌ಸಿಟಿ ಕಾಮಗಾರಿಗಳನ್ನು ಸೋಮವಾರ ವೀಕ್ಷಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಅವರು ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಇಲ್ಲಿವರೆಗೆ ಬರೀ ₹ 300 ಕೋಟಿ ವೆಚ್ಚದ ಕಾಮಗಾರಿಯಷ್ಟೇ ಮುಗಿಸಿದ್ದೀರಿ. ಇನ್ನೂ ₹ 700 ಕೋಟಿ ವೆಚ್ಚದ ಕಾಮಗಾರಿ ಉಳಿದಿದೆ. ಯಾವಾಗ ಮುಗಿಸುತ್ತೀರಿ’ ಎಂದು ಪ್ರಶ್ನಿಸಿದರು.

ಕೆಲವೆಡೆ ನಡೆಯುತ್ತಿದ್ದ ಕಾಮಗಾರಿಗಳ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಬೈರತಿ ಬಸವರಾಜ್ ಅಧಿಕಾರಿಗಳನ್ನು ಅಲ್ಲೇ ತರಾಟೆಗೆ ತೆಗೆದುಕೊಂಡು, ‘ಇಂಥ ಕೆಲಸವನ್ನೆಲ್ಲ ನಾನು ಸಹಿಸುವುದಿಲ್ಲ, ಇದಕ್ಕೆ ಯಾವುದೇ ಜವಾಬು ನನಗೆ ಬೇಕಾಗಿಲ್ಲ. ಕಾಮಗಾರಿ ಉತ್ತಮ ಆಗಿರಬೇಕು’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕಾಂಕ್ರೀಟ್‌ ರಸ್ತೆ ಕಾಮಗಾರಿ, ರಾಜಕಾಲುವೆ ಕಾಮಗಾರಿಗಳು ಸಮರ್ಪಕವಾಗಿಲ್ಲದೇ ಇರುವುದನ್ನು ಕಂಡು ‘ಇಂಥ ಕೆಲಸವನ್ನೆಲ್ಲ ಸಹಿಸುವುದಿಲ್ಲ. ಗುಣಮಟ್ಟದ ಕಾಮಗಾರಿ ನಡೆಯುವುದು ಮುಖ್ಯ’ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ರಾಜ ಕಾಲುವೆಯನ್ನು ಕೆಲವು ಕಡೆ ಸಣ್ಣದಾಗಿ ಮಾಡಿದ್ದೀರಿ, ಮಳೆಯಾದರೆ ಮತ್ತೆ ಮನೆಗಳತ್ತ ನೀರು ಬರುತ್ತದೆ. ಇದರಿಂದ ಪ್ರಯೋಜನ ಏನು ಬಂತು. ಮಳೆಯಿಂದ ಜನರು ತೊಂದರೆ ಆನುಭವಿಸಿದ್ದಾರೆ. ಎಲ್ಲವನ್ನು ಸರಿಯಾಗಿ ಮಾಡಬೇಕು ಎಂದು ಅಧಿಕಾರಿಗಳಗೆ ತಾಕೀತು ಮಾಡಿದರು.

ಗುತ್ತಿಗೆದಾರನಿಗೆ ನೋಟೀಸ್ ನೀಡಿ: ಶಾಮನೂರು ರಸ್ತೆಯ ಬಾಪೂಜಿ ಸಮುದಾಯ ಭವನದ ಮುಂಭಾಗದಲ್ಲಿ ಹಾದು ಹೋಗುವ ರಿಂಗ್ ರಸ್ತೆಯ ಸಿಮೆಂಟ್ ರಸ್ತೆ ಕಾಮಗಾರಿ ಸರಿ ಇಲ್ಲದೇ ಇರುವುದನ್ನು ಕಂಡು ಸಿಟ್ಟಾದ ಸಚಿವರು, ‘ಗುತ್ತಿಗೆ ಯಾರೇ ವಹಿಸಿಕೊಂಡಿರಲಿ. ಅವರು ಕೆಲಸ ಸರಿ ಮಾಡಿಲ್ಲ ಅಂದರೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ. ಆ ಗುತ್ತಿಗೆದಾರನಿಗೆ ನೋಟಿಸ್‌ ನೀಡಿ’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

‘ಉದಯ ಶಿವಕುಮಾರ್ ಎಂಬ ವ್ಯಕ್ತಿ ಕಾಮಗಾರಿ ನಡೆಸುತ್ತಿದ್ದಾರೆ. ಊರಲೆಲ್ಲಾ ಅವರದ್ದೇ ಕಾಮಗಾರಿ, ಸರಿಯಾಗಿ ಮಾಡುತ್ತಿಲ್ಲ’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಸಚಿವರ ಗಮನಕ್ಕೆ ತಂದರು.

ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ಕಂಡು ‘ಪ್ರತಿವಾರ ಪಾಲಿಕೆಯಿಂದ 50 ಪೌರಕಾರ್ಮಿಕರ ತಂಡ ಎರಡು ವಾರ್ಡ್‌ಗಳಂತೆ ಡ್ರೈವ್‌ ಮಾಡಬೇಕು. ಎಲ್ಲಿಯೂ ಕಸ ಕಾಣಬಾರದು’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್ ಬಿ.ಜಿ. ಅಜಯ ಕುಮಾರ್, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್, ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರೂ ಇದ್ದರು.

ಪ್ರಗತಿ ಪರಿಶೀಲನಾ ಸಭೆಯಲ್ಲೂ ವ್ಯಕ್ತವಾದ ಅಸಮಾಧಾನ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಮಹಾನಗರ ಪಾಲಿಕೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಯೂ ಸಚಿವ ಬೈರತಿ ಬಸವರಾಜ ಅವರು ನಗರದ ಸ್ವಚ್ಛತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಠ 4 ದಿನ ಸಿಟಿ ರೌಂಡ್‌ ಮಾಡಬೇಕು. ಅದಕ್ಕಾಗಿ 2 ಗಂಟೆ ಮೀಸಲಿಡಬೇಕು ಎಂದು ತಾಕೀತು ಮಾಡಿದರು.

45 ವಾರ್ಡ್‍ಗಳಿದ್ದು, 505 ಪೌರಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸಕಲ ಸವಲತ್ತು ನೀಡುತ್ತಿದೆ. ಜನರು ತೆರಿಗೆ ಕಟ್ಟುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ನಗರದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು.

243 ಪೌರಕಾರ್ಮಿಕರ ಕೊರತೆ ಇದೆ. ಆದರೆ ಸದ್ಯ ಇರುವ ಪೌರಕಾರ್ಮಿಕರ ಪೈಕಿ ಬಹಳಷ್ಟು ಜನ ಹಾಜರಾತಿ ಹಾಕಿ, ತಮ್ಮ ಕೆಲಸ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಮೇಲುಸ್ತುವಾರಿ ಸರಿಯಾಗಿ ಮಾಡುತ್ತಿಲ್ಲ ಎಂದು ಮೇಯರ್‌ ಬಿ.ಜಿ. ಅಜಯ್‌ಕುಮಾರ್‌ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು