ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವು ಹೆದರಿದಷ್ಟೂ ಕೊರೊನಾ ಹೆದರಿಸುತ್ತೆ

ಕೊರೊನಾ ಜಯಿಸಿದ ಗೃಹಿಣಿ ಪುಷ್ಪಾ
Last Updated 1 ಮೇ 2021, 5:20 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊರೊನಾ ಒಂದು ಸಣ್ಣ ಕಾಯಿಲೆ; ಭಯ ಪಡುವ ಅಗತ್ಯವಿಲ್ಲ. ಅದರ ಬಗ್ಗೆ ಹೆದರಿಕೆ ಜಾಸ್ತಿಯಾದರೆ, ಅದೊಂದು ದೊಡ್ಡ ಕಾಯಿಲೆ ಎಂಬಂತೆ ಭಾಸವಾಗುತ್ತದೆ...’

ಇದು ಕೊರೊನಾದಿಂದ ಗುಣಮುಖರಾಗಿ ಬಂದ ಜಯನಗರದ 52 ವರ್ಷದ ಗೃಹಿಣಿ ಎಸ್. ಪುಷ್ಪಾ ಅವರ ಮಾತು. ಎಂಟು

ದಿನಗಳ ಹಿಂದೆ ಕೊರೊನಾ ವೈರಸ್ ದೃಢಪಟ್ಟಿದ್ದರಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿದ್ದಾರೆ. ಮಹಿಳೆಯರು ತರಕಾರಿ ತರಲು ಹೋಗುವ ಮುನ್ನ ಮಾಸ್ಕ್ ಧರಿಸಬೇಕು; ಅಂತರ ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ತರಕಾರಿ ತರಲು ಹೋಗಿದ್ದೆ ಅಷ್ಟೆ: ‘ಮನೆಗೆ ತರಕಾರಿ ತರಲೆಂದು ಹೊರಗಡೆ ಹೋಗಿದ್ದೆ ಅಷ್ಟೇ. ತರಕಾರಿ ತೆಗೆದುಕೊಂಡು ಬಂದ ಒಂದು ದಿನದ ಬಳಿಕ ಗಂಟಲು ನೋವು, ಅಲರ್ಜಿ, ಶೀತ ಹಾಗೂ ಕೆಮ್ಮಿನಂತಹ ಲಕ್ಷಣಗಳು ಕಾಣಿಸಿಕೊಂಡವು. ಖಾಸಗಿ ಆಸ್ಪತ್ರೆಯೊಂದಕ್ಕೆ ಹೋಗಿ ತೋರಿಸಿದೆವು ಲಕ್ಷಣಗಳು ಕಡಿಮೆಯಾಗಲಿಲ್ಲ. ಆ ಬಳಿಕ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬಂದು ಪರೀಕ್ಷಿಸಿದಾಗ ಕೊರೊನಾ ವೈರಸ್ ಇರುವುದು ದೃಢಪಟ್ಟಿತು’ ಎಂದು ಪುಷ್ಪಾ ಹೇಳಿದರು.

‘ಸುಸ್ತು, ಉಸಿರಾಟದ ಸಮಸ್ಯೆ ಸ್ವಲ್ಪ ಜಾಸ್ತಿಯಾಗಿ ಕಾಡಿತು. ಅದು ಬಿಟ್ಟರೆ ಮತ್ತೇನೂ ಸಮಸ್ಯೆಯಾಗಲಿಲ್ಲ. ಮೊದಲನೇ ದಿವಸ ಗಂಜಿ, ಎರಡನೇ ದಿವಸ ಅನ್ನ ತಿಂದೆ, ಮೂರನೇ ದಿವಸದಿಂದ ಮೊದಲಿನಂತೆಯೇ ಊಟ ಮಾಡಿದೆ. ಮುದ್ದೆ, ಚಪಾತಿ, ತರಕಾರಿಗಳನ್ನು ತಿಂದೆ. ಈಗ ಸಂಪೂರ್ಣವಾಗಿ ಗುಣಮುಖಳಾಗಿದ್ದೇನೆ’ ಎಂದು ವಿಶ್ವಾಸದಿಂದ ಹೇಳಿದರು.

‘ಆಸ್ಪತ್ರೆಯಲ್ಲಿ ವೈದ್ಯರು ಚೆನ್ನಾಗಿಯೇ ನೋಡಿಕೊಂಡರು. ಪ್ರತಿ ದಿವಸ ಆಕ್ಸಿಜನ್ ಬೇಕಿತ್ತು. ಆಕ್ಸಿಜನ್ ತೆಗೆದಾಗ ಸುಸ್ತು ಜಾಸ್ತಿಯಾಗುತ್ತಿತ್ತು. 5 ಬಗೆಯ ಇಂಜಕ್ಷನ್‌ಗಳು, 4 ಬಗೆಯ ಮಾತ್ರೆಗಳನ್ನು ಕೊಡಬೇಕಿತ್ತು. ಎರಡು ಬಗೆಯ ಮಾತ್ರೆಗಳನ್ನು ಹೊರಗಡೆಯಿಂದ ತರಬೇಕಿತ್ತು. ಕಫ ಬರುವಂತಹ ಪದಾರ್ಥಗಳನ್ನು ಬಿಟ್ಟರೆ ಆಹಾರಕ್ಕೆ ಯಾವುದೇ ಪಥ್ಯ ಇರಲಿಲ್ಲ’ ಎಂದು ಹೇಳಿದರು. ‘ಕೊರೊನಾ ಬಂದ ಮೇಲೆ ಆರಂಭದಲ್ಲಿ ಸ್ವಲ್ಪ ಭಯ ಇತ್ತು. ಮೊದಲಿನಿಂದಲೂ ವಾಕಿಂಗ್ ಮಾಡಿದ್ದರಿಂದ ದೇಹ ಗಟ್ಟಿಯಾಗಿಯೇ ಇಟ್ಟಿದ್ದರಿಂದ ಆ ಬಳಿಕ ಹೆದರಲಿಲ್ಲ. ದೇವರ ಮೇಲೆ ಭಾರ ಹಾಕಿದೆ. ನಾನು ಹೆಚ್ಚಾಗಿ ಹೊರಗಡೆ ಹೋಗುವುದಿಲ್ಲ. ಇನ್ನು ಮುಂದೆ ಜಾಗೃತಿ ವಹಿಸುತ್ತೇನೆ. ನನಗೆ ಕರೆ ಮಾಡಿದವರಿಗೂ ‘ಎಚ್ಚರಿಕೆ ವಹಿಸಿ’ ಎಂದು ಹೇಳುತ್ತೇನೆ’ ಎಂದು ಪುಷ್ಪಾ ಹೇಳುತ್ತಾರೆ.

‘ನನ್ನ ಪತ್ನಿ ಹೊರಗಡೆ ಹೋದಾಗ ಮಾಸ್ಕ್ ಹಾಕುವುದನ್ನು ಮರೆತಿರಬಹುದು. ನಿರ್ಲಕ್ಷ್ಯ ಮಾಡಿದರೆ ನಾವೇ ಅಪಾಯವನ್ನು ಕರೆದುಕೊಂಡಂತಾಗಲಿದೆ. ಕೊರೊನಾ ಬಂದಾಗ ಧೈರ್ಯವಾಗಿರು, ಏನು ಆಗುವುದಿಲ್ಲ; ನಾನಿದ್ದೇನೆ ಎಂದು ಆತ್ಮಸ್ಥೈರ್ಯ ತುಂಬಿದೆ’ ಎಂದು ಬ್ಯಾಟರಿ ಶೋರೂಂ ಮಾಲೀಕರಾಗಿರುವ ಪತಿ ಎಂ.ಸಿ. ವಿಜಯ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT