ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ: ತಗ್ಗಿದ ಸೋಂಕು, ತಗ್ಗದ ಸಾವು

ಎರಡನೇ ಅಲೆಯಲ್ಲಿ ಎರಡೂವರೆ ತಿಂಗಳಲ್ಲಿ 184 ಮಂದಿ ಸಾವು
Last Updated 18 ಜೂನ್ 2021, 4:52 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಮೊದಲ ಅಲೆಯಲ್ಲಿ ಒಂದು ವರ್ಷದ ಅವಧಿಯಲ್ಲಿ 264 ಮಂದಿ ಮೃತಪಟ್ಟಿದ್ದರು. ಎರಡನೇ ಅಲೆಯಲ್ಲಿ ಎರಡೂವರೆ ತಿಂಗಳಲ್ಲೇ 184 ಮಂದಿ ಮೃತಪಟ್ಟಿದ್ದಾರೆ. ವಾರದಿಂದ ಈಚೆಗೆ ಸೋಂಕಿನ ಪ್ರಮಾಣ ಕಡಿಮೆಯಾಗಿದೆ. ಆದರೆ, ಮರಣ ಪ್ರಮಾಣ ಮಾತ್ರ ಇನ್ನೂ ಹಾಗೇ ಇದೆ.

ಮೊದಲ ಅಲೆಯಲ್ಲಿ ಮೃತಪಟ್ಟವರಲ್ಲಿ 60 ವರ್ಷ ದಾಟಿದವರ ಪ್ರಮಾಣ ಶೇ 51.5 ಇದ್ದರೆ, ಎರಡನೇ ಅಲೆಯಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, ಶೇ 41.8ಕ್ಕೆ ಇಳಿದಿದೆ. 60 ವರ್ಷದ ಒಳಗಿನವರು ಮೊದಲ ಅಲೆಯಲ್ಲಿ ಶೇ 48.5ರಷ್ಟು ಮಂದಿ ಮೃತಪಟ್ಟಿದ್ದರೆ, ಎರಡನೇ ಅಲೆಯಲ್ಲಿ ಶೇ 58.2ಕ್ಕೆ ಏರಿದೆ.

‘ಸೋಂಕಿನ ಲಕ್ಷಣ ಕಂಡು ಬಂದಾಗ ಯಾರು ಕೂಡಲೇ ಬಂದು ಪರೀಕ್ಷೆ ಮಾಡಿಸಿಕೊಳ್ಳುತ್ತಾರೋ ಅಂಥವರು ಗುಣಮುಖರಾಗಿ ಹೋಗಿದ್ದಾರೆ. ಯಾರು ಬಾರದೇ ಮನೆಯಲ್ಲೇ ಕುಳಿತು ಉಸಿರಾಟದ ಸಮಸ್ಯೆ ತೀವ್ರಗೊಂಡಾಗ ಬಂದಿದ್ದಾರೋ ಅವರಲ್ಲಿ ಮರಣಪ್ರಮಾಣ ಹೆಚ್ಚಾಗಿದೆ. ಬಹುತೇಕರು ಉಸಿರಾಟದ ಪ್ರಮಾಣ 50, 60ಕ್ಕೆ ಇಳಿದ ಮೇಲೆ ಬಂದಿದ್ದಾರೆ. ಒಬ್ಬರಂತೂ ಆಸ್ಪತ್ರೆಗೆ ಬರುವಾಗ 30ರಲ್ಲಿ ಇತ್ತು. ನಮ್ಮ ವೈದ್ಯರು ಸರಿಯಾಗಿಯೇ ಕೆಲಸ ಮಾಡುತ್ತಿದ್ದರೂ ಈ ರೀತಿ ನಿರ್ಲಕ್ಷ್ಯ ವಹಿಸಿ ತಡವಾಗಿ ಬಂದಾಗ ಅವರನ್ನು ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ಈ ಬಗ್ಗೆ ಎಲ್ಲೆಡೆ ಜಾಗೃತಿ ಮೂಡಿಸಿದ್ದೇವೆ. ಈಗ ಜನರು ಬರುತ್ತಿದ್ದಾರೆ. ಇನ್ನೊಂದು ವಾರದಲ್ಲಿ ಮರಣ ಪ್ರಮಾಣ ಕಡಿಮೆಯಾಗಲಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ವಿಶ್ವಾಸ ವ್ಯಕ್ತಪಡಿಸಿದರು.

‘ಎಂಐಸಿಯು, ವೆಂಟಿಲೇಟರ್‌ಗಳಿಗೆ ಇನ್ನೂ ಬೇಡಿಕೆ ಇದೆ. ಆದರೆ, ಮೊದಲಿನ ಹಾಹಾಕಾರ ಈಗಿಲ್ಲ. ಈಗ ಮ್ಯಾನೇಜ್‌ ಮಾಡಲಾಗುತ್ತಿದೆ. ಈ ವಾರ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂದರೆ ಮುಂದಿನ ವಾರ ಮರಣ ಪ್ರಮಾಣವೂ ಕಡಿಮೆಯಾಗುತ್ತದೆ. ಜನರು ಸೋಂಕಿನ ಲಕ್ಷಣ ಕಂಡು ಬಂದರೆ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್‌ ಸಲಹೆ ನೀಡಿದರು.

‘ನಗರ ಪ್ರದೇಶಗಳಲ್ಲಿ ತಮಗೆ ಗೊತ್ತಿರುವ ವೈದ್ಯರು, ಮೆಡಿಕಲ್‌ಗಳಿಂದ ಔಷಧ ತಗೊಂಡು ಸುಮ್ಮನಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲೂ ಹೊರಬಾರದೆ ಇದ್ದಿದ್ದು ಮರಣ ಪ್ರಮಾಣ ಏರಿಕೆಯಾಗಲು ಕಾರಣ. ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಅವರು ಪ್ರತಿ ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು. ಗ್ರಾಮಗಳಲ್ಲಿ ಸರ್ವಲೆನ್ಸ್‌ ಹೆಚ್ಚಿಸಲು ಕ್ರಮ ಕೈಗೊಂಡರು. ಮೊದಲು ಗ್ರಾಮಗಳಲ್ಲಿ ಜನ ಸಾಯುತ್ತಿದ್ದರೂ ಯಾವುದರಿಂದ ಎಂದು ಗೊತ್ತಾಗುತ್ತಿರಲಿಲ್ಲ. ಕೊರೊನಾ ಪರೀಕ್ಷೆ ಕಡ್ಡಾಯ ಮಾಡಿ ಎಲ್ಲರನ್ನೂ ಟೆಸ್ಟ್‌ಗೆ ಬರುವಂತೆ ಮಾಡಿದ್ದರಿಂದ ಈಗ ಯಾವುದರಿಂದ ಸಾವು ಸಂಭವಿಸುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್‌ ಮಾಹಿತಿ ನೀಡಿದರು.

‘ಆಸ್ಪತ್ರೆಗಳಲ್ಲಿ ಆರಂಭದಲ್ಲಿ ಉಸಿರಾಟ ತೊಂದರೆ ಇರುವವರೆಲ್ಲ ವೆಂಟಿಲೇಟರ್‌, ಐಸಿಯುನಲ್ಲೇ ಇರುತ್ತಿದ್ದರು. ಇದರಿಂದ ಬೇರೆಯವರಿಗೆ ಅವಕಾಶ ಸಿಗುತ್ತಿರಲಿಲ್ಲ. ಜಿಲ್ಲಾಧಿಕಾರಿಯೇ ನಿಂತು ಸ್ಟೆಪ್‌ಡೌನ್‌ ಟ್ರೀಟ್‌ಮೆಂಟ್‌ ಜಾರಿ ಮಾಡಿದ್ದರಿಂದ ಈ ಸಮಸ್ಯೆ ಕಡಿಮೆಯಾಗಿದೆ. ಐಸಿಯುನಲ್ಲಿದ್ದವರು ಚೇತರಿಸಿಕೊಂಡರೆ ಅಲ್ಲಿಂದ ಆ‌ಮ್ಲಜನಕ ಬೆಡ್‌ಗಳಿಗೆ, ಅಲ್ಲಿಂದ ಸಾಮಾನ್ಯ ಬೆಡ್‌ಗಳಿಗೆ ಬರುವಂತೆ ಮಾಡಿದರು. ಹಾಗಾಗಿ ಈಗ ಬೆಡ್‌ಗಳ ಕೊರತೆ ಇಲ್ಲ’ ಎಂದರು.

ಅಂಕಿ ಅಂಶ

13,380

ಕೊರೊನಾ ಮೊದಲ ಅಲೆಯಲ್ಲಿ ಸೋಂಕಿತರಾದ ಪುರುಷರು

9,187

ಕೊರೊನಾ ಮೊದಲ ಅಲೆಯಲ್ಲಿ ಸೋಂಕಿತರಾದ ಮಹಿಳೆಯರು

14,623

ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರಾದ ಪುರುಷರು

10,478

ಕೊರೊನಾ ಎರಡನೇ ಅಲೆಯಲ್ಲಿ ಸೋಂಕಿತರಾದ ಮಹಿಳೆಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT