ಭಾನುವಾರ, ಜುಲೈ 25, 2021
22 °C
ಮಳಿಗೆ ಬಾಡಿಗೆ, ಉಡುಪು ಪೂರೈಸಿದವರಿಗೆ ಹಣ ಪಾವತಿಸಲು ಪರದಾಟ

ಖಾದಿ ಉದ್ಯಮಕ್ಕೆ ತಟ್ಟಿದ ಕೊರೊನಾ ಬಿಸಿ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಬಿಸಿ ಖಾದಿ ಉದ್ಯಮಕ್ಕೂ ತಟ್ಟಿದೆ. ಕೋವಿಡ್‌ ಭಯದಿಂದ ಜನ ಖರೀದಿಗೆ ಬಾರದೇ ಇರುವುದು ಖಾದಿ ವ್ಯಾಪಾರಿಗಳಿಗೆ ಬೆವರಿಳಿಸಿದೆ.

ಬೇಸಿಗೆ ಬಂತೆಂದರೆ ಖಾದಿ ಬಟ್ಟೆ ತಂಪು ಎಂದು ಹೆಚ್ಚಿನ ಜನ ಖಾದಿ ಬಟ್ಟೆ ಖರೀದಿಗೆ ಬರುತ್ತಿದ್ದರು. ಹೀಗಾಗಿ ಮಾರ್ಚ್‌ನಿಂದ ಮೂರು ತಿಂಗಳ ಅವಧಿಯಲ್ಲೇ ವರ್ಷದ ಬಹುಪಾಲು ವಹಿವಾಟು ನಡೆಯುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಮಾರ್ಚ್‌ನಿಂದ ಲಾಕ್‌ಡೌನ್‌ ಇದ್ದುದರಿಂದ ಖಾದಿ ಅಂಗಡಿಗಳು ಮುಚ್ಚಿದ್ದವು. ಈಗ ಮಳಿಗೆಗಳನ್ನು ತೆರೆದಿದ್ದರೂ ಜನ ಇತ್ತ ಮುಖ ಮಾಡದೇ ಇರುವುದು ವ್ಯಾಪಾರಿಗಳನ್ನು ಚಿಂತೆಗೀಡು ಮಾಡಿದೆ.

‘ಯುಗಾದಿಯಿಂದ ಖಾದಿ ಬಟ್ಟೆಗಳ ವ್ಯಾಪಾರ ಚುರುಕು ಪಡೆಯುತ್ತಿತ್ತು. ಮದುವೆ, ಶುಭ ಸಮಾರಂಭಗಳ ಸೀಸನ್‌ನಲ್ಲೂ ಹೆಚ್ಚು ಜನ ಬರುತ್ತಿದ್ದರು. ರಂಜಾನ್‌ ತಿಂಗಳಲ್ಲೂ ಒಳ್ಳೆಯ ವ್ಯಾಪಾರ ಆಗುತ್ತಿತ್ತು. ಮೂರು ತಿಂಗಳ ಅವಧಿಯಲ್ಲಿ ₹ 6 ಲಕ್ಷದವರೆಗೂ ವಹಿವಾಟು ನಡೆಯುತ್ತಿತ್ತು. ಆದರೆ, ಈ ಬಾರಿ ಲಾಕ್‌ಡೌನ್‌ನಿಂದಾಗಿ ವ್ಯಾಪಾರವೇ ನಡೆಯಲಿಲ್ಲ’ ಎಂದು ಅಶೋಕ ರಸ್ತೆಯ ‘ಖಾದಿ ಭವನ’ದ ಮಾಲೀಕ ನಾಗರಾಜ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜೂನ್‌ 1ರಿಂದ ಅಂಗಡಿ ಬಾಗಿಲು ತೆರೆದಿದ್ದೇನೆ. ಸಾಮಾನ್ಯ ದಿನಗಳಲ್ಲಿ ದಿನಕ್ಕೆ ₹ 8,000ವರೆಗೆ ವ್ಯಾಪಾರ ಆಗುತ್ತಿತ್ತು. ಈಗ ₹ 1,000 ವ್ಯಾಪಾರವಾದರೆ ನಮ್ಮ ಅದೃಷ್ಟ. ಅಂಗಡಿಯ ಬಾಡಿಗೆ, ವಿದ್ಯುತ್‌ ಕಟ್ಟುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ನಮಗೆ ಬಟ್ಟೆಗಳನ್ನು ಪೂರೈಸಿದವರಿಗೆ ನೀಡಬೇಕಾದ ಹಣವನ್ನು ಹೇಗೆ ಹೊಂದಿಸಬೇಕು ಎಂಬುದೇ ತಿಳಿಯುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘ಯುಗಾದಿ ಒಂದು ತಿಂಗಳು ಮೊದಲೇ ಮಾರಾಟಕ್ಕೆ ಅಗತ್ಯ ಬಟ್ಟೆಗಳನ್ನು ಸಿದ್ಧಪಡಿಸಿಕೊಂಡಿದ್ದೆವು. ಆದರೆ, ಲಾಕ್‌ಡೌನ್‌ನಿಂದಾಗಿ ಯುಗಾದಿ, ರಂಜಾನ್‌, ಮದುವೆ ಸೀಸನ್‌ ಕಳೆದುಹೋಯಿತು. ಮೊದಲು ದಿನಕ್ಕೆ ₹ 10 ಸಾವಿರ ವಹಿವಾಟು ಆಗುತ್ತಿತ್ತು. ನಮ್ಮ ಜೀವವನ್ನು ಪಣಕ್ಕಿಟ್ಟು ಅಂಗಡಿಯನ್ನು ತೆರೆಯುತ್ತಿದ್ದರೂ ಈಗ ₹ 1,000 ವಹಿವಾಟು ಆಗುತ್ತಿಲ್ಲ. ನಮ್ಮ ಖರ್ಚು ಮಾತ್ರ ನಿಂತಿಲ್ಲ. ಅದಕ್ಕೆ ತಕ್ಕಂತೆ ವರಮಾನ ಮಾತ್ರ ಬರುತ್ತಿಲ್ಲ’ ಎಂದು ಅಶೋಕ ರಸ್ತೆಯ ‘ಬಾಪೂಜಿ ಖಾದಿ ಭವನ’ದ ಮಾಲೀಕ ಸುಜಿತ್‌ ಸಂಕಟವನ್ನು ಹೇಳಿಕೊಂಡರು.

ಸಂಬಳಕ್ಕೆ ಹಣ ಹೊಂದಿಸುವುದು ಕಷ್ಟ

‘ನಮ್ಮ ಸಂಘವು ಎಂಟು ಕಡೆ ಉತ್ಪಾದನಾ ಘಟಕ ಹೊಂದಿದೆ. ಲಾಕ್‌ಡೌನ್‌ನಿಂದಾಗಿ ಬೆಂಗಳೂರು, ದಾವಣಗೆರೆ, ಹಿರಿಯೂರು ಹಾಗೂ ಹರಿಹರದಲ್ಲಿರುವ ಮಾರಾಟ ಕೇಂದ್ರಗಳನ್ನು ತೆರೆದಿರಲಿಲ್ಲ. ಇದರಿಂದ ಸುಮಾರು ₹ 20 ಲಕ್ಷ ಮೌಲ್ಯದ ಬಟ್ಟೆ ಹಾಗೂ ಸಿದ್ಧ ಉಡುಪು ಮಾರಾಟವಾಗದೇ ಉಳಿದಿದೆ. ನಿಟುವಳ್ಳಿಯ ಕೇಂದ್ರದಲ್ಲಿ ದಿನಕ್ಕೆ ₹ 12 ಸಾವಿರದವರೆಗೆ ವಹಿವಾಟು ನಡೆಯುತ್ತಿತ್ತು. ಈಗ ₹ 2,000 ವ್ಯಾಪಾರವಾದರೆ ಹೆಚ್ಚು’ ಎಂದು ಹರಿಹರ ಚರಕ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದ ಕಾರ್ಯದರ್ಶಿ ಎಂ.ಎಸ್‌. ರಮೇಶ್‌ ಮಾಹಿತಿ ನೀಡಿದರು.

‘ನಮ್ಮ ಸಂಘದಡಿ ಸುಮಾರು 400 ಜನ ಕೆಲಸ ಮಾಡುತ್ತಿದ್ದಾರೆ. ₹ 3 ಕೋಟಿ ಮೌಲ್ಯದ ಸಿದ್ಧ ಉಡುಪು ಮಾರಾಟಕ್ಕೆ ತಯಾರಾಗಿದೆ. ಆದರೆ, ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ನೂಲುವವರು ಹಾಗೂ ನೇಕಾರರಿಗೆ ಮಜೂರಿ ಕೊಡುವುದು ಕಷ್ಟವಾಗುತ್ತಿದೆ’ ಎಂದು ತಿಳಿಸಿದರು.

ಖಾದಿ ಮಾಸ್ಕ್‌

ಕೊರೊನಾ ಹಿನ್ನೆಲೆಯಲ್ಲಿ ಮಾಸ್ಕ್‌ಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಖಾದಿ ಬಟ್ಟೆಯಿಂದ ಮಾಸ್ಕ್‌ಗಳನ್ನು ತಯಾರಿಸಿ ಮಾರಾಟಕ್ಕೆ ಇಡಲಾಗಿದೆ. ಎರಡು ಪದರಗಳಲ್ಲಿರುವ ಖಾದಿ ಮಾಸ್ಕ್‌ ಅನ್ನು ತೊಳೆದು ಮರು ಬಳಕೆ ಮಾಡಬಹುದಾಗಿದೆ. ಒಂದಕ್ಕೆ ₹ 20 ಹಾಗೂ ₹ 30ರ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ‘ಸ್ವದೇಶಿ’ ವಸ್ತು ಖರೀದಿಯನ್ನು ಪ್ರತಿಪಾದಿಸಿದ್ದಾರೆ. ನಾವೂ ವಿನ್ಯಾಸದಲ್ಲಿ ಬದಲಾವಣೆ ಮಾಡಿದ್ದೇವೆ. ಯುವಕರು ಖಾದಿ ಬಟ್ಟೆಯತ್ತ ಮುಖ ಮಾಡಿದರೆ ಮಾತ್ರ ನಾವು ಉಳಿಯುತ್ತೇವೆ.

– ಸುನೀಲ್‌, ಮಾಲೀಕ, ಬಾಪೂಜಿ ಖಾದಿ ಭವನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು