ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಡಿಗೆ ಕಟ್ಟದ ಅಂಗಡಿಗಳಿಗೆ ಪಾಲಿಕೆ ಬೀಗ

ಒಂದೇ ದಿನ ₹ 10.68 ಲಕ್ಷ ಪಾವತಿಸಿದ ಎಚ್ಚೆತ್ತುಕೊಂಡ ಬಾಡಿಗೆದಾರರು
Last Updated 3 ಫೆಬ್ರುವರಿ 2021, 2:23 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ಅಡಿಯಲ್ಲಿ ಬರುವ ಮಳಿಗೆಗಳ ಬಾಡಿಗೆಯನ್ನು ಕಟ್ಟದೇ ಉಳಿಸಿಕೊಂಡಿದ್ದವರಿಗೆ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿ ಮಂಗಳವಾರ ಬಿಸಿ ಮುಟ್ಟಿಸಿದ್ದಾರೆ. ಗೂಡ್‌ಶೆಡ್‌ ಅಂಗಡಿಗಳಿಗೆ ಬೀಗ ಹಾಕುತ್ತಿದ್ದಂತೆ ಎಚ್ಚೆತ್ತುಕೊಂಡ ಬೇರೆ ಬೇರೆ ವಾರ್ಡ್‌ಗಳ ಮಳಿಗೆ ಬಾಡಿಗೆದಾರರು ಬಾಡಿಗೆ ಪಾವತಿಸಲು ಮುಂದಾಗಿದ್ದಾರೆ. ಪರಿಣಾಮ ಒಂದೇ ದಿನ ₹ 10.68 ಲಕ್ಷ ಪಾವತಿಯಾಗಿದೆ.

‘ಪಾಲಿಕೆ ಅಡಿಯಲ್ಲಿ 506 ಮಳಿಗೆಗಳನ್ನು ಬಾಡಿಗೆ ನೀಡಲಾಗಿತ್ತು. 2020–21ನೇ ಸಾಲು ಮತ್ತು ಅದರ ಹಿಂದಿನ ಬಾಡಿಗೆ ಸೇರಿ ಒಟ್ಟು ₹ 2.65 ಕೋಟಿ ಬರಲು ಬಾಕಿ ಇತ್ತು. ಬಾಡಿಗೆದಾರರಿಗೆ ವೈಯಕ್ತಿಕ ನೋಟಿಸ್‌ ನೀಡಿ ಎಚ್ಚರಿಕೆ ನೀಡಿದ್ದರೂ ಬಹುತೇಕರು ಕಟ್ಟಿರಲಿಲ್ಲ. ಹಾಗಾಗಿ 2020ರ ಡಿಸೆಂಬರ್‌ ಅಂತ್ಯಕ್ಕೆ ₹ 53.78 ಲಕ್ಷ ಮಾತ್ರ ಸಂಗ್ರಹವಾಗಿತ್ತು. ಜನವರಿಯಲ್ಲಿ ಬಾಡಿಗೆ ಕಟ್ಟಲು ಒತ್ತಡ ಹೇರಿದ ಮೇಲೂ ₹ 12.5 ಲಕ್ಷ ಮಾತ್ರ ಸಂಗ್ರಹವಾಗಿತ್ತು. ಹಾಗಾಗಿ ಅಂಗಡಿಗಳಿಗೆ ಬೀಗ ಹಾಕಲು ಸೂಚನೆ ನೀಡಬೇಕಾಯಿತು’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ಮಾಹಿತಿ ನೀಡಿದ್ದಾರೆ.

8 ಅಂಗಡಿಗಳಿಗೆ ಬೀಗ ಹಾಕುತ್ತಿದ್ದಂತೆ ಉಳಿದವರು ಬಾಡಿಗೆ ಪಾವತಿ ಮಾಡಲು ಬಂದಿದ್ದಾರೆ. ಮಾರ್ಚ್‌ ಅಂತ್ಯದವರೆಗೆ ಕಾರ್ಯಾಚರಣೆ ನಡೆಸಲಾಗುವುದು. ಆಗ ಎಲ್ಲ ಬಾಡಿಗೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಾಚರಣೆಯಲ್ಲಿ ಕಂದಾಯ ಅಧಿಕಾರಿ ಕೆ. ನಾಗರಾಜ್‌, ಸಹಾಯಕ ಕಂದಾಯ ಅಧಿಕಾರಿ ಸುನಿಲ್‌, ಕಂದಾಯ ನಿರೀಕ್ಷಕ ತಿಮ್ಮಯ್ಯ, ಕರವಸೂಲಿಗಾರರು ಭಾಗವಹಿಸಿದ್ದರು ಎಂದು ಕಂದಾಯ ವಿಭಾಗದ ವೆಂಕಟೇಶ್‌ ತಿಳಿಸಿದರು.

ಖಾಲಿ ನಿವೇಶನಗಳ ಸ್ವಚ್ಛತೆ: ಸ್ವಚ್ಛವಿಲ್ಲದೇ ಇರುವ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ. ಅದರ ವೆಚ್ಚವನ್ನು ಆಯಾ ನಿವೇಶನದ ಮಾಲೀಕರೇ ಭರಿಸಬೇಕು. ಅವರ ಕಂದಾಯ ತೆರಿಗೆಯಲ್ಲಿ ಈ ವೆಚ್ಚವನ್ನು ಸೇರಿಸಿ ವಸೂಲಿ ಮಾಡಲಾಗುವುದು ಎಂದು ವಿಶ್ವನಾಥ ಪಿ. ಮುದಜ್ಜಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT