ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ನಾಳೆ ಚಾಲನೆ

1 ಲಕ್ಷ ಸಸಿ ನೆಡುವ ಕಾರ್ಯಕ್ರಮ ಉದ್ಘಾಟನೆ l ಸಚಿವರು ಸಂಸದರು ಭಾಗಿ
Last Updated 24 ನವೆಂಬರ್ 2020, 3:30 IST
ಅಕ್ಷರ ಗಾತ್ರ

ದಾವಣಗೆರೆ: ಜನರ ಮನೆಯ ಬಾಗಿಲಿಗೇ ಹೋಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯಿಂದ ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಎಂಬ ಯೋಜನೆ ರೂಪಿಸಲಾಗಿದೆ. ಅದಕ್ಕೆ ನ.25ರಂದು ಬೆಳಿಗ್ಗೆ 9ಕ್ಕೆ ಗಾಂಧಿನಗರ ಚೌಡೇಶ್ವರಿ ದೇವಸ್ಥಾನದ ಬಳಿ ಚಾಲನೆ ದೊರೆಯಲಿದೆ ಎಂದು ಪಾಲಿಕೆ ಮೇಯರ್‌ ಬಿ.ಜಿ. ಅಜಯ್ ಕುಮಾರ್‌ ತಿಳಿಸಿದರು.

‘ಜನರ ಋಣ ತೀರಿಸಲು ಈ ಯೋಜನೆ ರೂಪಿಸಿದ್ದೇನೆ. ಜನರು ಪಾಲಿಕೆಗೆ ಅಲೆದಾಡುವುದನ್ನು ತಪ್ಪಿಸಬೇಕು. ಮಧ್ಯವರ್ತಿ ಹಾವಳಿ ತಪ್ಪಿಸಬೇಕು ಎಂಬ ಸದುದ್ದೇಶ ಇದರ ಹಿಂದೆ ಇದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ
ತಿಳಿಸಿದರು.

‘ಮೈಸೂರಿನಂತೆ ದಾವಣಗೆರೆಯನ್ನು ಕೂಡ ಹಸಿರುನಗರ ಮಾಡಬೇಕು ಎಂಬ ಉದ್ದೇಶದಿಂದ ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದೇವೆ. ಮಳೆಗಾಲ ಮುಗಿದು ಬೇಸಿಗೆ ಆರಂಭಗೊಂಡಿರುವುದರಿಂದ ಪ್ರತಿ
ವಾರ್ಡ್‌ಗೆ 100ರಂತೆ ಈಗ ಸಸಿ ನೆಡಲಾಗುವುದು. ಉಳಿದ 95,500 ಗಿಡಗಳನ್ನು ಮುಂದಿನ ಜೂನ್‌ನಲ್ಲಿ ನೆಡಲಾಗುವುದು’ ಎಂದು
ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ, ‘ಮನೆ ಬಾಗಿಲಿಗೆ ಮಹಾನಗರ ಪಾಲಿಕೆ’ ಕಾರ್ಯಕ್ರಮ ಉದ್ಘಾಟಿಸುವರು. ಸಸಿನೆಡುವ ಕಾರ್ಯಕ್ರಮಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಚಾಲನೆ ನೀಡುವರು. ಜನನ/ಮರಣ ಪ್ರಮಾಣ ಪತ್ರಗಳನ್ನು ಶಾಸಕ ಎಸ್‌.ಎ. ರವೀಂದ್ರನಾಥ್‌ ವಿತರಿಸುವರು. ಮನೆ ಕಂದಾಯ ಸ್ವೀಕೃತಿ ಕೇಂದ್ರವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿ, ಖಾತೆ ಬದಲಾವಣೆ, ಜನನ, ಮರಣ ಪ್ರಮಾಣ ಪತ್ರ, ಮನೆ ಕಂದಾಯ, ನೀರಿನ ಕಂದಾಯ, ಖಾತೆ ನೋಂದಣಿ, ಬೀದಿ ದೀಪ ಅಳವಡಿಕೆ, ದುರಸ್ತಿ ಮುಂತಾದವುಗಳನ್ನು ಸ್ಥಳದಲ್ಲಿಯೇ ಮಾಡಿಕೊಡಲಾಗುವುದು. ಕಂಪ್ಯೂಟರ್‌, ನೆಟ್‌ ಸೌಲಭ್ಯಗಳೊಂದಿಗೆ ಬಸ್‌ನಲ್ಲಿ ಸಿಬ್ಬಂದಿ ವಾರ್ಡ್‌ಗಳಿಗೆ ತೆರಳಲಿದ್ದಾರೆ ಎಂದರು.

ವಾರಕ್ಕೆ ಮೂರು ವಾರ್ಡ್‌ಗಳಲ್ಲಿ ಈ ರೀತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ದಿನ ನಿಗದಿ ಮಾಡಿ ಆಯಾ ವಾರ್ಡ್‌
ಗಳಲ್ಲಿ ಒಂದು ವಾರ ಪ್ರಚಾರ ಮಾಡಲಾಗುವುದು. ಅದಕ್ಕಾಗಿ ಕಸ ಸಂಗ್ರಹದ ವಾಹನ, ಖಾಸಗಿ ಆಟೊಗಳಲ್ಲಿ ಧ್ವನಿವರ್ಧಕ ಮೂಲಕ ತಿಳಿಸಲಾಗುವುದು. ಮನೆಮನೆಗೆ ಭಿತ್ತಿಪತ್ರ ತಲುಪಿಸಲಾಗುವುದು ಎಂದು ತಿಳಿಸಿದರು.

‘ಗೆಲ್ಲುವವರೆಗೆ ಮಾತ್ರ ಪಕ್ಷದ ಚಿಹ್ನೆ. ಗೆದ್ದ ಮೇಲೆ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಒಂದೇ ಎಂಬ ನಿಲುವಿನೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಹಾಗಾಗಿ ಕಾಂಗ್ರೆಸ್‌ನವರು ಗೆದ್ದಿರುವ ಒಂದನೇ ವಾರ್ಡ್‌ನಲ್ಲಿಯೇ ಮೊದಲ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಸ್ಪಷ್ಟನೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ತೆರಿಗೆ ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ನರೇಂದ್ರ ಕುಮಾರ್‌, ಗಿರೀಶ್‌, ಬಸವರಾಜ್‌, ಶ್ರೀನಿವಾಸ್ ಅವರೂ ಇದ್ದರು.

‘ಗ್ರಾಹಕರು ಅಸ್ವಸ್ಥರಾದ ಹೋಟೆಲ್‌ ವಿರುದ್ಧ ದೂರು’

ಹದಡಿ ರಸ್ತೆಯಲ್ಲಿರುವ ಹಳ್ಳಿ ಸೊಗಡು ಹೋಟೆಲ್‌ನಲ್ಲಿ ಭಾನುವಾರ ಉಪಾಹಾರ ಮತ್ತು ಟಿ ಸೇವಿಸಿ ಸುಮಾರು 30 ಮಂದಿ ಅಸ್ವಸ್ಥರಾಗಿದ್ದಾರೆ. ಈ ಘಟನೆಗೆ ಮಾಲೀಕನೇ ನೇರ ಹೊಣೆ. ಹೋಟೆಲ್‌ಗೆ ಪಾಲಿಕೆಯಿಂದ ಉದ್ದಿಮೆ ಅನುಮತಿ ಪಡೆಯದ ಕಾರಣ ಪ್ರಕರಣ ದಾಖಲಿಸಲಾಗಿದೆ ಎಂದು ಮೇಯರ್‌ ಅಜಯ್‌ಕುಮಾರ್‌ ತಿಳಿಸಿದರು.

ಹೋಟೆಲ್‌ಗೆ ಪಾಲಿಕೆಯ ಆರೋಗ್ಯ ಶಾಖೆಯ ಸಿಬ್ಬಂದಿ ಹೋಟೆಲ್‌ಗೆ ಬೀಗ ಜಡಿದಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ಆಹಾರದ ಗುಣಮಟ್ಟದ ಬಗ್ಗೆ ಪರೀಕ್ಷೆ ಮಾಡಲಿದ್ದಾರೆ ಎಂದರು.

‘ಅಕ್ರಮ ಕಟ್ಟಡ ತೆರವಿಗೆ ಕ್ರಮ’

ದಾವಣಗೆರೆ ಗ್ರಾಮಾಂತರ ಪೊಲೀಸ್‌ ಠಾಣೆಯ ಬಳಿ ಪಾಲಿಕೆಯ ಜಾಗದಲ್ಲಿ ಅಕ್ರಮವಾಗಿ ಎರಡು ರಾತ್ರಿಗಳಲ್ಲಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲಾಗುವುದು ಎಂದು ಮೇಯರ್‌ ಅಜಯ್‌ಕುಮಾರ್‌ ಸ್ಪಷ್ಟಪಡಿಸಿದರು.

ತೆರವುಗೊಳಿಸಲು ಆಯುಕ್ತರು ಆದೇಶ ನೀಡಲಿದ್ದಾರೆ. ಈ ಜಾಗದಲ್ಲಿ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT