ಮಂಗಳವಾರ, ಏಪ್ರಿಲ್ 13, 2021
23 °C
ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ವೀಕ್ಷಿಸಿದ ಸಂಸದ ಜಿ.ಎಂ. ಸಿದ್ದೇಶ್ವರ

ಕಳಪೆ ಕಾಮಗಾರಿ ಸರಿಪಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬಾಷಾನಗರದಲ್ಲಿ ಕಾಣದ ಸ್ವಚ್ಛತೆ, ಎಸ್‌ಪಿಎಸ್‌ ನಗರದಲ್ಲಿ ಕಂಡ ಕಳಪೆ ಕಾಮಗಾರಿ. ಇದನ್ನು ನೋಡಿದ ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ವಚ್ಛತೆ ಮಾಡಿಸಬೇಕು. ಕಳಪೆ ಕಾಮಗಾರಿಗಳನ್ನು ಸರಿಪಡಿಸಬೇಕು ಎಂದು ಸೂಚಿಸಿದರು.

ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳನ್ನು ಸೋಮವಾರ ಜಿಲ್ಲಾಧಿಕಾರಿ, ಇತರ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆಗೆ ಪರಿಶೀಲಿಸಿದರು. ಜಿಎಂಐಟಿ ಕಾಲೇಜಿನಿಂದ ಹೊರಟ ತಂಡ ಶಿವಾಲಿ ಟಾಕೀಸ್, ಹಿಂದೂ ರುದ್ರಭೂಮಿ, ಗಾಂಧೀನಗರ ವೃತ್ತ, ಅಂಬೇಡ್ಕರ್ ವೃತ್ತ, ಬಾಷಾನಗರ, ಎಸ್‍ಪಿಎಸ್ ನಗರ, ಯಲ್ಲಮ್ಮ ನಗರ, ಕುಂದವಾಡ ಕೆರೆ ಹಾಗೂ ಸುತ್ತಮುತ್ತ ಸ್ಥಳಗಳಿಗೆ ಭೇಟಿ ನೀಡಿದರು.

ಶಿವಾಲಿ ಚಿತ್ರಮಂದಿರದ ಮುಂಭಾಗದಲ್ಲಿ ನಡೆಯುತ್ತಿರುವ ರಾಜಕಾಲುವೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವ ಬಗ್ಗೆ   ಸಿದ್ದೇಶ್ವರ ಅಸಮಾಧಾನ ವ್ಯಕ್ತಪಡಿಸಿದರು.

ಬಾಷಾ ನಗರದಲ್ಲಿ ಏಳು ರಸ್ತೆಗಳು ಸೇರುವ ಸ್ಥಳದಲ್ಲಿನ ಕಾಮಗಾರಿ ವೀಕ್ಷಿಸುವ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ಸಮಸ್ಯೆಗಳನ್ನು ಮುಂದಿಟ್ಟರು. ನೀವು ಹೇಳಿದ ಕಾಮಗಾರಿಗಳು ಸ್ಮಾರ್ಟ್‍ಸಿಟಿ ಯೋಜನೆಯಲ್ಲಿ ಸೇರಿವೆ. ಅವುಗಳನ್ನು ಮಾಡಲಾಗುವುದು ಎಂದು ಸಂಸದರು ಸಮಾಧಾನ ಪಡಿಸಿದರು. ಬಾಷಾನಗರದಲ್ಲಿ ಸ್ವಚ್ಛತೆ ಇಲ್ಲದ್ದನ್ನು ಕಂಡು ಸಿಡಿಮಿಡಿಗೊಂಡರು.

ಜಲಸಿರಿ ಕೆಲಸ ಬೇಗ ಮುಗಿಸಿ: ಸ್ಮಾರ್ಟ್‍ಸಿಟಿ ಕಾಮಗಾರಿ ವೀಕ್ಷಣೆ ಸಂದರ್ಭದಲ್ಲಿ ಎರಡು ಜಲಸಿರಿ ಟ್ಯಾಂಕ್‍ಗಳನ್ನು ವೀಕ್ಷಿಸಿ, ಎಸ್‍ಎಸ್‍ಎಂ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೀರಿನ ಟ್ಯಾಂಕ್‍ನ ಕೆಲಸ ಎಂಟು ತಿಂಗಳಿನಿಂದ ನಿಂತಿದೆ. ಆದಷ್ಟು ಬೇಗ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಜಲಸಿರಿ ಯೋಜನೆಯ ಗುತ್ತಿಗೆದಾರರಲ್ಲಿ ನೌಕರರು ಕಡಿಮೆ ಇದ್ದಾರೆ ಎಂಬುದನ್ನು ತಿಳಿದ ಸಂಸದರು, ಈ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ಕರೆಯಬೇಕು. ಗುತ್ತಿಗೆದಾರರನ್ನು ಆ ಸಭೆಗೆ ಕರೆಸಿ ಮಾತನಾಡಬೇಕು ಎಂದರು.

ಕುಂದವಾಡ ಕೆರೆ: ಕುಂದವಾಡ ಕೆರೆ ಕಾಮಗಾರಿಯಿಂದ ಪರಿಸರಕ್ಕೆ ಹಾನಿ ಎಂದು ಹೇಳುವವರು ಮಾತುಕತೆಗೆ ಬರುತ್ತಿಲ್ಲ. ಇಲ್ಲಿ ಏನು ಸಮಸ್ಯೆ ಇದೆ ಎಂಬುದು ಅವರಿಗೆ ಗೊತ್ತು ಪಡಿಸುವುದು ಹೇಗೆ? ಕೊಳಚೆ ನೀರು ಕೆರೆಗೆ ಸೇರಿ ನೀರು ಹಾಳಾಗುತ್ತಿದೆ. ಅದನ್ನು ತಪ್ಪಿಸುವ ಕೆಲಸವಾಗುತ್ತಿದೆ. ಕೆರೆಯಲ್ಲಿ ತುಂಬಿದ ಹೂಳು ಎತ್ತಲಾಗುತ್ತದೆ. ಹೆಚ್ಚು ನೀರು ಸಂಗ್ರಹದೊಂದಿಗೆ ಕೆರೆಯ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕುಂದವಾಡ ಕೆರೆಯ ಪಶ್ಚಿಮ ಭಾಗದಲ್ಲಿ ನೀರು ಸೋರಿಕೆಯಾಗುತ್ತಿದ್ದು ಅದನ್ನು ತಡೆಗಟ್ಟಲು ಎಚ್‌ಡಿಇಪಿ ಪ್ಲಾಸ್ಟಿಕ್ ಅಳವಡಿಸಲಾಗಿದೆ. ಹಾಗೂ ಕೆರೆಯ ಸುತ್ತಮುತ್ತ ಇರುವ ಕಾರ್ಖಾನೆ, ಹೊಲ-ಗದ್ದೆ ಗಳಿಂದ ಬರುವ ಕಲುಷಿತ ನೀರು ಕೆರೆಗೆ ಸೇರದಂತೆ ಎಚ್ಚರವಹಿಸಲಾಗಿದೆ ಎಂದು ವಿವರಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಡಿ. ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪ ಮೇಯರ್‌ ಶಿಲ್ಪಾ ಜಯಪ್ರಕಾಶ್‌, ಪಾಲಿಕೆ ಸದಸ್ಯರು, ಅಧಿಕಾರಿಗಳು, ಎಂಜಿನಿಯರ್‌ಗಳು
ಇದ್ದರು.

‘ಇ–ಟಾಯ್ಲೆಟ್‌ಗೆ ಸಹಕಾರದ ಕೊರತೆ’

‘ಇ–ಟಾಯ್ಲೆಟ್‌ ಮೊದಲ ಹಂತದಲ್ಲಿ 9 ಸ್ಥಳಗಳಲ್ಲಿ ಹಾಕಿದ್ದೇವೆ. ಎರಡನೇ ಹಂತದಲ್ಲಿ 37 ಹಾಕಬೇಕಿತ್ತು. ಮೊದಲ ಹಂತದ್ದು ಮುಗಿದಿದೆ. ಎರಡನೇ ಹಂತದಲ್ಲಿ 20 ಇ ಟಾಯ್ಲೆಟ್‌ ಆಗಿವೆ. ನಾಲ್ಕು ಕಮಿಷನ್‌ ಹಂತದಲ್ಲಿವೆ. ಆದರೆ ಸಾರ್ವಜನಿಕರಿಂದ ದೂರು ಬಂದಿರುವುದರಿಂದ ನಿಲ್ಲಿಸಿದ್ದೇವೆ. ಕೆಲವರು ಕಾಯಿನ್‌ ಹಾಕುವ ಬದಲು ವಾಷರ್‌ ಹಾಕುತ್ತಾರೆ. ಟಾಯ್ಲೆಟ್‌ಗೆ ಇಟ್ಟಿಗೆ ಹಾಕುತ್ತಾರೆ’ ಎಂದು ಸ್ಮಾರ್ಟ್‌ಸಿಟಿ ಎಂಡಿ ರವೀಂದ್ರ ಮಲ್ಲಾಪುರ ಬೇಸರ ವ್ಯಕ್ತಪಡಿಸಿದರು.

ಹಳೇ ದಾವಣಗೆರೆಯಲ್ಲಿ ಕ್ಯೂಬ್‌ ಬ್ರಿಡ್ಜ್‌ ಮಾಡುತ್ತಿದ್ದೇವೆ. ನಗರಗಳಲ್ಲಿ ಹೆಚ್ಚೆಂದರೆ 10 ಮೀಟರ್‌ ಉದ್ದದ ಬ್ರಿಡ್ಜ್‌ ಇರುತ್ತದೆ. ಆದರೆ ಈ ಬ್ರಿಡ್ಜ್‌ 80 ಮೀಟರ್‌ ಇರಲಿದೆ. 8 ರಸ್ತೆಗಳು, ಅದರ ಚರಂಡಿಗಳು ಕನೆಕ್ಟ್‌ ಆಗುತ್ತದೆ. ಈ ಕಾಮಗಾರಿ ಮುಗಿದರೆ ಸ್ಮಾರ್ಟ್‌ಸಿಟಿ ಯೋಜನೆಯ ಈಗಿನ ಕಾಮಗಾರಿಗಳಲ್ಲಿ ಅರ್ಧ ಮುಗಿದಂತೆ. ಎರಡುಮೂರು ತಿಂಗಳಲ್ಲಿ ಮುಗಿಯಲಿದೆ ಎಂದು ತಿಳಿಸಿದರು.

ಸ್ಮಾರ್ಟ್‌ಸಿಟಿ ಯೋಜನೆಯ ₹ 1000 ಕೋಟಿಯಲ್ಲಿ ₹ 400 ಕೋಟಿ ಬಿಡುಗಡೆಯಾಗಿದೆ. ಅದರಲ್ಲಿ ₹ 374 ಕೋಟಿ ಖರ್ಚು ಮಾಡಿದ್ದೇವೆ. ಶೇ 70 ಖರ್ಚು ಮಾಡಿದಾಗ ಎರಡನೇ ಕಂತು ಬಿಡುಗಡೆ ಮಾಡಬೇಕು.ಇನ್ನೊಂದುವಾರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಕೇಂದ್ರ ಸರ್ಕಾರದ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ ಎಂದರು.

‘ಪಾಲಿಕೆ ಸದಸ್ಯರು, ಅಧಿಕಾರಿಗಳು ಪರಿಶೀಲಿಸಿ’

ಪಾಲಿಕೆ ಸದಸ್ಯರು ಐದಾರು ಮಂದಿಯ ತಂಡ ಮಾಡಿಕೊಂಡು ಹೋಗಿ ಕಾಮಗಾರಿಗಳನ್ನು ಪರಿಶೀಲಿಸಬೇಕು. ಸಮಸ್ಯೆಗಳಿದ್ದರೆ ನನ್ನ ಮತ್ತು ಜಿಲ್ಲಾಧಿಕಾರಿಯ ಗಮನಕ್ಕೆ ತರಬೇಕು. ಆಗ ಸಮಸ್ಯೆ ಪರಿಹರಿಸಲು ಸುಲಭ ಎಂದು ಪಾಲಿಕೆ ಸದಸ್ಯರಿಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ ನೀಡಿದರು.

ಸ್ವಚ್ಧತೆ ಸರಿಯಾಗದೇ ಇದ್ದರೆ ಆರೋಗ್ಯ ವಿಭಾಗದ ಎಂಜಿನಿಯರ್‌ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಕಳಪೆ ಕಾಮಗಾರಿ ಸರಿಪಡಿಸದಿದ್ದರೆ ಅಂಥವರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವದು ಎಂದು ಎಚ್ಚರಿಸಿದರು.

3 ತಿಂಗಳೊಳಗೆ ಹಂದಿಗಳಿಗೆ ವ್ಯವಸ್ಥೆ

ಹಂದಿಗಳನ್ನು ಬೇರೆಡೆಗೆ ಸಾಗಿಸಲು ನ್ಯಾಯಾಲಯದ ತಡೆಯಾಜ್ಞೆ ಇದೆ. ನಿಯಮಗಳ ಒಳಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗಬೇಕು. ನಗರದ ಹೊರವಲಯದಲ್ಲಿ ಸ್ಥಳ ಗುರುತಿಸಿ ಆವರಣ ಗೋಡೆ ನಿರ್ಮಿಸಿ ಹಂದಿಗಳನ್ನು ಅಲ್ಲಿಗೆ ಸಾಗಿಸಬೇಕು. ಯಾವಾಗ ಮಾಡುತ್ತೀರಿ ಎಂದು ಸಂಸದರು ಪ್ರಶ್ನಿಸಿದರು.

ಜಮೀನು ಗುರುತಿಸಲಾಗಿದೆ. ಪಾಲಿಕೆಗೆ ಹಸ್ತಾಂತರ ಆದ ಕೂಡಲೇ ಆವರಣ ಗೋಡೆ ನಿರ್ಮಿಸಲಾಗುವುದು. ಮೂರು ತಿಂಗಳು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.