ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆಯೊಳಗಿನ ಭ್ರಷ್ಟಾಚಾರ ಮಟ್ಟ ಹಾಕುವೆ

ಪ್ರಜಾವಾಣಿ ಸಂದರ್ಶನದಲ್ಲಿ ನೂತನ ಮೇಯರ್‌ ಎಸ್‌.ಟಿ. ವೀರೇಶ್‌ ವ್ಯಾಖ್ಯಾನ
Last Updated 26 ಫೆಬ್ರುವರಿ 2021, 2:48 IST
ಅಕ್ಷರ ಗಾತ್ರ

ದಾವಣಗೆರೆ: ‘ವಿದ್ಯಾರ್ಥಿ ಸಂಘಟನೆಯಲ್ಲಿ ಕೆಲಸ ಮಾಡುವಾಗ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ್ದೇನೆ. ಚುನಾವಣೆಯಲ್ಲಿ ಭ್ರಷ್ಟಾಚಾರ ವಿರುದ್ಧ ಪ್ರಚಾರ ಮಾಡಿದ್ದೇನೆ. ಹಾಗಾಗಿ ಪಾಲಿಕೆಯೊಳಗೆ ಭ್ರಷ್ಟಾಷಾರಕ್ಕೆ ಕಡಿವಾಣ ಹಾಕುತ್ತೇನೆ. ದಲ್ಲಾಳಿಗಳು ಬಾರದಂತೆ ಮಾಡಲು ಅಧಿಕಾರಿಗಳು ಕಡ್ಡಾಯ ಗುರುತಿನ ಚೀಟಿ ಕಡ್ಡಾಯ ಧರಿಸುವಂತೆ ಮಾಡುತ್ತೇನೆ. ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡದಂತೆ ಮಾಡಲು ಸಕಾಲದ ಬಗ್ಗೆ ಜನರು ಅರಿವು ಮೂಡಿಸಿಕೊಂಡು ಸಕಾಲದಲ್ಲೇ ಕೆಲಸ ಮಾಡಿಸಿಕೊಳ್ಳುವಂತೆ ಮಾಡುತ್ತೇನೆ. ಅಧಿಕಾರಿಗಳ ಭ್ರಷ್ಟಾಚಾರ ನಿಗ್ರಹಿಸಲು ಮೇಲಧಿಕಾರಿಗಳ ಜತೆಗೆ ಚರ್ಚಿಸಿ ಕಟ್ಟುನಿಟ್ಟಿನ ನಿಯಮ ಮಾಡುತ್ತೇನೆ’‌.

‘ಪ್ರಜಾವಾಣಿ’ ಸಂದರ್ಶನದಲ್ಲಿ ದಾವಣಗೆರೆ ಮಹಾನಗರ ಪಾಲಿಕೆ ನೂತನ ಮೇಯರ್‌ ಆಗಿ ಆಯ್ಕೆಯಾದ ಕೆ.ಬಿ. ಬಡಾವಣೆಯ ಸದಸ್ಯ ಎಸ್‌.ಟಿ. ವೀರೇಶ್‌ ಮೇಯರ್‌ ವ್ಯಕ್ತಪಡಿಸಿದ ಖಡಕ್‌ ಮಾತುಗಳಿವು.

* ಮೊದಲ ಆದ್ಯತೆಯ ಕೆಲಸಗಳು ಯಾವುವು?

ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇನೆ. ಸ್ವಚ್ಛತೆ ಅಂದರೆ ಬರೀ ಕಸ ಇಲ್ಲದಂತೆ ಗುಡಿಸುವುದಷ್ಟೇ ಅಲ್ಲ. ಕೇಂದ್ರ ಸರ್ಕಾರದ ಸ್ವಚ್ಛಭಾರತ್‌ ನಿಯಮಗಳ ಪ್ರಕಾರ ದಾವಣಗೆರೆ ನಗರ ಬಹಳ ಹಿಂದಿದೆ. ದೂಳು, ಹಸಿರು, ಒಳಚರಂಡಿ ಸಹಿತ ಎಲ್ಲವೂ ಆ ನಿಯಮಗಳ ‍ಪ್ರಕಾರ ಇರಬೇಕು. ರಾಜ್ಯದಲ್ಲಿ 10 ಸ್ವಚ್ಛ ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗಯನ್ನು ಒಂದು ವರ್ಷದ ಒಳಗೆ ತರುವುದಕ್ಕೆ ಮೊದಲ ಆದ್ಯತೆ.

* ಹಂದಿಗಳ ನಿಯಂತ್ರಣಕ್ಕೆ ಏನು ಕ್ರಮ?

ಹಂದಿಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು. ಆ ದಿಕ್ಕಿನಲ್ಲಿ ಕೆಲಸ ಮಾಡಲಾಗುವುದು. ಜಿಲ್ಲಾಧಿಕಾರಿ ಸಹಿತ ಮೇಲಧಿಕಾರಿಗಳ ಜತೆಗೆ ಚರ್ಚೆ ನಡೆಸಿ, ನ್ಯಾಯಾಲಯದ ನಿರ್ದೇಶನಕ್ಕೆ ಅನುಗುಣವಾಗಿಯೇ ನಿಯಂತ್ರಿಸಲಾಗುವುದು.

* ನಗರದ ಯುವಜನರಿಗೆ ಏನು ಕೊಡುಗೆ ನೀಡುವಿರಿ?

ಕೌಶಲಯುಕ್ತ ಯುವಜನರಾಗಬೇಕು. ಸ್ವಯಂ ಉದ್ಯೋಗಿಗಳಾಗಬೇಕು. ಅದಕ್ಕಾಗಿ ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು. ಅದಕ್ಕೆ ಹೆಚ್ಚು ಪ್ರಚಾರ ನೀಡಲಾಗುವುದು.

* ಹೊಸ ಯೋಜನೆ ಇದೆಯೇ?

ನಗರ ಕಾಡು ಎಂಬ ಯೋಜನೆಯನ್ನು ಈ ನಗರಕ್ಕೆ ಪರಿಚಯಿಸುವುದಷ್ಟೇ ಅಲ್ಲ. ಸುಮಾರು 50 ನಗರ ಕಾಡುಗಳನ್ನು (ಅರ್ಬನ್‌ ಫಾರೆಸ್ಟ್‌) ನನ್ನ ಅವಧಿಯಲ್ಲಿ ನಿರ್ಮಿಸಲಾಗುವುದು. ಐದು ವರ್ಷ ನಿರ್ವಹಣೆಯನ್ನೂ ಮಾಡಲು ಕ್ರಮ ಕೈಗೊಳ್ಳಲಾಗುವುದು.

* ಬಡತನ ರೇಖೆಯ ಕೆಳಗಿರುವವರಿಗೆ, ಕೊಳೆಗೇರಿ ನಿವಾಸಿಗಳಿಗೆ ಏನಿದೆ ಯೋಜನೆ?

ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ವಸತಿ ನೀಡುವ ಯೋಜನೆ ಇದೆ. ಶಾಸಕರು ಆಶ್ರಯ ಮನೆ ನೀಡುವ ಕಾರ್ಯವೂ ಪ್ರಗತಿಯಲ್ಲಿದೆ. ಎಲ್ಲರಿಗೂ ಮೂಲ ಸೌಕರ್ಯ ಒದಗಿಸಲು ಆದ್ಯತೆ ನೀಡಲಾಗುವುದು.

* ತೆರಿಗೆ, ಬಾಡಿಗೆ ವಸೂಲಿ ಹೇಗೆ?

ಪಾಲಿಕೆಯ ಸೌಲಭ್ಯ ಪಡೆದವರು ತೆರಿಗೆ, ಬಾಡಿಗೆ ಪಾವತಿ ಮಾಡಲೇಬೇಕು. 500ಕ್ಕೂ ಅಧಿಕ ಮಳಿಗೆಗಳಲ್ಲಿ ಶೇ 80ರಷ್ಟು ಮಂದಿ ಬಾಡಿಗೆ ಕಟ್ಟಿರಲಿಲ್ಲ. ಅಂಗಡಿಗೆ ಬೀಗ ಹಾಕಿ ವಸೂಲಿ ಮಾಡಲಾಗುತ್ತಿದೆ. ಅದು ಮುಂದುವರಿಯಲಿದೆ. ಅದೇ ರೀತಿ ತೆರಿಗೆ ಸಂಗ್ರಹ ಕೂಡ ನಗರದ ಅಭಿವೃದ್ಧಿಯಿಂದ ಅಗತ್ಯ.

ತೆರಿಗೆ ಹಚ್ಚಳದಿಂದ ಜನರಿಗೆ ತೊಂದರೆಯಾಗುವುದಿಲ್ಲವೇ?

* ತೆರಿಗೆ ಹೆಚ್ಚಳ ಎಂಬುದು ಕಾಲಕಾಲಕ್ಕೆ ನಡೆಯಲೇಬೇಕಾದ ಪ್ರಕ್ರಿಯೆ. ಜನರಿಗೆ ತೊಂದರೆಯಾಗದಂತೆ ಹೆಚ್ಚಳ ಮಾಡಬೇಕಾಗುತ್ತದೆ.

ಧರ್ಮ, ದೇಶ ನಿಷ್ಠೆಗೆ ಸಂದ ಗೌರವ

‘ಎಬಿವಿ‍ಪಿ ರಾಜ್ಯ ಕಾರ್ಯದರ್ಶಿಯಾಗಿ, ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿಯಾಗಿ, ಆರ್‌ಎಸ್‌ಎಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಧರ್ಮ ಮತ್ತು ದೇಶನಿಷ್ಠೆ ಇಟ್ಟುಕೊಂಡು ಸಾಮಾನ್ಯ ಕಾರ್ಯಕರ್ತನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಕ್ಕಾಗಿಯೇ ಮೇಯರ್‌ ಹುದ್ದೆ ಒಲಿದು ಬಂದಿದೆ’ ಎಂದು ಎಸ್‌.ಟಿ. ವೀರೇಶ್‌ ವ್ಯಾಖ್ಯಾನಿಸಿದರು.

‘ಮೇಯರ್‌ ಹುದ್ದೆಗೆ ಪ್ರಬಲ ಆಕಾಂಕ್ಷಿಗಳು ಇದ್ದರೂ ನನ್ನಂಥ ಸಾಮಾನ್ಯ ಕಾರ್ಯಕರ್ತನನ್ನು ಆಯ್ಕೆ ಮಾಡಿದ್ದಾರೆ. ಬಿಜೆಪಿಯ ವಿಶೇಷತೆಯೇ ಇದು. ಅದಕ್ಕಾಗಿ ನಮ್ಮೆಲ್ಲ ನಾಯಕರಿಗೆ, ಕಾರ್ಯಕರ್ತರಿಗೆ, ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದರು.

‘ಹಾರ, ಶಾಲು, ಸನ್ಮಾನ ಬೇಡ’

‘ಮೇಯರ್‌ ಸ್ಥಾನ ಬರೀ 12 ತಿಂಗಳು ಇರುತ್ತದೆ. ಅದರೊಳಗೆ ಕೆಲಸ ಮಾಡಬೇಕಿದೆ. ದಯವಿಟ್ಟು ಯಾರೂ ಸನ್ಮಾನಕ್ಕಾಗಿ ಕರೆಯಬೇಡಿ. ನಾನು ಮೇಯರ್‌ ಆಗಿ ಮಾಡಿದ ಕೆಲಸಗಳು ನಿಮಗೆ ತೃಪ್ತಿ ನೀಡಿದರೆ ಮಾತ್ರ ನನ್ನ ಅವಧಿ ಮುಗಿದ ಬಳಿಕ ಸನ್ಮಾನಿಸಿ’ ಎಂದು ಕೋರಿದರು.

‘ಅದೇ ರೀತಿ ಕಚೇರಿ, ಮನೆಗೆ ಬಂದು ಹಾರ, ಶಾಲು ಹಾಕುವುದನ್ನು ಮಾಡಬೇಡಿ. ಮೇಯರ್‌ ಆಗಿರುವುದಕ್ಕೆ ಹಾರೈಸಲೇ ಬೇಕು ಎಂದಿದ್ದರೆ ಹಾರ, ಶಾಲುಗಳ ಬದಲು ನೋಟ್‌ಪುಸ್ತಕ ತೆಗೆದುಕೊಂಡು ಬನ್ನಿ. ಅದನ್ನು ಅಗತ್ಯ ಇರುವ ವಿದ್ಯಾರ್ಥಿಗಳಿಗೆ ನಿಮ್ಮ ಮೂಲಕವೇ ವಿತರಿಸುವ ಕೆಲಸ ಮಾಡೋಣ’ ಎಂದು ಮನವಿ ಮಾಡಿಕೊಂಡರು.

‘ನೀರು, ಬೀದಿದೀಪ, ಸ್ವಚ್ಚತೆ ಸಹಿತ ಯಾವುದೇ ಸಮಸ್ಯೆಗಳಾದರೂ ಸುಲಭದಲ್ಲಿ ತಿಳಿಸುವಂತಾಗಲು ವಾಟ್ಸ್‌ಆ್ಯಾಪ್‌ ಸಂಖ್ಯೆಯನ್ನು ನಾಳೆ, ನಾಡಿದ್ದರಲ್ಲಿ ನೀಡಲಾಗುವುದು. ಎಲ್ಲರೂ ಈಗ ಮೊಬೈಲ್‌ ಬಳಸುವುದರಿಂದ ನಿಮ್ಮ ಸಮಸ್ಯೆಗಳಿಗೆ ಸುಲಭದಲ್ಲಿ ಸ್ಪಂದಿಸಲು ಇದರಿಂದ ಸಾಧ್ಯವಾಗಲಿದೆ’ ಎಂದರು.

ವೀರೇಶ್‌ ಯಾರು?

ಎಸ್‌.ಟಿ. ವೀರೇಶ್‌ ಜಗಳೂರು ತಾಲ್ಲೂಕಿನ ಉಡ್ಲಾಗಟ್ಟೆ ಗ್ರಾಮದ ಎಸ್‌. ತಿಮ್ಮಪ್ಪ–ಮಲ್ಲಮ್ಮ ದಂಪತಿಯ ಮಗ. ಸದ್ಯ ವಿದ್ಯಾನಗರದ ನಿವಾಸಿ. ಬಾಪೂಜಿ ಸ್ಕೂಲ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸಿದ ಅವರು ಡಿಪ್ಲೊಮಾ ಇನ್‌ ಮೆಕ್ಯಾನಿಕ್‌ ಮಾಡಿದ್ದಾರೆ. ಪತ್ನಿ ಪದ್ಮ, ವೆಂಕಟೇಶ್‌ ಮತ್ತು ವೇಣುಗೋಪಾಲ್‌ ಎಂಬ ಅವಳಿ ಜವಳಿ ಮಕ್ಕಳಿದ್ದಾರೆ.

ಸ್ವಾಮಿ ವಿವೇಕಾನಂದ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ, ಸೈನ್ಸ್‌ ಅಕಾಡೆಮಿ ಪಿ.ಯು. ಕಾಲೇಜು ನಿರ್ದೇಶಕ, ಪ್ರೇರಣಾ ಸಂಸ್ಥೆಯ ಅಧ್ಯಕ್ಷ, ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕ ಹೀಗೆ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT