ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೋವಿಡ್ ಲಸಿಕೆ; ಅಗತ್ಯ ವಿವರ ಸಲ್ಲಿಸಿ

ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 29 ಅಕ್ಟೋಬರ್ 2020, 15:52 IST
ಅಕ್ಷರ ಗಾತ್ರ

ದಾವಣಗೆರೆ:ಕೋವಿಡ್‌ಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ಲಸಿಕೆ ಬಳಕೆಗೆ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ. ಸರ್ಕಾರದ ಸೂಚನೆಯಂತೆ ಮೊದಲ ಆದ್ಯತೆ ವಲಯಕ್ಕಾಗಿ ಅಗತ್ಯ ಅಂಕಿ-ಅಂಶಗಳನ್ನು ಎರಡು ದಿನಗಳ ಒಳಗಾಗಿ ಸಿದ್ಧಪಡಿಸಬೇಕು ಎಂದುಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಲಸಿಕೆ ಸಂಬಂಧ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಲಸಿಕೆ ನೀಡುವ ಕಾರ್ಯದಲ್ಲಿ ದಾವಣಗೆರೆ ಜಿಲ್ಲೆ ರಾಷ್ಟ್ರ ಮತ್ತು ರಾಜ್ಯಕ್ಕೆ ಮಾದರಿಯಾಗುವ ರೀತಿ ಕಾರ್ಯಗತಗೊಳಿಸಲು ವ್ಯವಸ್ಥೆ ಮಾಡಿಕೊಳ್ಳಬೇಕು.ಕೋವಿಡ್‌ಗೆ ಲಸಿಕೆ ಅಭಿವೃದ್ಧಿಪಡಿಸುವ ಕಾರ್ಯ ದೇಶದಲ್ಲಿ ಅಂತಿಮ ಹಂತದಲ್ಲಿದ್ದು, ಯಾವುದೇ ಸಮಯದಲ್ಲಿ ಲಸಿಕೆಯು ಬಳಕೆಗೆ ಲಭ್ಯವಾಗುವ ಸಾಧ್ಯತೆಗಳಿವೆ. ಲಸಿಕೆಯನ್ನು ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರೂ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಲ್ಲರಿಗೂ ನೀಡಬೇಕು ಎಂಬುದು ಸರ್ಕಾರದ ನಿಲುವಾಗಿದೆ. ಜಿಲ್ಲೆಯಲ್ಲಿಯೂ ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ಸರ್ಕಾರಿ ಹಾಗೂ ಮಾನ್ಯತೆ ಹೊಂದಿರುವ ಖಾಸಗಿ ಎಲ್ಲ ಆಸ್ಪತ್ರೆಗಳ ವೈದ್ಯರು, ನರ್ಸ್‍ಗಳು, ಪ್ರಯೋಗಶಾಲೆ ಸಿಬ್ಬಂದಿ, ಚಾಲಕರು, ಕ್ಲರ್ಕ್‌, ‘ಡಿ’ ಗ್ರೂಪ್ ಸಿಬ್ಬಂದಿ ಸೇರಿ ಎಲ್ಲ ಆರೋಗ್ಯ ಕಾರ್ಯಕರ್ತರ ವಿವರಗಳನ್ನು ಸಲ್ಲಿಸಬೇಕು. ವೈದ್ಯಕೀಯ, ಆಯುರ್ವೇದಿಕ್ ಕಾಲೇಜುಗಳು ಸೇರಿ ಎಲ್ಲರ ವಿವರಗಳು ಅಂಕಿ-ಅಂಶ ಸಹಿತ ಎರಡು ದಿನಗಳ ಒಳಗಾಗಿ ಸಿದ್ಧವಾಗಬೇಕು. ಜಿಲ್ಲೆಗೆ ಪ್ರಥಮ ಹಂತದಲ್ಲಿ ಬೇಕಾಗಬಹುದಾದ ಲಸಿಕೆ ಡೋಸ್‍ಗಳ ಸಂಖ್ಯೆ ಸಲ್ಲಿಸಬೇಕು ಎಂದು ಸೂಚಿಸಿದರು.

ಪ್ರತಿ ಗುರುವಾರ ಕೋವಿಡ್ ಲಸಿಕೆಗೆ ಸಂಬಂಧಿಸಿದ ಕಾರ್ಯಪಡೆ ಸಮಿತಿ ಸಭೆಯನ್ನು ನಡೆಸಿ, ಸಿದ್ಧತೆ ಪರಿಶೀಲನೆ ನಡೆಸಲಾಗುವುದು. ಪ್ರತಿ ತಾಲ್ಲೂಕಿಗೆ ಒಬ್ಬರು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ, ‘ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಈಗಾಗಲೇ ಅಂಕಿ-ಅಂಶ ಸಿದ್ಧಪಡಿಸುವ ಕಾರ್ಯ ನಡೆದಿದೆ. ಲಸಿಕಾಕರ್ತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಕೋವಿಡ್‍ಗೆ ಸಂಬಂಧಿಸಿದಂತೆ ದೇಶದಲ್ಲಿ ಒಟ್ಟು 9 ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಈ ಪೈಕಿ 4 ಪ್ರಾಥಮಿಕ ಹಂತ, 2 ದ್ವಿತೀಯ ಹಂತ ಹಾಗೂ 3 ಲಸಿಕೆಗಳು ಅಂತಿಮ ಹಂತದಲ್ಲಿವೆ. ಅಂತಿಮ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗುವ ಲಸಿಕೆಗೆ ಮಾತ್ರ ಬಳಕೆ ಮಾಡಲು ಅನುಮತಿ ದೊರೆಯಲಿದೆ. ಜಾಗತಿಕವಾಗಿ ಒಟ್ಟು 248 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಪೈಕಿ 10 ಲಸಿಕೆಗಳು ಅಂತಿಮ ಹಂತ ತಲುಪಿವೆ’ ಎಂದು ಮಾಹಿತಿ ನೀಡಿದರು.

ವದಂತಿಗೆ ಕಡಿವಾಣ ಹಾಕಿ:

ಕೋವಿಡ್ ಲಸಿಕೆ ಕಾರ್ಯಕ್ರಮ ಜಾರಿಗೊಳಿಸುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿ ಸಾರ್ವಜನಿಕ ವಲಯದಲ್ಲಿ ಇಲ್ಲಸಲ್ಲದ ವದಂತಿ, ತಪ್ಪು ಕಲ್ಪನೆ ಹರಡದಂತೆ ಎಚ್ಚರಿಕೆ ವಹಿಸುವುದು ಅಗತ್ಯ.ಲಸಿಕೆ ಕುರಿತಂತೆ ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳು, ರೋಟರಿ, ಲಯನ್ಸ್, ಸ್ಕೌಟ್ ಮತ್ತು ಗೈಡ್ಸ್ ನಂತಹ ಸಮಾಜಮುಖಿ ಸಂಸ್ಥೆಗಳ ಸಹಯೋಗದೊಂದಿಗೆ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.

ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ:

ಆರೋಗ್ಯ ಇಲಾಖೆಯಿಂದ ಜಾರಿಗೊಳಿಸುವ ವಿವಿಧ ಲಸಿಕಾ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಲಾಕ್‍ಡೌನ್ ಹಾಗೂ ಅನ್‍ಲಾಕ್ ಸಂದರ್ಭದಲ್ಲಿ ಹಲವು ಬಗೆಯ ಲಸಿಕೆ ಕಾರ್ಯಕ್ರಮವನ್ನು ದೇಶದ ಎಲ್ಲ ಜಿಲ್ಲೆಗಳಿಗಿಂತಲೂ ದಾವಣಗೆರೆ ಜಿಲ್ಲೆಯಲ್ಲಿ ಉತ್ತಮವಾಗಿ ಜಾರಿಗೊಳಿಸಿದೆ. ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕಾಗಿ ದೇಶದಲ್ಲಿಯೇ ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ ಬಂದಿದೆಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ತಿಳಿಸಿದರು.

ಜಿಲ್ಲಾಧಿಕಾರಿ ಸೇರಿ ಸಭೆಯಲ್ಲಿದ್ದ ಎಲ್ಲ ಇಲಾಖೆಗಳ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದರು.

ಕೋವಿಡ್ ಪ್ರಮಾಣ ಇಳಿಕೆ:

ಕೋವಿಡ್‌ ನಿಯಂತ್ರಣ ಕಾರ್ಯದಲ್ಲಿ ಜಿಲ್ಲೆಯಲ್ಲಿ ವೈದ್ಯರು, ಸಿಬ್ಬಂದಿ ಆದಿಯಾಗಿ ಆರೋಗ್ಯ ಇಲಾಖೆ, ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಪ್ರತಿಯೊಬ್ಬರೂ ಉತ್ತಮವಾಗಿ ಸೇವೆ ಸಲ್ಲಿಸಿದ್ದಾರೆ. ಇದರಿಂದ ಹಾಗೂ ಸಾರ್ವಜನಿಕರ ಸಹಕಾರದಿಂದ ಸೋಂಕು ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದೆ. ಸದ್ಯ ಜಿಲ್ಲೆಯಲ್ಲಿ ಪಾಸಿಟಿವ್ ಕಂಡುಬರುವ ಪ್ರಮಾಣ ಶೇ 5 ಕ್ಕಿಂತ ಕಡಿಮೆ ಇದೆ. ಈ ಪ್ರಮಾಣ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಶೇ 2.5 ಕ್ಕಿಂತ ಕಡಿಮೆ ಆಗಿರುವುದು ಸಮಾಧಾನಕರ ಸಂಗತಿ.ಚಳಿಗಾಲದಲ್ಲಿ ಕೋವಿಡ್ ಪ್ರಕರಣ ಹೆಚ್ಚುವ ಸಂಭವವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್, ಎಎಸ್‌ಪಿ ಎಂ. ರಾಜೀವ್, ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT