ಶನಿವಾರ, ಮೇ 8, 2021
26 °C

ಕೋವಿಡ್‌ ಹೆಚ್ಚಳ: ಉಳಿದ ಚಿಕಿತ್ಸೆಗಳಿಗೆ ಆಗದಿರಲಿ ಅಡ್ಡಿ

ಸ್ಮಿತಾ ಶಿರೂರ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೋವಿಡ್‌ ಪಾಸಿಟಿವ್‌ ಪ್ರಕರಣಗಳ ಹೆಚ್ಚಳದಿಂದ ಆರೋಗ್ಯ ಕ್ಷೇತ್ರದಲ್ಲಿ ಮತ್ತೆ ಆತಂಕದ ಸ್ಥಿತಿ ಉಂಟಾಗಿದೆ. ಕೋವಿಡ್‌ ರೋಗಿಗಳ ಸಂಕಷ್ಟ ಒಂದು ರೀತಿಯದ್ದಾದರೆ, ಉಳಿದ ರೋಗಿಗಳ ಚಿಂತೆ ಬೇರೆ ರೀತಿಯದ್ದು. ಯಾವುದೇ ರೀತಿಯ ಅನಾರೋಗ್ಯ ಉಂಟಾದರೂ ಶಸ್ತ್ರಚಿಕಿತ್ಸೆ ಆಗಬೇಕಿದ್ದರೂ ಮಕ್ಕಳಿಗೆ ಲಸಿಕೆ ಹಾಕಿಸಬೇಕಿದ್ದರೂ ಆಸ್ಪತ್ರೆಗೆ ಹೋಗಬೇಕೆಂದರೆ ಹತ್ತು ಬಾರಿ ಆಲೋಚಿಸುವಂತಾಗಿದೆ.

ಕೋವಿಡ್‌ ಆರಂಭದ ಸಂದರ್ಭದಲ್ಲಿ ಉಳಿದ ವೈದ್ಯಕೀಯ ಸೇವೆಗಳಿಗೆ ಅಲ್ಲಲ್ಲಿ ಅಡೆ–ತಡೆ ಉಂಟಾದ ಘಟನೆಗಳು ದಿನನಿತ್ಯ ಎಂಬಂತೆ ವರದಿಯಾದವು. ನಿಯಮಿತ ತಪಾಸಣೆ, ಸ್ಕ್ಯಾನಿಂಗ್‌, ತುರ್ತು ಅಲ್ಲದ ಶಸ್ತ್ರಚಿಕಿತ್ಸೆಗಳನ್ನು ಮುಂದಕ್ಕೆ ಹಾಕುವಂತೆ ಸಲಹೆ ನೀಡಲಾಗಿತ್ತು.

‘ಜಿಲ್ಲಾ ಆಸ್ಪತ್ರೆಯಲ್ಲಿ ಈಚೆಗೆ ಎಲ್ಲ ವಿಧಗಳ ಚಿಕಿತ್ಸೆಯನ್ನು ಮತ್ತೆ ಆರಂಭಿಸಲಾಗಿತ್ತು. ಸದ್ಯ ಮುಂದುವರಿದಿದೆ. ಕೋವಿಡ್‌ ಪ್ರಕರಣಗಳು ಹೆಚ್ಚಳವಾಗಿ ಚಿಕಿತ್ಸೆಗೆ ಸಮಸ್ಯೆ ಎದುರಾದರೆ ಮಾತ್ರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯ ಅಡಿ ‘ಎಂ ಪ್ಯಾನಲ್‌’ ಆಸ್ಪತ್ರೆಗಳಿಗೆ ಶಿಫಾರಸು ಬರೆದುಕೊಡಲಾಗುತ್ತದೆ. ಬಿಪಿಎಲ್‌ ಕಾರ್ಡ್‌ ಇರುವವರಿಗೆ ಉಚಿತವಾಗಿ ಚಿಕಿತ್ಸೆ ಸಿಗಲಿದೆ. ಜಿಲ್ಲೆಯಲ್ಲಿ ಇಂಥ 28 ಆಸ್ಪತ್ರೆಗಳ‌ನ್ನು ಗುರುತಿಸಲಾಗಿದೆ’ ಎಂದು ಜಿಲ್ಲಾ ಎನ್‌ಸಿಡಿ ಸಂಯೋಜಕ ಡಾ.ಯತೀಶ್‌ ಕರ್ಪಣ್ಣ ತಿಳಿಸಿದರು.

‘ಎಲ್ಲ ರೀತಿಯ ಶಸ್ತ್ರಚಿಕಿತ್ಸೆಗಳಿಗೂ ಕೋವಿಡ್‌ ಟೆಸ್ಟ್ ಕಡ್ಡಾಯ. ಕೋವಿಡ್ ಟೆಸ್ಟ್‌ ರಿಪೋರ್ಟ್‌ಗೆ 15 ದಿನಗಳವರೆಗೆ ಮಾನ್ಯತೆ ಇರುತ್ತದೆ. ತುರ್ತು ಹೊರತುಪಡಿಸಿ ಉಳಿದ ಶಸ್ತ್ರಚಿಕಿತ್ಸೆಗಳು 15 ದಿನಗಳ ಮುಂಚೆಯೇ ನಿಗದಿಯಾಗುವುದರಿಂದ ಶಸ್ತ್ರಚಿಕಿತ್ಸೆಗಳಿಗೆ ಸಮಸ್ಯೆ ಉಂಟಾಗುವುದಿಲ್ಲ. ಅಪೆಂಡಿಕ್ಸ್‌, ಯುರಿನರಿ ಬ್ಲಾಡರ್‌ ಸ್ಟೋನ್ಸ್‌, ಕೀಲು–ಮೂಳೆ ಮುರಿತ, ಅಪಘಾತಗಳು, ಸಿಜೇರಿಯನ್‌ ವಿಭಾಗದ ಚಿಕಿತ್ಸೆಗಳು, ಕರುಳಿನ ಶಸ್ತ್ರಚಿಕಿತ್ಸೆ... ಮೊದಲಾದ ತುರ್ತು ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂದಾಗ ರ‍್ಯಾಪಿಡ್‌ ಟೆಸ್ಟ್‌ ಮಾಡಿಸಲಾಗುತ್ತದೆ. ಇಲ್ಲಿ ನೆಗೆಟಿವ್‌ ಬಂದರೂ ಆರ್‌ಟಿಪಿಸಿಆರ್‌ ಪರೀಕ್ಷೆಗೂ ಸ್ಯಾಂಪಲ್‌ ಕಳುಹಿಸಲಾಗುತ್ತದೆ. ರ‍್ಯಾಪಿಡ್‌ ಟೆಸ್ಟ್‌ನಲ್ಲಿ ನೆಗೆಟಿವ್‌ ಬಂದರೆ ಸಾಮಾನ್ಯವಾಗಿ ನಡೆಸುವ ಚಿಕಿತ್ಸೆ ಮುಂದುವರಿಸಲಾಗುತ್ತದೆ. ಪಾಸಿಟಿವ್‌ ಬಂದರೆ ಸುರಕ್ಷತಾ ಕ್ರಮಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

‘ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲಿ ವೆಂಟಿಲೇಟರ್‌ಗಳ ಕೊರತೆ ಉಂಟಾಗಿತ್ತು. ಈಗ ಹೆಚ್ಚುವರಿ ವೆಂಟಿಲೇಟರ್‌ಗಳನ್ನು ಸೇರ್ಪಡೆ ಮಾಡಲಾಗಿದೆ. ಮೆಡಿಕಲ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌ (ಎಂಐಸಿಯು) ಹಾಗೂ ವೆಂಟಿಲೇಟರ್‌ ಇಂಟೆನ್ಸಿವ್‌ ಕೇರ್‌ ಯುನಿಟ್‌ (ವಿಐಸಿಯು) ಎಂಬ ಪ್ರತ್ಯೇಕ ವಾರ್ಡ್‌ ಆರಂಭಿಸಲಾಗಿದೆ. ಜಿಲ್ಲಾ ಆಸ್ಪತ್ರೆಯಲ್ಲಿ 40, ಜಗಳೂರು, ಹರಿಹರ, ಹೊನ್ನಾಳಿ, ಚನ್ನಗಿರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಒಟ್ಟು 24, ಬಾಪೂಜಿ ಆಸ್ಪತ್ರೆಯಲ್ಲಿ 15, ಎಸ್‌.ಎಸ್‌. ಆಸ್ಪತ್ರೆಯಲ್ಲಿ 28, ಸಿಟಿ ಸೆಂಟ್ರಲ್‌ ಆಸ್ಪತ್ರೆಯಲ್ಲಿ 8, ಆರೈಕೆ 1, ಆಶ್ರಯ ಆಸ್ಪತ್ರೆಯಲ್ಲಿ 1 ಸೇರಿ ಜಿಲ್ಲೆಯಲ್ಲಿ ಒಟ್ಟು 117 ವೆಂಟಲೇಟರ್‌ಗಳು ಲಭ್ಯವಿವೆ’ ಎಂದು ಅವರು ವಿವರಿಸಿದರು.

‘ಜೆಜೆಎಂ ವೈದ್ಯಕೀಯ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ವೈದ್ಯರ ಕೊರತೆ ಎದುರಾಗುವುದಿಲ್ಲ. ಕೋವಿಡ್‌ ಸಂದರ್ಭದಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು 6 ತಿಂಗಳ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಅವರ ಗುತ್ತಿಗೆ ಅವಧಿಯನ್ನು ಇನ್ನೂ 4–6 ತಿಂಗಳು ವಿಸ್ತರಿಸಲಾಗಿದೆ. ರಾಜ್ಯದಾದ್ಯಂತ ಒಟ್ಟು 742 ಕಾಯಂ ಆಡಳಿತ ವೈದ್ಯಾಧಿಕಾರಿಗಳ ನೇಮಕ ಪ್ರಕ್ರಿಯೆಯೂ ನಡೆಯುತ್ತಿದೆ. ಆದರೆ ಡಾಟಾ ಎಂಟ್ರಿ ಆಪರೇಟರ್‌ಗಳ ಕೊರತೆ ಇನ್ನೂ ಮುಂದುವರಿದಿದೆ. ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ 29 ಆರೋಗ್ಯ ಕಾರ್ಯಕ್ರಮಗಳನ್ನು ನಡೆಸಬೇಕಾಗುತ್ತದೆ. ಹೀಗಾಗಿ ಡಾಟಾ ಎಂಟ್ರಿ ಆಪರೇಟರ್‌ಗಳ ಅವಶ್ಯಕತೆ ತೀವ್ರವಾಗಿದೆ’ ಎಂದು ಅವರು ತಿಳಿಸಿದರು.

ಜಿಲ್ಲಾ ಸರ್ವೇಕ್ಷಣಾ ಘಟಕದಲ್ಲಿ ಸರ್ವ ರೋಗಗಳ ಕಣ್ಗಾವಲು ಸಮಿತಿ ಇದೆ. ಇದರ ಅಡಿ ಈಗಾಗಲೇ 18 ಸಾಂಕ್ರಾಮಿಕ ಕಾಯಿಲೆಗಳ ನಿರ್ಮೂಲನೆಗೆ ಕೆಲಸ ಮಾಡಲಾಗುತ್ತಿದೆ. ಈಗ ಕೋವಿಡ್‌ 19ನೆಯದ್ದಾಗಿ ಸೇರ್ಪಡೆಯಾಗಿದೆ. ಇದರ ವಿರುದ್ಧ ಕಾರ್ಯಾಚರಣೆಗೆ ಪ್ರತ್ಯೇಕ ಕಾರ್ಯಪಡೆ ಸಿದ್ಧವಾಗಿರುವುದರಿಂದ ಉಳಿದ ಆರೋಗ್ಯ ಕಾರ್ಯಕ್ರಮಗಳಿಗೂ ಯಾವುದೇ ತಡೆ ಉಂಟಾಗುವುದಿಲ್ಲ ಎಂದು ಅವರು ವಿವರಿಸಿದರು.

‘ಪರಿಶೀಲನೆ ಅಗತ್ಯ’
ಕೋವಿಡ್‌ ಬಂದ ನಂತರ ಉಳಿದ ಚಿಕಿತ್ಸೆಗಳಿಗೆ ಬಡವರಿಗೆ ಹಲವು ಸಮಸ್ಯೆಗಳು ಉಂಟಾಗುತ್ತಿವೆ. ಈಚೆಗೆ ಕೆರೆಯಾಗಳಹಳ್ಳಿಯ ವ್ಯಕ್ತಿಯೊಬ್ಬರಿಗೆ ತಲೆಗೆ ಪೆಟ್ಟು ಬಿದ್ದು ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆ ತರಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ಹೈಟೆಕ್‌ ಆಸ್ಪತ್ರೆಗೆ ಬರೆದುಕೊಡಲಾಯಿತು. ಅವರ ಬಳಿ ಬಿಪಿಎಲ್‌ ಕಾರ್ಡ್‌ ಇದ್ದರೂ ಅಲ್ಲಿ ಅಡ್ಮಿಟ್‌ ಮಾಡಿಕೊಳ್ಳಲು ಅವರಿಗೆ
₹ 25,000 ಕೇಳಿದರು. ಆ ಬಡ ಕುಟುಂಬಕ್ಕೆ ತಕ್ಷಣಕ್ಕೆ ಹಣ ಹೊಂದಿಸಲು ಸಾಧ್ಯವಾಗಲಿಲ್ಲ. ಆ ವ್ಯಕ್ತಿ ಮೃತಪಟ್ಟರು. ಇಂಥ ಎಷ್ಟೋ ಪ್ರಕರಣಗಳು ಬರುತ್ತಿವೆ. ಗ್ರಾಮಾಂತರ ಪ್ರದೇಶದವರಿಗಂತೂ ತುಂಬಾ ತೊಂದರೆಯಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಬರೆದುಕೊಡುತ್ತಿದ್ದಾರೆ, ನಿಜ. ಆದರೆ, ಉಚಿತ ಚಿಕಿತ್ಸೆ ಸಿಗುತ್ತಿದೆಯೇ, ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ ಎಂಬುದರ ಪರಿಶೀಲನೆ (ಫಾಲೊ ಅಪ್‌) ಮಾಡುವ ವ್ಯವಸ್ಥೆಯಾಗಬೇಕು. ಈ ಬಗ್ಗೆ ಬಿಗಿ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಎಸ್‌. ಬಸವಂತಪ್ಪ ಅಭಿಪ್ರಾಯಪಟ್ಟಿದ್ದಾರೆ.

‘ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಅಗತ್ಯ’
ಕೋವಿಡ್‌ನಿಂದ ಹೆಚ್ಚಿನ ಪರಿಣಾಮ ಉಂಟಾಗುವುದು ಮಹಿಳೆ, ಮಕ್ಕಳು ಹಾಗೂ ವೃದ್ಧರ ಮೇಲೆ. ಹೀಗಾಗಿ ಸರ್ಕಾರ ಇತರ ವೈದ್ಯಕೀಯ ಸೇವೆಗಳ ಲಭ್ಯತೆಗೆ ತಡೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕಾಗಿ ಶೇ 8ರಷ್ಟಾದರೂ ಅನುದಾನ ನೀಡಬೇಕು. ಈಗ ಶೇ 1.5ರಷ್ಟು ಅನುದಾನ ಮಾತ್ರ ಇದೆ. ಇಂಥ ತುರ್ತು ಸ್ಥಿತಿಯಲ್ಲಾದರೂ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಆದ್ಯತೆ ನೀಡಬೇಕು ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ಕರಿಬಸಪ್ಪ ಎಂ. ಆಶಿಸಿದರು.

‘ವಾರದ ಹಿಂದೆ ಮಾರುಕಟ್ಟೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಮ್ಮ ಸಂಘಟನೆಯ ಕಾರ್ಯಕರ್ತರೊಬ್ಬರ ಹೆರಿಗೆ ಆಗಿತ್ತು. ಮಗು ತೋರಿಸಲು ₹ 500 ಕೇಳಿದರು. ನಾವು ಅಲ್ಲಿಗೆ ಹೋಗಿ ಅಧೀಕ್ಷಕ ಡಾ.ನೀಲಕಂಠ ಅವರ ಗಮನಕ್ಕೆ ಈ ವಿಷಯ ತಂದೆವು. ಸಮಸ್ಯೆ ಪರಿಹಾರವಾಯಿತು. ಆದರೆ, ಪ್ರತಿ ಬಾರಿಯೂ ಸಂಘಟನೆಯವರು ಹೋಗಿ ಹೋರಾಟ ಮಾಡಿ ನ್ಯಾಯ ಕೊಡಿಸಬೇಕೆಂದರೆ ಹೇಗೆ? ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಸುಧಾರಣೆಗೆ ಕಠಿಣ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಶಾಸಕ, ಸಂಸದರು ಆಸಕ್ತಿ ವಹಿಸಬೇಕು’ ಎಂದು ಅವರು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ: ಆರೋಪ
ಚನ್ನಗಿರಿ: ತಾಲ್ಲೂಕಿನಲ್ಲಿ ಒಟ್ಟು 23 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಕೋವಿಡ್‌ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ 60 ವರ್ಷ ಮೇಲಿನ ರೋಗಿಗಳಿಗೆ ಚಿಕಿತ್ಸೆ ನೀಡಲು ಮುಂದಾಗಿರಲಿಲ್ಲ. ಈ ಕಾರಣದಿಂದಾಗಿ ಹಲವು ಜನರು ಔಷಧ ಅಂಗಡಿಗಳಿಗೆ ತೆರಳಿ ಗೊತ್ತಿದ್ದ ಔಷಧಗಳನ್ನೇ ಕೇಳಿ ರೋಗವನ್ನು ವಾಸಿ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.

‘ಈಚೆಗೆ ನಮ್ಮ ತಾಯಿಗೆ ಜ್ವರ ಬಂದಿತ್ತು. ಚನ್ನಗಿರಿಯ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆಂದು ಬಂದಿದ್ದೆವು. ಇಲ್ಲಿಯ ವೈದ್ಯರು ತಾಯಿಯನ್ನು ಮುಟ್ಟಿ ಪರೀಕ್ಷೆ ಮಾಡದೇ ಪ್ಯಾರಾಸಿಟಮಲ್ ಗುಳಿಗೆಗಳನ್ನು ನೀಡಿ ಕಳುಹಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ’ ಎಂದು ಪಟ್ಟಣದ ಚಂದ್ರಶೇಖರ್ ದೂರಿದರು.

ಚಿಕಿತ್ಸೆ ಲಭ್ಯ
ನ್ಯಾಮತಿ:
ಪಟ್ಟಣದಲ್ಲಿರುವ 30 ಹಾಸಿಗೆಗಳ ಸಮುದಾಯ ಆಸ್ಪತ್ರೆಯಲ್ಲಿ ಕೋವಿಡ್ ಸಮಯದಲ್ಲಿ ಕೊರೊನಾ ಪರೀಕ್ಷೆಗೆ ಆಸ್ಪತ್ರೆ ಸೀಮಿತವಾಗಿತ್ತು. ಆಗ ಆಸ್ಪತ್ರೆಗೆ ಬರುವ ಇತರ ರೋಗಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆ ಆಗಿತ್ತು.

‘ಆಸ್ಪತ್ರೆಯಲ್ಲಿ ಆಧುನಿಕ ವೈದ್ಯಕೀಯ ಸೌಲಭ್ಯಗಳು ಕಡಿಮೆ ಇವೆ. ಈಗ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಮತ್ತೆ ಹೆಚ್ಚಿದೆ. ಎಂದಿನಂತೆ ಎಲ್ಲ ಚಿಕಿತ್ಸಾ ಸೌಲಭ್ಯಗಳನ್ನೂ ನೀಡಲಾಗುತ್ತಿದೆ’ ಎಂದು ನ್ಯಾಮತಿಯ ಸಮುದಾಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರೇಣುಕಾನಂದ ಮೆಣಸಿನಕಾಯಿ ತಿಳಿಸಿದ್ದಾರೆ.

ಆಸ್ಪತ್ರೆಗೆ ಬರಲು ರೋಗಿಗಳ ಹಿಂದೇಟು
ಹರಪನಹಳ್ಳಿ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಣ್ಣಿನ ಶಸ್ತ್ರ ಚಿಕಿತ್ಸೆ ಸ್ಥಗಿತಗೊಂಡಿದ್ದು, ಇಬ್ಬರು ತಜ್ಞ ವೈದ್ಯರ ಹುದ್ದೆಗಳು ಖಾಲಿ ಇರುವ ಪರಿಣಾಮ ಹೊರ ಮತ್ತು ಒಳ ರೋಗಿಗಳಿಗೆ ತೊಂದರೆ ಆಗಿದೆ.

ನಗರ ಮತ್ತು ಸುತ್ತಮುತ್ತಲಿನ ಜನರಿಗೆ ಸೇವೆ ಒದಗಿಸುವ 100 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಕಣ್ಣು ಮತ್ತು ಸ್ತ್ರೀ ರೋಗಗಳಿಗೆ ಸಂಬಂಧಿಸಿ ಇಬ್ಬರು ತಜ್ಞ ವೈದ್ಯರ ಕೊರತೆಯಿಂದಾಗಿ, ಇದಕ್ಕೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆಗಳು ನಡೆಯುತ್ತಿಲ್ಲ.

ಕೊರೊನಾ ಎರಡನೇ ಅಲೆ ಹೆಚ್ಚಳವಾಗಿರುವ ಪರಿಣಾಮವಾಗಿ ನಾಲ್ಕೈದು ದಿನಗಳಿಂದ ಬರುವ ಹೊರರೋಗಿಗಳ ಸಂಖ್ಯೆ ಇಳಿಮುಖವಾಗಿದೆ. ಜನರು ನಿಯಮಗಳನ್ನು ಪಾಲಿಸಬೇಕು, ಗುಂಪು ಗುಂಪಾಗಿ ವಿವಿಧ ತಜ್ಞ ವೈದ್ಯರ ಕೊಠಡಿಗಳ ಮುಂದೆ ನಿಲ್ಲದೇ, ಅಂತರದಲ್ಲಿ ಸಾಲಾಗಿ ನಿಂತು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ವೈದ್ಯಾಧಿಕಾರಿ ಡಾ.ಶಿವಕುಮಾರ್ ತಿಳಿಸಿದರು.

ತಾಲ್ಲೂಕಿನಲ್ಲಿರುವ ಎಚ್‌ಐವಿ ಸೋಂಕಿತರು, ಕ್ಷಯ, ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ, ಔಷಧ ವಿತರಣೆ ಮುಂದುವರಿದಿದೆ. ಕೆಲವೆಡೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆಯಿದೆ. ಅಕ್ಕಪಕ್ಕದ ಆಸ್ಪತ್ರೆಯ ವೈದ್ಯರನ್ನು ನಿಯೋಜನೆ ಮಾಡಲಾಗಿದೆ. ಔಷಧ ಕೊರತೆ ಎಲ್ಲಿಯೂ ಇಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ವೆಂಕಟೇಶ್ ತಿಳಿಸಿದರು.

ಚೇತರಿಸಿಕೊಂಡ ಆಸ್ಪತ್ರೆ
ಜಗಳೂರು:
ಕೋವಿಡ್‌ಗೂ ಮುನ್ನ ತಜ್ಞ ವೈದ್ಯರ ಕೊರತೆ, ಅಗತ್ಯ ಸಿಬ್ಬಂದಿಯ ಕೊರತೆಯಿಂದ ಇಲ್ಲಿಯ ಆಸ್ಪತ್ರೆ ನಲುಗಿ ಹೋಗಿತ್ತು. ಇದೀಗ ಎಲ್ಲ ವಿಭಾಗಗಳ ತಜ್ಞ ವೈದ್ಯರ ನೇಮಕವಾಗಿದೆ.

‘ಇದೇ ಮೊದಲ ಬಾರಿಗೆ 5 ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು 12 ತಜ್ಞ ವೈದ್ಯರು ಇದ್ದಾರೆ. ಹೊಸದಾಗಿ ನೇಮಕವಾದ 20 ಸಿಬ್ಬಂದಿ ಸೇರಿ ಒಟ್ಟು 36 ಮಂದಿ ಡಿ. ಗ್ರೂಪ್ ಹಾಗೂ ಸ್ವಚ್ಛತಾ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ’ ಎಂದು ಮುಖ್ಯ ಆಡಳಿತಾಧಿಕಾರಿ ಡಾ.ನೀರಜ್ ತಿಳಿಸಿದರು.

‘ಇಲ್ಲಿ ಈಗ 100 ಹಾಸಿಗೆಗಳಿಗೂ ಆಕ್ಸಿಜನ್ ಸೌಲಭ್ಯವಿದೆ. 10 ಹಾಸಿಗೆಯ ಕೋವಿಡ್ ಘಟಕವನ್ನು ತೆರೆಯಲಾಗಿದೆ. ಹೈಟೆಕ್ ಲ್ಯಾಬ್ ಸೌಲಭ್ಯವೂ ಇದೆ. ವೈದ್ಯರಿಗೆ ಸುಸಜ್ಜಿತ ವಸತಿಗೃಹಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಶಾಸಕ ಎಸ್.ವಿ.ರಾಮಚಂದ್ರ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು