ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ ಚಂದದ ಗೊಂಬೆಗಳಾಯ್ಯ, ದಸರಾ ಪಟ್ಟದ ಗೊಂಬೆಗಳು

ಸಂಸ್ಕೃತಿಯೊಡನೆ ದೇಶಭಕ್ತಿ, ಸಾಮಾಜಿಕ ಪರಿಸ್ಥಿತಿ ತಿಳಿಸುವ ಗೊಂಬೆಗಳು
Last Updated 14 ಅಕ್ಟೋಬರ್ 2018, 15:47 IST
ಅಕ್ಷರ ಗಾತ್ರ

ದಾವಣಗೆರೆ: ದಸರಾ ಸಂಭ್ರಮದ ಪಟ್ಟದ ಗೊಂಬೆಗಳನ್ನು ನೋಡಲು ದೂರದ ಮೈಸೂರಿಗೆ ಹೋಗಬೇಕೆಂದಿಲ್ಲ. ದಾವಣಗೆರೆ ವಿನೋಬನಗರದ ಚಂದ್ರಿಕಾ ಅವರ ಮನೆಗೆ ಹೋದರೆ ಸಾಕು ದಸರಾ ಗೊಂಬೆಗಳ ಉತ್ಸವವನ್ನು ಕಣ್ತುಂಬಿಕೊಳ್ಳಬಹುದು.

ಅಶ್ವಯಜ ಮಾಸದ ಪಾಡ್ಯದಿಂದ ದಶಮಿವರೆಗೆ 10 ದಿನಗಳ ಕಾಲ ಗೊಂಬೆ ಕೂರಿಸುವುದು ದಸರಾ ಹಬ್ಬದ ಸಂಪ್ರದಾಯ. ಅಂತೆಯೇ ಚಂದ್ರಿಕಾ ಅವರು ಕಳೆದ 22 ವರ್ಷಗಳಿಂದ ತಮ್ಮ ಮನೆಯಲ್ಲಿ ಗೊಂಬೆಗಳನ್ನು ಕೂರಿಸುತ್ತಾ ಬಂದಿದ್ದಾರೆ. ಪ್ರತಿ ವರ್ಷವೂ ವಿಶಿಷ್ಠವಾಗಿ ಗೊಂಬೆಗಳನ್ನು ಕೂರಿಸುವ ಮೂಲಕ ನಗರದಲ್ಲಿ ದಸರಾ ಗೊಂಬೆ ಕೂರಿಸುವ ಚಂದ್ರಿಕಾ ಎಂದೇ ಪ್ರಸಿದ್ಧಿಯಾಗಿದ್ದಾರೆ. ‘ಗೊಂಬೆ ಕೂರಿಸುವುದು ಅಮ್ಮನ ಮನೆ ಪದ್ಧತಿ ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದೇನೆ. ಪ್ರತಿ ವರ್ಷವೂ ದಸರಾದಲ್ಲಿ ಗೊಂಬೆ ಕೂರಿಸಿದಾಗ ಸಾರ್ವಜನಿಕರು, ಶಾಲೆಗಳಿಂದ ಮಕ್ಕಳು ಮನೆಗೆ ಭೇಟಿ ನೀಡಿ ಗೊಂಬೆಗಳನ್ನು ನೋಡಿ ಸಂತಸ ಪಡುತ್ತಾರೆ. ದಿನಕ್ಕೆ 100 ಮಂದಿ ಬಂದು ನೋಡುತ್ತಾರೆ’ ಎನ್ನುತ್ತಾರೆ ಚಂದ್ರಿಕಾ.

ಗೊಂಬೆಗಳ ತಯಾರಿ ಮತ್ತು ಸಿದ್ಧತೆ: ಗೊಂಬೆಗಳನ್ನು ಕೂರಿಸಲು ದಸರಾ ಬರುವ ಒಂದು ತಿಂಗಳು ಮುಂಚೆಯೇ ಎಲ್ಲವನ್ನೂ ಸಿದ್ಧಪಡಿಸಿಕೊಳ್ಳಲಾಗುತ್ತದೆ. ಮಣ್ಣು, ಪೇಪರ್‌, ಮರ, ಪಿಂಗಾಣಿ, ಹಿತ್ತಾಳೆ, ಕಂಚು, ಹತ್ತಿ, ಬಟ್ಟೆ, ವೈರ್‌ನಿಂದ ತಯಾರಿಸಿದ ಗೊಂಬೆಗಳನ್ನು ವಿಶೇಷವಾಗಿ ಅಲಂಕರಿಸಿ ಕೂರಿಸಲಾಗುವುದು. ಗೊಂಬೆಗಳ ಬಣ್ಣ ಮಾಸಿಹೋಗಿದ್ದರೇ ಪೇಟಿಂಗ್‌ ಮಾಡಿ ಹೊಸ ರೂಪ ನೀಡಲಾಗುತ್ತದೆ. ಕೊನೆಯ ದಿನ ಗೊಂಬೆಗಳನ್ನು ತೊಟ್ಟಿಲಲ್ಲಿ ಮಲಗಿಸಿ, ಪೂಜೆ ಮಾಡಿ ತೆಗೆದು ಇಡಲಾಗುವುದು.

ಗೊಂಬೆಗಳ ಸಂಗ್ರಹ: ಮೈಸೂರು, ಬೆಂಗಳೂರು, ಚೆನ್ನೈ ಬೊಂಬೆ ಮನೆಗಳ ಸದಸ್ಯೆಯಾಗಿದ್ದು, ಅಲ್ಲಿದ್ದ ಗೊಂಬೆಗಳನ್ನು ತರುತ್ತೇನೆ. ಯಾವುದೇ ಊರಿಗೆ ಹೋದರೂ ಅಲ್ಲಿ ಮೊದಲು ಗೊಂಬೆಗಳನ್ನು ಹುಡುಕುತ್ತೇನೆ. ನನಗೆ ಮೊದಲಿನಿಂದಲೂ ಕರಕುಶಲ, ಕ್ರಾಫ್ಟ್‌ ಬಗ್ಗೆ ಆಸಕ್ತಿ ಹೆಚ್ಚು. ಆದ್ದರಿಂದ ನನಗೆ ಬೇಕಾದ ಗೊಂಬೆಗಳನ್ನು ನಾನೇ ತಂತಿ, ಹತ್ತಿ, ವೈರ್‌ಗಳಿಂದ ತಯಾರಿಸುತ್ತೇನೆ. ಬೆಂಗಳೂರಿನ ಕೃಷ್ಣಗಿರಿಯಲ್ಲಿ ನಮಗೆ ಬೇಕಾದಂತಹ ಗೊಂಬೆಯನ್ನು ಆರ್ಡರ್‌ ಕೊಟ್ಟು ಮಾಡಿಸುತ್ತೇನೆ. ಅಲ್ಲದೇ ನನ್ನ ಸ್ನೇಹಿತೆಯರು ಗೊಂಬೆಗಳು ಸಿಕ್ಕಾಗ ತಂದು ಕೊಡುತ್ತಾರೆ. ಹೀಗೆ ಗೊಂಬೆಗಳ ಸಂಗ್ರಹವಾಗುತ್ತದೆ ಎನ್ನುತ್ತಾರೆ.

ಗೊಂಬೆಗಳ ಮಾರಾಟ:ಅಂಚೆ ಕಚೇರಿಯ ಫೀಲ್ಡ್‌ ಅಧಿಕಾರಿಯಾದ ಚಂದ್ರಿಕಾ ಅವರು ಮನೆಯಲ್ಲಿ ಗೊಂಬೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ಪಟ್ಟದ ಗೊಂಬೆಗಳು, ವರಪೂಜಾ ಗೊಂಬೆಗಳನ್ನು ತಯಾರಿಸುತ್ತಾರೆ. ಭಾರತ ವಿಕಾಸ ಪರಿಷತ್‌ನಿಂದ ನಡೆಸುವ ಗೊಂಬೆಗಳ ತಯಾರಿ ಸ್ಪರ್ಧೆಯಲ್ಲಿ ಮೂರು ವರ್ಷಗಳಿಂದ ಪ್ರಥಮ ಬಹುಮಾನ ಹಾಗೂ ಬೆಂಗಳೂರಿನ ಸುದ್ಧಿ ವಾಹಿನಿಯಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.

ಉಚಿತ ಪ್ರದರ್ಶನ: ಪ್ರತಿ ವರ್ಷ ಸುಮಾರು ₹25,000 ವೆಚ್ಚವಾಗುತ್ತದೆ. ಈಗ ಗೊಂಬೆಗಳ ದರ ಹೆಚ್ಚಾಗಿದೆ. ಅಲ್ಲದೇ ಅಲಂಕಾರಿಕ ವಸ್ತುಗಳ ದರವೂ ಹೆಚ್ಚಾಗಿದೆ. ಗೊಂಬೆಗಳ ಮೇಲೆ ವೆಚ್ಚ ನಿಗದಿಯಾಗುತ್ತದೆ. ಆದರೆ ಗೊಂಬೆ ಪ್ರದರ್ಶನಕ್ಕೆ ಯಾವುದೇ ಶುಲ್ಕವನ್ನು ನಿಗದಿಪಡಿಸಿಲ್ಲ. ಗೊಂಬೆಗಳ ಮೂಲಕ ನಾಡು– ನುಡಿ, ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿದಂತಾಗುತ್ತದೆ. ಇಂತಹ ಕಾರ್ಯಕ್ಕೆ ಹಣ ತೆಗೆದುಕೊಳ್ಳಬಾರದು. ದೇವರು ನನಗೆ ಕೊಟ್ಟಿರುವುದರಲ್ಲೇ ನನಗೆ ಆದಷ್ಟು ಖರ್ಚು ಮಾಡುತ್ತೇನೆ. ಬಂದವರು ನೋಡಿ ಖುಷಿ ಪಡುವುದೇ ನಮ್ಮ ಸೌಭಾಗ್ಯ ಎಂದು ನಗುತ್ತಾರೆ ಚಂದ್ರಿಕಾ.

ನಾನು ಕಳೆದ ಎರಡು ವರ್ಷಗಳಿಂದ ಚಂದ್ರಿಕಾ ಅವರ ಮನೆಯಲ್ಲಿ ಗೊಂಬೆ ಪ್ರದರ್ಶನ ನೋಡಲು ಬರುತ್ತೇನೆ. ಕಳೆದ ವರ್ಷ ಬಕಾಸುರ, ಅನಂತಪದ್ಮಾನಾಭ ನಿಧಿಯ ಕುರಿತು ವಿಶೇಷ ಗೊಂಬೆಗಳನ್ನು ಕೂರಿಸಿದ್ದರು. ಮಕ್ಕಳು ಗೊಂಬೆಗಳನ್ನು ನೋಡಲು ತುಂಬಾ ಖುಷಿ ಪಡುತ್ತಾರೆ. ಗೊಂಬೆಗಳನ್ನು ನೋಡಲು ಬರುವ ಮಹಿಳೆಯರಿಗೆ ಬಾಗೀನ ಮತ್ತು ಮಕ್ಕಳಿಗೆ ಚನ್ನಪಟ್ಟಣದಿಂದ ತರಿಸಿದ ವಿಶಿಷ್ಠ ಉಡುಗೊರೆ ನೀಡುತ್ತಾರೆ. ಅಲ್ಲದೇ ಸಿಹಿತಿಂಡಿ ಪ್ರಸಾದವನ್ನು ನೀಡುತ್ತಾರೆ ಎನ್ನುತ್ತಾರೆ ಚಂದ್ರಿಕಾ ಅವರ ಸ್ನೇಹಿತೆ ಪಲ್ಲವಿ.

ಈ ಬಾರಿ ಯಾವ್ಯಾವ ಗೊಂಬೆಗಳು: ಪ್ರತಿ ವರ್ಷವೂ ಒಂದಿಲ್ಲ ಒಂದು ವಿಶೇಷವಾಗಿ ಗೊಂಬೆಗಳನ್ನು ಕೂರಿಸುತ್ತಾರೆ. ಈ ಬಾರಿ ವೀರವನಿತೆ ಓನಕೆ ಓಬವ್ವ ಹೈದರಾಲಿ ಸೈನಿಕರನ್ನು ಕೋಟೆಯಲ್ಲಿ ಹೊಡೆದು ಹಾಕುವ ಸನ್ನಿವೇಶ, ಕೃಷ್ಣ –ಕುಚೇಲನ ಆಲಿಂಗಿನ, ವಿಶ್ವರೂಪ ದರ್ಶನ, ಭಕ್ತ ಪ್ರಹ್ಲಾದ, ಭೂತಾನಿ ವದಾ, ಅರ್ಧನಾದೀಶ್ವರ, ಜಟಾಯು ಮೋಕ್ಷ, ಪುಣ್ಯಕೋಟಿ, ಜಂಬೂ ಸವಾರಿ ಗೊಂಬೆಗಳು, ದೇವಿಯರು, ಮಹಾಭಾರತ –ರಾಮಾಯಣ ದೃಶ್ಯ ಬಿಂಬಿಸುವ ಗೊಂಬೆಗಳು, ದೇಶಭಕ್ತಿ ಸಾರುವ ಧ್ವಜಕಟ್ಟೆ, ರೈತರು ಹಾಗೂ ಮಕ್ಕಳಿಗೆ ಇಷ್ಟವಾಗುವ ಗೊಂಬೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT