ಶುಕ್ರವಾರ, ಜುಲೈ 1, 2022
21 °C
ಮಡಗಾಸ್ಕರ್‌ನಲ್ಲಿ ಸಿಲುಕಿದ ಗೋಪನಾಳದ ಗಿಡಮೂಲಿಕೆ ಮಾರುವ 17 ವ್ಯಾಪಾರಿಗಳು

ವನಸ್ಪತಿ ಬೇರು ಮಾರಲು ಮಡಗಾಸ್ಕರ್‌ಗೆ ಹೋದವರು ಭಾರತಕ್ಕೆ ಮರಳಲು ಹಣವಿಲ್ಲದೇ ಪರದಾಟ!

ಡಿ.ಕೆ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ವನಸ್ಪತಿ ಬೇರುಗಳ ಮಾರಾಟಕ್ಕೆಂದು ಪೂರ್ವ ಆಫ್ರಿಕಾದ ಮಡಗಾಸ್ಕರ್‌ಗೆ ತೆರಳಿದ್ದ ಜಿಲ್ಲೆಯ 17 ಮಂದಿ ಸ್ವದೇಶಕ್ಕೆ ಮರಳಲು ಹಣವಿಲ್ಲದೇ ಪರದಾಡುತ್ತಿದ್ದಾರೆ.

ಸಂಸದ ಜಿ.ಎಂ.ಸಿದ್ದೇಶ್ವರ ಅವರ ಮನವಿಯ ಮೇರೆಗೆ ಆಗಸ್ಟ್ 19ರಂದು ಮಡಗಾಸ್ಕರ್‌ನಿಂದ ಚಾರ್ಟಡ್ ವಿಮಾನ ವ್ಯವಸ್ಥೆಯಾಗಿದೆ. ಆದರೆ, ಪ್ರಯಾಣ ದರ ಒಬ್ಬರಿಗೆ 1200 ಡಾಲರ್ (₹ 90 ಸಾವಿರ) ಬೇಕಾಗಿದೆ. ಊಟ, ವಸತಿ ಇಲ್ಲದೇ ಸಂಕಷ್ಟದಲ್ಲಿರುವ ಅವರಿಗೆ ಅಷ್ಟೊಂದು ಹಣ ಭರಿಸಲು ಆಗುತ್ತಿಲ್ಲ.

ಆಗಿದ್ದೇನು?: ಚನ್ನಗಿರಿ ತಾಲ್ಲೂಕಿನ ಗೋಪನಾಳ್ ಗ್ರಾಮದ ಹಕ್ಕಿಪಿಕ್ಕಿ ಜನಾಂಗದ ಒಂಬತ್ತು ಮಹಿಳೆಯರು ಹಾಗೂ ಎಂಟು ಪುರುಷರು ಮಡಗಾಸ್ಕರ್‌ನಲ್ಲಿ ಸಿಲುಕಿಕೊಂಡಿದ್ದಾರೆ. ನಾಲ್ಕೈದು ವರ್ಷಗಳಿಂದ ಇವರು ಬೇರುಗಳ ಎಣ್ಣೆ, ಗಿಡಮೂಲಿಕೆ ಔಷಧ ಮಾರಾಟ ಮಾಡುತ್ತಿದ್ದಾರೆ. ಅಸಿಡಿಟಿ, ತಲೆನೋವು, ಮೈಕೈನೋವು, ಕೂದಲು ಉದುರುವಿಕೆಗೆ ಗಿಡಮೂಲಿಕೆ ಔಷಧಗಳನ್ನು ನೀಡುತ್ತಿದ್ದರು. ದೇಹದ ಮಸಾಜ್‌ಗೂ ಈ ಎಣ್ಣೆ ಬಳಸುತ್ತಿದ್ದರಿಂದ ಹೆಚ್ಚಿನ ಬೇಡಿಕೆ ಇತ್ತು. 

ಏಪ್ರಿಲ್ ತಿಂಗಳಲ್ಲಿ ಮಡಗಾಸ್ಕರ್‌ಗೆ ಹೊರಡುವಾಗ ಪ್ರತಿಯೊಬ್ಬರ ಬಳಿಯೂ ಇದ್ದುದು ಕೇವಲ 300 ಡಾಲರ್ (₹ 22,500). ಸ್ವಲ್ಪ ದಿವಸ ವ್ಯಾಪಾರ ನಡೆದಿದೆ. ಆ ವೇಳೆಗೆ ಕೊರೊನಾದಿಂದಾಗಿ ಲಾಕ್‌ಡೌನ್ ಆಗಿ ಇವರ ವ್ಯಾಪಾರ ಸ್ಥಗಿತಗೊಂಡಿತು. ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ರದ್ದಾಗಿದ್ದರಿಂದ ಸ್ವದೇಶಕ್ಕೆ ಮರಳಲು ಆಗಲಿಲ್ಲ. ಇರುವ ಹಣದಲ್ಲಿ ಜೂನ್ ತಿಂಗಳವರೆಗೂ ಕಾಲ ದೂಡಿದ್ದಾರೆ. ಆನಂತರ ಊಟ ಹಾಗೂ ವಸತಿಗೆ ಸಂಕಷ್ಟ ಎದುರಾಗಿ ವಾಪಸ್‌ ಕರೆಸಿಕೊಳ್ಳುವಂತೆ ಅವರ ಸಂಬಂಧಿಕರ ಮೂಲಕ ಸಂಸದರ ಮೊರೆ
ಹೋದರು.

ಮನವಿಗೆ ಸ್ಪಂದಿಸಿದ ಸಂಸದ ಜಿ.ಎಂ.ಸಿದ್ದೇಶ್ವರ, ಈ 17 ಮಂದಿಯನ್ನು ವಾಪಸ್ ಕರೆತರುವಂತೆ ವಿದೇಶಾಂಗ ವ್ಯವಹಾರಗಳ ಸಚಿವರು ಹಾಗೂ ಪೂರ್ವ ಆಫ್ರಿಕಾದ ಭಾರತೀಯ ರಾಯಭಾರಿಗಳಿಗೆ ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿರುವ ಮಡಗಾಸ್ಕರ್‌ನ ರಾಯಭಾರಿ ಕಚೇರಿಯ ಅಧಿಕಾರಿಗಳು ಇದೇ 19ರಂದು ವಿಮಾನದ ವ್ಯವಸ್ಥೆ ಮಾಡಿದ್ದಾರೆ.

‘ನಿಮ್ಮ ದೇಶದ ಸಂಸದರು ಇಲ್ಲವೇ ಸಚಿವರಿಗೆ ಸಮಸ್ಯೆ ಹೇಳಿ ಹಣದ ವ್ಯವಸ್ಥೆ ಮಾಡಿಕೊಳ್ಳಿ ಎಂದು ರಾಯಭಾರಿಗಳು ಹೇಳುತ್ತಿದ್ದಾರೆ. ಒಬ್ಬರು ₹ 25 ಸಾವಿರದಿಂದ ₹ 30 ಸಾವಿರದವರೆಗೂ ವಿಮಾನದ ಟಿಕೆಟ್‌ಗೆ ಹಣ ನೀಡುತ್ತೇವೆ ಎಂದರೂ ಒಪ್ಪುತ್ತಿಲ್ಲ. ಅಷ್ಟೂ ಹಣ ಕಟ್ಟಲೇಬೇಕು ಎನ್ನುತ್ತಿದ್ದಾರೆ’ ಎಂದು ವ್ಯಾಪಾರಿಗಳು ಸಂಬಂಧಿಕರಿಗೆ ಕಳುಹಿಸಿರುವ ವಿಡಿಯೊದಲ್ಲಿ ಅಳಲು ತೋಡಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು